ತ್ರಿವರ್ಣಧ್ವಜವೇ ನಮ್ಮ ಮತಧರ್ಮ
- ರಾಜ್ಯವರ್ಧನಸಿಂಗ್ ರಾಠೋಡ್
ಬೆಂಗಳೂರಿನ ಸದಾಶಿವ ನಗರದಲ್ಲಿ ಫೆಬ್ರುವರಿ ೧೩ ರಂದು ರಾಷ್ಟ್ರೋತ್ಥಾನ ಪರಿಷತ್ನ ಪತಂಜಲಿ ಯೋಗಮಂದಿರದ ಲೋಕಾರ್ಪಣ ಸಮಾರಂಭದಲ್ಲಿ ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ ಅವರು ಭಾಷಣ ಮಾಡುತ್ತಿದ್ದರು. ವಿದೇಶಗಳಿಗೆ ವಿವಿಧ ಕ್ರೀಡಾಕೂಟಗಳಿಗೆ ಹೋಗುವಾಗ ನಾನು ಯೋಗದ ಬಗೆಗಿನ ಪಸ್ತಕ ಮತ್ತು ಭಗವದ್ಗೀತೆಗಳನ್ನು ಯಾವಾಗಲೂ ತನ್ನ ಜೊತೆಗೆ ಒಯ್ಯುತ್ತಿದ್ದೆ. ಭಗವದ್ಗೀತೆಯನ್ನು ಕುರಿತ ಗ್ರಂಥ ಸುಮಾರು ಅರ್ಧ ಕೆ.ಜಿ. ತೂಕವಿದ್ದು, ಅದನ್ನು ಒಯ್ಯಬೇಕೇ ಬೇಡವೇ ಎಂಬ ಪ್ರಶ್ನೆ ಯಾವಾಗಲೂ ಎದುರಾಗುತ್ತಿತ್ತು. ಆದರೆ ಅದರಲ್ಲಿ ನನ್ನ ಓದು ’ಕರ್ಮವನ್ನು ಮಾಡು; ಫಲದ ಚಿಂತೆ ಬೇಡ’ ಅದರಿಂದ ಮುಂದೆ ಹೋಗಲೇ ಇಲ್ಲ. ಆದ್ದರಿಂದ ಪರ್ತಿಗೊಳಿಸುವ ಸಲುವಾಗಿ ಒಯ್ಯುವುದು ಅನಿವಾರ್ಯವಾಗುತ್ತಿತ್ತು ಎಂದವರು ಹೇಳಿದರು.
ನಮಗೆ ನಮ್ಮ ಶರೀರ ಬಹಳ ಮುಖ್ಯ. ಜೀವನದಲ್ಲಿ ನಮಗೆ ಒಂದು ಶರೀರ ಮಾತ್ರ ಸಿಗುತ್ತದೆ; ಅದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ದೇಹವನ್ನು ಕೊಟ್ಟ ದೇವರು ಅದರ ಮೂಲಕ ದೇಶವನ್ನು ಕಟ್ಟಬೇಕೆಂಬ ಸೂಚನೆಯನ್ನು ಕೂಡ ನೀಡಿದ್ದಾನೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದ ಸಚಿವ ರಾಠೋಡ್, ಸಾಮರ್ಥ್ಯ ಎಲ್ಲರಲ್ಲೂ ಇರುತ್ತದೆ. ಅವಕಾಶ ಸಿಕ್ಕಿದವರು ಸಾಧನೆ ಮಾಡುತ್ತಾರೆ. ಅದಕ್ಕೆ ತಾನು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದುದೇ ಉದಾಹರಣೆ; ಎಲ್ಲ ಯುವಜನರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು. ಕರ್ನಾಟಕ ಅಶ್ವಿನಿ ನಾಚಪ್ಪ, ಅಶ್ವಿನಿ ಪೆನ್ನಪ್ಪ, ಚಂದ್ರಶೇಖರ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಪ್ರಕಾಶ್ ಪಡುಕೋಣೆ ಅವರಂತಹ ಹಲವು ಶ್ರೇಷ್ಠ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ ಎಂದವರು ಶ್ಲಾಘಿಸಿದರು.
ಯೋಗದಿಂದ ಶರೀರವಲ್ಲದೆ ಮನಸ್ಸಿನ ಶಕ್ತಿಯೂ ಬರುತ್ತದೆ. ಸಿಯಾಚಿನ್ನಲ್ಲಾದ ಹಿಮಪಾತದ ಕೆಳಗೆ ಸಿಲುಕಿ ೧೫ ನಿಮಿಷ ಕೂಡ ಬದುಕಲು ಅಸಾಧ್ಯ. ಹೀಗಿರುವಾಗ ಆರು ದಿನಗಳ ಕಾಲ ಬದುಕಿದ ಹನುಮಂತಪ್ಪ ಅವರ ಶಕ್ತಿ ಎಷ್ಟೆಂಬುದನ್ನು ತಿಳಿಯಬಹುದು ಎಂದು ರಾಠೋಡ್ ಕೊಂಡಾಡಿದರು. ನಾವು ಮೊದಲಿಗೆ ನಮ್ಮ ದೇಹದ ಸೈನಿಕ(ರಕ್ಷಕ)ರಾಗಬೇಕು; ಮುಂದೆ ಸಮಾಜ ಮತ್ತು ದೇಶಗಳ ರಕ್ಷಕರೂ ಆಗಬೇಕು ಎಂದ ಸಚಿವ ರಾಠೋಡ್, ೫೦ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ರಾಷ್ಟ್ರೋತ್ಥಾನ ಪರಿಷತ್ತನ್ನು ಅಭಿನಂದಿಸಿದರು.
ಯೋಗ ಮಂದಿರದ ಲೋಕಾರ್ಪಣವನ್ನು ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರಾಷ್ಟ್ರೋತ್ಥಾನ ಪರಿಷತ್ ಐದು ದಶಕಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಸೇವೆ ಸಲ್ಲಿಸಿ ಸಮಾಜದ ಎಲ್ಲ ವರ್ಗಗಳ ಮನ್ನಣೆಗೆ ಪಾತ್ರವಾಗಿದೆ ಎಂದರು. ರಾಷ್ಟ್ರೀಯತೆಯೇ ನಮ್ಮ ಧರ್ಮ; ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ. ಆದರೂ ಕೆಲವರು ಹಿಂದುತ್ವ. ಕೇಸರೀಕರಣವೆಂದು ಟೀಕಿಸುತ್ತಾರೆ. ಇದರಿಂದ ನಮ್ಮ ವಿಚಾರಗಳನ್ನು ತಿಳಿಸಲು ಅನುಕೂಲವೇ ಆಗುತ್ತದೆಂದು ತಿಳಿಯಬೇಕಾಗಿದೆ ಎಂದರು. ಯೋಗ ಇಂದು ಇಡೀ ಜಗತ್ತಿನಲ್ಲೇ ಪಸರಿಸುತ್ತಿದೆ. ವಿಶ್ವಸಂಸ್ಥೆ ಮನ್ನಣೆ ನೀಡಿ, ಜೂನ್ ೨೧ ರಂದು ಜಾಗತಿಕ ಮಟ್ಟದಲ್ಲಿ ಯೋಗದಿನವನ್ನು ನಡೆಸುವಂತಾದದ್ದು ಪ್ರಧಾನಿಯವರ ಸಾಧನೆ. ಪಾಕಿಸ್ತಾನ, ಸೌದಿ ಅರೇಬಿಯ, ಮಲೇಷ್ಯಾ ಸಹಿತ ಜಗತ್ತಿನ ೧೯೨ ದೇಶಗಳಲ್ಲಿ ಯೋಗದಿನವನ್ನು ಆಚರಿಸಲಾಯಿತು ಎಂದ ಯಡಿಯೂರಪ್ಪ, ಆರೆಸ್ಸೆಸ್ ತನ್ನ ಶಾಖೆಗಳಲ್ಲಿ ಯೋಗ ಮತ್ತು ಸೂರ್ಯ ನಮಸ್ಕಾರಗಳನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿದೆ. ಯೋಗಕೇಂದ್ರದಿಂದ ಸದಾಶಿವ ನಗರ ಸೇರಿದಂತೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು, ಜೀವನ ಶೈಲಿ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಇಂದಿನ ಸಮಸ್ಯೆಯಾಗಿದ್ದು ಆ ಬಗ್ಗೆ ಗಮನಹರಿಸಬೇಕಾಗಿದೆ ಎಂದರು. ರಾತ್ರಿ ೨-೩ ಗಂಟೆಗೆ ಮಲಗಿ ಬೆಳಗ್ಗೆ ೧೦ ಗಂಟೆಗೆ ಏಳುವುದು, ಶಾರೀರಿಕ ವ್ಯಾಯಾಮ ಇಲ್ಲದಿರುವುದು ಹಾಗೂ ನಿಯಮಿತ ಆಹಾರ ಸೇವನೆ ಇಲ್ಲದ ಕಾರಣ ಇಂದು ಯುವಕರಲ್ಲೇ ಮಧುಮೇಹ, ರಕ್ತದ ಅಧಿಕ ಒತ್ತಡ, ಹೃದ್ರೋಗದಂತಹ ರೋಗಗಳು ಕಾಣಿಸುತ್ತಿವೆ. ಅದಕ್ಕಾಗಿ ಶಾಲಾ ಪಠ್ಯಕ್ರಮದಲ್ಲೇ ಜೀವನಶೈಲಿ ಬಗ್ಗೆ ಮಾಹಿತಿ ನೀಡಬೇಕು; ಪಾಠವನ್ನು ಸೇರಿಸಬೇಕು. ಯೋಗ, ಪ್ರಾಣಾಯಾಮ, ಧ್ಯಾನಗಳ ಬಗ್ಗೆ ಕೂಡ ಪಠ್ಯಕ್ರಮ(ಸಿಲಬಸ್)ದಲ್ಲಿ ಪಾಠವನ್ನು ಅಳವಡಿಸಬೇಕು. ಕೇಂದ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಅನಂತ ಕುಮಾರ್ ಒತ್ತಾಯಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಆರೆಸ್ಸೆಸ್ನ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಅವರು ಇಂದಿನ ಒತ್ತಡ ಜೀವನಕ್ಕೆ ಯೋಗದಿಂದ ಪರಿಹಾರ ಸಾಧ್ಯ ಎಂದರು. ಶರೀರ ಮನಸ್ಸು ಮತ್ತು ಬುದ್ಧಿಗಳ ಸಮ್ಯಕ್ ವಿಕಾಸ ಆಗಬೇಕು ಎಂದು ನಮ್ಮ ಪರ್ವಿಕರು ಬಯಸಿದರು. ಅದಕ್ಕಾಗಿ ಮೊದಲಿಗೆ ಶರೀರವು ರೋಗಮುಕ್ತವಾಗಬೇಕು. ಪತಂಜಲಿ ಋಷಿಗಳು ಅಷ್ಟಾಂಗಯೋಗದ ಮೂಲಕ ತ್ರ್ರಿಕರಣ ಶುದ್ಧಿಗೆ ಅವಕಾಶ ಕಲ್ಪಿಸಿದರು. ಭಾರತವು ವಿಚಾರ ಮತ್ತು ಜ್ಞಾನಗಳ ಮೂಲಕ ಜಗತ್ತಿನಲ್ಲಿ ತನ್ನ ಪ್ರಭಾವವನ್ನು ಪಸರಿಸಿತೇ ಹೊರತು ಯಾವುದೇ ಖಡ್ಗದಿಂದಲ್ಲ. ದೇಶದ ಮೇಲೆ ಹಲವು ಆಕ್ರಮಣಗಳು ನಡೆದಾಗ ನಮ್ಮ ಸಂಸ್ಕೃತಿ ನಾಶವಾಗದಿದ್ದರೂ ಯೋಗ ಮುಂತಾದವುಗಳಿಗೆ ಹಿನ್ನಡೆ ಆಯಿತು. ಅದನ್ನೀಗ ಸರಿಪಡಿಸಬೇಕಾಗಿದೆ ಎಂದ ಮಂಗೇಶ್ ಭೇಂಡೆ ಅವರು, ಶಾಖೆಯಲ್ಲಿ ಸೂರ್ಯನಮಸ್ಕಾರ ಮಾಡಲೇಬೇಕೆಂದು ಶ್ರೀ ಗುರೂಜಿ ಅವರ ಸೂಚನೆಯಿತ್ತು. ಕರ್ನಾಟಕದಲ್ಲಿ ದಿ| ಅಜಿತ್ಕುಮಾರ್ ಅವರು ಪರಿಶ್ರಮಪಟ್ಟು ಯೋಗವನ್ನು ಬೆಳೆಸಿದರು. ರಾಷ್ಟ್ರೋತ್ಥಾನ ಪರಿಷತ್ತಿನಲ್ಲೂ ಅದನ್ನು ಬೆಳೆಸಿದರು ಎಂದು ತಿಳಿಸಿದರು. ಒತ್ತಡದ ಜೀವನ ಇಂದು ಮಕ್ಕಳು, ಯುವಕರನ್ನೂ ಕೂಡ ಬಾದಿಸುತ್ತಿದೆ; ಆತ್ಮಹತ್ಯೆಗೆ ಮುಂದಾಗುತ್ತಾರೆ. ಯೋಗದಿಂದ ಒತ್ತಡದ ನಿವಾರಣೆ ಸಾಧ್ಯ. ಯೋಗವು ಒಂದು ಆಂದೋಲನ ಆಗಬೇಕು. ಇಂದು ಜಗತ್ತು ಈ ಕಡೆಗೆ ಗಮನ ಹರಿಸುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಜಾಸ್ತಿ ಇದೆ, ಮಕ್ಕಳಿಗೆ ಯೋಗ ಕಲಿಸಬೇಕು ಎಂದು ಭೇಂಡೆ ಅವರು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಕೆನರಾಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹರಿದೀಶ್ ಕುಮಾರ್ ಬಿ. ಅವರು ಸಂಸ್ಥೆಯನ್ನು ಶ್ಲಾಘಿಸಿ ಹೊಸ ಯೋಗ ಮಂದಿರಕ್ಕೆ ಶುಭಕೋರಿದರು. ಸ್ಥಳೀಯ ಶಾಸಕ ಡಾ|| ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯೆ ಶ್ರೀಮತಿ ಸುಮಂಗಲ ಬಿ. ಹಾಗೂ ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತಿಸಿ ಪ್ರಸ್ತಾವನೆಗೈದ ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಅವರು, ಸಂಸ್ಥೆ ೫೦ ವರ್ಷಗಳಲ್ಲಿ ನಡೆದು ಬಂದ ದಾರಿ ಹಾಗೂ ಸಾಹಿತ್ಯ, ಶಿಕ್ಷಣ ಆರೊಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ವಿವರಿಸಿದರು. ರಾಷ್ಟ್ರೋತ್ಥಾನ ಈಗಾಗಲೆ ಅರು ಯೋಗ ಕೇಂದ್ರಗಳನ್ನು ನಡೆಸುತ್ತಿದ್ದು, ಅಲ್ಲಿ ೬೮ ಬ್ಯಾಚ್ಗಳಲ್ಲಿ ಸುಮಾರು ೨,೫೦೦ ಜನ ತರಬೇತಿ ಪಡೆಯುತ್ತಿದ್ದಾರೆ. ಸುಮಾರು ಒಂದು ಲಕ್ಷ ಮಂದಿಗೆ ಸಂಸ್ಥೆ ಯೋಗ ತರಬೇತಿ ನೀಡಿದೆ. ಇದು ಏಳನೇ ಯೋಗ ತರಬೇತಿ ಕೇಂದ್ರ ಮತ್ತು ಮೂರನೇ ಜಿಮ್; ಇಲ್ಲಿ ತರಬೇತಿ ಪಡೆಯುವ ಬಗ್ಗೆ ಜನ ಈಗಾಗಲೇ ಆಸಕ್ತಿ ತೋರಿಸಿದ್ದಾರೆ ಎಂದರು. ಕಾರ್ಯಕ್ರಮಕ್ಕೆ ಮುನ್ನ ಸಂಧ್ಯಾ ಶ್ರೀನಾಥ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಾಣಿ ವೆಂಕಟೇಶ್ ಅವರು ಪ್ರಾರ್ಥಿಸಿದ್ದು, ಜಿ.ಆರ್. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೋತ್ಥಾನದ ಆಡಳಿತ ಮಂಡಳಿ ಸದಸ್ಯ ಕೆ.ಎಸ್. ನಾರಾಯಣ ಅವರು ವಂದಿಸಿದರು.
No comments:
Post a Comment