Friday, 24 July 2015

ಯೋಗದಿನಾಚರಣೆ : ಒಂದು ಎಣೆಯಿಲ್ಲದ ಸಂಭ್ರಮ

ಯೋಗದಿನಾಚರಣೆ : ಒಂದು ಎಣೆಯಿಲ್ಲದ ಸಂಭ್ರಮ

   2014ರ ಸೆಪ್ಟೆಂಬರ್ 27 ಒಂದು ಐತಿಹಾಸಿಕ ದಿನ - ಭಾರತೀಯರಿಗೆ ಮತ್ತು ವಿಶ್ವದ ಎಲ್ಲ ಯೋಗಾಭಿಮಾನಿಗಳಿಗೆ. ಅಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸರ್ವಸದಸ್ಯಸಭೆಯಲ್ಲಿ ಭಾರತದ ಪ್ರಾಚೀನ ಸಂಸ್ಕೃತಿಯ ಅತ್ಯಮೂಲ್ಯ ಕೊಡುಗೆ ’ಯೋಗ’ದ ಕುರಿತು ಮಾತನಾಡುತ್ತ ಪ್ರತಿ ವರ್ಷ ಜೂನ್ 21ರಂದು ’ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಜಗತ್ತಿನ ದೇಶಗಳಿಗೆ ಆಚರಿಸುವಂತೆ ಕರೆನೀಡಿದರು. ಅಮೆರಿಕ, ಕೆನಡ, ಚೀನ ಸೇರಿದಂತೆ ಜಗತ್ತಿನ 177ಕ್ಕೂ ಹೆಚ್ಚು ದೇಶಗಳು ಮೋದಿಯವರ ಈ ಕರೆಯನ್ನು ಬೆಂಬಲಿಸಿದವು. ಪರಿಣಾಮವಾಗಿ 2014ರ ಡಿಸೆಂಬರ್ 11ರಂದು 193 ಸದಸ್ಯ ದೇಶಗಳಿರುವ ವಿಶ್ವಸಂಸ್ಥೆಯ ಸರ್ವಸದಸ್ಯಸಭೆ ಜೂನ್ 21ನ್ನು ’ಅಂತಾರಾಷ್ಟ್ರೀಯ ಯೋಗದಿನ’ವೆಂದು ಘೋಷಿಸಲು ಒಪ್ಪಿಗೆ ನೀಡಿತು. 175 ದೇಶಗಳು ಈ ಮಂಡನೆಗೆ ಸಹಪ್ರಾಯೋಜಕತ್ವವನ್ನು ವಹಿಸಿದ್ದು ಒಂದು ಅಭೂತಪೂರ್ವ ದಾಖಲೆಯಾಗಿದೆ.
ಈ ವರ್ಷ ಜೂನ್ 21ರಂದು ನಡೆದದ್ದು ಪ್ರಪ್ರಥಮ ’ಅಂತಾರಾಷ್ಟ್ರೀಯ ಯೋಗದಿನ’. ರಾಷ್ಟ್ರೋತ್ಥಾನ ಪರಿಷತ್, ಅಂದು ಬೆಳಗ್ಗೆ 10.30 ರಿಂದ, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ’ಸಾರ್ವಜನಿಕ ಸಮಾರಂಭ ಮತ್ತು ಯೋಗಪ್ರದರ್ಶನ’ದ ಒಂದು ಅಭೂತಪೂರ್ವ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಪರಿಷತ್‌ನ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲ ಶ್ರೀ ವಜುಭಾಯಿ ರುದಾಭಾಯಿ ವಾಲಾ, ಕೇಂದ್ರಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆಯ ಸನ್ಮಾನ್ಯ ಸಚಿವ ಶ್ರೀ ಎಚ್.ಎನ್. ಅನಂತಕುಮಾರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಸನ್ಮಾನ್ಯ ಶ್ರೀ ಮಂಗೇಶ್ ಭೇಂಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ - 
  • ಕಾರ್ಯಕ್ರಮ ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭ ಹಾಗೂ ಮುಕ್ತಾಯ.
  • ಯೋಗದ ಮಹತ್ತ್ವ, ಅದರ ವಿವಿಧ ಆಯಾಮಗಳು, ಯೋಗದ ಪ್ರಾಚೀನತೆ, ಯೋಗವಿದ್ಯೆಯ ಸಮರ್ಥ ವಿಶ್ವವಿಖ್ಯಾತ ಪ್ರತಿನಿಧಿಗಳು, ಯೋಗ ಸಂಬಂಧಿತ ಮಹತ್ತ್ವದ ಕೃತಿಗಳು - ಇವೆಲ್ಲ ವಿವರಗಳನ್ನೊಳಗೊಂಡ ಒಂದು ಆಕರ್ಷಕ ಪ್ರದರ್ಶಿನಿಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಈ ಪ್ರದರ್ಶಿನಿಯನ್ನು ಬೆಳಗ್ಗೆ ೯ ಗಂಟೆಗೆ ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆಯ ಸನ್ಮಾನ್ಯ ಸಚಿವ ಶ್ರೀ ಎಚ್.ಎನ್. ಅನಂತಕುಮಾರ್ ಉದ್ಘಾಟಿಸಿದರು.
  • ಸುಮಾರು ೮,೫೦೦ ಜನರಿಂದ ೨೦ ನಿಮಿಷಗಳ ಕಾಲ ಸಾಮೂಹಿಕ ಯೋಗಪ್ರದರ್ಶನ ನಡೆಯಿತು.
  • ಯೋಗದ ವಿವಿಧ ಮುಖಗಳನ್ನು ಪರಿಚಯಿಸುವ ಸ್ಮರಣಸಂಚಿಕೆ ’ಯೋಗದೀಪ್ತಿ’ಯನ್ನು ರಾಜ್ಯಪಾಲರಿಂದ ಬಿಡುಗಡೆ 
  • ಪರಿಷತ್‌ನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ L.E.D. Screen ಬಳಕೆ.
  • ಒಟ್ಟು 12000 ಮಂದಿ ಭಾಗವಹಿಸಿದ್ದರು.
  • ಯೋಗಪ್ರದರ್ಶನ ಮಾಡಿದ ಎಲ್ಲರಿಗೂ ಪ್ರಮಾಣಪತ್ರ ವಿತರಣೆ - ವಿಶಿಷ್ಟಚೇತನರೂ ಸೇರಿದಂತೆ ೫ ಮಂದಿಗೆ ರಾಜ್ಯಪಾಲರಿಂದ ಸಾಂಕೇತಿಕ ಪ್ರಮಾಣ ಪತ್ರ ವಿತರಿಸಲಾಯಿತು.
  • ಕಾರ್ಯಕ್ರಮದ ಯಶಸ್ಸಿಗಾಗಿ, ಪೂರ್ವಭಾವಿಯಾಗಿ ನಡೆಸಿದ್ದು -
  • ನಗರದ ಮೂರುಕಡೆಗಳಲ್ಲಿ ’ಯೋಗ ವಾಕಥಾನ್’; ಇದರಲ್ಲಿ ಒಟ್ಟು ಸುಮಾರು ೧,೫೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದರು. 
  • ನಗರದ ಮೂರು ಕಡೆಗಳಲ್ಲಿ ಸ್ವಯಂಪ್ರೇರಿತ ’ರಕ್ತದಾನ ಶಿಬಿರ’; ಇದರಲ್ಲಿ ೩೦೯ ಮಂದಿ ದಾನಿಗಳು ಭಾಗವಹಿಸಿದ್ದರು. 
  • ನಗರದ ಅನ್ಯಾನ್ಯ ಸ್ಥಳಗಳಲ್ಲಿ ೨೭೫ ಯೋಗಾಭ್ಯಾಸದ ಶಿಬಿರಗಳು; ಇದರಲ್ಲಿ ೯,೫೬೦ ಮಂದಿ ಯೋಗತರಬೇತಿ ಪಡೆದುಕೊಂಡರು.

     ರಾಷ್ಟ್ರೋತ್ಥಾನ ಪರಿಷತ್ ನಡೆಸಿದ ಈ ಸ್ಮರಣೀಯ ಕಾರ್ಯಕ್ರಮ ರಾಜ್ಯದಲ್ಲಿ ಅಂದು ನಡೆದ ಕಾರ್ಯಕ್ರಮಗಳಲ್ಲೆಲ್ಲ ಅತ್ಯಂತ ಶಿಸ್ತುಬದ್ಧವಾಗಿ, ಯಶಸ್ವಿಯಾಗಿ ನಡೆದ ಒಂದು ಬೃಹತ್ ಕಾರ್ಯಕ್ರಮವಾಗಿ ಜನಜನಿತವಾಯ್ತು.
ಕಾಡಿದ ಯೋಚನೆಗಳು......

ಒಂದು.
ಸರ್ವೇ ಸಂತು ನಿರಾಮಯಾಃ ಎಂಬ ಪಾರಂಪರಿಕ ಉಕ್ತಿಯಂತೆ ಪ್ರತಿಯೊಬ್ಬರೂ ಕಾಯಿಲೆಮುಕ್ತ, ಆದರ್ಶ ಜೀವನವನ್ನು ನಡೆಸುವಂತಾಗಬೇಕೆಂಬ ಆಶಯದಿಂದ ೧೯೭೨ರಿಂದ ಯೋಗಪ್ರಸಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಯೋಗಕ್ಕೆ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮನ್ನಣೆ ನೀಡಿರುವುದು ಹೆಮ್ಮೆಯ ಸಂಗತಿಯೇ ಆಗಿತ್ತು. ’ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ’ಯ (ಪ್ರಾರಂಭದಲ್ಲಿ ’ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾಕೇಂದ್ರ’) ಮೂಲಕ ಬೆಂಗಳೂರಿನ ಲಕ್ಷಾಂತರ ಮಂದಿಗೆ ಯೋಗತರಬೇತಿ ನೀಡಿರುವ ಪರಿಷತ್‌ನ ಯೋಗವಿಭಾಗ ಇಂದು ಕರ್ನಾಟಕದಲ್ಲಿ ಒಂದು ಪ್ರತಿಷ್ಠಿತ ಯೋಗಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಯೋಗಶಿಕ್ಷಣ ನೀಡುವುದು ಮಾತ್ರವಲ್ಲದೇ, ಯೋಗಶಿಕ್ಷಕರನ್ನು ತಯಾರಿಸುವ ಒಂದು ಪರಂಪರೆಯನ್ನೂ ಪರಿಷತ್‌ನ ಯೋಗವಿಭಾಗ ಹುಟ್ಟುಹಾಕಿದೆ ಎಂದಲ್ಲಿ ಅತಿಶಯೋಕ್ತಿಯೆನಿಸದು. ಇಲ್ಲಿ ಯೋಗಶಿಕ್ಷಣ ಪಡೆದ ಅನೇಕರು ಅಂತಾರಾಷ್ಟ್ರೀಯ ಮಟ್ಟಕ್ಕೇರಿರುವುದೂ ನಮಗೆಲ್ಲ ತಿಳಿದಿರುವುದೇ ಆಗಿದೆ. ಹೀಗಾಗಿ ’ಅಂತಾರಾಷ್ಟ್ರೀಯ ಯೋಗದಿನ’ದ ಈ ಸಂದರ್ಭವನ್ನು ಬಳಸಿಕೊಂಡು ಯೋಗಕ್ಕೆ ಇನ್ನಷ್ಟು ಪ್ರಚಾರ-ಪ್ರಸಾರ-ರಭಸ ಸಿಗುವಂತಾಗಬೇಕು ಹಾಗೂ ರಾಷ್ಟ್ರೋತ್ಥಾನದಿಂದ ಈಗ ನಡೆಯುತ್ತಿರುವ ಯೋಗಕೇಂದ್ರಗಳಿಗೆ ಶಕ್ತಿ ಕೊಡುವಂತಾದರೆ ಹೇಗೆ? 
ಮಾಡಿದ ಯೋಜನೆಗಳು.......
   ಸುಮಾರು ಮೂರು ತಿಂಗಳ ಹಿಂದೆ 'ಅಂತಾರಾಷ್ಟ್ರೀಯ ಯೋಗದಿನ’ದ ಘೋಷಣೆಯಾದ ತಕ್ಷಣ ಇನ್ನೊಂದು ರೀತಿಯಲ್ಲಿ ಪರಿಷತ್‌ಗೆ ಅನ್ನಿಸಿದ್ದು - ಈ ಹೆಮ್ಮೆಯ ಆಚರಣೆಯಲ್ಲಿ ನಾವು ಜೊತೆಗೂಡಬೇಕು ಎಂಬುದು. ಆದರೆ ಅಳುಕೂ ಇಲ್ಲದಿರಲಿಲ್ಲ. ಯಾಕೆಂದರೆ ಯೋಗದಿನದ ಆಚರಣೆ ಹೇಗೆ-ಏನು? ಇದಕ್ಕೆ ನಮ್ಮ ಕಾರ್ಯಕರ್ತರು ಹೊಂದಿಕೊಂಡಾರೆ ಯೇ ಎಂಬುದು. 

                 ಕಾರ್ಯಕ್ರಮ ಮಾಡುವ ನಿಶ್ಚಯವಂತೂ ಹಿರಿಯರಿಂದ ಆಯಿತು. ಇನ್ನು ಬೇಕಾಗಿದ್ದುದ್ದು ಪ್ರತ್ಯಕ್ಷ ಕಾರ್ಯ. 
 ಹಿರಿಯರೊಬ್ಬರು ರಾಷ್ಟ್ರೋತ್ಥಾನದ ಕಾರ್ಯದ ಬಗ್ಗೆ ಹೇಳಿದ್ದುಂಟು: ನಮ್ಮದು ಈಶ್ವರೀ ಕಾರ್ಯ. ಹೀಗಾಗಿ ನಮ್ಮನ್ನು ಅದ್ಯಾವುದೋ ಅಸಾಮಾನ್ಯ ಶಕ್ತಿ ಕೈಹಿಡಿದು ನಡೆಸುತ್ತದೆ ಎಂದು. ವಾಸ್ತವವಾಗಿ ಈ ಕಾರ್ಯ ಆಗಿದ್ದೂ ಹಾಗೆಯೇ.
ಮೊದಲು ಸಾಮೂಹಿಕ ಯೋಗಪ್ರದರ್ಶನದ ನಿಶ್ಚಯವಾದಾಗ, ಸಂಖ್ಯೆಯ ಗುರಿ ೫೦೦೦ ಎಂದಿತ್ತು. ಈ ಸಂಖ್ಯೆ ಪ್ರತಿ ಬೈಠಕ್‌ನಿಂದ ಬೈಠಕ್‌ಗೆ ವೃದ್ಧಿಸುತ್ತಲೇ ಸಾಗಿತ್ತು. ಅದೆಷ್ಟು ರಭಸ ಬಂದಿತ್ತೆಂದರೆ ನಮ್ಮ ಯೋಗಕೇಂದ್ರದ ಶಿಕ್ಷಕರು ಮಾತ್ರವಲ್ಲ ಯೋಗ-ರಾಷ್ಟ್ರೋತ್ಥಾನದ ಬಗೆಗೆ ಅಭಿಮಾನ ಇದ್ದ ಹಲವರು ಈ ಸಂಖ್ಯಾಗುರಿಯನ್ನು ಸಾಧಿಸಲು ಟೊಂಕಕಟ್ಟಿ ಕೆಲಸ ಮಾಡಿದ್ದರು. ಕೆಲವರಂತೂ ಮನೆಗೆ ಹೋಗುತ್ತಿದ್ದುದು ರಾತ್ರಿ ನಿದ್ರೆಗಾಗಿ; ಅದೂ ಹತ್ತು-ಹನ್ನೊಂದು ಘಂಟೆಗೆ. ಬೆಳಗ್ಗೆ ಮನೆ ಬಿಡುತ್ತಿದ್ದುದ್ದೂ ಮುಂಜಾನೆ ೪.೩೦-೫.೦೦ಕ್ಕೆ. ಹಲವರ ಮನೆಯ ಮಕ್ಕಳು ತಂದೆ/ತಾಯಿ ಊರಲ್ಲಿಲ್ಲ ಎಂದೇ ತಿಳಿದಿದ್ದರು!
ಉಚಿತ ಯೋಗತರಗತಿಗಳು:
ನಮ್ಮ ಕಾರ್ಯಕ್ರಮ, ಕೇವಲ ಕಾರ್ಯಕ್ರಮವಾಗಿ ಉಳಿಯಬಾರದು. ಅದು ಆಂದೋಲನದ ಸ್ವರೂಪ ಪಡೆಯಬೇಕು ಎಂಬ ಕನಸು ಪರಿಷತ್‌ನ ಹಿರಿಯರ ಮನಸ್ಸಿನಲ್ಲಿ ಮೂಡಿತು. ಹೀಗಾಗಿ ಬೆಂಗಳೂರಿನಾದ್ಯಂತ ಯೋಗಶಿಬಿರಗಳನ್ನು ನಡೆಸಿದರೆ ಹೇಗೆ? ಅದು ಉಚಿತವಾಗಿ - ಎಂಬ ಚಿಂತನೆ. ಚಿಂತನೆಯೇನೋ ಉತ್ತಮವಾದದ್ದೇ. ಆದರೆ ಇದು ಸಾಧ್ಯವೇ. ಯಾಕೆಂದರೆ ಆಗ ಪರಿಷತ್‌ನ ಯೋಗಕೇಂದ್ರದಿಂದ ದಿನನಿತ್ಯ ಒಟ್ಟು ೯೮ ಯೋಗತರಗತಿಗಳು ನಡೆಯುತ್ತಿತ್ತು. ಹೆಚ್ಚೆಂದರೆ ೫೦ ದಾಟುವಷ್ಟು ಶಿಕ್ಷಕರಿದ್ದರು. ಈ ೫೦ ಶಿಕ್ಷಕರು ಸೇರಿ ನಗರದಾದ್ಯಂತ ಉಚಿತ ಯೋಗಶಿಬಿರ ನಡೆಸಲು ಸಾಧ್ಯ?
ಪ್ರತಿ ಪ್ರಶ್ನೆಗೂ ಉತ್ತರವಂತೂ ಇದ್ದೇ ಇದೆ. ಹಾಗೆ ಕಂಡುಕೊಂಡ ಉತ್ತರ - ಆಸಕ್ತ ಯೋಗಾಭ್ಯಾಸಿಗಳಿಗೆ ಶಿಕ್ಷಣ ನೀಡಿ, ಅವರನ್ನು ಯೋಗಶಿಬಿರ ನಡೆಸುವಂತೆ ಮಾಡುವುದು. ಈ ಕಲ್ಪನೆಗೆ ಓಗೊಟ್ಟು ನೂರಾರು ಯೋಗಾಭ್ಯಾಸಿಗಳು ಮುಂದೆ ಬಂದರು. ಈ ಆಸಕ್ತ ಯೋಗಾಭ್ಯಾಸಿಗಳಿಗೆ ಯೋಗಸಂಸ್ಥೆಯ ನಿರ್ದೇಶಕ ನಾಗೇಂದ್ರ ಕಾಮತ್ ನೇತೃತ್ವದ ಯೋಗಶಿಕ್ಷಕರ ತಂಡ ಮಾರ್ಗದರ್ಶನ ಮಾಡಿತು. ಅಂತಹ ಶಿಕ್ಷಕರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಸಾಗಿತ್ತು. ಕೊನೆಗೆ ಲೆಕ್ಕಕ್ಕೆ ಸಿಕ್ಕಿದ್ದು ಉಚಿತ ಯೋಗತರಬೇತಿ ನೀಡಿದ ಶಿಕ್ಷಕರ ಸಂಖ್ಯೆ ೨೫೦; ಆದರೆ ಗಲ್ಲಿಗಲ್ಲಿಗಳಲ್ಲಿ ಉಚಿತ ತರಬೇತಿ ನೀಡಿ ನೇಪಥ್ಯದಲ್ಲಿ ನಿಂತವರೂ ಹಲವರಿದ್ದಾರೆಂಬುದು ಕಾರ್ಯಕ್ರಮದ ಅನಂತರ ತಿಳಿದುಬಂತು. ಆಶ್ಚರ್ಯ ಎಂದರೆ ಕೇವಲ ೫೦ ದಾಟಿದ್ದ ಶಿಕ್ಷಕರ ಸಂಖ್ಯೆ ೨೫೦ ದಾಟಿದ್ದು ಯಾವುದೇ ಕರಪತ್ರ ರಹಿತವಾಗಿ; ಕೇವಲ ಮೌಖಿಕ, ಸ್ನೇಹದ ಕರೆಯಿಂದಷ್ಟೇ.
ಯೋಗಶಿಕ್ಷಕರನ್ನು ಜೋಡಿಸುವ ಸಾಮರ್ಥ್ಯವುಳ್ಳ ಪ್ರಮುಖ ಯೋಗಶಿಕ್ಷಕರ ೧೧ ಬೈಠಕ್‌ಗಳು ಹಾಗೂ ವಿವಿಧೆಡೆಗಳಲ್ಲಿ ಯೋಗಶಿಕ್ಷಣ ನೀಡಲು ಮುಂದೆ ಬಂದ ಶಿಕ್ಷಕರಿಗೆ ತರಬೇತಿ ನೀಡಲು ೪೧ ಶಿಕ್ಷಕರ ತರಬೇತಿ ಶಿಬಿರಗಳನ್ನು ನಡೆಸಲಾಯಿತು. ಇಲ್ಲಿ ಶಿಕ್ಷಣ ಪಡೆದ ಶಿಕ್ಷಕರು ಬೆಂಗಳೂರಿನ ಗಲ್ಲಿಗಲ್ಲಿಗೆ ತೆರಳಿ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಬಗ್ಗೆ ತಿಳಿದ ಅದಮ್ಯ ಚೇತನದಂತಹ ಸ್ವಯಂಸೇವಾ ಸಂಸ್ಥೆಗಳು, ವಿವಿಧ ಯೋಗಕೇಂದ್ರಗಳು ಶಿಕ್ಷಕರ ಜೋಡಣೆ ಕಾರ್ಯದಲ್ಲಿ ಸಹಕರಿಸಿದವು. ಇವರೆಲ್ಲರ ಸಹಕಾರದಿಂದ ಬೆಂಗಳೂರಿನ ೨೭೬ ಕಡೆಗಳಲ್ಲಿ ಉಚಿತ ಯೋಗಶಿಬಿರವನ್ನು ನಡೆಸಲಾಯಿತು. ಇವುಗಳಲ್ಲಿ ಯೋಗಾಭ್ಯಾಸಿಗಳಾಗಿ ಭಾಗವಹಿಸಿದವರು ಬರೋಬ್ಬರಿ ೯೫೬೦ ಮಂದಿ.
ಎಲ್ಲೆಲ್ಲಿ: 
 ಕನಿಷ್ಠ ೭ ದಿನಗಳ ಉಚಿತ ಯೋಗತರಗತಿಗಳು ನಡೆದ ಸ್ಥಳಗಳು
ವಿಶಿಷ್ಟ ಚೇತನ ಮಕ್ಕಳಿಗಾಗಿ - ಸಮರ್ಥನ, ರಮಣ ಮಹರ್ಷಿ (ಅಂಧಮಕ್ಕಳ ಶಾಲೆ), ಅರುಣ ಚೇತನ 
ಶಾಲೆ, ಕಾಲೇಜುಗಳಲ್ಲಿ - ಸರ್ಕಾರಿ, ಅನುದಾನಿತ, ಖಾಸಗಿ
ವಿವಿಧ ಪಾರ್ಕ್‌ಗಳಲ್ಲಿ
ಸೇವಾಬಸ್ತಿಗಳಲ್ಲಿ (ಸ್ಲಂ)
ಸರ್ಕಾರೇತರ ಸಂಸ್ಥೆಗಳಲ್ಲಿ 
ವಿವಿಧ ಯೋಗಕೇಂದ್ರಗಳಲ್ಲಿ 
ಅದಮ್ಯಚೇತನದ ಸಹಯೋಗದಲ್ಲಿ 
ರಾಜ್ಯ ಸರಕಾರ ಸಚಿವಾಲಯ ನೌಕರರ ಸಂಘ 
ರಾಮಕೃಷ್ಣಾಶ್ರಮ. ಉತ್ತರಾದಿಮಠ, ದೇವಸ್ಥಾನ... ಇತ್ಯಾದಿ ಧಾರ್ಮಿಕ ಕೇಂದ್ರಗಳಲ್ಲಿ
ಅನಾಥಾಶ್ರಮ, ಅಬಲಾಶ್ರಮ, ನಂದಗೋಕುಲ 
ಬ್ಯಾಂಕ್‌ಗಳಲ್ಲಿ - ಅಚಿಟಿಚಿಡಿಚಿ ಃಚಿಟಿಞ ಊeಚಿಜ ಔಜಿಜಿiಛಿe    ॒ಇತ್ಯಾದಿ
 ಈ ಎಲ್ಲ ಕೇಂದ್ರಗಳಲ್ಲಿ ನಡೆದ ಯೋಗತರಗತಿಗಳೂ ಒಂದೊಂದು ಕಥೆ ಹೇಳುತ್ತವೆ. ಯಾಕೆಂದರೆ ಇವು ನಡೆದದ್ದು ಸೇವಾಬಸ್ತಿ(ಸ್ಲಂ)ಯಿಂದ ಪಾರ್ಕ್‌ಗಳವರೆಗೆ; ಶಾಲೆಯಿಂದ ಬ್ಯಾಂಕ್, ಸರಕಾರದ ಸಚಿವಾಲಯದ ವರೆಗೆ.
 ಇದು ಉಚಿತ ಯೋಗ ತರಬೇತಿ ಶಿಬಿರ. ’ಬೆಂಗಳೂರು ನಗರದಲ್ಲಿ ಉಚಿತ ಯೋಗ ಎಂದರೆ ಜನ ಮುಗಿಬೀಳುತ್ತಾರೆ. ಹೀಗಾಗಿ ಉಚಿತ ಯೋಗಶಿಬಿರದಲ್ಲಿ ಸಂಖ್ಯೆಗೇನೂ ಕೊರತೆಯಿಲ್ಲ’ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಸಂಖ್ಯೆ ಸೇರಿಸಲು ಈ ಯೋಗಶಿಕ್ಷಕರು ನಡೆಸಿದ ಪ್ರಯತ್ನವಂತೂ ಭಗೀರಥನನ್ನು ನೆನಪಿಸುವಂಥದ್ದು.
ವಿವಿಧ ಯೋಗತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡ ಯೋಗಶಿಕ್ಷಕರಿಗೆ ನಿಜವಾಗಿ ಸವಾಲಾಗಿದ್ದು ಕಾರ್ಯಕ್ಷೇತ್ರ. ಹಾಗೆಂದು ಅವರಿಗೆ ಇದೇ ಸ್ಥಳ ಎಂದು ನಿಗದಿ ಮಾಡಿರಲಿಲ್ಲ. ಸ್ಥಳ, ಯೋಗಾಭ್ಯಾಸಿಗಳ ಆಯ್ಕೆ ಅವರದ್ದೇ. ಕೆಲವರಿಗೆ ಸಲಹೆ ನೀಡಿದ್ದಿದೆ. 
 ಪಾರ್ಕ್ - ಎಂದರೆ ಜನ ಸೇರುವ ಸ್ಥಳ. ಇಲ್ಲಿಗೆ ಬರುವವರೆಲ್ಲ ಸಾಮಾನ್ಯವಾಗಿ ಬೆಳಗಿನ ವಾಕಿಂಗ್-ವ್ಯಾಯಾಮಕ್ಕಾಗಿ ಬರುವವರೇ. ಹೀಗಾಗಿ ಇವರನ್ನು ಸೇರಿಸುವುದು ಸುಲಭ ಎಂದು ತಿಳಿದ ಯೋಗಶಿಕ್ಷಕರೊಬ್ಬರು ತಮ್ಮ ಮನೆಯ ಸಮೀಪದ ಪಾರ್ಕ್‌ನ್ನು ಕಾರ್ಯಕ್ಷೇತ್ರವಾಗಿ ಆಯ್ದುಕೊಂಡರು. ಮೊದಲ ದಿನ ಪಾರ್ಕ್‌ಗೆ ಬರುವವರಿಗೆಲ್ಲ ಹೇಳಿದ್ದೇ ಹೇಳಿದ್ದು - ನಾಳೆಯಿಂದ ಒಂದು ವಾರ ಉಚಿತ ಯೋಗತರಗತಿಗಳಿವೆ, ಯಾರು ಬೇಕಾದರೂ ಬರಬಹುದು - ಎಂದು. ಅವರ ಪ್ರತಿಕ್ರಿಯೆಯೂ ಚೆನ್ನಾಗಿತ್ತು. ಮೊದಲ ಯಶಸ್ಸಿನ ಹೆಮ್ಮೆ. ಆದರೆ ಮಾರನೆ
ಯ ದಿನ ಆಶ್ಚರ್ಯ ಕಾದಿತ್ತು - ಯೋಗತರಗತಿ ಬಗೆಗೆ ಆಸಕ್ತಿಯಿಂದ ಕೇಳಿ, ಮೆಚ್ಚಿ, ಹೊಗಳಿದ್ದ ಹತ್ತಾರು ಮಂದಿ ಅಲ್ಲೇ ವಾಕಿಂಗ್-ಟಾಕಿಂಗ್‌ನಲ್ಲಿ ಮುಂದೆ ಸಾಗುತ್ತಿದ್ದರೇ ಹೊರತು, ಈ ಕಡೆ ಮುಖಹಾಕಿಯೂ ನೋಡಲಿಲ್ಲ. ಕನಿಷ್ಠ ೨೦-೩೦ ಅನ್ನಿಸಿದ್ದ ಆತನಿಗೆ ಅಂದು ಶಿಕ್ಷಕನಾಗುವ ಭಾಗ್ಯವೇ ದೊರಕಲಿಲ್ಲ!
ಹೀಗೆ ಅನೇಕರಿಗೆ ನಿರಾಸೆಯ ಪ್ರತಿಕ್ರಿಯೆ ದೊರತಿತ್ತು. ಆದರೆ ಅವರ ಸಂಕಲ್ಪಶಕ್ತಿ, ಛಲ, ಹಿಡಿದ ಕೆಲಸದ ಸಾಕಾರಕ್ಕೆ ಸದಾ ಮಾರ್ಗ ತೋರಿಸುತ್ತಿತ್ತು; ಯಶಸ್ಸಿನ ಸಂತೃಪ್ತಿ ಸಿಗುವಂತೆ ಮಾಡುತ್ತಿತ್ತು. ಈ ಎಲ್ಲ ಸಮಯದಲ್ಲೂ ಆ ಶಿಕ್ಷಕರಿಗೆ ಧೈರ್ಯ ತುಂಬುವ ಕೆಲಸ ಪರಿಷತ್‌ನ ಯೋಗವಿಭಾಗದಿಂದ ನಡೆಯುತ್ತಿತ್ತು.
ಬೈಠಕ್‌ಗಳು: 
ಕಾರ್ಯಕ್ರಮವೇನೋ ನಿಶ್ಚಯವಾಗಿತ್ತು. ಕಾರ್ಯಕ್ರಮಕ್ಕೆ ಹಲವು ಮುಖಗಳ ಕಾರ್ಯ ಆಗಬೇಕಾಗಿತ್ತು. ಆ ಕಾರ್ಯವು ಪರಿಷತ್‌ನ ಕಾರ್ಯಕರ್ತರಿಂದಲೇ ಆಗಬೇಕಾಗಿತ್ತು. ಆದರೆ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದ ಅನುಭವ ಯಾರೊಬ್ಬರಲ್ಲಿಯೂ ಇರಲಿಲ್ಲ. ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರೇ ಸ್ವತಃ ಹೇಳುತ್ತಿದ್ದರು: ಕಾರ್ಯಕ್ರಮಕ್ಕೆ ಅಗತ್ಯವಾದ ಪ್ರತಿಯೊಂದು ವ್ಯವಸ್ಥೆಯ ಬಗೆಗೆ ನಮ್ಮ ಯಾರಲ್ಲಿಯೂ ತಜ್ಞತೆಯಾಗಲಿ, ಅನುಭವವಾಗಲಿ ಇರಲಿಲ್ಲ. ಕಾರ್ಯದ ವಿಸ್ತಾರತೆ, ಅದರ ಶ್ರಮ, ಅದರಲ್ಲಿ ಎದುರಾಗುವ ಸಮಸ್ಯೆಗಳೆಲ್ಲವನ್ನೂ ಸ್ವತಃ ಅನುಭವಿಸುತ್ತಾ ಕಲಿಯುತ್ತಾ ನಾವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು - ಎಂದು. ಇದು ಕಾರ್ಯಕ್ರಮದ ವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಅನುಭವದಲ್ಲಿ ಅಕ್ಷರಶಃ ಸತ್ಯ.
 ಕಾರ್ಯಕ್ರಮದ ಯಶಸ್ವಿನ ಹೊಣೆ ಪರಿಷತ್‌ನ ವಿವಿಧ ಪ್ರಕಲ್ಪಗಳಲ್ಲಿ ಜೋಡಿಕೊಂಡಿರುವ ಕಾರ್ಯಕರ್ತರದ್ದಾಗಿತ್ತು. ಅದಕ್ಕಾಗಿ ೧೬ ಜನರ ತಂಡ ಸಿದ್ಧವಾಯಿತು. ಈ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಒಂದು ನಿರ್ದಿಷ್ಟ ಕೆಲಸ ಗೊತ್ತಾಯಿತು. ಆ ಕೆಲಸದ ಸ್ವರೂಪ, ಆವಶ್ಯಕತೆ, ಎಲ್ಲವನ್ನೂ ಅವರೇ ಅಂದಾಜಿಸ ಬೇಕಾಗಿತ್ತು. ಮೊದಲೇ ಹೇಳಿದಂತೆ ಯಾರೂ ತಜ್ಞರಾಗಲಿ, ಅನುಭವಿಗಳಾಗಲಿ ಆಗಿರಲಿಲ್ಲ. ಹೀಗಾಗಿ ಮೊದಲು ವಾರಕ್ಕೆರಡು ಬಾರಿ, ನಂತರ ವಾರಕ್ಕೆ ನಾಲ್ಕು, ಆಮೇಲೆ ಪ್ರತಿದಿನ ಸೇರಿ ಚರ್ಚಿಸಲಾಯಿತು. ಹೀಗೆ ಜವಾಬ್ದಾರಿ ಹೊಂದಿದ ಕಾರ್ಯಕರ್ತರ ೧೯ ಅಧಿಕೃತ ಬೈಠಕ್‌ಗಳು ನಡೆದವು. ಇನ್ನು ಅನಧಿಕೃತ ಬೈಠಕ್‌ಗಳು ಅದೆಷ್ಟೋ.
ಪ್ರತಿ ಬೈಠಕ್‌ನಲ್ಲಿಯೂ ಕಾರ್ಯದ ಬೆಳವಣಿಗೆ, ಮುಂದಿನ ಯೋಜನೆ-ಯೋಚನೆ, ಸವಾಲುಗಳ ಚರ್ಚೆ ನಡೆಯುತ್ತಿತ್ತು. ನಿರಾಸೆಯಂತೂ ಯಾರ ಮುಖದಲ್ಲೂ ಕಾಣಿಸುತ್ತಿರಲಿಲ್ಲ. ಕಠಿಣ ಪರಿಸ್ಥಿತಿಗೆ ಬೆಳಕು ತೋರಿಸುವ ಪ್ರಧಾನ ಕಾರ್ಯದರ್ಶಿಗಳ ಮಾತು, ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಲು ವಿಭಿನ್ನ ಚಿಂತನೆಗಳನ್ನು ಕ್ರೋಢೀಕರಿಸಿ ಮೂಡಿದ ಹೊಸದೃಷ್ಟಿ - ಜವಾಬ್ದಾರಿ ಹೊಂದಿದ ಕಾರ್ಯಕರ್ತನ ಆತ್ಮವಿಶ್ವಾಸವನ್ನು ಬೈಠಕ್‌ನಿಂದ ಬೈಠಕ್ ಹೆಚ್ಚಿಸುತ್ತಲೇ ಇತ್ತು. ಜೊತೆಗೆ ಯಾವುದೇ ಜವಾಬ್ದಾರಿಯೂ ಯಾರಿಗೂ ಹೊರೆಯೆನಿಸದೆ ಸಹಜವಾದ ಚಟುವಟಿಕೆಗಳಂತೆ ಮುಂದುವರಿಯಿತು.
ಕಾರ್ಯಕ್ರಮದ ವ್ಯವಸ್ಥಾ ಭಾಗವನ್ನು ವೇದಿಕೆ, ಮಾರ್ಕಿಂಗ್, ಪ್ರದರ್ಶಿನಿ, ಉಪಹಾರ, ಪಾರ್ಕಿಂಗ್, ವಾಹನ ವ್ಯವಸ್ಥೆ ಮುಂತಾದ ಪ್ರಮುಖ ಗುಂಪುಗಳಾಗಿ ವಿಂಗಡಿಸಿ ಬೈಠಕ್‌ನ ಚರ್ಚೆ ಪ್ರಾರಂಭಿಸಲಾಯಿತು. ಇದಕ್ಕೆ ನೆರವು ನೀಡುವ ಅಗತ್ಯ ವಿಭಾಗಗಳನ್ನು ಕಾಲಕಾಲಕ್ಕೆ ಜೋಡಿಸಿಕೊಳ್ಳುತ್ತಾ ಹೋಗಲಾಯಿತು.
ವೇದಿಕೆ: ವೇದಿಕೆಯ ಮುಂದೆ ಮತ್ತು ವೇದಿಕೆಯ ಅಲಂಕಾರದ ದೃಷ್ಟಿಯಿಂದ ಈ ತಂಡ ಚಿಂತನೆ ನಡೆಸುತ್ತಿತ್ತು. ವೇದಿಕೆಯ ಮುಂದೆ ಆಕರ್ಷಕ ರಂಗೋಲಿ ಹಾಗೂ ವೇದಿಕೆಯಲ್ಲಿ ಐ.ಇ.ಆ. Sಛಿಡಿeeಟಿ ಬಳಸಲು ನಿಶ್ಚಯಿಸಲಾಯಿತು. ಪರಿಷತ್‌ನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಐ.ಇ.ಆ. Sಛಿಡಿeeಟಿ ಬಳಸಿದ ಕಾರ್ಯಕ್ರಮ ಇದಾಗಿತ್ತು. ಐ.ಇ.ಆ. Sಛಿಡಿeeಟಿನ ಃಚಿಛಿಞಜಡಿoಠಿನಲ್ಲಿ ಯೋಗಪರಂಪರೆಯ ಪ್ರತಿನಿಧಿಗಳ ಭಾವಚಿತ್ರವಿರಬೇಕೆಂದು ನಿಶ್ಚಯಿಸಲಾಯಿತು. ಅದರಂತೆ ಯೋಗೇಶ್ವರ ಶ್ರೀಕೃಷ್ಣ, ಆದಿಯೋಗಿ ಶಿವ, ಯೋಗರಾಜ ಬುದ್ಧ, ಯೋಗಪಿತಾಮಹ ಪತಂಜಲಿ, ಧ್ಯಾನಸಿದ್ಧ (ಪೂರ್ಣಯೋಗಿ) ವಿವೇಕಾನಂದ, ಯೋಗಭೂಮಿ ಭಾರತಮಾತೆ ಮುಂತಾದವರ ಭಾವಚಿತ್ರವನ್ನೊಳಗೊಂಡ ೬ ವಿವಿಧ ಪ್ರಕಾರಗಳನ್ನು ಬಳಸಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ರಂಗು ತರುವುದರಲ್ಲಿ ಐ.ಇ.ಆ. Sಛಿಡಿeeಟಿ ಪಾತ್ರವೂ ಇತ್ತು.
ಮಾರ್ಕಿಂಗ್: ಮೊದಲು ೫೦೦೦ ಸಂಖ್ಯೆ ಗುರಿ ಎಂದೆನಿಸಿದ್ದು ದಿನೇ ದಿನೇ ವೃದ್ಧಿಯಾಗುತ್ತಲೇ ಸಾಗಿತ್ತು, ಕೊನೆಗೆ ಬೆಂಗಳೂರಿನಾದ್ಯಂತ ನಡೆದ ಯೋಗತರಬೇತಿ ಶಿಬಿರಗಳು ಹಾಗೂ ಅದರಲ್ಲಿ ಪಾಲ್ಗೊಂಡವರ ಪಟ್ಟಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅದಾಗಲೇ ಕಾರ್ಯಕ್ರಮಕ್ಕೆ ಒಂದು ವಾರದ ಸಮಯವಿತ್ತು. ಆದರೆ ಅದಾಗಲೇ ಬೆಂಗಳೂರಿನ ೨೫೦ ಕಡೆಗಳಲ್ಲಿ ನಡೆದ ಶಿಬಿರಗಳಲ್ಲಿ ಭಾಗವಹಿಸಿದ ಯೋಗಾಭ್ಯಾಸಿಗಳ ಸಂಖ್ಯೆ ೯೦೦೦ವನ್ನೂ ದಾಟಿತ್ತು. 
ಹೀಗಾಗಿ, ಮೈದಾನದಲ್ಲಿ ೫-೬ ಸಾವಿರ ಮಾರ್ಕಿಂಗ್ ಮಾಡಬಹುದು ಎಂಬ ಅಭಿಪ್ರಾಯ ಹಲವರು ವ್ಯಕ್ತಪಡಿಸಿದ್ದರು. ಉಳಿದದ್ದಕ್ಕೆ? ಈ ದೃಷ್ಟಿಯ ಚಿಂತನೆಯೂ ಮುಂದುವರಿಯಿತು. ಇಂಜಿನಿಯರಿಂಗ್‌ನ ಗಂಧಗಾಳಿ ತಿಳಿಯದಿದ್ದರೂ ಪೆನ್ನು ಪನ್ಸಿಲ್ ಪೇಪರ್ ತುಂಬಾ ಹರಿದಾಡಿತು. ಕೊನೆಗೂ ಬರೋಬ್ಬರಿ ೮೦೦೦ ಮಂದಿ (ಕಂಬಗಳಿಗೆ, ಮಾಧ್ಯಮದವರಿಗೆ ಎಂದು ಅಗತ್ಯ ಸ್ಥಳಾವಕಾಶವನ್ನು ಬಿಟ್ಟು) ಯೋಗಪ್ರದರ್ಶನ ಮಾಡುವವರಿಗೆ ಮಾಕಿಂಗ್ ಮಾಡಲು ನಿಶ್ಚಯಿಸಲಾಯಿತು.
 ಯಾರೂ ಅನುಭವಿಗಳಲ್ಲ, ಹೀಗಾಗಿ ಈ ೮೦೦೦ ಮಂದಿಗೆ ಮಾರ್ಕಿಂಗ್‌ಗೆ ೫೦ಕ್ಕೂ ಅಧಿಕ ಮಂದಿಯನ್ನು ಜೋಡಿಸಿಕೊಂಡರೂ ಕನಿಷ್ಠ ೧೦-೧೨ ಗಂಟೆಯಾದರೂ ಬೇಕಾಗಬಹುದು ಎಂದು ನಿಶ್ಚಯಿಸಲಾಯಿತು. ಆದರೆ ಮಾರ್ಕಿಂಗ್ ತಂಡ ಅದ್ಬುತ ಸಾಹಸವನ್ನೇ ಮೆರೆದಿತ್ತು. ಕೇವಲ ೫-೬ ಗಂಟೆಯಲ್ಲಿ ಈ ಕೆಲಸವನ್ನು ಮುಗಿಸಿತ್ತು. ಅದೂ ೫೦  ಮಿಕ್ಕಿರದ ಸ್ವಯಂಸೇವಕರಿಂದ. ಮೊದಲ ೨ ಗಂಟೆ ಯೋಜನೆಯಂತೆ ಮಾರ್ಕಿಂಗ್ ಹಾಕುವುದು ಹೇಗೆ ಎಂಬ ಚರ್ಚೆಯಲ್ಲೇ ಕಳೆಯಿತು. ಇನ್ನರ್ಧ ಹಾಕಿ-ಅಳಿಸುವ ಪ್ರಯತ್ನದಲ್ಲಿ ಕಳೆಯಿತು. ಆದರೆ ಒಮ್ಮೆ ತಾಳ-ಲಯ ಸಿಕ್ಕ ನಂತರ ಕೇಳಬೇಕೆ? ನೋಡುನೋಡುತ್ತಿದ್ದಂತೆ ಮೈದಾನವನ್ನೆಲ್ಲ ಮಾರ್ಕಿಂಗ್‌ಗಳಿಂದಲೇ ತುಂಬಿದ್ದವು.


ಪ್ರದರ್ಶನಿ : ಯೋಗದರ್ಶಿನಿ
ಭಾರತವು ವಿಶ್ವಕ್ಕೆ ನೀಡಿದ ಅನೇಕ ಕೊಡುಗೆಗಳಲ್ಲಿ ಯೋಗವು ಮಹತ್ವದ್ದು. ಯೋಗವೆಂದರೆ ಬರೀ ಆಸನಗಳು ಎಂಬ ಕಲ್ಪನೆ ಅನೇಕರಲ್ಲಿದೆ. ಯೋಗದ ಕುರಿತಾಗಿ ಸ್ಪಷ್ಟ ಮಾಹಿತಿಯನ್ನು ನೀಡಿವ ಸಲುವಾಗಿ ಕಾರ್ಯಕ್ರಮದಂದು ಒಂದು ಪ್ರದರ್ಶಿನಿಯನ್ನು ಏರ್ಪಡಿಸಬೇಕೆಂದು ನಿಶ್ಚಯವಾಯಿತು. ಅದರಂತೆ ಅದಕ್ಕೆ ’ಯೋಗದರ್ಶಿನಿ’ ಎಂಬ ಹೆಸರನ್ನಿಡಲಾಯಿತು.
ಇದಕ್ಕಾಗಿ ಮೈದಾನದಲ್ಲಿ 20x100 ಅಡಿಯ ಪ್ರತ್ಯೇಕ ಪೆಂಡಾಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಯೋಗದ ಮಹತ್ತ್ವ್ವ, ಅದರ ವಿವಿಧ ಆಯಾಮಗಳು, ಯೋಗದ ಪ್ರಾಚೀನತೆ, ಯೋಗವಿದ್ಯೆಯ ಸಮರ್ಥ ಪ್ರತಿನಿಧಿಗಳು, ಯೋಗದ ಮಹತ್ವದ ಕೃತಿಗಳು ಇವೆಲ್ಲ ವಿವರಗಳನ್ನೊಳಗೊಂಡ ೪೪ ಬೃಹತ್ ಫಲಕಗಳನ್ನು ಈ ಪ್ರದರ್ಶಿನಿ ಒಳಗೊಂಡಿತ್ತು. ವೀಕ್ಷಕರ ಅನುಕೂಲದ ದೃಷ್ಠಿಯಿಂದ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿಯೂ ವಿವರಣೆ ಇರುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಅಪರೂಪದ ಚಿತ್ರಗಳನ್ನೂ ಮುದ್ರಿಸಲಾಗಿತ್ತು.
ಇದರೊಟ್ಟಿಗೆ ಯೋಗದ ಕುರಿತಾದ ಅನೇಕ ವಿಡಿಯೋಗಳನ್ನು ಸಂಕಲಿಸಿ ಟಿವಿ ಪರದೆಯಲ್ಲಿ ಪ್ರದರ್ಶಿಲಾಯಿತು. ಇದಕ್ಕಾಗಿ 2 ರಿಂದ 5 ನಿಮಿಷದ ವರೆಗಿನ ಸುಮಾರು ಹತ್ತಕ್ಕೂ ಹೆಚ್ಚು ಕಿರುಚಲನಗಳನ್ನು ವಿವಿಧ ಮೂಲಗಳಿಂದ ಆಯ್ಕೆ ಮಾಡಲಾಗಿತ್ತು. ಆಧುನಿಕ ಯೋಗಬ್ರಹ್ಮ ಬಿ.ಎಸ್. ಐಯ್ಯಂಗಾರ್ ಸ್ವತಃ ಯೋಗ ಮಾಡುತ್ತಿರುವ ವಿಡಿಯೋ ಸಹ ಇವುಗಳಲ್ಲಿ ಒಂದಾಗಿತ್ತು. ಮರಳಿನ ಕಲೆಯಲ್ಲಿ ಯೋಗ, ಯೋಗ ಮಾರ್ಗದ ಮಹತ್ತ್ವ ಇತಾದಿ ಮನಸೆಳೆಯುವ ವಿಡಿಯೋಗಳಿದ್ದವು.
ಪ್ರದರ್ಶಿನಿಯ ದ್ವಾರದ ಪರಿಕಲ್ಪನೆಯೂ ವಿಶಿಷ್ಟವಾಗಿ ಯೋಗದ ಪ್ರಾಚೀನತೆಯನ್ನು ಸಾರುತ್ತಿತ್ತು. 5000 ವರ್ಷಗಳಿಗೂ ಹಳೆಯದೆಂದು ಹೇಳಲಾದ (ಪಾಂಡವರ ಕಾಲದ್ದು) ಮಹಾಬಲಿಪುರಂನ ದೇಗುಲಗಳ ಕೆತ್ತನೆಗಳಲ್ಲಿದ್ದ ವೃಕ್ಷಾಸನ ಸ್ಥಿತಿಯಲ್ಲಿರುವ ಯೋಗಿಯ ಶಿಲ್ಪದ ಚಿತ್ರವು ದ್ವಾರದ ಇಕ್ಕೆಡೆಗಳಲ್ಲಿತ್ತು. ಮತ್ತು  ಜಗತ್ತಿನ ಅತ್ಯಂತ ಹಳೆಯ ನಾಗರಿಕತೆಯೆಂದು ಗುರುತಿಸ್ಪಟ್ಟಿರುವ ಸಿಂಧೂ ಕಣೆವೆಯ ಉತ್ಖನನದ ಸಮಯದಲ್ಲಿ ದೊರೆತಂತಹ ಪದ್ಮಾಸನ ಸ್ಥಿತಿಯಲ್ಲಿರುವ ಪಶುಪತಿನಾಥನ ಮುದ್ರೆಗಳ ಚಿತ್ರಣವನ್ನು ಮೇಲ್ಭಾಗದ ಫಲಕವು ನೀಡುತ್ತಿತ್ತು. 
ಪ್ರದರ್ಶಿನಿಯ ಮಧ್ಯಭಾಗದಲ್ಲಿ ಸ್ಥಾಪಿಸಿದ್ದ ಪತಂಜಲಿಯ ಮೂರ್ತಿ ಒಂದು ದೈವಿಕ ವಾತಾವರಣವನ್ನು ಮೂಡಿಸಿತ್ತು. ಸನ್ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನಂತ್‌ಕುಮಾರ್‌ರವರು ಅಂದು ಬೆಳಿಗ್ಗೆ 9.00 ಗಂಟೆಗೆ ದೀಪ ಬೆಳಗುವ ಮೂಲಕ ಪ್ರದರ್ಶಿನಿಯನ್ನು ಉದ್ಘಾಟಿಸಿದರು.
ಪ್ರದರ್ಶಿನಿಯ ಆರಂಭದಲ್ಲಿ ಯೋಗಕ್ಕೆ ವಿಶ್ವಸಂಸ್ಥೆಯಿಂದ ಅಧೀಕೃತವಾಗಿ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಂತಹ ’ವಿಶ್ವ ಯೋಗ ದಿನ’ ಘೋಷಣೆಯ ಕುರಿತಾಗಿ ಮಾಹಿತಿ ನೀಡಲಾಗಿತ್ತು. ಆದಿಯೋಗ ಶಿವ, ಯೋಗೇಶ್ವರ ಶ್ರೀಕೃಷ್ಣರಿಂದ ಆರಂಭಗೊಂಡು ಮಧ್ಯಯುಗದ ಯೋಗ ಸಾಧಕರು, ಸಂತರು ಮತ್ತು ಸಮಕಾಲೀನ ಯೋಗ ವಿಖ್ಯಾತರವರೆಗೆ ಮಾಹಿತಿಯನ್ನು ನೀಡಲಾಗಿತ್ತು.

Friday, 26 June 2015

ನಮ್ಮೊಡನಿದ್ದ ಕರ್ನಾಟಕದ ಯೋಗಸಾಧಕರು

ನಮ್ಮೊಡನಿದ್ದ ಕರ್ನಾಟಕದ ಯೋಗಸಾಧಕರು

- ಮೊಳಹಳ್ಳಿ ಅನಿಲ್ಕುಮಾರ್

 ಯೋಗವಿದ್ಯೆಯು ವಿಶ್ವಕ್ಕೆ ಭಾರತ ನೀಡಿರುವ ಒಂದು ಮಹಾಕೊಡುಗೆ. ಇದನ್ನು ವಿಶ್ವವ್ಯಾಪಿಯಾಗಿಸಿ ರುವುದರಲ್ಲಿ ಕನ್ನಡನಾಡಿನ ಯೋಗಿಗಳ ಕೊಡುಗೆಯೂ ಅನ್ಯನ್ಯ. ಪ್ರಥಮ ಅಂತರರಾಷ್ಟ್ರೀಯ ಯೋಗದಿನಾಚರಣೆಯ ಸಂದರ್ಭದಲ್ಲಿ ಅಂತಹ ಯೋಗಿಗಳ ಪರಿಚಯ (ಸಂಕ್ಷಿಪ್ತ) ಮಾಡಿಕೊಳ್ಳುವುದು ಪ್ರಸ್ತುತವೇ ಆಗಿದೆ.


ಶ್ರೀ ಕೃಷ್ಣ ಪಟ್ಟಾಭಿ ಜೋಯಿಸ್ (26-7-1915  - 18-5-2009) :
 ತಮ್ಮ 12ನೇ ವಯಸ್ಸಿನಲ್ಲಿಯೇ ಯೋಗದೆಡೆಗೆ ಆಕರ್ಷಿತರಾಗಿ ಹಾಸನದಿಂದ ಮೈಸೂರಿಗೆ ಬಂದು ಪಟ್ಟಾಭಿ ಜೋಯಿಸರು ಟಿ. ಕೃಷ್ಣಮಾಚಾರ್ಯರ (ಬಿ.ಕೆ.ಎಸ್ಅಯ್ಯಂಗಾರ್ ಅವರಿಗೂ ಗುರುಗಳು) ಬಳಿ ಯೋಗಾಭ್ಯಾಸ ಪ್ರಾರಂಭಿಸಿದರು. ಇವರ ಯೋಗಪ್ರವೀಣತೆಯನ್ನು ಗಮನಿಸಿದ ಆಗಿನ ಮೈಸೂರಿನ ಒಡೆಯರು ಮೈಸೂರಿನ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಯೋಗವಿಭಾಗವನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ನೀಡುವಂತೆ ವ್ಯವಸ್ಥೆ ಮಾಡಿದರು.

     
     ಪಟ್ಟಾಭಿಯವರ ಯೋಗಪ್ರದರ್ಶನದಿಂದ ಆಕರ್ಷಿತರಾಗಿ ಅವರನ್ನು ವರಿಸಿದ ಸಾವಿತ್ರಮ್ಮ ನವರೇ ಇವರ ಮೊದಲ ಯೋಗಶಿಷ್ಯೆ. 5 ಮಂದಿಯ ಕುಟುಂಬಕ್ಕೆ ಆಧಾರ ಸಂಸ್ಕೃತ ವಿಶ್ವವಿದ್ಯಾಲಯ ದಲ್ಲಿ ದೊರೆಯುತ್ತಿದ್ದ 5 ರೂ. ಸಂಭಾವನೆ. ಇದೇ ಅವರ ಜೀವನಾಧಾರ. ಆದರೆ ಸತತ ಯೋಗದ ಕುರಿತೇ ಅವರ ಧ್ಯಾನ.

 1948ರಲ್ಲಿ ಮೈಸೂರಿನ ಲಕ್ಷ್ಮೀಪುರಂನ ಒಂದು ಚಿಕ್ಕ 2 ರೋಮಿನ ಕೊಠಡಿಯಲ್ಲಿ ಯೋಗದಲ್ಲಿನ ಚಿಕಿತ್ಸಾಗುಣಗಳ ಬಗೆಗೆ ಸಂಶೋಧನೆ ನಡೆಸಲು ಅಷ್ಟಾಂಗಯೋಗ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತ ಯೋಗ ಕುರುಂಟ(Yoga Korunta) ಆಧಾರದ ಅಷ್ಟಾಂಗ ವಿನ್ಯಾಸ ಯೋಗವನ್ನು ಪ್ರಚುರಪಡಿಸಿದರುವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೇಬಲ್ವರೆಗೆ ಹಾಗೂ ಡಾಕ್ಟರ್ಗಳು ಸೇರಿದಂತೆ ಸಮಾಜದ ಗಣ್ಯರು ಇವರಲ್ಲಿಗೆ ಯೋಗಾಭ್ಯಾಸಕ್ಕಾಗಿ ಬರುತ್ತಿದ್ದರು. ಅನೇಕ ಸ್ಥಳೀಯ ವೈದ್ಯರು ಡಯಾಬಿಟಿಸ್, ಹೃದಯ ಹಾಗೂ ರಕ್ತದೊತ್ತಡ ಮುಂತಾದ ಕಾಯಿಲೆಯ ರೋಗಿಗಳ ಆರೋಗ್ಯ ಸುಧಾರಣೆಗಾಗಿ ಇವರನ್ನು ಸೂಚಿಸುತ್ತಿದ್ದರು.
ಇವೆಲ್ಲದರ ಜೊತೆಗೆ ಭಾರತದಾದ್ಯಂತ ಪ್ರವಾಸ ಕೈಗೊಂಡ ಅವರು ದೇಶದ ಅನೇಕ ಯೋಗಿಗಳನ್ನು ವಿದ್ವಾಂಸರನ್ನು ಬೇಟಿಮಾಡಿ ಅವರೊಂದಿಗೆ ಯೋಗದ ಕುರಿತು ಚರ್ಚೆ-ಸಂವಾದಗಳನ್ನು ನಡೆಸಿದರು. ಜೊತೆಗೆ ಅಲ್ಲೆಲ್ಲ ಯೋಗ ಪ್ರದರ್ಶನಗಳನ್ನೂ ಏರ್ಪಡಿಸಿದರು. ಯೋಗ ಸಂಶೋಧನೆಯಲ್ಲಿ ಖ್ಯಾತರಾದ ಸ್ವಾಮಿ ಶಿವಾನಂದ, ಕಾಂಚಿಪುರಂನ ಶಂಕರಾಚಾರ್ಯ, ಸ್ವಾಮಿ ಕಲ್ಯಾನಂದ, ಸ್ವಾಮಿ ಗೀತಾನಂದ ಮುಂತಾದವರು ಇವರ ಸಂಪರ್ಕಕ್ಕೆ ಬಂದರು.
   ಸ್ವಾಮಿ ಪೂರ್ಣಾನಂದರ ಸೂಚನೆಯಂತೆ ಯೋಗ ಶಿಕ್ಷಣಕ್ಕಾಗಿ ಬೆಲ್ಜಿಯಂನ Andre Van Lysebth (ಆಂಡ್ರೆ ವನ್ ಲೆಸ್ಬೆತ್) ಅವರು 2 ತಿಂಗಳ ಕಾಲ ಪಟ್ಟಾಭಿಯವರ ಜೊತೆಗಿದ್ದು ಅಷ್ಟಾಂಗ ವಿನ್ಯಾಸ ಯೋಗ ಪದ್ಧತಿಗಳನ್ನು ಬಗೆಗೆ ಅಭ್ಯಸಿಸಿ ಅಷ್ಟಾಂಗಯೋಗದ ಕುರಿತು Yoga Self Taught’ ಎಂಬ ಪುಸ್ತಕ ರಚಿಸಿದರು. ಇದು ಪಟಾಭಿಯವರನ್ನು ಯೂರೋಪ್ ಸೇರಿದಂತೆ ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿತು. ಯೋಗದೆಡೆಗೆ ಆಕರ್ಷಿತರಾದ ಅನೇಕ ಪಾಶ್ಚಾತ್ಯಯೋಗಪ್ರೇಮಿಗಳು ಯೋಗಾಭ್ಯಾಸಕ್ಕಾಗಿ ಮೈಸೂರಿಗೆ ಬರತೊಡಗಿದರು.
 1973ರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ನಿವೃತ್ತರಾದ ನಂತರ ಬೇರೆಬೇರೆ ದೇಶಗಳ ಯೋಗಾಸಕ್ತರು ಇವರನ್ನು ಆಹ್ವಾನಿಸಿದರು. ಅಮೆರಿಕ, ಬ್ರೆಜಿಲ್, ಕ್ಯಾಲಿಫೋರ್ನಿಯಾ, ಫ್ರಾನ್ಸ್, ಸಿಜರ್ಲೆಂಡ್, ಫಿನ್ಲ್ಯಾಂಡ್, ನಾರ್ವೆ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಗೂ ಪ್ರವಾಸ ಕೈಗೊಂಡು ಅಲ್ಲಿ ಯೋಗತರಗತಿಗಳನ್ನು ನಡೆಸಿದರು. ಎಲ್ಲ ಕಾರ್ಯಸರಣಿಯಿಂದ ೨೦ ವರ್ಷಗಳಲ್ಲಿ ಪಟ್ಟಾಭಿ ಜೋಯಿಸ್ ಹಾಗೂ ಅವರ ಅಷ್ಟಾಂಗ ವಿನ್ಯಾಸ ಯೋಗ ಜಗತ್ಪ್ರಸಿದ್ಧವಾಯಿತು. ಮೈಸೂರಿಗೆ ಬರುವ ವಿದೇಶಿಯರ ಸಂಖ್ಯೆ ವೃದ್ದಿಸಿದಂತೆ ಆಯಾ ದೇಶಗಳಲ್ಲೂ ಅಷ್ಟಾಂಗ ವಿನ್ಯಾಸ ಯೋಗ ಕೇಂದ್ರಗಳನ್ನೂ ಪ್ರಾರಂಭಿಸಿದರು. ಇಂದು ಆಫ್ರಿಕ, ಏಷ್ಯಾ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಅನೇಕ ಕಡೆಗಳಲ್ಲಿ ಪಟ್ಟಾಭಿಯವರ ಅಷ್ಟಾಂಗವಿನ್ಯಾಸ ಯೋಗಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಏಳು ದಶಕಗಳ ಯೋಗ ಸಾಧನೆ-ಯೋಗಪ್ರಸಾರದ ತಪಸ್ವಿ ತನ್ನ 93 ವರ್ಷ ವಯಸ್ಸಿನಲ್ಲಿ (2009) ಇಹಲೋಕ ತ್ಯಜಿಸಿದರು. ಆದರೆ ಬದ್ಧತೆ, ಸ್ಥಿರತೆ, ಸಮಗ್ರತೆಯನ್ನು ಯೋಗಶಿಕ್ಷಾರ್ಥಿಗಳಲ್ಲಿ ಮೂಡಿಸಲು ಅವರು ಅಡಿಗಲ್ಲಿಟ್ಟ ಸಂಸ್ಥೆಗಳು ಇಂದಿಗೂ ಕಾರ್ಯನಿರತವಾಗಿವೆ.

ಬಿ.ಕೆ.ಎಸ್. ಅಯ್ಯಂಗಾರ್ (14-12-1918 20-8-2014) :
1988ರಲ್ಲಿ ಅಮೆರಿಕ ಸಂಸ್ಥಾನದ ನಕ್ಷತ್ರಗಳನ್ನು ಹೆಸರಿಸುವ ಸಚಿವಾಲಯವು (The Ministry of Fed. Star Registration- USA) ಉತ್ತರಾರ್ಧಗೋಲಾರ್ಧದ ಒಂದು ನಕ್ಷತ್ರವನ್ನುಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ಎಂದು ಗುರುತಿಸಿ ದಾಖಲಿಸಿದೆ; 2004 ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ ಜಗತ್ತಿನ 100 ಮಂದಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಒಬ್ಬರು; ಚೀನಾದ ಬೀಜಿಂಗ್ ಅಂಚೆ ಕಾರ್ಯಾಲಯ ಅಯ್ಯಂಗಾರ್ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಗೌರವಗಳಿಗೆಲ್ಲ, ರಾಜಮರ್ಯಾದೆಗಳಿಗೆಲ್ಲ ಬಿ.ಕೆ.ಎಸ್. ಅಯ್ಯಂಗಾರ್ ಅವರು ಪಾತ್ರವಾದದ್ದು ಅವರ ಯೋಗ ಎಂಬ ತಪಸ್ಸಿನಿಂದ.

         ಇಂದು ಯೋಗಕ್ಕೆ ಪರ್ಯಾಯ ಪದ ಎಂಬಂತೆ ಬಿ.ಕೆ.ಎಸ್. ಅಯ್ಯಂಗಾರ್ ಅವರ ಹೆಸರು ಬೆಳೆದುನಿಂತಿದೆ. ಜಗತ್ತು ಇಂದು ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯ ಯೋಗಕ್ಕೆ ಮಾನ್ಯತೆ ಕೊಡುತ್ತಿದೆ ಎಂದರೆ ಅದರ ಹಿಂದೆ ಯೋಗರ್ಷಿ ಅಯ್ಯಂಗಾರ್ ಅವರ ಕೊಡುಗೆ ಅನನ್ಯವಾದದ್ದು ಮತ್ತು ಮಹತ್ವದ್ದು. ಹಿನ್ನೆಲೆಯಲ್ಲಿಯೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದು - ಮುಂದಿನ ಹಲವು ಶತಮಾನಗಳವರೆಗೆ ಬಿ.ಕೆ.ಎಸ್. ಅಯ್ಯಂಗಾರ್ ಅವರು ಜಗತ್ತಿನಾದ್ಯಂತ ಜನರ ಜೀವನದಲ್ಲಿ ಯೋಗದ ಬೆಳಕನ್ನು ಹಚ್ಚಿದ ಒಬ್ಬ ಅತಿಶ್ರೇಷ್ಠ ಗುರುವಾಗಿ, ವಿದ್ವಾಂಸರಾಗಿ ಮತ್ತು ನಿಷ್ಠಾವಂತ ಯೋಗಿಯಾಗಿ ನೆನೆಯಲ್ಪಡುತ್ತಾರೆ- ಎಂದು.
       ಒಬ್ಬ ಬಡ ಹಳ್ಳಿಮೇಷ್ಟ್ರರಾದ ಕೃಷ್ಣಮಾಚಾರ್ ಹಾಗೂ ಶೇಷಮ್ಮ ದಂಪತಿಗಳ 13 ಜನ ಮಕ್ಕಳಲ್ಲಿ 11ನೇ ಯವರಾಗಿ ಜನಿಸಿದ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಕರ್ನಾಟಕದವರು. ಬಾಲ್ಯದಲ್ಲಿ ಅವರನ್ನು ಅನಾರೋಗ್ಯ ಬಾಧಿಸಿತು. ಮಲೇರಿಯಾ ಹಾಗೂ ಕ್ಷಯರೋಗ ಅವರನ್ನು ಕಾಡಿತು. ಆಮೇಲೆ ಅವರ ಭಾವಮೈದುನ ಟಿ. ಕೃಷ್ಣಮಾಚಾರ್ಯ ಯೋಗ ಮಾಡುವಂತೆ ಅವರನ್ನು ಪ್ರೇರೇಪಿಸಿದರು. ‘ಆಧುನಿಕ ಯೋಗದ ಪಿತಾಮಹ ಎಂದೇ ಪರಿಗಣಿತರಾಗಿದ್ದ ಕೃಷ್ಣಮಾಚಾರ್ಯ ಅವರ ಮಾತನ್ನು ಬಿ.ಕೆ.ಎಸ್. ಅಯ್ಯಂಗಾರರು ತೆಗೆದುಹಾಕಲಿಲ್ಲ. ಅವರ ಮಾರ್ಗದರ್ಶನದಲ್ಲಿ ಯೋಗಾಸನ ಕಲಿತರು.
        ಕೆಲಕಾಲ ಧಾರವಾಡ ಮತ್ತು ಬೆಳಗಾವಿ ಯೋಗತರಗತಿಗಳನ್ನು ನಡೆಸಿದ ಅವರು ಅನಂತರ ಪುಣೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು. ಸ್ಥಳೀಯರಿಂದ ಬಹಳಷ್ಟು ತೊಂದರೆಗಳನ್ನನುಭವಿಸಿದರೂ ತಮ್ಮ ಡೆಕ್ಕನ್ ಜಿಮ್ಖಾನಾದಲ್ಲಿ ದೃಢವಾಗಿ ನಿಂತು ಛಲವಾದಿಯಂತೆ ಯೋಗವಿದ್ಯೆಯನ್ನು ಮುಂದುವರಿಸಿದರು. ಅಲ್ಲಿಯೇ ಜೀವನದ ಆಕಸ್ಮಿಕ ತಿರುವಿನಂತೆ ನೆಹರು ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದ ವಯೋಲಿನ್ ವಾದಕ ಯಹೂದಿ ಮೆನುಹಿನ್ ಭೇಟಿ ಪರಿಚಯ. ಅಯ್ಯಂಗಾರ್ ಯೋಗ ಶಿಕ್ಷಣ ವಿಧಾನಕ್ಕೆ ಮಾರುಹೋದ ಆತ ಲಂಡನ್, ಪ್ಯಾರಿಸ್ಗಳಲ್ಲಿ ಅಯ್ಯಂಗಾರ್ ಅವರ ಯೋಗಶಿಕ್ಷಣ ತರಗತಿ, ಪ್ರದರ್ಶನ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿದನು. ಮೂಲಕ ಅಯ್ಯಂಗಾರ್ರು ಹೊರಜಗತ್ತಿಗೆ ಪರಿಚಯವಾದರು.
       ವಿದ್ಯಾರ್ಥಿಗಳ ಅಗತ್ಯಗಳನ್ನು ಅರಿತು, ಅವರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವುಗಳಿಗೆ ಸ್ಪಷ್ಟ ಪರಿಹಾರವನ್ನು ಯೋಗದ ಮೂಲಕ ಬೋಧಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. ‘ಅಯ್ಯಂಗಾರ್ ಯೋಗಎಂಬ ತಮ್ಮದೇ ಬ್ರಾಂಡ್ ಒಂದನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಅವರದ್ದು. ಬೆಲ್ಟ್ಗಳು, ಬ್ಲಾಕ್ಗಳು ಹಾಗೂ ಚಾದರಗಳನ್ನು ಬಳಸಿಕೊಂಡು ಯೋಗಾಸನ ಮಾಡುವುದನ್ನು ಅವರು ಅಳವಡಿಸಿಕೊಂಡರು. ಯಾವುದೇ ದೈಹಿಕ ಸಮಸ್ಯೆಯಾದೀತೆಂಬ ಭೀತಿ ಇಲ್ಲದೆ ಸಂಕೀರ್ಣ ಆಸನಗಳನ್ನು ಹಾಕಲು ಯುವಕರನ್ನು ಅವು ಪ್ರೇರೇಪಿಸಿದವು. ಹೀಗೆ ಜಗತ್ತಿನಾದ್ಯಂತ ಯೋಗವನ್ನು ಪಸರಿಸಿದ ಹಿರಿಮೆ ಅಯ್ಯಂಗಾರರದ್ದು.
        ಇಂದು ವಿಶ್ವದಾದ್ಯಂತ ಅಯ್ಯಂಗಾರರ ಶಿಷ್ಯರಿದ್ದಾರೆ. 1975ರಲ್ಲಿ ಪುಣೆಯಲ್ಲಿ ಅವರು ತಮ್ಮ ಮಡದಿಯ ಸ್ಮರಣೆಯಲ್ಲಿ ಸ್ಥಾಪಿಸಿದ ರಮಾಮಣಿ ಅಯ್ಯಂಗಾರ್ ಸ್ಮಾರಕ ಯೋಗ ಸಂಸ್ಥೆ ಕೂಡ ಅವರ ಕನಸುಗಳನ್ನು ಮುಂದುವರಿಸುತ್ತಿದೆ.
ಜಿಡ್ಡು ಕೃಷ್ಣಮೂರ್ತಿ, ಜಯಪ್ರಕಾಶ್ ನಾರಾಯಣ್, ಕಾದಂಬರಿಕಾರ ಆಲ್ಡಸ್ ಹಕ್ಸ್ಲಿ, ವಯೋಲಿನ್ ವಾದಕ ಯೆಹೂದಿ ಮೆನುಹಿನ್, ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದ್, ಇಂಡೋನೇಷ್ಯಾ ಉಪರಾಷ್ಟ್ರಪತಿ ಡಾ|| ಮೊಹಮ್ಮದ್ ಹಟ್ಟಾ, ರಷ್ಯಾ ಪ್ರಧಾನಿ ಮಾರ್ಷಲ್ ಬುಲ್ಗಾನಿನ್, ಜನರಲ್ ಕೆ.ಎಸ್. ತಿಮ್ಮಯ್ಯ, ಪೋಪ್ ಪಾಲ್- -VI ಸೇರಿದಂತೆ ವಿವಿಧ ಮತ-ಧರ್ಮಗಳಿಗೆ ಸೇರಿದ ವಿಶ್ವದ ಅನೇಕ ಖ್ಯಾತನಾಮರು ಅಯ್ಯಂಗಾರರಿಂದ ಯೋಗ ಕಲಿತವರು. ಬೆಲ್ಜಿಯಂನ ಎಲಿಜಬೆತ್ ಕ್ವೀನ್ ತಮ್ಮ 80ನೇ ವಯಸ್ಸಿನಲ್ಲಿ ಶೀರ್ಷಾಸನ ಹಾಕುವಂತೆ ಮಾಡಿದ ಶ್ರೇಯಸ್ಸು ಅಯ್ಯಂಗಾರರಿಗೆ ಸಲ್ಲುತ್ತದೆ.

ಯೋಗಕಲೆಯನ್ನು ಇನ್ನಷ್ಟು ಜನರಿಗೆ ತಲಪಿಸಲು 1966 ರಲ್ಲಿ ಅವರ ಬೋಧನೆಗಳುಲೈಟ್ ಆನ್ ಯೋಗಕೃತಿಯ ರೂಪದಲ್ಲಿ ಹೊರಬಂದವು. ಅಷ್ಟು ಮಾತ್ರವಲ್ಲದೆ ಸುಮಾರು 18 ಭಾಷೆಗಳಿಗೆ ಕೃತಿ ಅನುವಾದಗೊಂಡಿದೆ. ಇದರ ಕನ್ನಡಾನುವಾದಯೋಗದೀಪಿಕಾಒಂದೇ ಪುಸ್ತಕ 30 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ‘ಲೈಟ್ ಆನ್ ಪ್ರಾಣಾಯಾಮ’, ‘ಲೈಟ್ ಆನ್ ದಿ ಯೋಗ ಸೂತ್ರಾಸ್ ಆಫ್ ಪತಂಜಲಿ’ - ಅವರ ಇತರ ಪ್ರಮುಖ ಪ್ರಕಟಿತ ಕೃತಿಗಳು.

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಜೀ (1890–1996):
    
   ಮೂಲತಃ ಉಡುಪಿಯ ಬಾರಕೂರಿನವರಾದ ಸ್ವಾಮಿಜೀಯವರ ಕಾರ್ಯಕ್ಷೇತ್ರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ.ಗ್ರಾಮೀಣ ಭಾಗಗಳಲ್ಲಿ ಯೋಗವನ್ನು ಕೊಂಡೊಯ್ದ ಕೀರ್ತಿ ಇವರದು.
 ಬಾಲ್ಯದಲ್ಲಿಯೇ ದೇವರನ್ನು ಕಾಣುವ ಉದ್ದೇಶದಿಂದ ಮಠ-ಮಂದಿರಗಳೆಂದು ಅಲೆದಾಟ ನಡೆಸಿ, ಸ್ವಾಮಿ ಶಿವಾನಂದರ ಆಶ್ರಯದಲ್ಲಿ ಧ್ಯಾನಮಾರ್ಗವನ್ನು ಹಿಡಿದು, ಬ್ರಹ್ಮಚರ್ಯದ ವ್ರತಧಾರಣೆ ಮಾಡಿದವರು ರಾಘವೇಂದ್ರರಾವ್ ಅವರು. ಬರೋಡಾದ ಪ್ರೊ. ರಾಜರತ್ನ ಮಾಣಿಕ್ರಾಯರವರಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿ, ಪ್ರಸಿದ್ಧ ಆಯುರ್ವೇದ ತಜ್ಞ ಪಂಡಿತ್ ಲಕ್ಷ್ಮಣ ಬಾಬಾರವರಲ್ಲಿ ಆಯುರ್ವೇದ ವೈದ್ಯವಿದ್ಯೆಯ ಜ್ಞಾನವನ್ನು ಗಳಿಸಿದ ಅವರು ಗಾಂಧೀಜಿಯವರ ಪ್ರಭಾವದಿಂದ ಗ್ರಾಮೀಣ ಭಾರತದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಪಣತೊಟ್ಟರು.ಆಗ ಅವರಲ್ಲಿದ್ದ ಆಸ್ತಿ ಯೋಗ ಮತ್ತು ಆಯುರ್ವೇದ.
ಕರ್ನಾಟಕಕ್ಕೆ ಮರಳಿಬಂದು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗಾಗಿ ನಿರಂತರ 41 ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾ, ಜೀವನ ಮೌಲ್ಯಗಳನ್ನು ಜಾಗತೃಗೊಳಿಸುತ್ತಾ ಊರುರು ಸುತ್ತುತ್ತಿದ್ದರು. ಇವರನ್ನು ಜನವ್ಯಾಯಾಮ ಮೇಷ್ಟ್ರುಎಂದೇ ಕರೆದರು.
      ಹೀಗೆ ಯೋಗ ಶಿಬಿರದ ಸುತ್ತಾಟದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಕುಗ್ರಾಮಕ್ಕೆ ಬಂದ ಸ್ವಾಮೀಜಿ (1942) ಕಾಲರಾ ಮಾರಿಯ ಹಾವಳಿಯಿಂದ ಸಂತೃಪ್ತ ಜನರ ಕಣ್ಣೀರೊರಿಸಲು ನಿಂತರು. ಸ್ವತಃ ಮನೆಮನೆಗೆ ತೆರಳಿ ಜೌಷಧಿ ನೀಡಿ ರೋಗಿಗಳನ್ನು ಬದುಕಿಸಿದ್ದು ಮಾತ್ರವಲ್ಲದೇ ಊರ ಜನರಲ್ಲಿ ಶುಚಿತ್ವದ ಜಾಗೃತಿ ಮೂಡುವ ಸಲುವಾಗಿ ತಾವೇ ಪೊರಕೆ ಹಿಡಿದು ಮನೆ-ಅಂಗಳವನ್ನು ಶುಚಿಗೊಳಿಸಿದರು. ಜನರಿಗೆ ಜೀವನ ವಿಧಾನ, ಬಿಸಿಯಾದ, ತಾಜಾ ಆಹಾರ ಸೇವನೆಯ ಮಹತ್ವ, ಪರಿಸರದ ಸ್ವಚ್ಛತೆಗಳ ಬಗ್ಗೆ ಮನದಟ್ಟು ಮಾಡಿಸಿದರು. ನಿಧಾನವಾಗಿ ಮಲ್ಲಾಡಿಹಳ್ಳಿಯ ವಾತಾವರಣವೇ ಬದಲಾಯಿತು. ಊರೂರು ಅಲೆಯುತ್ತಾ ಯೋಗ ಶಿಬಿರಗಳನ್ನು ನಡೆಸುತ್ತಿದ್ದವ್ಯಾಯಾಮ ಮೇಷ್ಟ್ರುಮಲ್ಲಾಡಿಹಳ್ಳಿಯ ಜನರಿಗೆಸ್ವಾಮೀಜಿ” ಯಾದರು. ಊರಪರಿವರ್ತನೆಗೆ ಕಾರಣವಾದ ಅವರ ನಿರ್ಮಲ ಅಂತಃಕರಣದ ಸೇವೆಯಿಂದ ಜನರೆಲ್ಲಾ ತಮ್ಮ ಊರಿನಲ್ಲಿಯೇ ಶಾಶ್ವತವಾಗಿ ನೆಲೆಸಲು ಬೇಡಿಕೊಂಡರು.
       ಸದಾ ನೊಂದಜೀವಗಳ ಬಗೆಗೆ ಚಿಂತಿಸುತ್ತಿದ್ದ ಸ್ವಾಮಿಜಿ ಅವರ ಬೇಡಿಕೆಗೆ ಗಂಟುಬಿದ್ದರು. ಅನಾಥ ಮಕ್ಕಳಿಗಾಗಿ 1943ರಲ್ಲಿಅನಾಥಸೇವಾಶ್ರಮಪ್ರಾರಂಭಿಸಿ ಅಸಂಖ್ಯಾತ ಜನರ ಬದುಕಿಗೆ ಅಧಾರವಾದರು. ಇವರು ಕಾವಿ ಧರಿಸಲಿಲ್ಲ. ಕೇವಲ ಖಾದಿಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿದರು. ಅವರದು ಕಟ್ಟುನಿಟ್ಟಿನ ದಿನಚರಿಯ, ನಿತ್ಯ ಯೋಗ, ಸರಳ ಜೀವನ. ಸೇವೆಗಾಗಿಯೇ ಬದುಕು ಮೀಸಲು.
    ಆಶ್ರಮದಲ್ಲಿ ಚಟುವಟಿಕೆಗಳ ಜೊತೆಜೊತೆಗೇ ಯೋಗಶಿಕ್ಷಣ ಮತ್ತು ಆಯುರ್ವೇದಚಿಕಿತ್ಸೆ ಸಾಗುತ್ತ ಬಂದವು. ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಸುಲಭವಾಗಿ ಶಿಕ್ಷಣಾನುಕೂಲ ಒದಗಿಸುವುದಕ್ಕಾಗಿ ವಿವಿಧ ರೀತಿಯ ಶಾಲೆಗಳನ್ನು ಆರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಠವಾದ ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು. ಆಶ್ರಮದ ಆವರಣದಲ್ಲಿ ವಿವಿಧ ಬಗೆಯ ಸಸ್ಯಮೂಲಿಕೆಗಳ ಔಷಧಿವನಗಳನ್ನು ಕೈಯಾರೆ ಬೆಳೆಸಿದರು. ಜನರಿಗೆ ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಕಲೆ - ಹೀಗೆ ಹತ್ತು ಹಲವು ಅಂಶಗಳ ಬಗ್ಗೆ ಪರಿಜ್ಞಾನ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಶ್ರಮವನ್ನು ಸಮಾಜಮುಖಿಯಾಗಿ ಬೆಳೆಸುತ್ತಾ ಹೋದರು.
 ಇದರ ನಡುವೆಯೂ ಸ್ವಾಮೀಜಿಯ ಆದ್ಯತೆ ಇದ್ದುದು ಯೋಗಪ್ರಸಾರ - ಯೋಗಶಿಕ್ಷಣಕ್ಕೆ. ಪಾತಂಜಲ ಮೂಲಯೋಗ ಶಿಕ್ಷಣ ಶಿಬಿರ ಎಂಬ ಹೆಸರಿನಲ್ಲಿ ಪ್ರತಿವರ್ಷ ಆಕ್ಟೋಬರ್ ತಿಂಗಳ 4 ರಿಂದ 25 ವರೆಗೆ 21 ದಿನಗಳ ಯೋಗಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದರು. ದೇಶ-ರಾಜ್ಯದ ನಾನಾ ಭಾಗಗಳ ಸಾವಿರಾರು ಮಂದಿ ಯೋಗಾಸಕ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಯೋಗಪ್ರಸಾರಕ್ಕಾಗಿ ರಾಜ್ಯಾದ್ಯಂತ ಬೇರೆಬೇರೆ ಕಡೆಗಳಲ್ಲಿ ನಿರಂತರ ಯೋಗಪ್ರದರ್ಶನಗಳನ್ನೂ ನಿರಂತರವಾಗಿ ನಡೆಸುತ್ತಿದ್ದರು.

 ಕರ್ನಾಟಕದ ಗ್ರಾಮೀಣ ಭಾಗಗಳಿಗೆ ಯೋಗವನ್ನು ಕೊಂಡೊಯ್ದವರಲ್ಲಿ ಮಲ್ಲಾಡಿಹಳ್ಳಿ ಸ್ವಾಮೀಜಿಗಳಿಗೆ ಮಹತ್ವದ ಪಾತ್ರವಿದೆ.


 ಅಜಿತ್ ಕುಮಾರ್ (27-8-1934 4-12-1990)      
ಮುಕ್ತಸಂಗೋsನಹಂವಾದೀ ಧೃತ್ಯುತ್ಸಾಹ ಸಮನ್ವಿತಃ |
ಸಿದ್ದ್ಯಸಿದ್ದ್ಯೋರ್ನಿವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ||
  ಮೋಹವಿಲ್ಲದೇ,ಅಹಂಕಾರಿಯಾಗದೆ, ಧೈರ್ಯ, ಉತ್ಸಾಹಗಳನ್ನು ತುಂಬಿಕೊಂಡು ಜಯ ಪರಾಜಯಗಳಲ್ಲಿ ಮತಿಗೆಡದೆ ಮುನ್ನುಗ್ಗುವವನನ್ನೇ ಸಾತ್ತ್ವಿಕ ಕಾರ್ಯಕರ್ತ ಎನ್ನುವರು. ಅಂತಹ ಕಾರ್ಯಕರ್ತ ಯಾರು ಎಂಬ ಪ್ರಶ್ನೆಗೆ ನಿಶ್ಚಿಂತರಾಗಿ ತಕ್ಷಣ ಅಜಿತ್ ಎಂದು ಉತ್ತರಿಸಬಹುದು. ಅವರು ತಮ್ಮ ಮನದ ಕಲ್ಪನೆಗಳಿಗೆಲ್ಲ ರೂಪುಕೊಟ್ಟರು. ಅಷ್ಟೇ ಅಲ್ಲ ಜಗತ್ತಿನಲ್ಲಿ ಉತ್ತಮರ ಕಲ್ಪನೆಗಳೆಲ್ಲವನ್ನೂ ತಮ್ಮದಾಗಿಸಿಕೊಂಡರು. ಎಲ್ಲರಲ್ಲೂ ಯೋಗ್ಯ ದಿಕ್ಕು, ಹೊಸ ಧೈರ್ಯ-ಉತ್ಸಾಹ ತುಂಬಿದರು. ಕಲ್ಪನೆಗಳಿಗೆ ತಮ್ಮ ಶಕ್ತಿಯನ್ನೂ ತಪಸ್ಸನ್ನೂ ತುಂಬಿ ಯಶಗೊಳಿಸಿ ತಾವು ಮಾತ್ರ ಯಾವುದನ್ನೂ ತಮ್ಮದೆಂದು ಹೇಳದೆ ಹಿಂದೆಯೇ ಉಳಿದ ನಮ್ರ ಸೇವಾಮೂರ್ತಿ ಅಜಿತ್ಕುಮಾರ್. ಇದು ಅಜಿತರ ಒಡನಾಡಿಯೂ ಸಂಘದ ಹಿರಿಯ ಪ್ರಚಾರಕರೂ ಆದ ಮಾನ್ಯ ಕೃಷ್ಣಪ್ಪನವರ ಮಾತು.
  ಅಜಿತ್ ಕುಮಾರ್ ಎಂದರೆ ಹೊಸ ಆಲೋಚನೆಗಳು, ಹೊಸ ಹೊಸ ಆವಿಷ್ಕಾರಗಳು ಎಂದೇ ಸಂಘವಲಯದಲ್ಲಿ ಜನಜನಿತ. ಹಲವಾರು ಹೊಸ ಯೋಚನೆಗಳಿಗೆ ಕೃತಿರೂಪ ನೀಡಿದವರು ಅಜಿತ್ಕುಮಾರ್. ಇಂದು ಸಂಘದ (ರಾಷ್ಟ್ರೀಯ ಸ್ವಯಂಸೇವಕ ಸಂಘದ) ಶಾಖೆಯ ಬಹುಮುಖ್ಯ ಭಾಗವಾಗಿರುವ ಸೂರ್ಯನಮಸ್ಕಾರ, ಯೋಗಾಸನಗಳನ್ನು ಮೊತ್ತಮೊದಲು ಅಳವಡಿಸಿದವರು ಅಜಿತ್ ಕುಮಾರ್ ಅವರು.
 ಅದಾಗ ಯೋಗಾಸನದ ಹೆಸರು ಅಲ್ಲಿ-ಇಲ್ಲಿ ಕೇಳಿಬರುತ್ತಿತ್ತು. ಸಂಘದಲ್ಲಿಯೂ ಯೋಗಾಸನ ಕಲಿಸಿದರೆ ಹೇಗೆ ಎಂಬ ಯೋಚನೆ ಮೂಡುತ್ತಿದ್ದಂತೆಯೇ ಅಜಿತ್ಕುಮಾರ್ ಅದಕ್ಕೆ ಸಿದ್ಧವಾಗಿ ನಿಂತರು. ಅದಾಗಲೇ ಯೋಗದಲ್ಲಿ ಸಾಧನೆ ಮಾಡಿದ್ದ ಮೈಸೂರಿನ ಪಟ್ಟಾಭಿ ಜೋಯಿಸರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ವಾರಕ್ಕೆ - ದಿನ ನಿರಂತರ ಮೈಸೂರಿಗೆ ಹೋಗಿ ಅವರಿಂದ ಯೋಗತರಬೇತಿ ಪಡೆದು ಬಂದರು. ಆನಂತರ ಬಿ.ಕೆ.ಎಸ್. ಅಯ್ಯಂಗಾರ್ ಅವರ ಬಳಿಯೂ ಯೋಗ ಕಲಿತರು. ಸಂಘದ ಸ್ವಯಂಸೇವಕರಿಗೆ ಯೋಗಾಸನ ಕಲಿಸುವ ಯೋಜನೆಯೂ ರೂಪತಳೆಯಿತು.
ಸ್ವಯಂಸೇವಕರನ್ನು ತರಬೇತಿಗೊಳಿಸುವ ಸಲುವಾಗಿ ನಡೆಯುವ ಸಂಘ ಶಿಕ್ಷಾ ವರ್ಗದಲ್ಲೂ ಯೋಗಾಸನ ಪ್ರಾರಂಭವಾಯಿತು. ನಿಧಾನವಾಗಿ ಸಂಘವಲಯಗಳಲ್ಲಿ ಯೋಗ ಶಿಕ್ಷಣದ ಗುಂಗು ಎದ್ದಿತು. ಯೋಗಾಸಕ್ತರಿಗೆ ತರಬೇತಿ ನೀಡುವ ಯೋಗಶಿಕ್ಷಕರ ತಯಾರಿಗಾಗಿ ಅಲ್ಲಲ್ಲಿ ಸ್ವತಃ ತಾವೇ ಮುಂದೆ ನಿಂತು ಪ್ರಶಿಕ್ಷಣ ವರ್ಗಗಳನ್ನು ನಡೆಸಿದರು. ಇವರ ಕಾರ್ಯದ ಪ್ರಭಾವ ಎಷ್ಟು ವ್ಯಾಪಿಸಿತ್ತೆಂದರೆ ನಾಗಪುರದಲ್ಲಿ ನಡೆಯುವ ತೃತಿಯ ವರ್ಷದ ಸಂಘ ಶಿಕ್ಷಾ ವರ್ಗದಲ್ಲೂ ಯೋಗಾಸನ ಕಲಿಕೆ ಒಂದು ವಿಷಯವಾಯಿತು. ಅಲ್ಲಿನ ಯೋಗಾಸನ ಪಠ್ಯಕ್ರಮ ರಚನೆಯಲ್ಲೂ ಅಜಿತರು ಮುಂದೆ ನಿಂತರು.
 ನಿಧಾನವಾಗಿ ಸಮಾಜದಲ್ಲೂ ಯೋಗದ ಜನಪ್ರಿಯತೆ ಹೆಚ್ಚಿತು. ಬೆಂಗಳೂರಿನ ಯೋಗಾಸಕ್ತರಿಗಾಗಿ ಅಜಿತ್ ಪ್ರೇರಣೆಯಿಂದಲೇ ಜಯನಗರದಲ್ಲಿ 1972ರ ಸುಮಾರಿಗೆ "ರಾಷ್ಟ್ರೋತ್ಥಾನ ಶಾರೀರಿಕ ಯೋಗಕೇಂದ್ರ" ತಲೆ ಎತ್ತಿತು. ಸ್ವತಃ ತಾವೇ ಯೋಗಾಸನ ತರಗತಿಗಳಿಗೆ ಸಲಹೆಗಾರರಾಗಿ ಮಾರ್ಗದರ್ಶನ ಮಾಡಿದರು. ಅನೇಕ ಯೋಗಶಿಕ್ಷಕರನ್ನು ತರಬೇತಿಗೊಳಿಸಿದರು.
 ಸಂಘ ಶಿಕ್ಷಾ ವರ್ಗಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಶಿಕ್ಷಾರ್ಥಿಗಳಿಗೆ ಔಷಧನೀಡಲು ಸ್ವತಃ ವೈದ್ಯರಾದರು. ಯೋಗವನ್ನು ಚಿಕಿತ್ಸಾಕ್ರಮವಾಗಿ ಮಾಡುವ ಸಲುವಾಗಿ ಶರೀರಶಾಸ್ತ್ರದ ಅಧ್ಯಯನ ನಡೆಸಿದರು. ಕಾರ್ಯಕ್ಕೆ ಅಗತ್ಯಬಿದ್ದಂತೆ ಮನೋವಿಜ್ಞಾನ, ಲೆಕ್ಕಪತ್ರ ಮುಂತಾದವನ್ನು ಕಲಿತರು. ಲೋಕಹಿತಕ್ಕಾಗಿ ಗಳಿಸಿದ ಪರಿಣತಿಯನ್ನು ಇತರರಿಗೂ ತಿಳಿಸುವ ಸಲುವಾಗಿ ಶರೀರ, ಲವಲವಿಕೆ, ವ್ಯಾಯಾಮ, ಕ್ರೀಡೆ ಇವುಗಳ ಕುರಿತುಉತ್ಥಾನಮಾಸಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಅವುಗಳ ಸಂಕಲನಶರೀರ ಶಿಲ್ಪಪುಸ್ತಕವಾಗಿ ಹೊರಬಂದಿದೆ.
  1975ರಲ್ಲಿ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿ ಅಜಿತ್ರು ಬೆಂಗಳೂರಿನ ಕೇಂದ್ರಕಾರಾಗೃಹಕ್ಕೆ ತಳ್ಳಲ್ಪಟ್ಟರು. ಅಲ್ಲಿಯೂ ಅವರ ದಿನನಿತ್ಯದ ಭಾಗವಾಗಿ ಯೋಗ ಮುಂದುವರಿದಿತ್ತು. ಜೈಲಿನಲ್ಲಿಯೇ ಸಹಬಂದಿಗಳಿಗಾಗಿ ಯೋಗ ತರಗತಿಗಳನ್ನು ನಡೆಸಿದರು. ಸೆರೆಮನೆಯನ್ನೇ ಗುರುಮನೆಯಾಗಿಸಿದ ಅಜಿತರು ಅನೇಕ ಸಾಮಾಜಿಕ-ರಾಜಕೀಯ ನಾಯಕರಿಗೆ ಗುರುಗಳಾದರು. ದಿನಕಳೆದಂತೆ ಗ್ರಂಥ ರಚನೆಯ ಕಲ್ಪನೆಯೂ ಮೂಡಿತು. ತರಗತಿಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದ ರಾಷ್ಟ್ರೋತ್ಥಾನ ಪರಿಷತ್ ಅಂದಿನ ಪ್ರಮುಖರಾಗಿದ್ದ ಮೈ.. ಜಯದೇವ ಇದನ್ನು ಪ್ರೋತ್ಸಾಹಿಸಿದರು. ಕಲ್ಪನೆ ಬಲವಾಗಿ, ಲೇಖನದ ಬಹುಭಾಗ ಸೆರೆಮನೆಯಲ್ಲಿಯೇ ತಯಾರಾಗಿ ಕಲ್ಪನೆ ಸಾಕಾರಗೊಂಡಿತು. 'ಯೋಗಪ್ರವೇಶಎಂಬ ಅಮೂಲ್ಯ ಗ್ರಂಥ ಪುಸ್ತಕ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಹೊರಬಂದಿತು. ಲೇಖಕ-ಪ್ರಕಾಶಕ ಒಟ್ಟಿಗೇ ಕಾರಾಗೃಹದಲ್ಲಿ ಕಲೆತು ನಿರ್ಮಾಣ ಮಾಡಿದ ಭಾಗ್ಯ ಪುಸ್ತಕಕ್ಕಿದೆ.
 ಅಜಿತರೇ ಹೇಳುವಂತೆ, ಪುಸ್ತಕ ನಿರ್ಜೀವ ಗ್ರಂಥ ಅಲ್ಲ; ಜೀವಂತ ಶಿಕ್ಷಕ. ಹೆಜ್ಜೆಹೆಜ್ಜೆಗೂ ಎಚ್ಚರಿಸುವ, ಆಲಸ್ಯ ದೂರಮಾಡುವ, ಮುಂದಿನ ಏರುವಿಕೆಯನ್ನು ಸರಳಗೊಳಿಸುವ ಮಾರ್ಗದರ್ಶಿ... ಇದೊಂದು ಅಧ್ಯಯನದ ಗ್ರಂಥವಲ್ಲ; ಕೃತಿಯ ಕೈಪಿಡಿ. ಅನುಭವಕ್ಕೇ ಮೊದಲ ಪಟ್ಟ. ಆನಂಧವೇ ಅದರ ಸವಿ! - ಎಂದಿದ್ದಾರೆ. ಇದು ಎಷ್ಟು ಪ್ರಖ್ಯಾತಿ ಗಳಿಸಿದೆ ಎಂದರೆ ಈವರೆಗೆ 18 ಬಾರಿ ಮರುಮುದ್ರಣಗೊಂಡಿದೆ. ಸಾವಿರಾರು ಯೋಗಪಟುಗಳನ್ನು ರೂಪಿಸಿದೆ.
ಹೀಗೆ ಸಂಘದ ಮೂಲಕ ಸಮಾಜದ ಬೇರುಗಳಿಗೆ ಯೋಗವನ್ನು ಕೊಂಡೊಯ್ದ ಕೀರ್ತಿ ಅಜಿತರದ್ದು.

ತಿರುಮಲೈ ಕೃಷ್ಣಮಾಚಾರ್ಯ (1888-1989)
ಯೋಗದ ಪಿತಾಮಹರೆಂದೇ ಗುರುತಿಸಲ್ಪಟ್ಟ ತಿರುಮಲೈ ಕೃಷ್ಣಮಾಚಾರ್ಯರು ನೂರೊಂದು ವರ್ಷಗಳ ಕಾಲ ಬದುಕಿದವರು. ಅಂದಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಯೋಗ ಚಿಕಿತ್ಸೆಯನ್ನು ನೀಡಿ ರಾಜರ ಗೌರವಕ್ಕೂ ಪಾತ್ರರಾಗಿದ್ದರು. ಇವರು ಸ್ವತಃ ಒಬ್ಬ ಉತ್ತಮ ದೇಹದಾರ್ಢ್ಯ ಪಟುವಾಗಿದ್ದುದರ ಜೊತೆಗೆ ವೇದ ಪಾರಂಗತರೂ, ವ್ಯಾಕರಣ ಪಂಡಿತರೂ ಆಗಿದ್ದರು. ಯೋಗ ಚಿಕಿತ್ಸಕರೆಂದು ಹೆಸರು ಮಾಡಿದ್ದ ಆಚಾರ್ಯರಿಗೆ ಮೈಸೂರಿನ ಅರಸರು ಯೋಗ ಪಟುಗಳಿಗೆ ತರಬೇತಿ ನೀಡುವ ಆಶ್ರಮವೊಂದನ್ನು ಸ್ಥಾಪಿಸಲು ಸಕಲ ರೀತಿಯ ನೆರವು ನೀಡಿದ್ದರು.
ಕೃಷ್ಣಮಾಚಾರ್ಯರು ಚಿತ್ರದುರ್ಗದ ಮುಚುಕುಂದಪುರಂನಲ್ಲಿ ಜನಿಸಿ ತಮ್ಮ ತಂದೆಯಿಂದಲೇ ಆರಂಭಿಕ ಯೋಗ ಶಿಕ್ಷಣವನ್ನು ಪಡೆದರು. ಮರಣಾನಂತರ ಮೈಸೂರಿ ಬಂದವರು. ಅಲ್ಲಿಂದ ಬನಾರಸ್ಸಿಗೆ ತಲುಪಿ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಹಿಮಾಲಯದ ಸಾಧುಗಳ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಿ, ಯೋಗ ಚಿಕಿತ್ಸೆಯಲ್ಲಿ ಪರಿಣಿತಿ ಗಳಿಸಿದರು. ಆಗಿನ ಬ್ರಿಟೀಷ್ ವೈಸ್‌ರಾಯ್ ಆಗಿದ್ದ ಮಧುಮೇಹದಿಂದ ಬಳಲುತ್ತಿದ್ದ ಲಾರ್ಡ್ ಇರ್ವಿನ್‌ಗೆ ಯೋಗ ಚಿಕಿತ್ಸೆಯ ಮೂಲಕ ಗುಣ ಪಡಿಸಿದರು.     
ಕೃಷ್ಣಮಾಚಾರ್ಯರು ಹಠಯೋಗಿಗಳೆಂದು ಹೆಸರಾದವರು. ಆದರೂ ತಮ್ಮ ಯೋಗ ಸಾಧನೆಯ ಕಾಲದಲ್ಲಿ ಭಕ್ತಿ, ಜ್ಞಾನಗಳ ಹಾದಿಯನ್ನು ಬಳಸಿಕೊಂಡು ಪರಿಪೂರ್ಣತೆಯೆಡೆಗೆ ಹೆಜ್ಜೆಯನ್ನಿಟ್ಟರು. ತೀವ್ರತರವಾದ ದೈಹಿಕ ವ್ಯಾಯಾಮಗಳನ್ನು ಒಳಗೊಂಡ ನೂತನ ಸಾಧನಾ ಮಾರ್ಗವನ್ನು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು. ಇವರ ಶಿಷ್ಯರಾದ ಕೃಷ್ಣ ಪಟ್ಟಾಭಿ ಜೋಯಿಸರು ಇದನ್ನೇ ಮುಂದುವರೆಸಿ ’ಅಷ್ಠಾಂಗ ವಿನ್ಯಾಸ ಯೋಗ’ವೆಂದು ಹೆಸರಿಸಿದರು. ಇಂದಿಗೂ ದೇಶವಿದೇಶಗಳ ಯೋಗಶಾಲೆಗಳಲ್ಲಿ ಕಲಿಸಲಾಗುತ್ತಿರುವ ಯೋಗ ಪದ್ಧತಿಗಳು ಕೃಷ್ಣಮಾಚಾರ್ಯರ ಅಷ್ಠಾಂಗ ವಿನ್ಯಾಸ ಯೋಗದ ಮೇಲೆ ಬೆಳೆದಿವೆಯೆಂದರೆ ತಪ್ಪಿಲ್ಲ.
ಯೋಗ ಮಕರಂದ, ಯೋಗಾಸನಗಳು, ಯೋಗ ರಹಸ್ಯ ಮತ್ತು ಯೋಗವಲ್ಲಿ ಎಂಬ ಮಹತ್ವದ ನಾಲ್ಕು ಕೃತಿಗಳನ್ನು ಅವರು ರಚಿಸಿದ್ದಾರೆ. ತಿರುಮಲೈ ಕೃಷ್ಣಮಾಚಾರ್ಯರ ಸುಪುತ್ರ ಟಿ.ಕೆ.ವಿ ದೇಶಿಕಾಚಾರ್ಯರು ಚೆನ್ನೈನಲ್ಲಿ ’ಕೃಷ್ಣಮಾಚಾರ್ಯ ಯೋಗ ಮಂದಿರಂ’ ಎಂಬ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಈ ಯೋಗ ಪದ್ಧತಿಯನ್ನು ಮುಂದುವರೆಸುತ್ತಿದ್ದಾರೆ.  ವಿಶ್ವವಿಖ್ಯಾತ ಯೋಗಾಚಾರ್ಯ ಶ್ರೀ ಬಿ.ಕೆ.ಎಸ್. ಐಯ್ಯಂಗಾರರು ಸಹ ತಿರುಮಲೈ ಕೃಷ್ಣಮಾಚಾರ್ಯರ ಶಿಷ್ಯ ಹಾಗೂ ಸಂಬಂಧಿಕರು.