Tuesday, 10 May 2016

ನವಮನ್ವಂತರ ದ್ರಷ್ಟಾರ ಶಂಕರಾಚಾರ್ಯ

ನವಮನ್ವಂತರ ದ್ರಷ್ಟಾರ ಶಂಕರಾಚಾರ್ಯ    


     "ಆ ಕಾಲದಲ್ಲಿ ಭಾರತೀಯರ ಮನಸ್ಸನ್ನು ಗೊಂದಲಕ್ಕೆ ಸಿಲುಕಿದ್ದ ಪಂಥವೈವಿಧ್ಯಗಳನ್ನು ಸಮನ್ವಯಗೊಳಿಸಲು ಆದಿಶಂಕರರು ಅಗಾಧವಾಗಿ ಶ್ರಮಿಸಿದರು; ಹಾಗೆ ವಿವಿಧತೆಯ ನಡುವೆ ಏಕತೆಯನ್ನು ಆವಿಷ್ಕರಿಸಿದರು. ಅವರು ಬದುಕಿದ ೩೨ ವರ್ಷಗಳಲ್ಲಿ ಎಷ್ಟೋ ದೀರ್ಘ ಜೀವಿತಾವಧಿಗಳ ಕಾರ್ಯವನ್ನು ಅವರು ಸಾಧಿಸಿದರು. ಭಾರತದ ಮೇಲೆ ಅವರ ಪ್ರಖರ ಮೇಧೆಯೂ ಭವ್ಯ ವ್ಯಕ್ತಿತ್ವವೂ ಎಷ್ಟು ದೃಢವಾದ ಮುದ್ರಿಕೆಯನ್ನು ನಿರ್ಮಿಸಿತೆಂದರೆ ಅದು ಇವತ್ತಿಗೂ ದೃಶ್ಯಮಾನವಾಗಿದೆ. ತತ್ತ್ವಶಾಸ್ತ್ರಜ್ಞ ಮತ್ತು ಮೇಧಾವಂತ, ಪ್ರಾಷ್ಣಿಕ ಮತ್ತು ಅನುಭಾವಿ, ಕವಿ ಮತ್ತು ಸಂತ - ಈ ಬೇರೆಬೇರೆ ಭಂಗಿಗಳ ಕೌತುಕಕರ ಮಿಶ್ರಣ ಅವರಾಗಿದ್ದರು. ಇದೆಲ್ಲದರ ಜೊತೆಗೆ ಅವರು ವ್ಯವಹಾರಪ್ರಜ್ಞೆಯ ಸುಧಾರಕರು ಮತ್ತು ಸಮರ್ಥ ಸಂಘಟಕರೂ ಆಗಿದ್ದರು."
   - ಪಂಡಿತ ಜವಾಹರಲಾಲ್ ನೆಹರು, 
ಭಾರತದ ಪ್ರಥಮ ಪ್ರಧಾನಿ (‘Discovery of India’ದಲ್ಲಿ)
 
" ಸಾಂಪ್ರದಾಯಿಕ ಶ್ರದ್ಧೆಯ ದೃಢೀಕರಣದ ಮತ್ತು ಆಧ್ಯಾತ್ಮಿಕಾಧಾರದ ಸುಧಾರಣೆಯ ಪ್ರವರ್ತಕರಾಗಿ ಆಗಮಿಸಿದವರು ಶಂಕರರು. ಪುರಾಣಗಳ ಭವ್ಯತೆಯ ಮತ್ತು ಔಪನಿಷದದ ಗಾಢಾನುಭವದ ಯುಗವನ್ನು ಮತ್ತೆ ಪ್ರತ್ಯಕ್ಷಗೊಳಿಸಲು ಅವರು ಉಜ್ಜೀಗಿಸಿದರು. ಜೀವಾತ್ಮವನ್ನು ಉನ್ನತದಶೆಗೆ ಏರಿಸಬಲ್ಲ ಸಾಮರ್ಥ್ಯವೇ ಶ್ರದ್ಧೆಯ ಅಪಾರಶಕ್ತಿಯ ದ್ಯೋತಕ ಎಂದು ಅವರು ಮನಗಂಡರು. ಅದುವರೆಗೆ ಪ್ರಸಾರಿತವಾಗಿದ್ದ ಬೌದ್ಧ, ಮೀಮಾಂಸಾ ಮತ್ತು ಭಕ್ತಿಯ ಪದ್ಧತಿಗಳಿಗಿಂತ ಹೆಚ್ಚು ಶಕ್ತವಾಗಿ ಜನರ ನೈತಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಬಲ್ಲ ಒಂದು ನೂತನ ತತ್ತ್ವದರ್ಶನದ ಮೂಲಕ ಆ ಯುಗದ ಆಧ್ಯಾತ್ಮಿಕ ಆಶೋತ್ತರಗಳಿಗೆ ಹೊಸದೊಂದು ದಿಶೆಯನ್ನು ಸೂಚಿಸುವುದು ಅವರಿಗೆ ಅವಶ್ಯವೆನಿಸಿತು."
 - ಡಾ. ಎಸ್. ರಾಧಾಕೃಷ್ಣನ್, ಮಾಜಿ ರಾಷ್ಟ್ರಪತಿ 
(‘We Are All Greater Than We Know’ ಎಂಬ ಲೇಖನದಲ್ಲಿ.) 

      ಪಾಶ್ಚಾತ್ಯ ಜನ ಶಂಕರಾಚಾರ್ಯರಂತಹ ಒಂದು ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಲಾರರು. ಅಸ್ಸೀಸಿಯ ಫ್ರಾನ್ಸಿಸ್‌ನ ಭಕ್ತಿ, ಅಬೆಲಾರ್ಡ್‌ನ ಬೌದ್ಧಿಕ ಸಾಮರ್ಥ್ಯ, ಮಾರ್ಟಿನ್ ಲೂಥರ್‌ನ ಪೌರುಷ ಮತ್ತು ಸ್ವತಂತ್ರ ನಿಲುವು ಹಾಗೂ ಇಗ್ನೇಷಿಯಸ್ ಲೋಯೇಲಾನ ರಾಜಕೀಯ ದಕ್ಷತೆಗಳನ್ನು ನಾವು ಆಶ್ಚರ್ಯಪೂರ್ವಕವಾಗಿ ಅರ್ಥೈಸಿಕೊಳ್ಳಬಲ್ಲೆವು. ಆದರೆ ಅವರೆಲ್ಲರೂ ಒಂದೇಕಡೆ ಮೂರ್ತಿಭವಿಸಿದ್ದನ್ನು ಊಹಿಸಲಾರೆವು.            
- ವಿವೇಕಾನಂದರ ಮಾನಸಪುತ್ರಿ ಸೋದರಿ ನಿವೇದಿತಾ

ಶಂಕರರ ಅದ್ವೈತ ವೇದಾಂತವು ಒಂದು ಪೂರ್ಣ ತತ್ತ್ವಶಾಸ್ತ್ರೀಯ ಮತ್ತು ಪರಿಕಲ್ಪನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ. ಮತ್ತು ಅದರೋಳಗೆ ಆಧುನಿಕ ಭೌತವಿಜ್ಞಾನದ ಸಂಶೋಧನೆಗಳನ್ನೂ ಸುಲಭವಾಗಿ ಅಳವಡಿಸಬಹುದು... ಶಂಕರರ ವೇದಾಂತವು ಖಂಡಿತವಾಗಿಯೂ ಅಧ್ಯಯನಯೋಗ್ಯ; ವಸ್ತು ಮತ್ತು ಶಕ್ತಿಗಳು ಪರಸ್ಪರ ಬದಲಾಗಬಹುದು ಎನ್ನುವ ಐನ್‌ಸ್ಟೈನ್ ಸಂಶೋಧನೆಯ ಬಳಿಕ ಅದು ಹೆಚ್ಚುಅರ್ಥಪೂರ್ಣವೆನಿಸಿತು... ಕೇವಲ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಕೆಲವೇ ಅತ್ಯಂತ ಬುದ್ಧಿಶಾಲಿ ವ್ಯಕ್ತಿಗಳಲ್ಲಿ ಶಂಕರರನ್ನು ಬಿಡುವಂತೆಯೇ ಇಲ್ಲ.          
  -  ಆರ್ಥರ್ ಐಸನ್‌ಬರ್ಗ್,
" ಬುದ್ಧಿಶಾಲಿಗಳಾದ ವ್ಯಕ್ತಿಗಳ ಮೇಲೆ ಪ್ರಭಾವ ಇರಬಹುದಾದ ಏಕೈಕ ಮತವೆಂದರೆ ಶಂಕರಾಚಾರ್ಯರ ವಿಚಾರಪೂರ್ಣವಾದ ಅದ್ವೈತ ಮತ."
- ರೋಮೇ ರೋಲಾ, ಫ್ರೆಂಚ್ ಚಿಂತಕ, ಸಾಹಿತಿ
      
ದೇಶ-ವಿದೇಶಗಳ ಈ ಜಗತ್ತಪ್ರಸಿದ್ಧ ವ್ಯಕ್ತಿಗಳ ಈ ಉದ್ಗಾರಗಳೇ ಶಂಕರಾಚಾರ್ಯರ ಶ್ರೇಷ್ಠತೆಗೆ ಸಾಕ್ಷಿ.
         ಶಂಕರರ ಆರ್ವಿಭಾವವಾದದ್ದು ಪವಿತ್ರವಾದ ಭಾರತದೇಶ ಅವೈದಿಕತೆಯೆಂಬ ಕೆಸರಲ್ಲಿ ಮುಳುಗುತ್ತಿದ್ದ ಸಮಯದಲ್ಲಿ, ಅನಾಚಾರ ಮತ್ತು ಭ್ರಷ್ಟಾಚಾರ ದೇಶದ ೪ ಮೂಲೆಗಳಲ್ಲೂ ತುಂಬಿತುಳುಕುತ್ತಿದ್ದಾಗ, ಮತ್ತು ಆಲಸ್ಯ ಮತ್ತು ಅಕರ್ಮಣತೆಗಳೇ ಅಧಿಕವಾಗಿದ್ದಾಗ, ಡಂಭಾಚಾರದ ಬಿರುಗಾಳಿಯಲ್ಲಿ ಧಾರ್ಮಿಕತೆ ಕೊಚ್ಚಿಹೋಗುತ್ತಿದ್ದಾಗ. ಜಗದ್ಗುರು ಶಂಕರಾಚಾರ್ಯರು,  ಹೆಬ್ಬಂಡೆಯಂತೆ ನಿಂತು ಉಪನಿಷತ್ತಿನ ದಿವ್ಯವಾಣಿಯನ್ನು ದೇಶದ ನಾಲ್ಕೂ ದಿಕ್ಕುಗಳಲ್ಲಿ ಪ್ರತಿಧ್ವನಿಸಿ, ವೈದಿಕಧರ್ಮದ ಪ್ರವಾಹವನ್ನು ಪುನರುಜ್ಜೀವಿಸಿ ನೂತನ ಯುಗವೊಂದರ ಸ್ಥಾಪಕರೆನಿಸಿದರು.
                ಶಂಕರಾಚಾರ್ಯರು ಒಬ್ಬ ಅವತಾರಪುರುಷರಲ್ಲ; ಅವರು ಭರತವರ್ಷದ ಹಂಬಲದ ಸ್ವರೂಪವಾಗಿ ರೂಪಗೊಂಡವರು. ಅವರು ಭಾರತೀಯ ಪರಂಪರೆಯಲ್ಲಿಲ್ಲದ ಯಾವುದನ್ನೂ ಪ್ರತಿಪಾದಿಸಲಿಲ್ಲ; ಅವರು ಪ್ರತಿಪಾದಿಸಿದ್ದು ವೈದಿಕತೆಯ ಸಾರವನ್ನು. ಅವರ ದಿಗ್ವಿಜಯ ಮೌಢ್ಯಾಚರಣೆ, ಅವೈದಿಕತೆಗಳ ವಿರುದ್ಧವೇ ಹೊರತು ಪರಂಪರಾಗತ ಸಮಾಜಾಂತಸ್ಥ ಸಂಪ್ರದಾಯಗಳ ಮೇಲಲ. ಅವರ ಕಾರ್ಯಸರಣಿಯ ಪರಿಣಾಮ ಸಮಾಜಸಂಘಟನೆಯೇ ಹೊರತು ವಿಘಟನೆಯಲ್ಲ. ಅವರು ಸಾಧಿಸಿದ್ದು ಭಾರತದ ಏಕತೆಯನ್ನು - ಆತ್ಮ-ಜೀವಾತ್ಮದ ಏಕತೆಯಂತೆಯೇ ವ್ಯಕ್ತಿ-ರಾಷ್ಟ್ರದ ಅದ್ವೈತತೆಯನ್ನು. ಇಂತಹ ಶ್ರೇಷ್ಠ ವಿಚಾರಗಳಿಂದಾಗಿ ಶಂಕರಾಚಾರ್ಯರ ಆರ್ವಿಭಾವವಾಗಿ ಒಂದು ಸಹಸ್ರವರ್ಷಗಳು ಕಳೆದರೂ ಅವರ ಕೀರ್ತಿ ಇಂದಿಗೂ ಕೌಮದಿಯಂತೆ ಭಾರತದಾದ್ಯಂತ ಪ್ರಕಾಶಿಸುತ್ತಿರುವುದು.
ಸಂನ್ಯಾಸತ್ವಕ್ಕೆ ಹೊಸಭಾಷ್ಯ
  ಆ ಕಾಲದಲ್ಲಿ ಸಂನ್ಯಾಸವನ್ನು ಸ್ವೀಕರಿಸಿ ದೇಶದ ಕಾರ್ಯವನ್ನು ನಿರ್ವಹಿಸುವ ಹಳೆಯ ಆದರ್ಶಗಳನ್ನು ಮರೆತಿದ್ದರು ಮಾತ್ರವಲ್ಲ; ಅದನ್ನು ಕೆಡುಕೆಂದೇ ಭಾವಿಸುತ್ತಿದ್ದರು. ತಮ್ಮ ೮ನೇ ವಯಸ್ಸಿನಲ್ಲೇ ಸಮಸ್ತ ವೇದಶಾಸ್ತ್ರ ಪಾರಂಗತನಾಗಿ ’ಆಚಾರ್ಯ’ನೆನಿಸಿಕೊಂಡ ಶಂಕರಾಚಾರ್ಯರು  ನನ್ನ ಮೇಲಿರುವ ಪಿತೃಋಣವನ್ನು ತಿರಿಸುವುದಕ್ಕಾಗಿಯೇ ನಾನು ಸಂನ್ಯಾಸ ಸ್ವೀಕರಿಸುತ್ತಿದ್ದೇನೆ ಎಂದು ತಾಯಿಯಲ್ಲಿ (ಆಯಾಂಬಾ) ಹೇಳುತ್ತಾರೆ. ನನ್ನ ತಂದೆಯವರು ಯಾವ ಧರ್ಮವನ್ನು ಜೀವಮಾನವಿಡೀ ನಿರ್ವಹಿಸಿದರೋ, ಆ ಧರ್ಮ ನಾಶವಾದರೆ ಅವರಿಗೆ ದುಃಖವಾಗದೇ?... ನನ್ನ ತಂದೆ, ಅವರ ತಂದೆ, ಅವರ ತಂದೆಯ ಕಡೆಗೂ ನೋಡು.. ಒಂದು ವೇಳೆ ಹಿಂದೂ(ವೈದಿಕ ಧರ್ಮ) ಸಮಾಜ ನಾಶವಾದರೆ... ನಿನಗೆ ನೀರು ಬಿಡುವವರು ಯಾರು? ನಿನ್ನ ಹೆಸರು ಸ್ಮರಿಸುವವರು ಯಾರು? ಎಂದು ತಾಯಿಯನ್ನು ಸಂತಯಿಸಿ ಸಂನ್ಯಾಸ ಸ್ವೀಕಾರಕ್ಕೆ ನಿಧರಿಸುತ್ತಾರೆ.
  ಸಂನ್ಯಾಸಿಗಳು ಎಂದರೆ ಲೌಕಿಕ ಜಗತ್ತಿನಿಂದ ದೂರವಾಗಿ, ಆತ್ಮೋನ್ನತಿಯ ದಾರಿಹಿಡಿದು ಕಾಡುಗಳಲ್ಲಿ ಆಧ್ಯಾತ್ಮಿಕ ಸಾಧನೆಗೈಯುವವರು, ಸಂನ್ಯಾಸ ಸ್ವೀಕಾರ ಜೀವನದ ಅಂತಿಮ ಹಂತ - ಅಂದರೆ ಲೋಕತ್ಯಾಗದ ವ್ಯವಸ್ಥೆ- ಎಂಬ ವೈದಿಕರ ನಂಬಿಕೆಯನ್ನೂ, ಬೌದ್ಧ ಸಂಸ್ಯಾಸಿಗಳಂತೆ ಮಠದ ಸ್ವಾಮಿಯಾಗುವುದು ಎಂಬ ಸಮಾಜಾಂಗೀಕೃತ ದೃಷ್ಟಿಯನ್ನೂ ಶಂಕರಾಚಾರ್ಯರು ಒಪ್ಪಿಕೊಳ್ಳುವುದಿಲ್ಲ. ನಾನು ಕಾಡಿಗೆ ಹೋಗುವುದಿಲ್ಲ... ಸಂನ್ಯಾಸ ಅಂದರೆ ಜಗತ್ತನ್ನು ತ್ಯಜಿಸಿ ಕಾಡಿನಲ್ಲಿ ತಪಸ್ಸು ಮಾಡುವುದಲ್ಲ. ನಾನು ಕರ್ಮದ ತಪಸ್ಸನ್ನು ಸ್ವೀಕರಿಸುತ್ತಿದ್ದೇನೆ. ಅಂದರೆ ಕರ್ಮ-ಕಾಯಕವನ್ನು ತ್ಯಜಿಸದೆ, ಕರ್ಮವೆಸಗುವುದು; ದೇಶ ಮತ್ತು ಧರ್ಮದ ಕಾಯಕ ಮಾಡುವುದು ಎಂದು ಶಂಕರಾಚಾರ್ಯರು ಬಾಲ್ಯಸ್ನೇಹಿತ ವಿಷ್ಣುಶರ್ಮರಲ್ಲಿ ಹೇಳುತ್ತಾರೆ. ಸಂನ್ಯಾಸ ಎಂದರೆ ವೈರಾಗ್ಯವಲ್ಲ, ಸಂಸಾರವನ್ನು ತ್ಯಜಿಸುವುದಲ್ಲ; ಬದಲಿಗೆ ಅದು ದೇಶಸೇವೆಯ ಸಾಮಾಜಿಕ ಕಾರ್ಯವಾಗಿದೆ ಎಂದು ಪ್ರತಿಪಾದಿಸಿದ  ಪ್ರಥಮ ಸಂನ್ಯಾಸಿ ಶಂಕರಾಚಾರ್ಯರು. ಮುಂದೆ ಜಗದ್ವಿಜೇತ ವಿವೇಕಾನಂದರೂ ತಮ್ಮ ಸೋದರ ಸಂನ್ಯಾಸಿಗಳಿಗೆ ಇದನ್ನೇ ಬೋಧಿಸುತ್ತಾರೆ.
          ಆಶ್ರಮ ಚತುಷ್ಟಯ ನಿಯಮಗಳನ್ನು ಮುಂದಿಟ್ಟು ವಿಷ್ಣುಶರ್ಮ ಸಂನ್ಯಾಸ ಸ್ವೀಕಾರವನ್ನು ವಿರೋಧಿಸಿದಾಗಲೂ ಶಂಕರಾಚಾರ್ಯರು ಹೇಳುತ್ತಾರೆ : ನಾಲ್ಕು ಆಶ್ರಮಗಳನ್ನು ಪಾಲಿಸುವುದು ಸಾಮಾನ್ಯ ವ್ಯವಸ್ಥೆ. ಅವು ಸಮಾಜದ ಏಳಿಗೆಗಾಗಿ ಸಮಾಜದ ಮೂಲಕ ನಿರ್ಮಾಣಗೊಂಡ ವ್ಯವಸ್ಥೆಯಾಗಿದೆ. ನಾವೇ ಮಾಡಿಕೊಂಡ ವ್ಯವಸ್ಥೆಗಳಿಗೆ ನಾವು ಒಡೆಯರು, ದಾಸರಲ್ಲ.... ನಿಯಮಗಳು ಮತ್ತು ವ್ಯವಸ್ಥೆಗಳು ಸಮಾಜದ ಸಂಘಟನೆಗೆ ಮತ್ತು ಜೀವನಕ್ಕಾಗಿ ಇವೆ. ಉಲ್ಲಂಘನೆ ಮತ್ತು ಪಾಲನೆ - ಈ ಎರಡರ ಹಿಂದೆ ರಾಮ-ಕೃಷ್ಣರು ಬದುಕಿನಂತೆ ಸಮಾಜ ಸಂಘಟನೆಯ ಭಾವನೆ ಮತ್ತು ಸಮಾಜದ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಅಭಿಲಾಷೆಯಿದೆ. ವ್ಯವಸ್ಥೆ ಮತ್ತು ನಿಯಮಗಳು ಸಾಧ್ಯವಲ್ಲ, ಸಾಧನಗಳು. ಸಾಧ್ಯತೆಗಳನ್ನು ಗಳಿಸಲು ಸಹಾಯಕವಾಗುವವರೆಗೆ ಮಾತ್ರ ಸಾಧನಗಳು ಉಪಯೋಗವಾಗುತ್ತವೆ... ಗೃಹಸ್ಥ ಮತ್ತು ಸಂನ್ಯಾಸತ್ವ - ಎರಡು ಸಾಧನಗಳು ಎಂದು ಏಳೆವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸ ಹೊರಟಿರುವುದನ್ನು ಸಮರ್ಥಿಸಿಕೊಳ್ಳುತ್ತಾರೆ.
       ಶಂಕರಾಚಾರ್ಯರು  ದೇಶ ಸೇವೆಯ ಕಾರ್ಯದಲ್ಲಿ ವಿಘ್ನವುಂಟಾಗದ ಯಾವುದೇ ಕಾರ್ಯ ಮಾಡಲೂ ಹಿಂಜರಿಯಲಿಲ್ಲ. ಇದಕ್ಕೆ ಸಂನ್ಯಾಸ ಜೀವನಕ್ಕೆ ನಿತಾಂತ ವಿರೋಧವಾಗಿದ್ದರೂ, ದಾಯಾದಿಗಳ ತಿರಸ್ಕಾರದ ನಡುವೆಯೂ ತಾನು ಸಂನ್ಯಾಸದೀಕ್ಷೆ ಪೂರ್ವದಲ್ಲಿ ತಾಯಿಯಲ್ಲಿ ಪ್ರತಿಜ್ಞೆ ಮಾಡಿದಂತೆ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸುತ್ತಾರೆ. ಮಂಡನ ಮಿಶ್ರರಂತಹ ಆ ಕಾಲದ ಶ್ರೇಷ್ಠ ವಿದ್ವಾಂಸರೂ ಶ್ರಾದ್ಧಕರ್ಮದಲ್ಲಿ ಸಂನ್ಯಾಸಿ ಉಪಸ್ಥಿತಗೊಳ್ಳುವುದು ವೇದವಿರೋಧಿ... ಎಂದಿದ್ದಾರೆ. ಆದರೆ ಶಂಕರಾಚಾರ್ಯರು ಸ್ವತಃ ತಾವೇ ತಮ್ಮ ತಾಯಿಯ ಶ್ರಾದ್ಧಕರ್ಮವನ್ನು ನೇರವೇರಿಸಿ ಸಂನ್ಯಾಸತ್ತ್ವಕ್ಕೆ ಹೊಸ ರೂಪ ನೀಡಿದರು.
ಬೌದ್ಧ ಮತದ ಅಸ್ತಿತ್ವ ಉಪನಿಷತ್ತಿನಲ್ಲಿದೆ
           ಶಂಕರಾಚಾರ್ಯರನ್ನು ಹಿಂದೂಧರ್ಮದ ಉಜ್ಜೀವಕರು ಎನ್ನುವುದರ ಜೊತೆಜೊತೆಗೇ ಅವರೊಬ್ಬ ಬೌದ್ಧಮತ ವಿನಾಶಕನೆಂಬ ಹಣೆಪಟ್ಟಿಯೂ ಇದೆ. ಆದರೆ ಶಂಕರಾಚಾರ್ಯರಲ್ಲಿ ಪ್ರಚ್ಛನ್ನ ಭೌದ್ಧತತ್ತ್ವವನ್ನೂ ಕಾಣಬಹುದಾಗಿದೆ. ಶಂಕರರು ಯಾವ ದೇವರನ್ನೂ ಖಂಡಿಸಲಿಲ್ಲ, ಜನರ ಶ್ರದ್ದೆಯನ್ನು ನಾಶಪಡಿಸಲಿಲ್ಲ; ಅವರು ಚಿಕ್ಕಪುಟ್ಟ ಧ್ಯೇಯದ ಹೊಂಡದಲ್ಲಿದ್ದವನನ್ನು ವಿಶಾಲ ರಾಷ್ಟ್ರಗಂಗೆಯೊಂದಿಗೆ ಜೋಡಿಸಿದರು.    
    ಬೌದ್ಧಧರ್ಮ ಸ್ಥಾಪಕ ಗೌತಮ ಬುದ್ಧನೇ ಸ್ವಯಂ ವೈದಿಕ ಮತದ ಅನುಯಾಯಿಯಾಗಿದ್ದ. ಬೌದ್ಧ ಧರ್ಮಮತ್ತು ದರ್ಶನಕ್ಕೆ ಉಪನಿಷತ್ತುಗಳೇ ಮೂಲಾಧಾರ ಗ್ರಂಥಗಳು. ಬುದ್ದನು ತನ್ನ ಆಚಾರಪ್ರಧಾನವಾದ ಧರ್ಮದ ಉಪದೇಶಗಳನ್ನು ಉಪನಿಷತ್ತಿನ ಆಧಾರದ ಮೇಲೆ ನಿಲ್ಲುವಂತೆ ಮಾಡಿದನು. ಕರ್ಮಕಾಂಡದ ಅನುಪಾದೇಯತ್ವ,  ಅವಿದ್ಯೆಯನ್ನು ಪ್ರಪಂಚದ ಮೂಲಕಾರಣವಾಗಿ ಪ್ರತಿಪಾದಿಸುವುದು,ಆಶೆಯ ನಿವೃತ್ತಿಯಿಂದ ರಾಗದ್ವೇಷಾದಿ ಬಂಧನಗಳಿಂದ ಮುಕ್ತಿಯನ್ನು ಹೊಂದುವುದು, ಕರ್ಮಸಿದ್ದಾಂತದ ವ್ಯಾಪಕತೆ - ಇವೇ ಮೊದಲಾದ ಸಿದ್ಧಾಂತಗಳು ಎರಡರಲ್ಲೂ ಉಪಲಬ್ಧವಾಗಿವೆ. ಅಸತ್‌ನಿಂದ ಸತ್ ಉತ್ಪತ್ತಿಯಾಗುತ್ತದೆಂಬ ಬೌದ್ಧ ಸಿದ್ಧಾಂತವೂ ಛಾಂದೋಗ್ಯೋಪನಿಷತ್ತಿನಲ್ಲಿ ನಿರ್ದಿಷ್ಟವಾಗಿರುವುದೇ ಆಗಿದೆ. ಇವುಗಳಿಗೆ ಹೊರತಾಗಿ, ತನ್ನಕಾಲದ ಪರಿಸ್ಥಿತಿಯನ್ನನುಸರಿಸಿ ವೇದಗಳ ಆಧಾರವಿಲ್ಲದಿರುವ ಅನೇಕ ಹೊಸ ವಿಚಾರಗಳನ್ನೂ ತನ್ನ ಧರ್ಮದಲ್ಲಿ ಸೇರಿಸಿದ. ಶ್ರುತಿಗಳು ಅಪ್ರಮಾಣವೆಂದು ನಂಬಿ, ಆತ್ಮವಾದ ಮತ್ತು ಯಜ್ಞಗಳನ್ನು ಬುದ್ಧ ತಿರಸ್ಕರಿಸಿದನು.
          ಆದರೆ ಕಾಲಕ್ರಮದಲ್ಲಿ ಬೌದ್ಧರು ವೈದಿಕ ವಿರೋಧಿಗಳಾಗಿ ಬದಲಾದರು. ಇತ್ತ ವೈದಿಕರೂ ಪ್ರತಿಕ್ರಿಯಾತ್ಮಕವೆನ್ನುವಂತೆ ಯಜ್ಞ-ಯಾಗಾದಿಗಳೇ ವೈದಿಕತ್ವ ಎಂದು ಆಚರಣೆಗಿಳಿದರು. ಆನೇಕ ವರ್ಷಗಳಿಂದ ರಾಜಾಶ್ರಯ ಅನುಭೋಗಿಯಾಗಿದ್ದುದರಿಂದಾಗಿ ಬೌದ್ಧರಿಗೆ ಅಧಿಕಾರದ ಹಂಬಲ ಪ್ರಬಲವಾಯಿತು. ವಿರೋಧಿಗಳು ಇದರ ಲಾಭವನ್ನು ಪಡೆದರು. ಪರಕೀಯರು ಬೌದ್ಧರ ಅಧಿಕಾರವನ್ನು ಮೇಲಕ್ಕೆತ್ತುವವರಾಗಿ ಭಾರತವನ್ನು ಪ್ರವೇಶಿಸಿದರು. ತಾವು, ಪರರು - ಎಂಬ ವಿವೇಕವನ್ನು ಮರೆತು ಬೌದ್ಧರು ಅವರನ್ನು ಸತ್ಕರಿಸಿದರು, ಅವರಿಗೆ ಎಲ್ಲ ವಿಧದ ಸಹಕಾರವನ್ನೂ ಕೊಟ್ಟರು. ಪ್ರಖರ ಹಿಂದೂ ಸಮಾಜ ಇದನ್ನು ಸಹಿಸದಾಯಿತು. ಕರ್ಮಕಾಂಡ ಪಂಡಿತ ಕುಮಾರಿಲಭಟ್ಟರಿಂದ ಪ್ರಜ್ವಲಿತ ಕಿಡಿ ಶಂಕರಾಚಾರ್ಯರ ರೂಪದಲ್ಲಿ ದಾವಗ್ನಿಯ ರೂಪಪಡೆಯಿತು. ಶಂಕರಾಚಾರ್ಯರು ಭಗವಾನ್ ಬುದ್ಧನಿಗೆ ಹಿಂದೂಧರ್ಮದ ಅವತಾರಗಳಲ್ಲಿ ಸ್ಥಾನ ಕಲ್ಪಿಸಿ ಬೌದ್ಧರ ಕೆಂದ್ರಾಪಗಾಮಿ ದೃಷ್ಟಿಯನ್ನು ಬದಲಿಸಿದರು.
      ತಮ್ಮ ದಿಗ್ವಿಜಯ ಯಾತ್ರೆಯಲ್ಲಿ ತಕ್ಷಶಿಲೆಯಲ್ಲಿ ಬೌದ್ಧಭಿಕ್ಷುಗಳ ಜೊತೆ  ನಡೆಸಿದ ಸಂವಾದದಲ್ಲಿ  ಶಂಕರಾಚಾರ್ಯರು, ಬೌದ್ಧರು ಕೇಂದ್ರಾಪಗಾಮಿಯಾಗಿರುವುದನ್ನು ಖಂಡಿಸುತ್ತಾ, ಭಗವಾನ್ ಬುದ್ಧರು ನಮ್ಮ ಪೂರ್ವಿಕರೇ ಆಗಿದ್ದರು.....ಅವರೆದುರು ಪ್ರತಿಯೊಬ್ಬ ರಾಷ್ಟ್ರಭಕ್ತನೂ ತಲೆಬಾಗುತ್ತಾನೆ. ನಮಗೆ ಭಗವಾನ್ ಬುದ್ಧನ ಬಗೆಗಾಗಲೀ ಆತನ ನೈತಿಕ ಆದೇಶಗಳ ಬಗೆಗಾಗಲಿ ವಿರೋಧವಿಲ್ಲ. ಆದರೆ ಇಂದು ನಾವು ಅವರ ಆದರ್ಶಗಳನ್ನು ಪಾಲಿಸುತ್ತಿದ್ದೇವೆಯೇ? ಅವರ ಆತ್ಮದ ಕರೆಯನ್ನು ನಾವು ಕೇಳಿಸಿಕೊಳ್ಳುತ್ತಿದ್ದೇವೆಯೇ?.....  ಎಂದು ಪ್ರಶ್ನಿಸುತ್ತಾರೆ. ಗೌತಮ ಬುದ್ಧನು ಪ್ರತಿಪಾದಿಸಿರುವುದೂ ವೈದಿಕ ತತ್ತ್ವಸಾರವನ್ನು ಎಂದು ಹೇಳುವ ಶಂಕರಾಚಾರ್ಯರು, ಗೌತಮ ಬುದ್ಧ ತಮ್ಮ ಸಮಾಜದ ದುಃಖವನ್ನು ನೋಡಿಯೇ ಕರಗಿ ಹೋಗಿದ್ದ. ಆದರೆ ನಾವು ಇಂದು ಆ ಸಮಾಜದ ಸುಖ-ದುಃಖದ ಬಗ್ಗೆ ಯೋಚಿಸುತ್ತಿದ್ದೇವೆಯೆ? ಯಾವ ವೃದ್ಧನ ಕಂಪಿಸುವಶರೀರ ಭಗವಾನ್ ಬುದ್ಧನ ಹೃದಯ ಕಂಪಿಸುವಂತೆ ಮಾಡಿತ್ತೋ, ಆ ಹೃದಯವಾದರೂ ಯಾರು?... ಬುದ್ಧ  ಘೋರ ತಪಸ್ಸು ಮಾಡಿದ್ದೂ ಈ ತಾಯಿಯ ಕೋಟಿ-ಕೋಟಿ ಮಕ್ಕಳ ಜೀವನವನ್ನು ಸುಖಮಯಗೊಳಿಸಲು.... ಎಂದು ವಾದಿಸುತ್ತಾರೆ.
     ಅಧಿಕಾರದ ಹಂಬಲದಿಂದಾಗಿ ಬೌದ್ಧಾನುಯಾಯಿಗಳು ರಾಷ್ಟ್ರವಿರೋಧಿ ಕೃತ್ಯವನ್ನು ಬೆಂಬಲಿಸುತ್ತಿದ್ದಾರೆಂದು ಅವರು ಟೀಕಿಸುತ್ತಾರೆ. ಶಕರು ಹಾಗೂ ಹೂಣರು ಬೌದ್ಧಧರ್ಮದ ದೀಕ್ಷೆಯನ್ನು  ಸ್ವೀಕರಿಸಿರುವುದು ಬೌದ್ಧ ಧರ್ಮ ಅವರಿಗೆ ಪ್ರೀಯವಾಗಿತ್ತು ಅಥವಾ ಅವರು ಬುದ್ದನನ್ನು ಪ್ರೀತಿಸುತ್ತಿದ್ದರು ಎಂದಲ್ಲ. ಅವರು ಬೌದ್ಧಧರ್ಮವನ್ನು ತಮ್ಮ ರಾಜಕೀಯ ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದರು... ಕನಿಷ್ಕನು ಬೌದ್ಧಧರ್ಮಕ್ಕೆ ಪುನಃ ಸಂಸ್ಕಾರವನ್ನು ಮಾಡಿದ ಮತ್ತು ಅದರೊಟ್ಟಿಗೆ ಭಾರತದ ಸ್ವಾತಂತ್ರ್ಯದ ಕತ್ತು ಹಿಸುಕುವ ಕೆಲಸವನ್ನೂ ಮಾಡುತ್ತಿದ್ದ.... ನೀವು ಅವನಿಗೆ ಸಹಾಯವನ್ನೆ ಮಾಡಿದಿರಿ ಎಂದು ದೃಢವಾಗಿ ಮತ್ತು ಸ್ಪಷ್ಟವಾಗಿ ಭೌದ್ಧರ ರಾಷ್ಟ್ರಘಾತುಕ ಚಟುವಟಿಕೆಗಳನ್ನು ಬಯಲಿಗೆಳೆಯುತ್ತಾರೆ. ಇಂದೂ ಕೂಡಾ  ರಾಷ್ಟ್ರೋದ್ಧಾರಕವಾಗಿ ಹುಟ್ಟಿಕೊಂಡ ಅನೇಕ ಚಿಂತನಧಾರೆಗಳು ಅಧಿಕಾರಲಾಲಸೆಯಿಂದ ಮೂಲೋದ್ದೇಶದಿಂದ ವಿಮುಖವಾಗಿವೆ. ಹೀಗಾಗಿ ಶಂಕರಾಚಾರ್ಯರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.
ವೈದಿಕ ಧರ್ಮದ ಪುನರುಜ್ಜೀವಕ
        ಯಾವುದೇ ಮತಧರ್ಮವೂ ಅವಿಚ್ಛಿನ್ನವಾಗಿ ಒಂದೇ ರೂಪವಾಗಿ ಹರಿದುಬರುವುದಿಲ್ಲ. ಅದರ ಗತಿಯಲ್ಲಿ ಅಲ್ಲಲ್ಲಿ ಅನೇಕ ಪ್ರತಿಬಂಧಕಗಳು ಎದುರಾಗುತ್ತಲೇ ಇರುತ್ತವೆ. ಸತ್ತ್ವಶಾಲಿಯಾದವುಗಳು ಮಾತ್ರ ಈ ಪ್ರತಿಬಂಧಕಗಳಲ್ಲಿ ಕೊಚ್ಚಿಹೋಗದೇ, ಅವುಗಳನ್ನು ಸಮರ್ಥವಾಗಿ ಎದುರಿಸಿ ಪ್ರಭಾವಶಾಲಿಯಾಗಿ ಎದ್ದು ನಿಲ್ಲುತ್ತವೆ. ಇದಕ್ಕೆ ವೈದಿಕಧರ್ಮವೇ ಉದಾಹರಣೆ.  
     ಅವೈದಿಕ ಮತ್ತು ಪುರಾತನ ಪರಂಪರೆಯನ್ನು ನಾಶಮಾಡುವತ್ತ  ಬೌದ್ಧ ಮತ್ತಿತರ ಧರ್ಮಗಳು ಕಾರ್ಯತತ್ಪರವಾಗಿದ್ದರೆ, ಇನ್ನೊಂದೆಡೆ ಮೇಲೆ ಹೇಳಿದ ಧರ್ಮಗಳಿಗೆ ಪ್ರತಿಕ್ರಿಯಾತ್ಮಕ ರೂಪದಲ್ಲಿ  ಅಥವಾ ವೈದಿಕ ಧರ್ಮದ ರಕ್ಷಣೆಗಾಗಿ ಹುಟ್ಟಿದ ಧರ್ಮ - ಈ ಎರಡು ಪಂಥಗಳೂ ಮೂಲ ಆಶಯದಿಂದ ದೂರವಾಗಿರುವುದು ಶಂಕರಾಚಾರ್ಯರು ಅನುಭವಕ್ಕೆ ಬಂದವು. ಬೌದ್ಧರು ಯಜ್ಞ-ಯಾಗಾದಿಗಳನ್ನು ಖಂಡಿಸಿದ್ದರೆಂಬ ಕಾರಣದಿಂದ ಪ್ರತಿಕ್ರಿಯಾತ್ಮಕವೆನ್ನುವಂತೆ ವೈದಿಕರು ಯಜ್ಞ-ಯಾಗಾದಿಗಳೇ ವೈದಿಕತ್ವ ಎಂದು ಆಚರಣೆಗಿಳಿದಿದ್ದರು.
   ಅದುವರೆಗೆ ಹಿಂದೆ ಯಾರೂ ಮಾಡಿರದಿದ್ದ ಯಾರೂ ಕೇಳಿರದಿದ್ದ ಒಂದು ಮಹಾಕಾರ್ಯವನ್ನು  ಶಂಕರರು ಆರಂಭಿಸಿದರು - ಅದು ವೇದಾಂತದರ್ಶನಕ್ಕೆ ವಿರೋಧಿಗಳಾದ ಪ್ರತಿಪಕ್ಷಗಳವರನ್ನು  ವಾದದಲ್ಲಿ ಜಯಿಸಿ, ಸರ್ವಪ್ರಜೆಗಳಿಗೂ ಹಿತಕರವಾದ ಶ್ರೇಯಸ್ಸಿನ ದಾರಿಯನ್ನು ತಿಳಿಸಿಕೊಡುವ ಉದ್ದೇಶದಿಂದ, ರಾಮೇಶ್ವರದಿಂದ ಕಾಶಿಯವರೆಗೆ, ಅಲ್ಲಿಂದ ಕಾಶ್ಮೀರದವರರೆಗೆ ಧರ್ಮಸ್ಥಾಪನೆಗಾಗಿ ವಿಜಯಯಾತ್ರೆಯನ್ನು ನಡೆಸಿದ್ದು.
    ಪ್ರತಿಪಕ್ಷದವರಲ್ಲಿ ಕೆಲವರು ದ್ವೈತವಾದಿಗಳೂ ಕೆಲವರು ಭೈರವ, ಕಾಳಿ, ದುರ್ಗಿ - ಮುಂತಾದ ದೇವತೆಗಳನ್ನು ಕ್ರೂರ ಮಾರ್ಗದಲ್ಲಿ ಉಪಾಸನೆ ಮಾಡುತ್ತ ಲೋಕಭಯಂಕರರಾದವರೂ, ಕೆಲವರು ದೇವರೇ ಇಲ್ಲವೆಂದೂ ಪಾಪಪುಣ್ಯ ಎಂಬಿವು ಬರಿಯ  ಕಲ್ಪನೆಗಳೆಂದು ವಾದಿಸುವ ನಾಸ್ತಿಕರೂ ಇದ್ದರು. ತಂತ್ರಪಜೆ ಆ ಕಾಲದಲ್ಲಿ ವ್ಯಾಪಕವಾಗಿತ್ತು. ತಂತ್ರಶಾಸ್ತ್ರದ ಯಥಾರ್ಥ ರೂಪದ ಅಪರಿಚಯದಿಂದಾಗಿ ಆ ಉಪಾಸಕರು ಹೊಸಹೊಸ ಕಲ್ಪನೆಗಳನ್ನು ಪ್ರಾರಂಭಿಸಿದ್ದರು. ತಂತ್ರಶಾಸ್ತ್ರದಲ್ಲಿ ಮರ್ಣಿತವಾಗುವ ಐದು ’ಮ’ಕಾರಗಳ - ಮದ್ಯ, ಮಾಂಸ, ಮೀನು, ಮುದ್ರಾ ಮತ್ತು ಮೈಥುನ - ಯಥಾರ್ಥವನ್ನು ತಿಳಿದುಕೊಳ್ಳದೆ ಪೂಜಾಕ್ರಮಗಳಲ್ಲೂ ಇವುಗಳನ್ನು ಉಪಯೋಗ ಮಾಡುತ್ತಿದ್ದರು. ಆಚಾರ್ಯ ಶಂಕರರು ಈ ತಾಮಸ ಪೂಜೆಯನ್ನು ನಿಷೇಧಿಸಿದರು. ಮತ್ತು ಇವುಗಳನ್ನು ತಮ್ಮ ಯುಕ್ತಿ ಹಾಗೂ ಶಾಸ್ತ್ರಾಧಾರದಿಂದ ಖಂಡಿಸಿದರು.
    ಆಚಾರ್ಯ ಶಂಕರರು ಬೋಧಿಸಿದ ವೇದಾಂತ ದರ್ಶನವೇ ಅದ್ವೈತ - ಅಂದರೆ ಎರಡು ಎಂಬುದು ಸತ್ಯವಲ್ಲ, ಇರತಕ್ಕದ್ದು ಒಂದೇ ವಸ್ತು - ಎಂದು. ಪರಮಾತ್ಮನೊಬ್ಬನೆ, ಅವನೇ ಈ ಜಗತ್ತನ್ನು ತನ್ನಲ್ಲಿರುವ ಅದ್ಭುತ ಶಕ್ತಿಯಿಂದ ನಿರ್ಮಿಸಿದ್ದಾನೆ. ಈ ಜಗತ್ತು ಸತ್ಯವಾಗಿ ಯಾವಾಗಲೂ ಇರತಕ್ಕದ್ದಲ್ಲ - ಎನ್ನುವುದು ಅದ್ವೈತವೇದಾಂತದ ಸಾರಾಂಶ. ಉಪನಿಷತ್ತುಗಳು ದೇವರನ್ನು ಬ್ರಹ್ಮ, ಆತ್ಮ ಎಂಬ ಶಬ್ದಗಳಲ್ಲೇ ವ್ಯವಹರಿಸುತ್ತವೆ. ದೇವರು, ಬ್ರಹ್ಮ, ಆತ್ಮ, ಪರಮಾತ್ಮ, ಈಶ್ವರ - ಎಂದರೆ ಒಬ್ಬನೇ. ದೇವರೊಬ್ಬನೇ ನಾಮಹಲವು. ಅವನು ನಿರಾಕಾರನಾದರೂ ಭಕ್ತರಿಗಾಗಿ ಸಾಕಾರನೂ ಆಗುತ್ತಾನೆ. ಆತನನ್ನು ಯಾವ ಹೆಸರಿನಿಂದಲಾದರೂ ಪೂಜಿಸಬಹುದು. ಕಲ್ಲು, ನೀರು, ನೆಲ, ಜಲ, ಬೆಂಕಿಗಳನ್ನೂ ಪೂಜಿಸಬಹುದು. ಎಲ್ಲವೂ ಸರ್ವಾತ್ಮನಾದ ಭಗವಂತನಿಗೇ ಸೇರುತ್ತದೆ, ಎಂದು ಶಂಕರರು ಪ್ರತಿಪಾದಿಸಿದರು.
 ಬೇರೆಬೇರೆ ದೇವಾಕೃತಿಗಳಲ್ಲಿ, ನಾಮಗಳಲ್ಲಿ ಅಧಿಕವಾದ ಭಕ್ತಿಯಿರುವವರನ್ನು ಒಂದುಗೂಡಿಸಲು ಪಂಚಾಯತನ ಪೂಜೆ - ಶಿವ, ವಿಷ್ಣು, ಅಂಬಿಕಾ, ಸೂರ್ಯ ಮತ್ತು ಗಣಪತಿ ಈ ಪಂಚಾಯತನ ದೇವರನ್ನು ಒಂದೇ ಪೀಠದಲ್ಲಿ ತಮ್ಮ ಇಷ್ಟವಾದ ದೇವರನ್ನು ಮಧ್ಯದಲ್ಲಿಟ್ಟು ಪೂಜಿಸುವ ಪದ್ಧತಿಯನ್ನು - ರೂಪಿಸಿರುವರು. ದೇವರಲ್ಲಿ ಬೇಧವಿಲ್ಲ, ಎಲ್ಲವೂ ಪರಮಾತ್ಮನಿಗೇ ಸಲ್ಲುತ್ತದೆ ಎಂಬುದನ್ನು ಸಾರಿದರು.
     ಅವರ ದಿಗ್ವಿಜಯ ಯಾತ್ರೆಯ ಮೂಲಕ ದೇಶಾದ್ಯಂತ ವೈದಿಕ ಜಾಗೃತಿಯುಂಟಾಗಿತ್ತು. ಅದು ನಿರಂತರವಾಗಿ ಮುಂದುವರಿಯಬೇಕಾದರೆ ಇದರ ಅಧ್ಯಯನ, ಬೋಧನೆ, ಆಚರಣೆ, ಪ್ರಚಾರಗಳು ಸದಾ ನಡೆಯುತ್ತಿರುವಂತೆ ನೋಡಿಕೊಳ್ಳುವ ಒಂದು ವ್ಯವಸ್ಥೆಬೇಕು. ಅದಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ -ದಕ್ಷಿಣದಲ್ಲಿ ಶೃಂಗೇರಿ, ಪಶ್ಚಿಮದಲ್ಲಿ ದ್ವಾರಕ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಜಗನ್ನಾಥಪುರಿ - ನಾಲ್ಕು ಮಠಗಳನ್ನು ಸ್ಥಾಪಿಸಿದರು. ಉತ್ತರ-ದಕ್ಷಿಣದ ಏಕತೆಯನ್ನು ಸಾರುವಂತೆ ತಮ್ಮ ಶಿಷ್ಯರಲ್ಲಿ ಉತ್ತರದ ಸುರೇಶ್ವರಾನಂದ(ಮಂಡನ ಮಿಶ್ರ)ರನ್ನು ದಕ್ಷಿಣದ ಶೃಂಗೇರಿಯಲ್ಲಿ, ದಕ್ಷಿಣದ ತೋಟಕಾಚಾರ್ಯರನ್ನು ಉತ್ತರದ ಬದರಿಯಲ್ಲಿ, ಪದ್ಮಪಾದರನ್ನು ದ್ವಾರಕೆಯಲ್ಲಿ, ಹಸ್ತಾಮಲಕರನ್ನು ಜಗನ್ನಾಥಪುರಿಯಲ್ಲಿ ಪೀಠಾಧಿಪತಿಗಳಾಗಿ ನಿಯುಕ್ತಿಗೊಳಿಸಿದರು.
    ಶಂಕರಾಚಾರ್ಯರ ಜೀವನಕಾರ್ಯ ಕೇವಲ ಮೂವತ್ತೆರಡು ವರ್ಷಗಳು. ಆದರೆ ಅಲ್ಪಕಾಲದಲ್ಲಿ ಅವರ ಸಾಧನೆ ಅದ್ವಿತಿಯವಾದದ್ದು ಮತ್ತು ಅಸಾಮಾನ್ಯವಾದದ್ದು. ಸಕಲ ವೇದೋಪನಿಷತ್ತುಗಳ ಕಂಠಪಾಠ, ಸರ್ವಶಾಸ್ತ್ರಗಳಲ್ಲಿಯೂ ಗಳಿಸಿದ ಅಸಾಧಾರಣವಾದ ಪಾಂಡಿತ್ಯಗಳಲ್ಲದೇ ಪ್ರಸ್ಥಾನತ್ರಯಗಳ ಮೇಲೆ ಭಾಷ್ಯ ನಿರ್ಮಾಣ, ವಿವೇಕಚೂಡಾಮಣಿ ಮೊದಲಾದ ವೇದಾಂತಗ್ರಂಥಗಳ ರಚನೆ, ನಾನಾ ದೇವತೆಗಳನ್ನು ಕುರಿತು ಮಾಡಿದ ವಿವಿಧಸ್ತೋತ್ರಗಳು, ವಿಷ್ಣುಸಹಸ್ರನಾಮಭಾಷ್ಯ, (ಹೀಗೆ ಶಂಕರಾಚಾರ್ಯರ ಕೃತಿಗಳೆಂದು ಸುಮಾರು ೨೦೦ಕ್ಕೂ ಮೇಲ್ಪಟ್ಟು ಗ್ರಂಥಗಳಿಂದು ಉಪಲಬ್ಧವಾಗಿವೆ.) ಶಿಷ್ಯರಿಗೆ ಅಧ್ಯಾಪನೆ, ವಿದ್ವಾಂಸರೊಡನೆ ವಾದ-ಚರ್ಚೆಗಳು, ಇವುಗಳೊಂದಿಗೆ ಭರತಖಂಡವನ್ನು ಪ್ರಾಯಶಃ ೨ ಸಲ ಕಾಲ್ನಡಿಗೆಯಲ್ಲಿ ಸುತ್ತಿದ್ದು, ಇನ್ನು ಅನುಷ್ಠಾನ , ಜಪ, ತಪಸ್ಸುಗಳು ಶಂಕರಾಚಾರ್ಯರನ್ನು ಸಾಕ್ಷಾತ್ ಶಂಕರನ ಅವತಾರಪುರುಷರನ್ನಾಗಿಸಿವೆ. ಶಂಕರಾಚಾರ್ಯರು ಕಾರ್ಮೋಡದಲ್ಲಿದ್ದ ವೈದಿಕ ಪರಂಪರೆಗೆ ಮಿಂಚಿನಂತೆ ಅವತರಿಸಿ ಸುಧಾರಣೆಯ ಹೊಸ ಮನ್ವಂತರದ ಭಾಷ್ಯ ಬರೆದ ಹಿಂದೂಧರ್ಮ ಪುನರುಜ್ಜೀವಕ.

Saturday, 13 February 2016

ತ್ರಿವರ್ಣಧ್ವಜವೇ ನಮ್ಮ ಮತಧರ್ಮ

ತ್ರಿವರ್ಣಧ್ವಜವೇ ನಮ್ಮ ಮತಧರ್ಮ

- ರಾಜ್ಯವರ್ಧನಸಿಂಗ್ ರಾಠೋಡ್

ಬೆಂಗಳೂರು : ತ್ರಿವರ್ಣಧ್ವಜವೇ (tri-colour) ನಮ್ಮ ಮತಧರ್ಮ ಮತ್ತು ರಾಷ್ಟ್ರೀಯತೆಯೇ ನಮ್ಮ ನಂಬಿಕೆಗಳಾಗಿದ್ದು ಇವು ದೇಶವನ್ನು ಗಟ್ಟಿಗೊಳಿಸುತವೆ ಎಂದು ಕೇಂದ್ರ ವಾರ್ತಾ ಪ್ರಸಾರ ಖಾತೆ ರಾಜ್ಯ ಸಚಿವ, ಖ್ಯಾತ ಕ್ರೀಡಾಪಟು ರಾಜ್ಯವರ್ಧನಸಿಂಗ್ ರಾಠೋಡ್ ಅವರು ಹೇಳಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿ ಫೆಬ್ರುವರಿ ೧೩ ರಂದು ರಾಷ್ಟ್ರೋತ್ಥಾನ ಪರಿಷತ್‌ನ ಪತಂಜಲಿ ಯೋಗಮಂದಿರದ ಲೋಕಾರ್ಪಣ ಸಮಾರಂಭದಲ್ಲಿ ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ ಅವರು ಭಾಷಣ ಮಾಡುತ್ತಿದ್ದರು. ವಿದೇಶಗಳಿಗೆ ವಿವಿಧ ಕ್ರೀಡಾಕೂಟಗಳಿಗೆ ಹೋಗುವಾಗ ನಾನು ಯೋಗದ ಬಗೆಗಿನ ಪಸ್ತಕ ಮತ್ತು ಭಗವದ್ಗೀತೆಗಳನ್ನು ಯಾವಾಗಲೂ ತನ್ನ ಜೊತೆಗೆ ಒಯ್ಯುತ್ತಿದ್ದೆ. ಭಗವದ್ಗೀತೆಯನ್ನು ಕುರಿತ ಗ್ರಂಥ ಸುಮಾರು  ಅರ್ಧ ಕೆ.ಜಿ. ತೂಕವಿದ್ದು, ಅದನ್ನು ಒಯ್ಯಬೇಕೇ ಬೇಡವೇ ಎಂಬ ಪ್ರಶ್ನೆ ಯಾವಾಗಲೂ ಎದುರಾಗುತ್ತಿತ್ತು. ಆದರೆ ಅದರಲ್ಲಿ ನನ್ನ ಓದು ’ಕರ್ಮವನ್ನು ಮಾಡು; ಫಲದ ಚಿಂತೆ ಬೇಡ’ ಅದರಿಂದ ಮುಂದೆ ಹೋಗಲೇ ಇಲ್ಲ. ಆದ್ದರಿಂದ ಪರ್ತಿಗೊಳಿಸುವ ಸಲುವಾಗಿ ಒಯ್ಯುವುದು ಅನಿವಾರ್ಯವಾಗುತ್ತಿತ್ತು ಎಂದವರು ಹೇಳಿದರು.
ನಮಗೆ ನಮ್ಮ ಶರೀರ ಬಹಳ ಮುಖ್ಯ. ಜೀವನದಲ್ಲಿ ನಮಗೆ ಒಂದು ಶರೀರ ಮಾತ್ರ ಸಿಗುತ್ತದೆ; ಅದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ದೇಹವನ್ನು ಕೊಟ್ಟ ದೇವರು ಅದರ ಮೂಲಕ ದೇಶವನ್ನು ಕಟ್ಟಬೇಕೆಂಬ ಸೂಚನೆಯನ್ನು ಕೂಡ ನೀಡಿದ್ದಾನೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದ ಸಚಿವ ರಾಠೋಡ್, ಸಾಮರ್ಥ್ಯ ಎಲ್ಲರಲ್ಲೂ ಇರುತ್ತದೆ. ಅವಕಾಶ ಸಿಕ್ಕಿದವರು ಸಾಧನೆ ಮಾಡುತ್ತಾರೆ. ಅದಕ್ಕೆ ತಾನು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುದೇ ಉದಾಹರಣೆ; ಎಲ್ಲ ಯುವಜನರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು. ಕರ್ನಾಟಕ ಅಶ್ವಿನಿ ನಾಚಪ್ಪ, ಅಶ್ವಿನಿ ಪೆನ್ನಪ್ಪ, ಚಂದ್ರಶೇಖರ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಪ್ರಕಾಶ್ ಪಡುಕೋಣೆ ಅವರಂತಹ ಹಲವು ಶ್ರೇಷ್ಠ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ ಎಂದವರು ಶ್ಲಾಘಿಸಿದರು.
ಯೋಗದಿಂದ ಶರೀರವಲ್ಲದೆ ಮನಸ್ಸಿನ ಶಕ್ತಿಯೂ ಬರುತ್ತದೆ. ಸಿಯಾಚಿನ್‌ನಲ್ಲಾದ ಹಿಮಪಾತದ ಕೆಳಗೆ ಸಿಲುಕಿ ೧೫ ನಿಮಿಷ ಕೂಡ ಬದುಕಲು ಅಸಾಧ್ಯ. ಹೀಗಿರುವಾಗ ಆರು ದಿನಗಳ ಕಾಲ ಬದುಕಿದ ಹನುಮಂತಪ್ಪ ಅವರ ಶಕ್ತಿ ಎಷ್ಟೆಂಬುದನ್ನು ತಿಳಿಯಬಹುದು ಎಂದು ರಾಠೋಡ್ ಕೊಂಡಾಡಿದರು. ನಾವು ಮೊದಲಿಗೆ ನಮ್ಮ ದೇಹದ ಸೈನಿಕ(ರಕ್ಷಕ)ರಾಗಬೇಕು; ಮುಂದೆ ಸಮಾಜ ಮತ್ತು ದೇಶಗಳ ರಕ್ಷಕರೂ ಆಗಬೇಕು ಎಂದ ಸಚಿವ ರಾಠೋಡ್, ೫೦ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ರಾಷ್ಟ್ರೋತ್ಥಾನ ಪರಿಷತ್ತನ್ನು ಅಭಿನಂದಿಸಿದರು.
ಯೋಗ ಮಂದಿರದ ಲೋಕಾರ್ಪಣವನ್ನು ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರಾಷ್ಟ್ರೋತ್ಥಾನ ಪರಿಷತ್ ಐದು ದಶಕಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಸೇವೆ ಸಲ್ಲಿಸಿ ಸಮಾಜದ ಎಲ್ಲ ವರ್ಗಗಳ ಮನ್ನಣೆಗೆ ಪಾತ್ರವಾಗಿದೆ ಎಂದರು. ರಾಷ್ಟ್ರೀಯತೆಯೇ ನಮ್ಮ ಧರ್ಮ; ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ. ಆದರೂ ಕೆಲವರು ಹಿಂದುತ್ವ. ಕೇಸರೀಕರಣವೆಂದು ಟೀಕಿಸುತ್ತಾರೆ. ಇದರಿಂದ ನಮ್ಮ ವಿಚಾರಗಳನ್ನು ತಿಳಿಸಲು ಅನುಕೂಲವೇ ಆಗುತ್ತದೆಂದು ತಿಳಿಯಬೇಕಾಗಿದೆ ಎಂದರು. ಯೋಗ ಇಂದು ಇಡೀ ಜಗತ್ತಿನಲ್ಲೇ ಪಸರಿಸುತ್ತಿದೆ. ವಿಶ್ವಸಂಸ್ಥೆ ಮನ್ನಣೆ ನೀಡಿ, ಜೂನ್ ೨೧ ರಂದು ಜಾಗತಿಕ ಮಟ್ಟದಲ್ಲಿ ಯೋಗದಿನವನ್ನು ನಡೆಸುವಂತಾದದ್ದು ಪ್ರಧಾನಿಯವರ ಸಾಧನೆ. ಪಾಕಿಸ್ತಾನ, ಸೌದಿ ಅರೇಬಿಯ, ಮಲೇಷ್ಯಾ ಸಹಿತ ಜಗತ್ತಿನ ೧೯೨ ದೇಶಗಳಲ್ಲಿ ಯೋಗದಿನವನ್ನು ಆಚರಿಸಲಾಯಿತು ಎಂದ ಯಡಿಯೂರಪ್ಪ, ಆರೆಸ್ಸೆಸ್ ತನ್ನ ಶಾಖೆಗಳಲ್ಲಿ ಯೋಗ ಮತ್ತು ಸೂರ್ಯ ನಮಸ್ಕಾರಗಳನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿದೆ. ಯೋಗಕೇಂದ್ರದಿಂದ ಸದಾಶಿವ ನಗರ ಸೇರಿದಂತೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು, ಜೀವನ ಶೈಲಿ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಇಂದಿನ ಸಮಸ್ಯೆಯಾಗಿದ್ದು ಆ ಬಗ್ಗೆ ಗಮನಹರಿಸಬೇಕಾಗಿದೆ ಎಂದರು. ರಾತ್ರಿ ೨-೩ ಗಂಟೆಗೆ ಮಲಗಿ ಬೆಳಗ್ಗೆ ೧೦ ಗಂಟೆಗೆ ಏಳುವುದು, ಶಾರೀರಿಕ ವ್ಯಾಯಾಮ ಇಲ್ಲದಿರುವುದು ಹಾಗೂ ನಿಯಮಿತ ಆಹಾರ ಸೇವನೆ ಇಲ್ಲದ ಕಾರಣ ಇಂದು ಯುವಕರಲ್ಲೇ ಮಧುಮೇಹ, ರಕ್ತದ ಅಧಿಕ ಒತ್ತಡ, ಹೃದ್ರೋಗದಂತಹ ರೋಗಗಳು ಕಾಣಿಸುತ್ತಿವೆ. ಅದಕ್ಕಾಗಿ ಶಾಲಾ ಪಠ್ಯಕ್ರಮದಲ್ಲೇ ಜೀವನಶೈಲಿ ಬಗ್ಗೆ ಮಾಹಿತಿ ನೀಡಬೇಕು; ಪಾಠವನ್ನು ಸೇರಿಸಬೇಕು. ಯೋಗ, ಪ್ರಾಣಾಯಾಮ, ಧ್ಯಾನಗಳ ಬಗ್ಗೆ ಕೂಡ ಪಠ್ಯಕ್ರಮ(ಸಿಲಬಸ್)ದಲ್ಲಿ ಪಾಠವನ್ನು ಅಳವಡಿಸಬೇಕು. ಕೇಂದ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಅನಂತ ಕುಮಾರ್ ಒತ್ತಾಯಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಆರೆಸ್ಸೆಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಅವರು ಇಂದಿನ ಒತ್ತಡ ಜೀವನಕ್ಕೆ ಯೋಗದಿಂದ ಪರಿಹಾರ ಸಾಧ್ಯ ಎಂದರು. ಶರೀರ ಮನಸ್ಸು ಮತ್ತು ಬುದ್ಧಿಗಳ ಸಮ್ಯಕ್ ವಿಕಾಸ ಆಗಬೇಕು ಎಂದು ನಮ್ಮ ಪರ್ವಿಕರು ಬಯಸಿದರು. ಅದಕ್ಕಾಗಿ ಮೊದಲಿಗೆ ಶರೀರವು ರೋಗಮುಕ್ತವಾಗಬೇಕು. ಪತಂಜಲಿ ಋಷಿಗಳು ಅಷ್ಟಾಂಗಯೋಗದ ಮೂಲಕ ತ್ರ್ರಿಕರಣ  ಶುದ್ಧಿಗೆ ಅವಕಾಶ ಕಲ್ಪಿಸಿದರು. ಭಾರತವು ವಿಚಾರ ಮತ್ತು ಜ್ಞಾನಗಳ ಮೂಲಕ ಜಗತ್ತಿನಲ್ಲಿ ತನ್ನ ಪ್ರಭಾವವನ್ನು ಪಸರಿಸಿತೇ ಹೊರತು ಯಾವುದೇ ಖಡ್ಗದಿಂದಲ್ಲ. ದೇಶದ ಮೇಲೆ ಹಲವು ಆಕ್ರಮಣಗಳು ನಡೆದಾಗ ನಮ್ಮ ಸಂಸ್ಕೃತಿ ನಾಶವಾಗದಿದ್ದರೂ ಯೋಗ ಮುಂತಾದವುಗಳಿಗೆ ಹಿನ್ನಡೆ ಆಯಿತು. ಅದನ್ನೀಗ ಸರಿಪಡಿಸಬೇಕಾಗಿದೆ ಎಂದ ಮಂಗೇಶ್ ಭೇಂಡೆ ಅವರು, ಶಾಖೆಯಲ್ಲಿ ಸೂರ್ಯನಮಸ್ಕಾರ ಮಾಡಲೇಬೇಕೆಂದು ಶ್ರೀ ಗುರೂಜಿ ಅವರ ಸೂಚನೆಯಿತ್ತು. ಕರ್ನಾಟಕದಲ್ಲಿ ದಿ| ಅಜಿತ್‌ಕುಮಾರ್ ಅವರು ಪರಿಶ್ರಮಪಟ್ಟು ಯೋಗವನ್ನು ಬೆಳೆಸಿದರು. ರಾಷ್ಟ್ರೋತ್ಥಾನ ಪರಿಷತ್ತಿನಲ್ಲೂ ಅದನ್ನು ಬೆಳೆಸಿದರು ಎಂದು ತಿಳಿಸಿದರು. ಒತ್ತಡದ ಜೀವನ ಇಂದು ಮಕ್ಕಳು, ಯುವಕರನ್ನೂ ಕೂಡ ಬಾದಿಸುತ್ತಿದೆ; ಆತ್ಮಹತ್ಯೆಗೆ ಮುಂದಾಗುತ್ತಾರೆ. ಯೋಗದಿಂದ ಒತ್ತಡದ ನಿವಾರಣೆ ಸಾಧ್ಯ. ಯೋಗವು ಒಂದು ಆಂದೋಲನ ಆಗಬೇಕು. ಇಂದು ಜಗತ್ತು ಈ ಕಡೆಗೆ ಗಮನ ಹರಿಸುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಜಾಸ್ತಿ ಇದೆ, ಮಕ್ಕಳಿಗೆ ಯೋಗ ಕಲಿಸಬೇಕು ಎಂದು ಭೇಂಡೆ ಅವರು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಕೆನರಾಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹರಿದೀಶ್ ಕುಮಾರ್ ಬಿ. ಅವರು ಸಂಸ್ಥೆಯನ್ನು ಶ್ಲಾಘಿಸಿ ಹೊಸ ಯೋಗ ಮಂದಿರಕ್ಕೆ ಶುಭಕೋರಿದರು. ಸ್ಥಳೀಯ ಶಾಸಕ ಡಾ|| ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯೆ ಶ್ರೀಮತಿ ಸುಮಂಗಲ ಬಿ. ಹಾಗೂ ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತಿಸಿ ಪ್ರಸ್ತಾವನೆಗೈದ ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಅವರು, ಸಂಸ್ಥೆ ೫೦ ವರ್ಷಗಳಲ್ಲಿ ನಡೆದು ಬಂದ ದಾರಿ ಹಾಗೂ ಸಾಹಿತ್ಯ, ಶಿಕ್ಷಣ ಆರೊಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ವಿವರಿಸಿದರು. ರಾಷ್ಟ್ರೋತ್ಥಾನ ಈಗಾಗಲೆ ಅರು ಯೋಗ ಕೇಂದ್ರಗಳನ್ನು ನಡೆಸುತ್ತಿದ್ದು, ಅಲ್ಲಿ  ೬೮ ಬ್ಯಾಚ್‌ಗಳಲ್ಲಿ ಸುಮಾರು ೨,೫೦೦ ಜನ ತರಬೇತಿ ಪಡೆಯುತ್ತಿದ್ದಾರೆ. ಸುಮಾರು ಒಂದು ಲಕ್ಷ ಮಂದಿಗೆ ಸಂಸ್ಥೆ ಯೋಗ ತರಬೇತಿ ನೀಡಿದೆ. ಇದು ಏಳನೇ ಯೋಗ ತರಬೇತಿ ಕೇಂದ್ರ ಮತ್ತು ಮೂರನೇ ಜಿಮ್; ಇಲ್ಲಿ ತರಬೇತಿ ಪಡೆಯುವ ಬಗ್ಗೆ ಜನ ಈಗಾಗಲೇ ಆಸಕ್ತಿ ತೋರಿಸಿದ್ದಾರೆ ಎಂದರು. ಕಾರ್ಯಕ್ರಮಕ್ಕೆ ಮುನ್ನ ಸಂಧ್ಯಾ ಶ್ರೀನಾಥ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಾಣಿ ವೆಂಕಟೇಶ್ ಅವರು ಪ್ರಾರ್ಥಿಸಿದ್ದು, ಜಿ.ಆರ್. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೋತ್ಥಾನದ ಆಡಳಿತ ಮಂಡಳಿ ಸದಸ್ಯ ಕೆ.ಎಸ್. ನಾರಾಯಣ ಅವರು ವಂದಿಸಿದರು.



Saturday, 30 January 2016

ಶುದ್ಧ ಭಾಷೆ, ಸಂಶೋಧನೆಗೆ ಸಂಸ್ಕೃತ ಅಗತ್ಯ

ರಾಷ್ಟ್ರೋತ್ಥಾನ ಸಾಹಿತ್ಯದ 125ನೇ ಪ್ರಕಟಣೆ 'ಭಾರತೀಯ ಕ್ಷಾತ್ರಪರಂಪರೆಪುಸ್ತಕ ಲೋಕಾರ್ಪಣೆ

ಶುದ್ಧ ಭಾಷೆ, ಸಂಶೋಧನೆಗೆ ಸಂಸ್ಕೃತ ಅಗತ್ಯ

ಬೆಂಗಳೂರು: ಸಂಸ್ಕೃತದ ಜ್ಞಾನವಿಲ್ಲದಿದ್ದರೆ ಶುದ್ಧ ಕನ್ನಡವನ್ನು ಬರೆಯಲು ಸಾಧ್ಯವಿಲ್ಲ; ಮತ್ತು ಸಮಾಜಶಾಸ್ತ್ರ, ಇತಿಹಾಸ ಮುಂತಾಗಿ ಭಾರತದ ಯಾವುದೇ ವಿಷಯದ ಆಳ ಅಧ್ಯಯನಕ್ಕೆ, ಸಂಶೋಧನೆಗೆ ಸಂಸ್ಕೃತ ಜ್ಞಾನ ಅವಶ್ಯ ಎಂದು ಪ್ರಖ್ಯಾತ ಕಾದಂಬರಿಕಾರ ಡಾ|| ಎಸ್.ಎಲ್. ಭೈರಪ್ಪ ಅವರು ಹೇಳಿದ್ದಾರೆ.
   ಜನವರಿ 24ರಂದು ಬೆಂಗಳೂರಿನ ಎನೆಂ.ಕೆ.ಆರ್.ವಿ. ಕಾಲೇಜಿನಲ್ಲಿ ಜರಗಿದ ರಾಷ್ಟ್ರೋತ್ಥಾನ ಸಾಹಿತ್ಯದ 125ನೇ ಪ್ರಕಟಣೆಯಾದ 'ಭಾರತೀಯ ಕ್ಷಾತ್ರಪರಂಪರೆಪುಸ್ತಕದ ಲೋಕಾರ್ಪಣ ಸಮಾರಂಭದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. ಸುಮಾರು 20 ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ಸಂಸ್ಕೃತದ ಕಲಿಕೆಗೆ ಸಂಬಂಧಿಸಿ ತಾವು ಹೇಳಿದ ಮಾತುಗಳಿಂದ ವಿವಾದ ಆರಂಭಿಸಿ ಈಗಲೂ ಮೂಂದುವರಿಸಿರುವ ಬಗ್ಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
ಜನವರಿ 24ರಂದು ಬೆಂಗಳೂರಿನ ಎನೆಂ.ಕೆ.ಆರ್.ವಿ. ಕಾಲೇಜಿನಲ್ಲಿ ಜರಗಿದ ರಾಷ್ಟ್ರೋತ್ಥಾನ ಸಾಹಿತ್ಯದ 125ನೇ ಪ್ರಕಟಣೆಯಾದ 'ಭಾರತೀಯ ಕ್ಷಾತ್ರಪರಂಪರೆಪುಸ್ತಕದ ಲೋಕಾರ್ಪಣ ಸಮಾರಂಭದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
  ಸಂಸ್ಕೃತದ ಪ್ರಚಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ತಾನು ತಪ್ಪದೆ ಹೋಗುತ್ತೇನೆ. ಅದೇ ರೀತಿಅಕ್ಷರಂನವರ ಸಂಭಾಷಣ ಶಿಬಿರದ ಕಾರ್ಯಕ್ರಮಕ್ಕೆ ಹೋದಾಗ ಆಡಿದ ಮಾತಿನಿಂದ ವಿವಾದ ಸೃಷ್ಟಿಸಲಾಗಿದೆ ಎಂದರು.
   ನಾನು ಮೂಲತಃ ಕನ್ನಡ ಲೇಖಕ. ಕನ್ನಡ ಬೆಳೆಯಬೇಕು. ಆಡಳಿತ, ಶಿಕ್ಷಣಗಳಲ್ಲಿ ಅದು ಪ್ರಮುಖವಾಗಬೇಕು ಎನ್ನುವವನು ನಾನು. ಆದರೆ ಸಂಸ್ಕೃತದ ಪ್ರಾಥಮಿಕ ಜ್ಞಾನ ಇಲ್ಲವಾದರೆ ಶುದ್ಧ ಕನ್ನಡವನ್ನು ಬರೆಯಲು ಸಾಧ್ಯವಾಗುವುದಿಲ್ಲ. ಹಿಂದೆ ಅಮರಕೋಶ, ಸಂಸ್ಕೃತದ ಶ್ಲೋಕಗಳು ಮತ್ತು ಗದ್ಯವನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಿದ್ದರು. ಅವರು ಎಂಟನೇ ತರಗತಿಗೆ ಬಂದಾಗ ಭಾಷಾ ಪ್ರಶ್ನ ಪತ್ರಿಕೆಯ 150 ಅಂಕಗಳಲ್ಲಿ 50 ಅಂಕ ಸಂಸ್ಕೃತಕ್ಕಿದ್ದರೆ ಸಂಸ್ಕೃತದ ಪ್ರಾಥಮಿಕ ಜ್ಞಾನ ಸಿಕ್ಕಿದಂತಾಗುತ್ತದೆ. ನಮ್ಮಲ್ಲಿ ಸಮಾಜಶಾಸ್ತ್ರ ಇತ್ಯಾದಿ ಸಂಶೋಧನೆ ನಡೆಸಬೇಕಿದ್ದರೆ ಸಂಸ್ಕೃತದ ಮೂಲ ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳನ್ನೆಲ್ಲ ಓದುವುದು ಅನಿವಾರ್ಯ. ಸಂಶೋಧಕರು ಸಾಮಾನ್ಯವಾಗಿ ವೇದವನ್ನು ತಿಳಿಯಬೇಕಿದ್ದರೆ ವೇದಗಳ ಇಂಗ್ಲಿಷ್ ಅನುವಾದ, ವ್ಯಾಖ್ಯಾನಗಳನ್ನು ಓದುತ್ತಾರೆ. ಅನುವಾದಕನ ಪರಿಕಲ್ಪನೆ ತಪ್ಪಿರಬಹುದು. ಪೂರ್ವಾಗ್ರಹದಿಂದ ಕೂಡಿರಬಹುದು. ಇದನ್ನು ತಪ್ಪಿಸಬೇಕಿದ್ದರೆ ಸಂಸ್ಕೃತವನ್ನು ಮೂಲದಲ್ಲೇ ಓದಿ ತಿಳಿಯುವ ಸಾಮರ್ಥ್ಯ ಅಗತ್ಯ. ಇದಕ್ಕೆ ಹೊರತಾಗಿ ಎಂ.. ಮುಗಿಸಿದ ಮೇಲೆ ಅಥವಾ ವಯಸ್ಕರಾದಾಗ ಸಂಸ್ಕೃತ ಕಲಿಯಲು ಕಷ್ಟ, ಬಾಯಿಪಾಠ ಮಾಡಲು ಆಗುವುದಿಲ್ಲ ಎಂದವರು ಹೇಳಿದರು.
ಪಂಪ, ಕುಮಾರವ್ಯಾಸ ಮತ್ತು ಈಚಿನ ಕುವೆಂಪು, ಬೇಂದ್ರೆ, ಪು.ತಿ.. ಇವರೆಲ್ಲ ಸಂಸ್ಕೃತದಲ್ಲಿ ಗಟ್ಟಿಗರಾಗಿದ್ದರಿಂದಲೇ ಉತ್ತಮ ಕವಿಗಳಾದರು. ಇತಿಹಾಸಕಾರ ಶ್ರೀಕಂಠಶಾಸ್ತ್ರಿಗಳಿಗೆ ಸಂಸ್ಕೃತ ಸೇರಿದಂತೆ ಹಲವು ಭಾಷೆಗಳ ಪರಿಚಯವಿತ್ತುಅದರಿಂದಲೇ ಅವರು ದೊಡ್ಡ ಸಂಶೋಧಕರಾದರು. ಆದರೆ ಪತ್ರಿಕೆಯಲ್ಲಿ ನನ್ನ ಮಾತಿನ ಬಗ್ಗೆ ಏನೋ ವರದಿ ಬಂತು; ಚರ್ಚೆಯಲ್ಲಿ ಏನೇನೋ ಬರೆದರು. ಸಂಸ್ಕೃತ ಒಂದು ಜಾತಿಯ ಬಾಷೆ; ದಬ್ಬಾಳಿಕೆ ನಡೆಸಿದ ಭಾಷೆ; ಉತ್ತರ ಭಾರತದವರ ಭಾಷೆ ಇತ್ಯಾದಿ. ಸಂಸ್ಕೃತದ ವಿದ್ವತ್ ಇಲ್ಲದಿದ್ದರೆ ಗಣೇಶ್ ಅವರಿಗೆ ಇಂತಹ ಪುಸ್ತಕ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಸಂಸ್ಕೃತಿ, ಇತಿಹಹಾಸ, ವೇದ, ಉಪನಿಷತ್, ಸಂಸ್ಕೃತ ಸಾಹಿತ್ಯ, ಪಾಲಿ, ಅರ್ದಮಾಗಧಿ ಭಾಷೆಗಳು, ಸಂಗೀತ, ನೃತ್ಯ, ಸಾಹಿತ್ಯ ವಿಮರ್ಶೆ, ಭರತನ ನಾಟ್ಯಶಾಸ್ತ್ರ ಇವೆಲ್ಲ ತಿಳಿದ ಕಾರಣದಿಂದಲೇ ಇಂತಹ ಪುಸ್ತಕ ಹೊರಬಂದಿದೆ ಎಂದು ಡಾ| ಭೈರಪ್ಪ ಶ್ಲಾಘಿಸಿದರು.
   ಭಾರತೀಯ ಕಾವ್ಯಮೀಮಾಂಸೆ ಎಂದರೆ ಕನ್ನಡದ ಈಗಿನವರು ತೀ.ನಂ.ಶ್ರೀ. ಅವರ ಹೆಸರಿನ ಪುಸ್ತಕವನ್ನಷ್ಟೇ ಹೇಳುತ್ತಾರೆ. ಬೇರೆ ಭಾಷೆಗಳವರು ಹೇಳುವ ಕಾವ್ಯಮೀಮಾಂಸೆ ಕೂಡ ಇದೇ ಆಗಿದೆ. ಇಡೀ ಭಾರತವನ್ನು ಒಂದು ಮಾಡಿರುವುದು ಇದೇ ಕಾವ್ಯಮೀಮಾಂಸೆ. ಇದು ಸಂಸ್ಕೃತದ್ದು. ಸಂಗೀತಗಾರರು, ನರ್ತಕರು ರಸದ ವಿಷಯ ಮಾತನಾಡುತ್ತಾರೆ. ಹಿಂದಿನ ಸಾಹಿತಿಗಳು ಮತ್ತು ನವೋದಯದವರು ಕೂಡ ರಸದ ಕುರಿತು ಮಾತನಾಡುತ್ತಿದ್ದರು. ಆದರೆ ಇವತ್ತಿನ ಕನ್ನಡ ಸಾಹಿತಿಗಳು ಅದರ ಕುರಿತು ಮಾತನಾಡುವುದಿಲ್ಲ.ಸಾಹಿತ್ಯವು ಚಳವಳಿಗೆ ಪ್ರಚೋದನೆ ನೀಡಬೇಕು; ಇಲ್ಲವಾದರೆ ಅದು ಸಾಹಿತ್ಯವೇ ಅಲ್ಲ ಎಂದು ಅಲ್ಲಗಳೆಯುತ್ತಾರೆ (ಡಿಸ್ಮಿಸ್ ಮಾಡುತ್ತಾರೆ). ಹಾಗಾದರೆ ಸಂಗೀತದ ತೋಡಿರಾಗ ಚಳವಳಿಗೆ ಪ್ರಚೋದನೆ ನೀಡುತ್ತದೆಯೇ? ಇನ್ನೊಂದು ರಾಗವನ್ನು ನಿದ್ರೆ ತರಿಸುವಂಥದೆಂದು ಗುರುತಿಸುವುದೆ ಎಂದು ಪ್ರಶ್ನಿಸಿದ ಅವರು, ವಿಷಯವೆಲ್ಲ ತಿಳಿಯದಿದ್ದರೆ ಪರಿಕಲ್ಪನೆ ಪರಿಕಲ್ಪನೆ (Concept)ಯನ್ನು ತರಲು ಸಾಧ್ಯವಾಗುವುದಿಲ್ಲ. ಇಂಥ ಪುಸ್ತಕ ಬರೆಯಲು ರಾ. ಗಣೇಶರಿಗೆ ಮಾತ್ರ ಸಾಧ್ಯ ಎಂದರು.
     ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ರಾಜಕೀಯದ ಜೊತೆಗೆ ಸಾಂಸ್ಕೃತಿಕ ಸ್ವಾತಂತ್ರ್ಯ ಕೂಡ ಬೇಕು (ರಿವೈವಲಿಸಂ) ಎನ್ನುವ ಒಂದು ಪ್ರವೃತ್ತಿ ಇತ್ತು. ಹಿಂದೆ ಮೇಲ್ವರ್ಗದವರು ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಿರಲಿಲ್ಲ. ಮತ್ತೆ ರುಕ್ಷ್ಮಿಣೀದೇವಿ ಅರುಂಡೇಲ್ ಮುಂತಾದವರು ಕ್ಷೇತ್ರಕ್ಕೆ ಬಂದರು; ನೃತ್ಯ ಪ್ರತಿಷ್ಠೆಯ ವಿಷಯವಾಯಿತು. ಹಿಂದೆ ಹಿಂದುಸ್ತಾನಿ ಸಂಗೀತದಲ್ಲಿ ಉರ್ದು ಬೇಸ್ಗಳು ಮಾತ್ರ ಇದ್ದವು; ನಂತರ ಸಂಸ್ಕೃತ ಬಂತು. ಹೀಗೆ ನಮ್ದರಲ್ಲಿ ಗೌರವ ಬಂತು. ಆದರೆ ಬ್ರಿಟಿಷರು ಹೋದ ನಂತರ ಎಲ್ಲವೂ ಉಲ್ಟಾ ಆಯಿತು ಎಂದು ಭೈರಪ್ಪ ಅವರು ವಿಶ್ಲೇಷಿಸಿದರು.
    ಭಾರತದಲ್ಲಿ ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಸಾಮಾನ್ಯವಾಗಿ ಎಲ್ಲ ರಾಜತಾಂತ್ರಿಕರೂ ಅದನ್ನೇ ಮಾಡುತ್ತಾರೆ. ಪ್ರವಾದಿ ಮಹಮ್ಮದರು ಮೆಕ್ಕಾದಿಂದ ಮದೀನಾಕ್ಕೆ ಬಂದಾಗ ಅಲ್ಲಿ ಬುಡಕಟ್ಟು ಜನರು ಮತ್ತು ಯಹೂದಿಗಳಿದ್ದರು. ಅವರ ನಡುವೆ ಒಗ್ಗಟ್ಟಿದ್ದ ಕಾರಣ ಪ್ರವಾದಿಗಳಿಗೆ ಮತಾಂತರ ಕಷ್ಟವೆನಿಸಿತು. ಅವರನ್ನು ಒಡೆಯಬೇಕಾಗಿತ್ತು. ಏನಾದರೂ ಸುಳ್ಳು ಹೇಳಿ ಅವರನ್ನು ಒಡೆಯಬಹುದೇ ಎಂದು ಅನುಯಾಯಿಗಳು ಕೇಳಿದಾಗ ಪ್ರವಾದಿ ಅನುಮತಿ ನೀಡಿದರು. ಯಹೂದಿಗಳ ಹಳೆಯ ಟೆಸ್ಟಮೆಂಟ್ನಲ್ಲಿ ಮುಂದೆ ಓರ್ವ ಪ್ರವಾದಿ ಬರುತ್ತಾನೆ ಎಂದಿದೆ; ಮಹಮ್ಮದರೇ ಪ್ರವಾದಿ ಎಂದು ಒಪ್ಪಿಕೊಳ್ಳಲು ಹೇಳಿದಾಗ ಯಹೂದಿಗಳು ಒಪ್ಪಲಿಲ್ಲ; ಸುಳ್ಳು ಹೇಳಿ ಬುಡಕಟ್ಟು ಜನರನ್ನು ಬೇರ್ಪಡಿಸಲಾಯಿತು ಎಂದ ಅವರು, ಮಹಾಭಾರತದಲ್ಲಿ ಧರ್ಮರಾಯನಿಂದ ಸುಳ್ಳು ಹೇಳಿಸಿ (ಅಶ್ವತ್ಥಾಮೋ ಹತಃ ಕುಂಜರತಿಃ) ಯುದ್ಧನಿರತ ದ್ರೋಣರನ್ನು ವಿಚಲಿತಗೊಳಿಸಿ ಮುಗಿಸಿದ ಉದಾಹರಣೆ ನೀಡಿದರು. ಕ್ಷಾತ್ರಧರ್ಮವನ್ನು ಎಲ್ಲಿ ಅನ್ವಯಿಸಬೇಕು ಎನ್ನುವ ವಾಸ್ತವದ ಪ್ರಶ್ನೆ ಮುಖ್ಯವಾದದ್ದು. ಭಾರತದ ಮೇಲೆ ದಂಡೆತ್ತಿ ಬಂದವರು ಯಾವುದೇ ಮುಲಾಜು (ಹಿಂಜರಿಕೆ)  ತೋರಲಿಲ್ಲ; ನಾವು ಮಾತ್ರ ಅಂತಹ ಹಿಂಜರಿಕೆಗಳಿಂದ ಸೋತೆವು ಎಂದು ವಿವರಿಸಿದರು.
   ನಮ್ಮತನವನ್ನು ಮತ್ತು ನಮ್ಮ ಪರಂಪರೆಗಳಲ್ಲಿ ಶಕ್ತಿಯನ್ನು ಕಾಣಬೇಕೆನ್ನುವ ಉತ್ಸಾಹ ಸ್ವಾತಂತ್ರ್ಯಕ್ಕೆ ಮುನ್ನ ಇತ್ತು. ಸಾಹಿತ್ಯ ಕೃತಿಗಳಲ್ಲೂ ಅದು ಕಂಡಿದೆ. ಸ್ವಾಮಿ ವಿವೇಕಾನಂದರ, ಶ್ರೀ ಅರವಿಂದರು,ದಯಾನಂದ ಸರಸ್ವತಿ ಅವರೆಲ್ಲ ಅದನ್ನೇ ಹೇಳಿದರು. ಸಾಹಿತಿಗಳು ಅದರಿಂದ ಪ್ರಭಾವಿತರಾದರು. ಹಾಗಾದರೆ ಸ್ವಾತಂತ್ರ್ಯ ಬಂದೊಡನೆ ನಮ್ಮತನವನ್ನು ಕಾಣುವ ಪ್ರವೃತ್ತಿ ಏಕೆ ಹೊರಟುಹೋಯಿತು ಎನ್ನುವ ಪ್ರಶ್ನೆಯನ್ನು ಮುಂದಿಟ್ಟ ಡಾ| ಭೈರಪ್ಪ ಗಾಂಧಿಯವರಲ್ಲಿ ಅದು ಇರಲಿಲ್ಲ ಎಂದರು.
    ನಿನ್ನೆ (ಜನವರಿ 23) ಸುಭಾಶ್ಚಂದ್ರ ಬೋಸ್ ಅವರ ಜನ್ಮದಿನ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಅಹಿಂಸೆಯಿಂದ ಎಂಬುದಾಗಿ ನಮ್ಮಲ್ಲಿ ಭಾರೀ ಪ್ರಚಾರ ನಡೆಯಿತು. ಆದರೆ ಸ್ವಾತಂತ್ರ್ಯ ನೀಡುವಾಗ ಬ್ರಿಟನ್ ಪ್ರಧಾನಿ ಆಗಿದ್ದ ಆಟ್ಲಿ ಅವರಲ್ಲಿ ಒಮ್ಮೆ ಭಾರತದ ಸ್ವಾತಂತ್ರ್ಯ ಗಳಿಕೆಯಲ್ಲಿ ಅಹಿಂಸೆಯ ಪಾತ್ರವೇನು ಎಂದು ಕೇಳಿದಾಗ, ಅವರು ಮಿ-ನಿ--ಲ್ (ಅತ್ಯಂತ ಕಡಿಮೆ) ಎಂದು ಉತ್ತರಿಸಿದರು. ನಿಜವೆಂದರೆ ಸ್ವಾತಂತ್ರ್ಯ ಗಳಿಕೆಯ ಹಿಂದೆ ಹಲವು ಕ್ರಾಂತಿಕಾರಿಗಳಿದ್ದಾರೆ. ಮುಖ್ಯವಾಗಿ ಬ್ರಿಟಿಷರಿಂದ ತಪ್ಪಿಸಿಕೊಂಡು ವಿದೇಶಕ್ಕೆ ಹೋಗಿ ಸೈನ್ಯ ಕಟ್ಟಿ ಬ್ರಿಟಿಷರೊಂದಿಗೆ ಯುದ್ಧಕ್ಕಿಳಿದ ಬೋಸ್ ಇದ್ದಾರೆ. ಬ್ರಿಟಿಷರು ನಮ್ಮ ಕಚ್ಚಾವಸ್ತುಗಳನ್ನು ತಮ್ಮ ದೇಶಕ್ಕೆ ಸಾಗಿಸಿ ಅಲ್ಲಿ ಸಿದ್ಧವಸ್ತು ತಯಾರಿಸಿ ಬಂದ ಲಾಭದಿಂದ ನಮ್ಮವರಿಗೆ ಸಂಬಳ ಕೊಟ್ಟು ಕಟ್ಟಿದ ಸೇನೆಯಿಂದಲೇ ನಮ್ಮನ್ನು ಆಳುತ್ತಿದ್ದರು; ಅದಕ್ಕೆ ಬೋಸ್ ಹೊಡೆತ ನೀಡಿದರು; ನಿಮ್ಮಿಂದಾಗಿ ದೇಶದಲ್ಲಿ ಗುಲಾಮಗಿರಿ ಮುಂದುವರಿಯುತ್ತಿದೆ ಎಂದು ಭಾರತೀಯ ಸೈನಿಕರಲ್ಲಿ ಹೊಸ ಜಾಗೃತಿಯನ್ನು ಮೂಡಿಸಿದರು. ಬೋಸರು ಸೋತು ಹಿಮ್ಮೆಟ್ಟಿದ ಬಳಿಕವೂ ಅವರ ಪ್ರಭಾವ ಮುಂದುವರಿದಿದ್ದು ಭಾರತೀಯ ಸೈನಿಕರಿಂದ ಮುಂಬಯಿಯಲ್ಲಿ ನೌಕಾಬಂಡಾಯ ನಡೆಯಿತು. ಇನ್ನು ಭಾರತವನ್ನು ಆಳಲು ಸಾಧ್ಯವಿಲ್ಲವೆಂದು ಖಚಿತವಾದಾಗ ಬ್ರಿಟಿಷರು ಹೊರಟುಹೋದರು ಎಂದವರು ವಿಶ್ಲೇಷಿಸಿದರು.
ಮುಸ್ಲಿಮರಲ್ಲಿ ಮೊದಲೇ ಒಡಕಿತ್ತು; ಇಲ್ಲವಾದರೆ ತಮಗೆ 'ಆವರಣ' ಕಾದಂಬರಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನಗುವಿನೊಂದಿಗೆ ಹೇಳೀದ ಭೈರಪ್ಪ, ಬ್ರಿಟಿಷರು ಮುಸ್ಲಿಮರನ್ನು ಎತ್ತಿಕಟ್ಟಿದರು. ದೇಶ ಒಡೆದು ನಮ್ಮ ಮಹಾನಾಯಕರ ಕೈಗೆ ಅಧಿಕಾರ ಬಂತು ಎಂದರು. ಆಗ ಇದ್ದ ದೊಡ್ಡ ಪಕ್ಷವೆಂದರೆ ಕಾಂಗ್ರೆಸ್ ಮಾತ್ರ. ಅದರಲ್ಲಿ ಪ್ರಾಂತವಾರು ಬಿಟ್ಟು ೧೫ ಕಮಿಟಿಗಳಿದ್ದು, ಅವುಗಳಲ್ಲಿ ೧೨ ಪಟೇಲ್ ಪ್ರಧಾನಿ ಆಗಬೇಕೆಂದರೆ ಎರಡು ಮಾತ್ರ ನೆಹರು ಅವರನ್ನು ಬೆಂಬಲಿಸಿದವು. ಆಗ ಗಾಂಧಿ ಪಟೇಲರಿಗೆ ನೀನು ಒಪ್ಪಿಕೊಳ್ಳಬೇಡ; ನಾನು ನೆಹರುಗೆ ಮಾತು ಕೊಟ್ಟಿದ್ದೇನೆಎಂದರು. ಗಾಂಧಿಜೀ ಹಿಂದೆ ಸುಭಾಷರಿಗೆ ಮಾಡಿದ ಕುತಂತ್ರವನ್ನು ತಿಳಿದಿದ್ದ ಪಟೇಲ್ ಸುಮ್ಮನೆ ಒಪ್ಪಿಕೊಂಡರು. 1930ರ ದಶಕದ ಕೊನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸುಭಾಷ್ 'ಅಹಿಂಸೆಯಿಂದ ಸ್ವಾತಂತ್ರ್ಯ ಸಿಗದು' ಎಂದರು. ಎರಡನೇ ಸಲವೂ ಅವರೇ ಅಧ್ಯಕ್ಷರಾಗಿ ಚುನಾಯಿತರಾದಾಗ ಗಾಂಧಿ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರಿಂದ ರಾಜೀನಾಮೆ ಕೊಡಿಸಿ ಸುಭಾಷ್ ಅಸಹಾಯರಾಗಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ಪ್ರಧಾನಿಯಾದರೆ ತಮಗೆ ಅದೇ ಸ್ಥಿತಿ ಬರಬಹುದೆಂದು ಪಟೇಲರಿಗೆ ಅನ್ನಿಸಿರಬೇಕು ಎಂದು ಹೇಳಿದರು.
   ಲೆನಿನ್, ಸ್ಟಾಲಿನ್ರಲ್ಲಿ ಅಭಿಮಾನ ಹೊಂದಿದ್ದ ನೆಹರು ಅವರಿಗೆ ದೇಶಪ್ರೇಮ ಅಷ್ಟಾಗಿ ಇರಲಿಲ್ಲ. ಪ್ರಧಾನಿಯಾಗುತ್ತಲೇ ಅವರು ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ಶಿಕ್ಷಣ ಮಂತ್ರಿಯಾಘಿ ನೇಮಿಸಿದರು. ಅವರು ಪುಸ್ತಕ, ಪಠ್ಯಪುಸ್ತಕಗಳಲ್ಲಿ ಮುಸ್ಲಿಂ ದೃಷ್ಟಿಕೋನವನ್ನು ತುಂಬಿದರು. ಮುಂದೆ ಪ್ರಧಾನಿಯಾದ ಇಂದಿರಾಗಾಂಧಿ ಅವರಿಗೆ ಕಮ್ಯುನಿಸ್ಟರ ಬೆಂಬಲ ಬೇಕಿತ್ತು. ಬೆಂಬಲ ನೀಡಿದ ಕಮ್ಯುನಿಟ್ಟರು(ತಮ್ಮ ಸಿದ್ದಾಂತವನ್ನು ತುಂಬುವುದಕ್ಕೆ) ಶಿಕ್ಷಣ ಇಲಾಖೆ ತಮಗೆ ಬೇಕು ಎಂದರು. ಐಸಿಎಚ್ಆರ್ ನಂತಹ ಪ್ರಮುಖ ಸಂಸ್ಥೆಗಳು ಅವರ ವಶವಾದವು. ೨೦-೨೫ ವರ್ಷದೊಳಗೆ ಅವರು ಹೇಳಿದ್ದೇ ಇತಿಹಾಸ, ಸಂಸ್ಕೃತಿ ಆಯಿತು. ಸಂಸ್ಕೃತಿಯು ನಮ್ಮ ಸಾಹಿತ್ಯ, ಸಂಗೀತ, ನೃತ್ಯಗಳ ಆಧಾರದಲ್ಲಿ ರೂಪುಗೊಳ್ಳಬೇಕೆಂಬುದು ಹೋಯಿತು. ಇತರ ದೃಷ್ಟಿಕೋನಗಳಿಗೆ ಅವಕಾಶವೇ ಇಲ್ಲ ಎಂಬಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಆಗ ಸೀತಾರಾಮ್ ಗೋಯಲ್, ರಾಂಸ್ವರೂಪ್ ರಂತಹ ವಿದ್ವಾಂಸರು ಸತ್ಯಾನ್ವೇಷಣೆಗಾಗಿವಾಯ್ಸ್ ಆಫ್ ಇಂಡಿಯಾಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ಪುಸ್ತಕಗಳನ್ನು ಪ್ರಕಟಿಸಿದರು; ಅವರೇನೂ ಭಾರತದ ವೈಭವೀಕರಣ ಮಾಡಲಿಲ್ಲ. ರಾಷ್ಟ್ರೋತ್ಥಾನ ಸಾಹಿತ್ಯವೂ ಅದೇ ನಿಟ್ಟಿನಲ್ಲಿ ಸತ್ಯಾನ್ವೇಷಣದ ಕೆಲಸ ಮಾಡುತ್ತಿದೆ. ಅದರ ಪ್ರಸ್ತುತ ೧೨೫ನೇ ಪುಸ್ತಕ ಮೌಲ್ಯ ಮತ್ತು ನಿಜವಾದ ಸತ್ಯಾನ್ವೇಷಣದ ದೃಷ್ಟಿಯಿಂದ ಶ್ರೇಷ್ಠ ಪುಸ್ತಕ ಎಂದರು. ದೇಶದ ವಿವಿಧ ರಾಜರ ಕಾಲದಲ್ಲಿ ಎಂತಹ ಪರಿಕಲ್ಪನೆಗಳಿದ್ದವು; ಆಗ ಎಂತಹ ಸಾಹಿತ್ಯ ಕೃತಿಗಳು ಬಂದವೆಂದು ಸಮಗ್ರ ಸಂಶೋಧನೆ ನಡೆಸಿ ಗ್ರಂಥರಚಿಸುವಂತೆ ಡಾ|| ಗಣೇಶರಿಗೆ ಭೈರಪ್ಪ ಸಲಹೆ ನೀಡಿದರು. ಒಂದು ಉದಾಹರಣೆ ನೀಡುತ್ತಾ, ಶಬ್ದಲಾಲಿತ್ಯ ಮತ್ತು ಅದರಲ್ಲಿ ಅಡಗಿದ ಸಂಗೀತಕ್ಕಾಗಿ ಜಯದೇವನಗೀತಗೋವಿಂದಶ್ರೇಷ್ಠ ಕೃತಿ. ಆದರೆ ಆತ ಅದನ್ನು ಬರೆಯುವಾಗ ಒರಿಸ್ಸಾದ ಸುತ್ತ ಮುಸ್ಲಿಮರು ದೇವಾಲಯಗಳನ್ನು ಒಡೆಯುವುದರಲ್ಲಿ ಮಗ್ನರಾಗಿದ್ದರು. ಕವಿಯಾಗಿ ವೀರರಸದ ಕೃತಿ ರಚಿಸದೇ ಶೃಂಗಾರರಸದ ಕಾವ್ಯ ರಚಿಸಿದದ್ದೇಕೆ ಎಂದು ಪ್ರಶ್ನಿಸಿದ ಅವರು, ಬಗೆಯ ಸಂಶೋಧನೆ ನಡೆಸಿ ಕೃತಿ ರಚಿಸುವಂತೆ ಗಣೇಶರಿಗೆ ಸಲಹೆ ನೀಡಿದರು.
 ರಾಷ್ಟ್ರೋತ್ಥಾನ ಸಾಹಿತ್ಯದ 125ನೇ ಪ್ರಕಟಣೆಯಾದ 'ಭಾರತೀಯ ಕ್ಷಾತ್ರಪರಂಪರೆಪುಸ್ತಕದ ಲೋಕಾರ್ಪಣ ಸಮಾರಂಭವನ್ನು ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಲೋಕಾರ್ಪಣೆಗೊಳಿಸಿರು. ಲೇಖಕ ಶತಾವಧಾನಿ ಡಾ| ರಾ. ಗಣೇಶ್, ನಿವೃತ್ತ .ಸಿ.ಪಿ., ಅಂಕಣಕಾರ ಬಿ.ಬಿ. ಅಶೋಕ್ಕುಮಾರ್, ಸಾಫ್ಟ್ ವೇರ್ ತಂತ್ರಜ್ಞ, ಲೇಖಕ ಎಚ್.. ವಾಸುಕಿ, ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು. 
   ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ನಿವೃತ್ತ .ಸಿ.ಪಿ., ಅಂಕಣಕಾರ ಬಿ.ಬಿ. ಅಶೋಕ್ಕುಮಾರ್ ಅವರು, ಗ್ರಂಥವನ್ನು  ದೇಶದ ಗಡಿಕಾಯುವ ಸೇನೆಗೆ ಅರ್ಪಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ೧೯೭೨ರಲ್ಲಿ ಪದವಿ ಶಿಕ್ಷಣ ಪಡೆಯುವಾಗ ಡಾ|| ಭೈರಪ್ಪನವರವಂಶವೃಕ್ಷಪಠ್ಯವಾಗಿದ್ದು ಅದರ ಮುಖ್ಯಪಾತ್ರ ಶ್ರೀನಿವಾಸ ಶ್ರೋತ್ರಿ ಅವರಿಂದ ತಾವು ತುಂಬ ಪ್ರಭಾವಿತರಾಗಿರುವುದಾಗಿ ಹೇಳಿದರು; ಸ್ವಾಮಿ ವಿವೇಕಾನಂದ ಮತ್ತು ಭಗವದ್ಗೀತೆಗಳು ತ್ಮ ಇನ್ನೆರಡು ಸ್ಫೂರ್ತಿಯ ಮೂಲಗಳು ಎಂದು ತಿಳಿಸಿದರು.
    ತಮ್ಮದು ಕೊಡಗು ಮೂಲವಾದರೂ ಬಾಲ್ಯ, ವಿದ್ಯಾಭ್ಯಾಸಗಳು ಹಾಸನದಲ್ಲಾದವು. ಕೊಡಗಿನವರ ರೀತಿಯಲ್ಲಿಯೇ ಸೇನೆಗೆ ಸೇರುವುದು ತನ್ನ ಕನಸಾಗಿತ್ತು. ಪದವಿ ಓದುವಾಗ ಓರ್ವ ಸ್ನೇಹಿತ ಲಾಕಪ್ ಡೆತ್ಗೆ ಗುರಿಯಾದ ಕಾರಣ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ಊರುಬಿಡಬೇಕಾಯಿತು. ಪದವಿ ಅಪೂರ್ಣವಾಗ ಕಾರಣ ಸೇನೆಗೆ ಸೇರಲು ಸಾದ್ಯವಾಗಲಿಲ್ಲ. ಮಂದೆ ಕಾನೂನು ಶಿಕ್ಷಣ ಪಡೆಯುವಾಗ ಪೊಲೀಸ್  ಕೆಲಸದ ಬಗ್ಗೆ ತಿಳಿದು ಬಗ್ಗೆ ಆಕರ್ಷಿತನಾಗಿ  ಪೊಲೀಸ್ ಸೇವೆಗೆ ಸೇರಿದೆ. ಜೀವನದಲ್ಲಿ ದೊರೆತ ಆದರ್ಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿ ಯೋಗ್ಯ ಪೊಲೀಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದ ಅವರು ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಸೇರಿದಂತೆ ವಿವಿಧ ಅನುಭವಗಳನ್ನು ಹಂಚಿಕೊಂಡರು; ಮಹಿಳೆಯರಿಗೆ ಗೌರವ ನೀಡಿ ನೆರವಾಗುವುದನ್ನು ತಮ್ಮ ಉದ್ಯೋಗದ ಪ್ರಮುಖ ಭಾಗವಾಗಿ ಮಾಡಿಕೊಂಡದ್ದನ್ನು ತಿಳಿಸಿದರು.
ಕೃತಿಕಾರ ಡಾ|| ಆರ್. ಗಣೇಶ್ ಅವರು ಮಾತನಾಡಿ, ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ನೀಡಿದ ಉಪನ್ಯಾಸಗಳೇ ಪುಸ್ತಕರೂಪದಲ್ಲಿ ಬರಲು ಸಾಧ್ಯವಾಯಿತು. ಸೀತಾರಾಂ ಗೋಯಲ್ ಮತ್ತು ರಾಂಸ್ವರೂಪ್ ಅವರಿಗೆಬೌದ್ಧಿಕ ಕ್ಷತ್ರೀಯಎನ್ನುವ ಪದ ಬಳಕೆಗೆ ಬಂತು. ಪದಕ್ಕೆ ಕರ್ನಾಟಕದ ಉದಾಹರಣೆ ಡಾ|| ಭೈರಪ್ಪನವರು ಎಂದರು. ದೇಶದ ೮ನೇ ಶತಮಾನದ ನಂತರದ ಇತಿಹಾಸವನ್ನು ಓದಿದರೆ ನೋವಾಗುತ್ತದೆ. ಆದರೆ ಣೋವಾಗುತ್ತದೆಂದು ಹಾಗೇ ಬಿಡಬಾರದೆಂದು ಕೃತಿರಚನೆಗೆ ಮುಂದಾದೆ. ಧರ್ಮ, ಸಾಹಿತ್ಯ, ಸಂಗೀತ, ನೃತ್ಯ ಎಲ್ಲ ಕ್ಷೇತ್ರಗಳಲ್ಲೂ ಕ್ಷಾತ್ರ ಇರಲು ಸಾಧ್ಯ ಎಂದು ನೃತ್ಯಕ್ಕೆ ಪದ್ಮಾ ಸುಬ್ರಹ್ಮಣ್ಯಮ್ ಅವರನ್ನು ಉದಾಹರಿಸಿದರು.
   ಪ್ರಾಸಂಗಿಕವಾಗಿ ಇಂದಿನ ಪ್ರಶಸ್ತಿ ವಾಪಸಾತಿಯನ್ನು ಪ್ರಸ್ತಾಪಿಸಿ, ಅಸಹಿಷ್ಣುತೆ ಎಲ್ಲಿದೆ? ಅವರ ಅಂತರಂಗದಲ್ಲೇ ಇರುವಂಥದ್ದು. ಪ್ರಶಸ್ತಿ ಪಡೆಯುವುದು, ಮರಳಿಸುವುದು, ಮತ್ತೆ ಪಡೆಯುವುದು - ಇದೇನು ಸರ್ಕ್ಯುಲೇಟಿಂಗ್ ಲೈಬ್ರರಿ ಪುಸ್ತಕವೇ ಎಂದು ಪಶ್ನಿಸಿದ ಡಾ|| ಗಣೇಶ್, ದುರ್ಬುದ್ಧಿಜೀವಿಗಳ ಕೋಲಾಹಲ ಪಾಪಸುಕಳ್ಳಿಯಂತಿದೆ ಎಂದರು. ನಮ್ಮಲ್ಲಿ ಒಳ್ಳೆಯ ಇತಿಹಾಸಪ್ರಜ್ಞೆ ಬರಬೇಕು ಎಂದ ಅವರು, ಭೋಜರಾಜನನ್ನು ಇತಿಹಾಸ ಅಲಕ್ಷಿಸಿರುವ ಬಗ್ಗೆ, ಉತ್ತರ ಭಾರತದವರಿಗೆ ಕೃಷ್ಣದೇವಾಲಯ ಅಷ್ಟಾಗಿ ಗೊತ್ತಿಲ್ಲದಿರುವ ಕುರಿತು, ಹೇಮು ಖಳನಾಯಕನಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಾಫ್ಟ್ ವೇರ್ ತಂತ್ರಜ್ಞ, ಲೇಖಕ ಎಚ್.. ವಾಸುಕಿ ಅವರುಭಾರತೀಯ ಕ್ಷಾತ್ರಪರಂಪರೆಯನ್ನು ಪರಿಚಯಿಸಿ ಕೃತಿಯ ವಿಶೇಷಗಳನ್ನು, ಅದರಲ್ಲಿ ವ್ಯಕ್ತವಾದ ಲೇಖಕರ ವಿದ್ವತ್ತನ್ನು ವಿವರಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಪರಿಷತ್ ೫೦ನೇ ವರ್ಷದ ಸಂಭ್ರಮದಲ್ಲಿರುವಾಗ ರಾಷ್ಟ್ರೋತ್ಥಾನ ಸಾಹಿತ್ಯದ ೧೨೫ನೇ ಕೃತಿಯಾಗಿ ಪ್ರಸ್ತುತ ಕೃತಿ ಪ್ರಕಟವಾಗುತ್ತಿರುವುದು ಹೆಮ್ಮೆ ತಂದಿದೆ ಎಂದರು. ದೇಶದ ರಕ್ಷಣೆಯಲ್ಲಿ ವೀರಯೋಧರ ಹಾಗೂ ಮಹಾನ್ ದಂಡನಾಯಕರ ಕೊಡುಗೆಯನ್ನು ಸ್ಮರಿಸಿದರು. ಪ್ರೋ. ಎಸ್. ರಾಮಸ್ವಾಮಿ ಅವರು ಇಂಗ್ಲಿಷ್ನಲ್ಲಿ ಬರೆದ ವಿಮರ್ಶಾಕೃತಿಯನ್ನು ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ವಂದಿಸಿದರು. ರವಿಚಕ್ರವರ್ತಿ ಅವರು ದೇಶಭಕ್ತಿ ಗೀತೆಯನ್ನು ಹಾಡಿದ್ದು, ವಿಘ್ನೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.