ಭವಿಷ್ಯದ ಕುಡಿಗಳಿಗೆ ತಿಳಿಸಿ; ಆದರ್ಶದ ಕನಸುಕಟ್ಟಬಲ್ಲ
ಭಾರತ-ಭಾರತಿ ಪುಸ್ತಕಗಳು
ನಾನೇನಾಗಬೇಕು? - ಇದು ಎಲ್ಲರನ್ನೂ ಕಾಡುವ ಸಾಮಾನ್ಯ ಪ್ರಶ್ನೆ. ಉತ್ತರ ಕಂಡುಕೊಳ್ಳುವುದು ಬಹು ಕಷ್ಟದ ಕೆಲಸ. ಯಾಕೆಂದರೆ ನಾನೇನಾಗಬೇಕು ಎಂಬುದನ್ನು ನನಗೆ ತಿಳಿಸುವ ರೋಲ್‌ಮಾಡೆಲ್ (ಆದರ್ಶ) ನಮ್ಮೆದುರಿಗಿರಬೇಕು. ಆಗ ನಾವು 'ನಾನು ಸರ್. ಎಂ. ವಿಶ್ವೇಶ್ವರಯ್ಯನವರಂತಾಗಬೇಕು; ಜಗದೀಶ್ ಚಂದ್ರ ಬೋಸ್‌ರಂತಾಗಬೇಕು, ವಿವೇಕಾನಂದರು ನೀಡಿದ ಆದರ್ಶದ ಮೇಲೆ ಬದುಕಬೇಕು, ಸುಭಾಷ್-ಸಾವರ್‌ಕರ್‌ರಂತಹ ಸಾಹಸಿ-ಚಾಣಾಕ್ಷ ನಾನಾಗಬೇಕು...’ - ಎಂದು ಸುಲಭವಾಗಿ ನಿಶ್ಚಯಿಸಬಹುದು. ಆದರೆ ಇಂದು ನಮ್ಮ ಶಿಕ್ಷಿತ ಸಮೂಹದ ಮುಂದೆ, ಮಕ್ಕಳ ಮುಂದೆ ’ರೋಲ್ ಮಾಡೆಲ್’ಗಳೇ ಇಲ್ಲ. ನಮ್ಮ ಶಿಕ್ಷಣ ಪದ್ಧತಿಯಂತೂ ಈ ಕೆಲಸದಿಂದ ಎಂದೋ ವಿಮುಖವಾಗಿದೆ.ನಮ್ಮ ಶಿಕ್ಷಣ ಪದ್ಧತಿಗಳಿಂದಾಗಿ ವಿದ್ಯಾಲಯಗಳಿಂದು ಯಂತ್ರಗಳನ್ನು ತಯಾರಿಸುವ ಕಾರ್ಖಾನೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಮಗುವಿನ ಸಮಗ್ರ ವಿಕಾಸದ ಕೇಂದ್ರವಾಗಬೇಕಿದ್ದ ಶಾಲೆ, ಬರಿ ಅಕ್ಷರ ಕಲಿಕೆಯ ಕೇಂದ್ರವಾಗಿದೆ.ಜೀವನಾನುಭವವನ್ನು ಗಳಿಸಲು, ಬದುಕಲು ಕಲಿಯಲು, ಹೊರಗಿನ ಪ್ರಪಂಚದೊಂದಿಗೆ ಮಕ್ಕಳು ಬೆರೆಯುವುದೇ ಉಪಾಯ. ಎಷ್ಟೇ ಅಂಕ ಗಳಿಸಿದರೂ ಒಬ್ಬ ಒಳ್ಳೆಯ ಮನುಷ್ಯನಾಗಬೇಕಾದರೆ, ಹೆಚ್ಚು ಹೆಚ್ಚು ನೋಡಬೇಕು, ಕೇಳಬೇಕು, ಓದಬೇಕು, ಅನುಭವಿಸಬೇಕು. ಆಗ ಮಾತ್ರ ಮಕ್ಕಳು ಪ್ರಪಂಚವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ತಮ್ಮ ಬದುಕಿಗೊಂದು ಅರ್ಥ ಕಂಡುಕೊಳ್ಳಲು ಸಾಧ್ಯ.ಶಿಕ್ಷಣದಿಂದ ವಂಚಿತವಾದ ಬದುಕುವ ಕಲೆ ಹಾಗೂ ರೋಲ್ ಮಾಡೆಲ್(ಮಾದರಿ)ಗಳನ್ನು ಮಕ್ಕಳ ಮುಂದಿಡುವ ಸಲುವಾಗಿ ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಭಾರತ-ಭಾರತಿ ಎಂಬ ಮಕ್ಕಳ ಪುಸ್ತಕ ಮಾಲೆಯನ್ನು ಹೊರತಂದಿದೆ. ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ; ಯಾಕೆ ಬದುಕಬೇಕು-ಹೇಗೆ ಬದುಕಬೇಕು ಎಂಬುದನ್ನು ಭವಿಷ್ಯದ ಕುಡಿಗಳಿಗೆ ತಿಳಿಸಿ; ಆದರ್ಶದ ಕನಸುಕಟ್ಟಬಲ್ಲ ಪುಸ್ತಕಮಾಲೆಯೆಂಬ ಹೆಗ್ಗಳಿಕೆ ಈ ಭಾರತ-ಭಾರತಿ ಪುಸ್ತಕ ಮಾಲೆಯದ್ದು.
೧೯೭೨ರ ನವೆಂಬರ್ ೫ರಂದು ರಾಜ್ಯದ ೩೬ ಕಡೆಗಳಲ್ಲಿ ಮೊದಲ ಹತ್ತು ಪುಸ್ತಕಗಳ ಬಿಡುಗಡೆಯೊಂದಿಗೆ ಪ್ರಾರಂಭಗೊಂಡ ಭಾರತ-ಭಾರತಿ ಪುಸ್ತಕಮಾಲೆಯು ಕನ್ನಡ ಪ್ರಕಟಣೆಯ ಪ್ರಪಂಚದಲ್ಲೊಂದು ಹೊಸ ದಾಖಲೆ ನಿರ್ಮಿಸಿತು. ಅಂದು ಬೆಂಗಳೂರಿನಲ್ಲಿ ಮಾತನಾಡಿದ ಮಕ್ಕಳ ಸಾಹಿತ್ಯದ ಪಿತಾಮಹ ಜಿ.ಪಿ. ರಾಜರತ್ನಂ ’ಭಾರತ-ಭಾರತಿ ಪುಸ್ತಕವಲ್ಲ, ಪೂಜೆ...’ ಎಂದಿದ್ದರು. ಇದು ಅಕ್ಷರಶಃ ಸತ್ಯವೇ ಆಗಿದೆ.
"ಮಕ್ಕಳಿಗೆ ವಿಚಾರ ಶಕ್ತಿ, ವೈಜ್ಞಾನಿಕ ದೃಷ್ಟಿ ಕೊಡಬೇಕು. ವಿಚಾರಶಕ್ತಿ ಉದ್ದೀಪನಗೊಳಿಸಿದಲ್ಲಿ, ವ್ಯಕ್ತಿ ಅವಿವೇಕಿಯಾಗಲಾರ, ವಿವೇಕಿ ಆಗಿಯೇ ಆಗುವನು. ಭರತಖಂಡದ ಸಾವಿರಾರು ಮಹಾಪುರುಷರಿಂದ ಸ್ಫೂರ್ತಿಪಡೆದು ನಮ್ಮ ಎಳೆಯ ಜನಾಂಗ ಬೆಳೆದು ನಾಡನ್ನು ಮೇಲಕ್ಕೆತ್ತಬೇಕು, ಅದರ ಕೀರ್ತಿ ಜಗದ್ವಿಖ್ಯಾತವಾಗಬೇಕು- ಎಂಬ ಉದ್ದೇಶ ’ಭಾರತ-ಭಾರತಿ’ಪುಸ್ತಕ ಸಂಪದದಲ್ಲಿದೆ."- ಕೆ.ವಿ. ಪುಟ್ಟಪ್ಪ
೧೯೭೧ರಲ್ಲಿ ಈ ಕಲ್ಪನೆಯ ಬೀಜಾಂಕುರವಾಯಿತು. ರಾಷ್ಟ್ರೋತ್ಥಾನ ಪರಿಷತ್‌ನ ಅಂದಿನ ಪ್ರಧಾನ ಕಾರ್ಯದರ್ಶಿ ನಂ. ಮಧ್ವರಾವ್ ಅವರ ಯೋಚನೆ, ಆರೆಸ್ಸೆಸ್‌ನ ಪ್ರಚಾರಕರಾದ ಯಾದವರಾವ್ ಜೋಶಿ ಅವರ ಹಾರೈಕೆ, ರಾಷ್ಟ್ರೋತ್ಥಾನದ ಆಗಿನ ಪ್ರಧಾನ ವ್ಯವಸ್ಥಾಪಕ ಮೈ.ಚ. ಜಯದೇವ್ ಮತ್ತು ಕಾರ್ಯದರ್ಶಿ ಅರಕಲಿ ನಾರಾಯಣ್ ಅವರಿಂದ ನೀಲನಕ್ಷೆ - ಮಾಸ್ಟರ್ ಪ್ಲಾನ್‌ನಲ್ಲಿ ಹಾಗೂ ಪ್ರೊ. ಎಲ್.ಎಸ್. ಶೇಷಗಿರಿರಾಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಭಾರತ-ಭಾರತಿ ಪುಸ್ತಕ ಪ್ರಕಟಣೆ ಯೋಜನೆ ಪ್ರಾರಂಭವಾಯಿತು. ಒಂದು ದೃಷ್ಟಿಯಿಂದ ಇದು ’ಶೂನ್ಯ’ದಿಂದ ಆದ ಸೃಷ್ಟಿ. ಈ ಯೋಜನೆಯ ಕಲ್ಪನೆ ಮೂಡಿದ ಕಾಲದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಕೈಯಲ್ಲಿದ್ದ ಸಂಪನ್ಮೂಲವೂ ಶೂನ್ಯ. ಶ್ರದ್ಧೆ ಮತ್ತು ಉತ್ಸಾಹವಷ್ಟೆ ಅಲ್ಲಿದ್ದ ಬಂಡವಾಳ. ಆದರೆ ಗುರಿಯ ಸ್ಪಷ್ಟತೆ, ಶ್ರಮ, ಸಿದ್ಧತೆಗಳಿಂದಾಗಿ ಈ ಇತಿಹಾಸಾರ್ಹ ಯೋಜನೆಯನ್ನು ಸಾಧ್ಯ ಮಾಡಿತು.
ಆರ್ಥಿಕ ಸಮಸ್ಯೆ ಎದುರಾದಾಗ ಠೇವಣಿಸಂಗ್ರಹ ಯೋಜನೆಯೊಂದನ್ನು ರೂಪಿಸಿ, ೬೫೯ ಠೇವಣಿದಾರರ ರಿಂದ ಒಟ್ಟು ಸುಮಾರು ೭,೪೦,೦೦೦ ರೂ. ಸಂಗ್ರಹಿಸಿ ಕಾರ್ಯವನ್ನು ಮುನ್ನೆಡೆಸಲಾಯಿತು. ಆ ದಿನಗಳಲ್ಲಿ ಮುದ್ರಣ ಕಾಗದದ ಕೊರತೆ ಇತ್ತು. ಮುದ್ರಣಸಾಮರ್ಥ್ಯವೂ ಸಾಕಾಗುವಷ್ಟು ಇರಲಿಲ್ಲ. ಆದರಿಂದ ಬ್ಯಾಂಕ್ ಸಾಲ ಮಾಡಿ ಹೊಸ ಯಂತ್ರಗಳನ್ನು ಖರೀದಿಸಲಾಯಿತು. ಇಡೀ ಯೋಜನೆಗಾಗಿ ಬಳಸಲಾದ ಕಾಗದ ೨೫೫ ಟನ್ನುಗಳಷ್ಟು (ಸುಮಾರು ೧೪,೦೦೦ ರೀಮುಗಳು); ರಕ್ಷಾಪಟಕ್ಕಾಗಿ ಬಳಸಿದ ಆರ್ಟ್‌ಬೋರ್ಡು ೬,೨೦೦ ಗ್ರೋಸ್‌ನಷ್ಟು. ಹೀಗೆ ಮಹತ್ತ್ವದ ದೃಷ್ಟಿಯಿಂದ ಮಾತ್ರವಲ್ಲದೆ ಗಾತ್ರದ ದೃಷ್ಟಿಯಿಂದಲೂ ಭಾರತ-ಭಾರತಿ ಯೋಜನೆ ಅಸಾಧಾರಣವಾದದ್ದು. ಹತ್ತಾರು ಮಂದಿ ಶ್ರದ್ಧಾವಂತರು, ನೂರಾರು ಮಂದಿ ಲೇಖಕರು, ಮತ್ತಿತರ ಸಹಕಾರಿಗಳು ಒಲುಮೆಯಿಂದ ಒಗ್ಗೂಡಿ ದುಡಿದುದರಿಂದ ಶಕ್ಯವಾದ ಈ ಯೋಜನೆ ಒಂದು ಅಪರ್ವ ಜ್ಞಾನಯಜ್ಞ.
ಈ ಯೋಜನೆಗೆ ಹಿಡಿದ ಸಮಯ ಒಟ್ಟು ಎಂಟು ವರ್ಷ. ಅದರಲ್ಲಿ ತುರ್ತುಪರಿಸ್ಥಿತಿಯ ಬೀಗಮುದ್ರೆ ಅವಧಿಯನ್ನು ಕಳೆದರೆ ಯೋಜನೆಗೆ ಹಿಡಿದದ್ದು ಆರೂವರೆ ವರ್ಷ. ಅಷ್ಟು ಸಮಯದಲ್ಲಿ ನಿಗದಿಯಾದಂತೆ ೨೨,೧೪೦ ಪಟಗಳ ಸಾಹಿತ್ಯವನ್ನು ಹೊರತರಲಾಯಿತು. ರಾಜ್ಯದ ಬೇರೆಬೇರೆ ಕಡೆಗಳಲ್ಲಿ ಈ ಸಾಹಿತ್ಯವನ್ನು ಬಿಡುಗಡೆಗೊಳಿಸಲಾಯಿತು. ಅಂದು ನಾಡಿನ ಪ್ರಖ್ಯಾತ ಸಾಹಿತಿಗಳೆನಿಸಿದ್ದವರು ಕಾರ್ಯಕ್ರಮಕ್ಕೆ ಆಗಮಿಸಿ ’ಈ ಸಾಹಿತ್ಯಯಜ್ಞ’ಕ್ಕೆ ಹೆಗಲು ಜೋಡಿಸಿದರು. ಇದರ ಫಲವಾಗಿ ಇಂದಿಗೂ ಮಕ್ಕಳ ಸಾಹಿತ್ಯ ಲೋಕದಲ್ಲಿ ಭಾರತ-ಭಾರತಿ ಮಹತ್ತ್ವದ ಸ್ಥಾನವನ್ನು ಪಡೆದಿದೆ. ಮಾತ್ರವಲ್ಲ ಇಂದು ನಾಡಿನ ಹಿರಿಯ ಸಾಹಿತಿಗಳು, ಗಣ್ಯರು, ಸಮಾಜಸೇವಕರು - ತಾವು ಭಾರತ-ಭಾರತಿ ಪುಸ್ತಕಗಳನ್ನೋದಿಯೇ ಬೆಳೆದವರು; ಆ ಪುಸ್ತಕಗಳೇ ನಮ್ಮ ಬದುಕನ್ನು ರೂಪಿಸಿದುದು ಎಂದು ಹೆಮ್ಮೆಯಿಂದ ಹೇಳುತ್ತಿರುವುದನ್ನು ಕೇಳಬಹುದು.
ಭಾರತ-ಭಾರತಿ ಮೊದಲ ಸರಣಿಯ ಮೊದಲ ಹದಿನೈದು ಕಂತಿನ ಪುಸ್ತಕಗಳಿಗೆ ನಾವು ಇಟ್ಟಿದ್ದ ಬೆಲೆ ೭೫ ಪೈಸೆ. ಅಲ್ಲಿಂದಾಚಿನ ಪಸ್ತಕಗಳಿಗೆ ೯೦ ಪೈಸೆ. ಮೊದಲ ಹತ್ತು ಪಸ್ತಕಗಳ ಲೋಕಾರ್ಪಣ ಸಮಾರಂಭದ ದಿವಸವೇ ೧,೩೦,೦೦೦ ಪ್ರತಿಗಳು ಮಾರಾಟವಾದವು.ಇದು ’ಮಕ್ಕಳ ಸಾಹಿತ್ಯ’ ಎಂದು ಕಲ್ಪಿತವಾದ ಯೋಜನೆಯಾದರೂ ಪರಿಣಾಮದಲ್ಲಿ ಅನುಪಮ ’ಆಕರ ಸಾಹಿತ್ಯ’ವಾಗಿ ಪರಿಣಮಿಸಿತು. ಅನೇಕ ಮಹಾಪರುಷರ ಬಗೆಗೆ ಥಟ್ಟನೆ ಹಿನ್ನೆಲೆ ಸಾಮಗ್ರಿ ಬೇಕಾದಾಗ ಲೇಖಕರಿಗೂ ಭಾಷಣಕಾರರಿಗೂ ಈಗಲೂ ಕಲ್ಪವೃಕ್ಷವಾಗಿರುವುದು ’ಭಾರತ-ಭಾರತಿ’ ಮಾಲಿಕೆಯೇ.
ಪಸ್ತಕಗಳಿಗೆ ಎಷ್ಟೋ ಮಾಹಿತಿಗಳನ್ನು ದೇಶದ ಯಾವುದೋ ಮೂಲೆಗಳಿಂದ ಕಷ್ಟಪಟ್ಟು ಸಂಗ್ರಹಿಸಬೇಕಾಯಿತು. ನೆಹರು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ನೇರ ಇಂದಿರಾ ಗಾಂಧಿಯವರಿಂದಲೇ ಕೇಳಿ ತರಿಸಿಕೊಂಡೆವು. ಖಾರವೇಲ, ಅಶ್ಫಾಕ್ ಉಲ್ಲಾ, ದೀಪಂಕರ ಮೊದಲಾದವರ ಬಗೆಗೆ ಭಾರತದ ಯಾವ ಭಾಷೆಯಲ್ಲಿಯೂ ಸಾಹಿತ್ಯ ಅದುವರೆಗೆ ಪ್ರಕಟವಾಗಿರಲೇ ಇಲ್ಲ. ರಾಮಪ್ರಸಾದ್ ಬಿಸ್ಮಿಲ್, ಮೇಡಂ ಕಾಮಾ ಮೊದಲಾದ ಅನೇಕರ ಬಗೆಗೆ ಪ್ರಾಯಶಃ ಕನ್ನಡದಲ್ಲಿ ಹೊರಬಂದ ಮೊದಲ ಪಸ್ತಕಗಳೆಂದರೆ ಅದು ಭಾರತ-ಭಾರತಿಯದ್ದೇ.
ಈ ಸಾಹಿತ್ಯದ ಶ್ರೇಷ್ಠತೆಯನ್ನು ಅರಿತು ಗುಜರಾತಿ, ತೆಲುಗು, ತಮಿಳು, ಮಲಯಾಳಂ ಮೊದಲಾದ ಇತರ ಭಾಷೆಗಳಲ್ಲೂ ’ಭಾರತ-ಭಾರತಿ’ಯ ಅನುವಾದಗೊಂಡು ಮುದ್ರಣಗೊಂಡಿದೆ. ಹೀಗೆ ಭಾರತದ ಸಾಹಿತ್ಯ ಲೋಕ ಅದರಲ್ಲೂ ಮಕ್ಕಳ ಸಾಹಿತ್ಯ ಲೋಕದಲ್ಲಿ ಇತಿಹಾಸವನ್ನೇ ಸೃಷ್ಟಿಸಿತು. ’ವಾಲ್ಮೀಕಿ ಯಿಂದ ಜಯಪ್ರಕಾಶ್ ನಾರಾಯಣ’ ವರೆಗಿನ ೫೧೦ ಮಹಾಪುರುಷರ ಜೀವನದ ಮೇಲೆ ಬೆಳಕು ಚೆಲ್ಲಿದ ಭಾರತ-ಭಾರತಿ ಪುಸ್ತಕ ಮಾಲೆಯ ಪ್ರಕಟಣೆ ಕಾರ್ಯ ೧೯೮೧ರಲ್ಲಿ ಸಮಾರೋಪಗೊಂಡಿತ್ತು. ಅದಾಗಿ ಇಂದಿಗೆ ಮೂರು ದಶಕಗಳು ಕಳೆದವು. ರಾಷ್ಟ್ರೋತ್ಥಾನ ಸಾಹಿತ್ಯ ವ್ಯವಸ್ಥಾಪಕರಿಗೆ ಅನ್ನಿಸಿತು- ಮೊದಲ ’ಭಾರತ-ಭಾರತಿ’ ಯೋಜನೆ ಮುಗಿದು ಒಂದು ಪೀಳಿಗೆಯಷ್ಟು ಅಂತರ ಕಳೆದಿದೆ. ಅಲ್ಲದೆ ಮೊದಲ ಯೋಜನೆಯಲ್ಲಿ ಸೇರಿರದ ನೂರಾರು ವ್ಯಕ್ತ್ತಿಗಳ ಬಗ್ಗೆ ತಿಳಿಸಬೇಕಾಗಿದೆ. ಹೀಗೆ ಎರಡನೆಯ ಸರಣಿಯ ಆಲೋಚನೆಯ ಉಗಮವಾಯಿತು. ಇದೀಗ ಸಾಹಿತಿ ’ಚಿರಂಜೀವಿ’ ಅವರ ಪ್ರಧಾನ ಸಂಪಾದಕತ್ವದಲ್ಲಿ ೧೦೦ ಮಹಾಪುರುಷರ ಜೀವನಚರಿತ್ರೆಗಳ ಹೊರಬಂದಿವೆ.
ನಾವೇನು ಮಾಡಬಹುದು?
ಇದೀಗ ಮಕ್ಕಳಿಗೆ ರಜೆಯ ಸಮಯ, ಪೋಷಕರು ತಮ್ಮ ಮಕ್ಕಳ ಕೈಗೆ ಬದುಕಲು ಕಲಿಸುವ ಈ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವುದು.
ಮಕ್ಕಳಿಗೆ ಹೊಸಬಟ್ಟೆ, ಆಟಿಕೆಗಳನ್ನು ಖರೀದಿಸುವಂತೆಯೇ ಪೋಷಕರು ಆಗಾಗ ಇಂತಹ ಪುಸ್ತಕಗಳನ್ನು ಖರೀದಿಸಿ ನೀಡುವುದು.
ನಮ್ಮೂರಿನ ಶಾಲೆ, ವಾಚನಾಲಯ ಮುಂತಾದ ಗ್ರಂಥಾಲಯಗಳಲ್ಲಿ ಈ ಪುಸ್ತಕಗಳಿರುವಂತೆ ವ್ಯವಸ್ಥೆ ಮಾಡುವುದು.
ನಮ್ಮೂರಿನ ಶಾಲಾ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳ ಕುರಿತು ಶಾಲಾವಾರು, ತರಗತಿವಾರು ಪ್ರಬಂಧ, ರಸಪ್ರಶ್ನೆ, ಭಾಷಣ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವುದು. ನಿಮಿತ್ತಕ್ಕಾಗಿ ಅಗತ್ಯವಾದಲ್ಲಿ ಸ್ವಾತಂತ್ರ್ಯ, ಗಣರಾಜ್ಯ ದಿನೋತ್ಸವಗಳನ್ನು ಆರಿಸಿಕೊಳ್ಳುವುದು.
ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಾ ವಿಜೇತರಾದವರಿಗೆ ಭಾರತ-ಭಾರತಿ ಪುಸ್ತಕಗಳನ್ನು ಬಹುಮಾನವಾಗಿ ನೀಡುವುದು.
ಗಣ್ಯರು ಕಂಡಂತೆ :
ಮಗುವಿನ ಭಾಷೆ ಮನೋಧರ್ಮ ತಿಳಿದು ಮನಸ್ಸು ತೇಲುವಂತೆ ಆ ಮಟ್ಟಕ್ಕೆ ಇಳಿದು ಬರೆದರೆ ಮನಸ್ಸು ಅರಳುತ್ತದೆ. ಅದು ಮಕ್ಕಳ ಸಾಹಿತ್ಯ ಆಗುತ್ತದೆ. ಭಾರತ-ಭಾರತಿ ಅಂತಹ ಸಾಹಿತ್ಯ.
- ಕೋಟ ಶಿವರಾಮ ಕಾರಂತ
ಭಾರತ-ಭಾರತಿ ಪುಸ್ತಕಗಳಿಂದ ಮುಂದಿನ ಜನಾಂಗದಲ್ಲಿ ಭೇದ ಭಾವನೆ ಮಾಯವಾಗಿ ದೇಶದ ಭವಿಷ್ಯ ಉಜ್ವಲಗೊಳ್ಳಲಿ.
- ತಿ.ತಾ. ಶರ್ಮಾ, ಖ್ಯಾತ ಸಾಹಿತಿ, ಪತ್ರಿಕೋದ್ಯಮಿಗಳು
ಇಂದು ನಮಗೆ ಎಲ್ಲವೂ ಇದೆ. ಆದರೆ ಭಾರತೀಯತೆಗೆ ಬರಗಾಲ. ವಿಶ್ವಕ್ಕೇ ಭಾರತ ದರ್ಶನ ಮಾಡಿಸಿದ ಪೂರ್ವಜರನೇಕರ ಜೀವನ ಪರಿಚಯ ಭಾರತ-ಭಾರತಿ ಯೋಜನೆಯ ಮೂಲಕ ಸಾಧ್ಯವಾಗುತ್ತದೆ.
- ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಾಹಿತಿಗಳು
ಮಕ್ಕಳ ನೆರವಿಗೆ ನಮ್ಮ ದೇಶದ ಪುಣ್ಯಪುರುಷರ ಚರಿತ್ರೆಯ ಅಭ್ಯಾಸವೊಂದೇ ಉಳಿದಿರುವ ಮಾರ್ಗ. ಇಂದಿನ ಶೈಕ್ಷಣಿಕ ತಳಪಾಯವನ್ನು ಸರಿಪಡಿಸಲು ಭಾರತ-ಭಾರತಿ ಪುಸ್ತಕಗಳ ಪ್ರಚಾರ ನಡೆಯಬೇಕು. ಅದಕ್ಕೆ ಸರಕಾರದ ನೆರವೂ ಅಗತ್ಯ.
- ಜಿ. ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ಶ್ರೇಷ್ಠ ಪುರುಷರ ಹಾದಿಯನ್ನು ತಿಳಿಸುವ ಉತ್ತಮ ಸಾಹಿತ್ಯವನ್ನು ಬರೆಸಿ ಸಾಮಾನ್ಯ ಪ್ರಜೆಗೂ ದೊರಕುವಂತೆ ವ್ಯಾಪಕವಾಗಿ ಸಫಲವಾಗಿ ಮಾಡಬಲ್ಲ ರಾಷ್ಟ್ರೋತ್ಥಾನ ಪರಿಷತ್ತು ಈ ಮೂಲಕ ಎಳೆಯರನ್ನು ಸುಸಂಸ್ಕೃತರನ್ನಾಗಿ ಮಾಡಲಿ.
- ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು
....’ರಾಷ್ಟ್ರೋತ್ಥಾನ’ದವರ ಯತ್ನ ನಿಜಕ್ಕೂ ಅಭಿನಂದನೀಯ.... ಈ ಕಾಲ, ಪರಿಸರದಲ್ಲಿ ಇಂತಹ ಸಾಹಿತ್ಯ ತೀರ ಅಗತ್ಯ.. ಬಾಲ್ಯಂದಲೇ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ. ಮುಂದೆ ಉನ್ನತ ಧ್ಯೇಯ ಆದರ್ಶಗಳನ್ನಿರಿಸಿಕೊಂಡು ತಮ್ಮ ಬಾಳನ್ನು ರೂಪಿಸಿಕೊಳ್ಳಲು ಅವರಿಗೆ ಈ ಸಾಹಿತ್ಯ ತುಂಬ ನೆರವಾದೀತು.
.... ಯುವಜನ ಅಶಾಂತಿ, ವಿದ್ಯಾರ್ಥಿಗೊಂದಲ, ಕರ್ತವ್ಯ ಪ್ರಜ್ಞೆಯ ಲೋಪ, ಹಿಪ್ಪಿವಾದದತ್ತ ಹಂತಹಂತವಾಗಿ ಬೆಳೆಯುತ್ತಿರುವ ಎಳೆಯರ ಒಲವು- ಇವುಗಳನ್ನು ಸಾಕಷ್ಟು ತಗ್ಗಿಸಲು, ಒಂದು ನಿಟ್ಟಿನಲ್ಲಿ ಪರಿಹಾರ ಒದಗಿಸಲು ಇಂತಹ ಸಾಹಿತ್ಯ ಮಾರ್ಗದರ್ಶಿಯಾದೀತು
- ಉದಯವಾಣಿ, ಮಣಿಪಾಲ: ೮-೧೧-೧೯೭೨
ಭಾರತ-ಭಾರತಿ ಮೊದಲ ಸರಣಿಯ ಕೆಲವು ಮಹತ್ವದ ಅಂಶಗಳು
- ವಾಲ್ಮೀಕಿಯಿಂದ ಜೆ.ಪಿಯವರೆಗೆ ೫೧೦ ರಾಷ್ಟ್ರೀಯ ಮಹಾಪುರುಷರ ಪುಸ್ತಕಗಳ ಪ್ರಕಟನೆ.
- ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಪ್ರಾಂತಗಳಿಗೂ ಸೇರಿದ ಸಂತರು, ವಿಜ್ಞಾನಿಗಳು, ಕಲಾವಿದರು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಯೋಧರು, ರಾಜರು ಮತ್ತು ಕ್ರೀಡಾಪಟುಗಳು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸಿದ ಮಹಾಪುರುಷರ ಬಗ್ಗೆ ಪುಸ್ತಕಗಳು.
- ಮೊದಲ ಸರಣಿಯ ಬಿಡುಗಡೆಯ ದಿನದಂದೇ ೧,೩೦,೦೦೦ ಕ್ಕೂ ಹೆಚ್ಚು ಪುಸ್ತಕಗಳ ಮಾರಾಟ.
- ಇಲ್ಲಿಯವರೆಗೂ ಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ.
- ಹಿಂದಿ, ಇಂಗ್ಲೀಷ್, ಮರಾಠಿ, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ.
ನಿಮ್ಮ ಮಕ್ಕಳ ಕೈಯಲ್ಲಿರಲಿ ಈ ಪುಸ್ತಕ
ಸಭ್ಯತೆ, ಸಂಸ್ಕಾರದಿಂದ ದೂರವಾಗುತ್ತಿರುವ ಯುವಜನತೆಗೆ ದಾರಿ ತೋರಿ, ಮಾರ್ಗದರ್ಶೀಸುವ ಈ ಪುಸ್ತಕಗಳನ್ನುನಮ್ಮ ಮನೆಯಲ್ಲಿ ’ಗ್ರಂಥಾಲಯ’ದಂತೆ ಸಂಗ್ರಹಿಸಿಟ್ಟುಕೊಳ್ಳಬಹುದೇ ಎಂಬುದನ್ನು ಪ್ರತಿಯೊಂದು ಕುಟುಂಬವೂ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ.
ಒಟ್ಟು ಪುಸ್ತಕಗಳು : ೬೧೦
ಪ್ರತಿ ಪುಸ್ತಕದ ಬೆಲೆ : ರೂ. ೧೨.೦೦
(ಕೆಲವು ಶೀರ್ಷಿಕೆಗಳನ್ನು ಹೊರತುಪಡಿಸಿ,
೧೦೦ಕ್ಕಿಂತ ಅಧಿಕ ಪುಸ್ತಕ ಖರೀದಿಗೆ ರಿಯಾಯಿತಿ ಇದೆ.)
ಆಸಕ್ತರು ಪುಸ್ತಕಗಳಿಗಾಗಿ ಸಂಪರ್ಕಿಸಬಹುದು:
ರಾಷ್ಟ್ರೋತ್ಥಾನ ಸಾಹಿತ್ಯ,
ಕೇಶವಶಿಲ್ಪ, ಕೆಂಪೇಗೌಡನಗರ,