Tuesday, 25 September 2018

ಆದರ್ಶ ರಾಜಕೀಯ ಮುತ್ಸದ್ದಿ - ಅಟಲ್ ಬಿಹಾರಿ ವಾಜಪೇಯಿ

ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಅಟಲ್ಜೀ, ಆಗಷ್ಟೇ ಲೋಕಸಭೆಯ ಮೆಟ್ಟಿಲು ಹತ್ತಿದ್ದ ೩೨ರ ತರುಣ. ಇದಕ್ಕೂ ಹೆಚ್ಚಾಗಿ ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಗ ಪ್ರತಿಪಕ್ಷಗಳ ಸಾಲಿನಲ್ಲಿ ಆಚಾರ್ಯ ಜೆ.ಬಿ. ಕೃಪಲಾನಿ, ಪ್ರೊ|| ಹೀರೇನ್ ಮುಖರ್ಜಿ, ಮಿನೂ ಮಸಾನಿಯಂತಹ ಘಟಾನುಘಟಿ ನಾಯಕರಿದ್ದರು ಎನ್ನುವುದನ್ನೂ ಮರೆಯುವಂತಿಲ್ಲ. ಹೀಗೆ ಅಟಲ್ಜೀ ಮೊದಲ ಬಾರಿಗೇ ಭಾರತದ ರಾಜಕೀಯದಲ್ಲಿ ಅಚಲವಾದ ಮೈಲುಗಲ್ಲನ್ನು ಸ್ಥಾಪಿಸಿಬಿಟ್ಟಿದ್ದರು.

ದಿಗ್ಗಜರ ಪ್ರಶಂಸೆ
ಭಾರತೀಯ ರಾಜಕಾರಣದ ಅಪರೂಪದ ವ್ಯಕ್ತಿತ್ವ ಅಟಲ್ ಬಿಹಾರಿ ವಾಜಪೇಯಿ ಅವರದು. ಅರವತ್ತರ ದಶಕದಲ್ಲಿ ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಗಿದ್ದ ಡಾಗ್ ಹಾಮರ್ ಷೋಲ್ಡ್ರಿಗೆ ವಾಷಿಂಗ್ಟನ್ ಭಾರತೀಯ ದೂತಾವಾಸ ಕಚೇರಿಯಲ್ಲಿ ವಾಜಪೇಯಿಯವರನ್ನು ಪ್ರಧಾನಿ ನೆಹರು ಮುಂದೆ ಭಾರತದ ಪ್ರಧಾನಿಯಾಗಬಲ್ಲ ಯುವಪ್ರತಿಭೆ ಎಂದು ಪರಿಚಯಿಸಿದ್ದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ವಾಜಪೇಯಿಯವರನ್ನು ಗುರೂಜಿ ಎಂದೇ ಸಂಬೋಧಿಸುತ್ತಿದ್ದರು. ಪಿ.ವಿ. ನರಸಿಂಹರಾಯರು ೧೯೯೪ರಲ್ಲಿ ಅವರನ್ನು ಉತ್ತಮ ಸಂಸದೀಯ ಪಟು ಎಂದು ಪುರಸ್ಕರಿಸುತ್ತ , ಭಾರತೀಯ ಸಂಸದೀಯ ಚರಿತ್ರೆಗೆ ವಿಶೇಷ  ಮೆರುಗು ನೀಡಿದ ನಾಯಕ ವಾಜಪೇಯಿ. ನನ್ನ ರಾಜಕೀಯ ಗುರು ಎಂದಿದ್ದರು. ಮನಮೋಹನ್ಸಿಂಗ್ ಅವರು ವಾಜಪೇಯಿ, ಭಾರತದ ಸಮಕಾಲೀನ ರಾಜಕಾರಣದ ಭೀಷ್ಮ ಪಿತಾಮಹ ಎಂದು ವರ್ಣಿಸಿದ್ದರು. ಹೀಗೆ ಪ್ರತಿಪಕ್ಷದವರೂ ಸೇರಿದಂತೆ ಎಲ್ಲರ ಗೌರವ, ಮೆಚ್ಚುಗೆಗೆ ಪಾತ್ರರಾದ ಅಪರೂಪದ ದುರ್ಲಭ ರಾಜಕಾರಣಿ ಅಟಲ್ಜೀ. ನೆಹರು ನಂತರ ಭಾರತದ ರಾಜಕಾರಣದಲ್ಲಿ ಬಹುಮುಖ ಪ್ರತಿಭೆಯ ಮೇಧಾವಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು.
ಅಟಲ್ಜೀಯವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಓರ್ವ ಶಾಲಾ ಉಪಾಧ್ಯಾಯನ ಮಗನಾಗಿ ತನ್ನ ಪ್ರತಿಭೆ, ಪರಿಶ್ರಮ ಮತ್ತು ಕೌಶಲದಿಂದಲೇ ರಾಷ್ಟ್ರರಾಜಕಾರಣದಲ್ಲಿ ಬೆಳೆದ ಪರಿ ಒಂದು ಅಚ್ಚರಿಯೇ ಸರಿ.

ಬೆಳೆಯ ಸಿರಿ ಮೊಳಕೆಯಲ್ಲಿ
ಅಟಲ್ಜೀ ಹುಟ್ಟಿದ್ದು ೧೯೨೪ ಡಿಸೆಂಬರ್ ೨೫ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಹಾಗೂ ತಾಯಿ ಸುಮಾದೇವಿ.
ನುಡಿದರೆ ಮತ್ತಿನ ಹಾರದಂತಿರಬೇಕು, ಲಿಂಗ ಮೆಚ್ಚಿ  ಅಹುದಹುದೆನಬೇಕು ಎಂಬ ವಚನದಂತೆ ಅಟಲ್ಜೀ ಅವರ ಮಾತುಗಳಿರುತ್ತಿದ್ದವು. ತಮ್ಮ ಭಾಷಣದ ಗತ್ತು, ಗೈರತ್ತು, ಕಲೆಗಾರಿಕೆ, ಮಾತಿನ ಓಘಕ್ಕೆ ಹುಯ್ದಾಡುವ ಶರೀರ, ಕುಣಿಯುವ ಕೈ, ಚಿಟಿಕೆ ಹಾಕುವ ಬೆರಳುಗಳು ಮತ್ತು ಮುತ್ತು ಉದುರಿದಂತಿರುವ ಮಾತುಗಳಿಂದ ಕಾಲೇಜುದಿನಗಳಲ್ಲಿಯೇ ಪ್ರಾಧ್ಯಾಪಕರಿಗೂ, ಇತರ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರು.
ಒಮ್ಮೆ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯಸ್ತರದ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಲು ಹೊರಟಾಗ, ರೈಲು ತಡವಾಗಿದ್ದರಿಂದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಾನವನ್ನು ತಲಪುವ ವೇಳೆಗೆ ಚರ್ಚಾಸ್ಪರ್ಧೆ ಮುಗಿದೇ ಹೋಗಿತ್ತು; ವಿಜೇತರನ್ನು ಘೋಷಿಸುವುದಷ್ಟೇ ಬಾಕಿ. ಕೊಳೆಬಟ್ಟೆಗಳಲ್ಲಿಯೇ ಏದುಸಿರುಬಿಡುತ್ತಾ ಅಲ್ಲಿಗೆ ಬಂದ ತರುಣ ಅಟಲ್ಜೀ ನೇರವಾಗಿ ವೇದಿಕೆಯನ್ನೇರಿ ತಡವಾಗಿ ಬಂದ ಪರಿಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿದರು. ಅವರ ಸೌಜನ್ಯ, ವಿನಯವಂತಿಕೆ ಮತ್ತು ವಿಷಯವನ್ನು ಎಲ್ಲರಿಗೂ ಮುಟ್ಟಿಸಬೇಕೆಂಬ ಕಳಕಳಿ ಗುರುತಿಸಿ, ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಅಂತಹ ಪರಿಸ್ಥಿತಿಯಲ್ಲಿಯೂ ಅವರು ಸಂಯಮದಿಂದ ವಿಷಯಮಂಡನೆ ಮಾಡಿದರು. ಅವರ ಮಾತಿನಲ್ಲಿದ್ದ ಬಿರುಸು, ಸತ್ತ್ವ, ಮೋಹಕತೆ ಮತ್ತು ಸತ್ಯದ ಪ್ರತಿಪಾದನೆಯಿಂದ ಸಭಿಕರು ಮಂತ್ರಮುಗ್ಧರಾದರು. ತೀರ್ಪುಗಾರರೂ ಆಶ್ಚರ್ಯಚಕಿತರಾದರು. ಪ್ರಥಮ ಬಹುಮಾನ ಅವರಿಗೇ ಲಭಿಸಿತು. ತೀರ್ಪುಗಾರರ ಮಂಡಲಿಯ ಸದಸ್ಯರಲ್ಲಿ ಹಿಂದಿ ಸಾಹಿತ್ಯದ ಪ್ರಸಿದ್ಧ ಕವಿ ಡಾ. ಹರಿವಂಶರಾಯ್ ಬಚ್ಚನ್ (ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ತಂದೆ) ಒಬ್ಬರಾಗಿದ್ದರು.
ತಾರುಣ್ಯದಲ್ಲಿಯೇ ಮಾತಿನ ಕಲೆಯನ್ನು ಬೆಳೆಸಿಕೊಂಡು ನಿರಂತರವಾಗಿ ಪೋಷಿಸಿ ಸಮಾಜೋಪಯೋಗಿಯನ್ನಾಗಿಸಿಕೊಂಡವರು ಅಟಲ್ಜೀ. ಮುಂದೆಯೂ ಅವರ ಮಾತುಗಳನ್ನು ಕೇಳಲು ಜನ ಹಾತೊರೆಯುತ್ತಿದ್ದರು (ವಿದೇಶಗಳಲ್ಲಿಯೂ). ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಮೊನಚಾದ ನುಡಿ ಅವರ ಮಾತುಗಾರಿಕೆಯ ಜೀವಾಳವಾಗಿತ್ತು. ಅಂತರಾಳದಿಂದ ಹೊರಹೊಮ್ಮುವ ಅವರ ಪ್ರಾಮಾಣಿಕ ನುಡಿಮುತ್ತುಗಳಿಗೆ ಜನರು ಅದ್ಭುತ ಸಂಗೀತಗಾರನೊಬ್ಬನ ಅಪೂರ್ವ ರಾಗಕ್ಕೆ ತಲೆದೂಗುವಂತೆ, ಯಕ್ಷಿಣಿಗಾರನ ಮೋಡಿಗೆ ಒಳಗಾದ ಮಕ್ಕಳಂತೆ ನಿಶ್ಚಲರಾಗಿ ಮೈಮರೆಯುತ್ತಿದ್ದರು.
ಶಾಸ್ತ್ರೀಯ, ಜನಪದೀಯ ಹಿಂದೀಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಎದುರಿಗೆ ಎಂತಹ ವಿರೋಧಿಗಳಿದ್ದರೂ ನಿಶ್ಶಸ್ತ್ರಗೊಳಿಸಿಬಿಡುತ್ತಿದ್ದರು. ಎಂತಹ ಪರಿಸ್ಥಿತಿಯಲ್ಲಿಯೂ ಹಾಸ್ಯಪ್ರಜ್ಞೆಯಿಂದ ಅವರು ದೂರವಾಗುತ್ತಿರಲಿಲ್ಲ.  ಬಾಬರಿ ಕಟ್ಟಡ ಕೆಡವಿದ ಸಂದರ್ಭದಲ್ಲಿ ರಾಮವಿಲಾಸ ಪಾಸ್ವಾನ್ ಬಿಜೆಪಿ ಜೈ ಶ್ರೀರಾಮ್ ಎನ್ನುತ್ತಿದೆ. ಆದರೆ ಅವರಲ್ಲಿ ಯಾರೂ ರಾಮ ಇಲ್ಲ. ನನ್ನ ಹೆಸರಿನಲ್ಲೇ ರಾಮ್ ಇದೆ ಎಂದರು. ಅದಕ್ಕೆ ಉತ್ತರಿಸಿದ ಅಟಲ್ಜೀ ಅದು ನಿಜ.  ಆದರೆ ಹರಾಮ್ನಲ್ಲಿಯೂ ರಾಮ್ ಇದೆಯಲ್ಲವೇ? ಎಂದರು. ಅವರೊಡನೆ ಇಡೀ ಸಂಸತ್ತು ನಕ್ಕಿತು.
ಪತ್ರಕರ್ತರಾಗಿ
ಧರ್ಮದ ಆಧಾರದಲ್ಲಿ ದೇಶವಿಭಜನೆ, ತದನಂತರವೂ ಬದಲಾಗದ ರಾಷ್ಟ್ರನಾಯಕರ ಮನಃಸ್ಥಿತಿಯನ್ನು ಮೂಕಪ್ರೇಕ್ಷಕರಂತೆ ಸಹಿಸಿಕೊಳ್ಳಲಾಗದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪತ್ರಿಕೆಯೊಂದನ್ನು ಪ್ರಾರಂಭಿಸಲು ನಿರ್ಧರಿಸಿತು. ಸಂಘದ ಪ್ರಚಾರಕರಾಗಿದ್ದ ದೀನದಯಾಳ್ ಉಪಾಧ್ಯಾಯರ ನೇತೃತ್ವದಲ್ಲಿ ೧೯೪೬ರ ಪ್ರಾರಂಭದಲ್ಲಿ ರಾಷ್ಟ್ರಧರ್ಮ ಮಾಸಿಕ ಪ್ರಾರಂಭಿಸಲಾಯಿತು. ಇದರ  ಸಂಪಾದಕತ್ವದ ಹೊಣೆ ಅಟಲ್ ಬಿಹಾರಿ ವಾಜಪೇಯಿ (ಮತ್ತು ರಾಜೀವಲೋಚನ ಅಗ್ನಿಹೋತ್ರಿ) ಅವರ ಹೆಗಲಿಗೇರಿತು. ಶಾಲಾದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಅಟಲ್ಜೀ ಅದಾಗಲೇ ತಮ್ಮ ಕವಿತೆಗಳ ಮೂಲಕ ಸಮಾಜದಲ್ಲಿ ಗಣ್ಯತೆ ಗಳಿಸಿದ್ದರು. ರಾಷ್ಟ್ರಧರ್ಮದ ಸಂಪಾದಕತ್ವದ ಹೊಣೆಹೊತ್ತ ಅಟಲ್ಜೀ ಸ್ವತಃ ಲೇಖನ, ಕವನಗಳನ್ನು ಬರೆಯುವುದು, ಬರೆಸುವುದರ ಜೊತೆಗೆ ಅಚ್ಚುಮೊಳೆ ಜೋಡಿಸುವುದರಿಂದ ಭಾಂಗಿ ಹೊರೆಹೊರುವ ಕೆಲಸಗಳಲ್ಲೂ ಕೈಜೋಡಿಸಿ ಪತ್ರಿಕೆಗೆ ಜನಮನ್ನಣೆ ಗಳಿಸಿಕೊಟ್ಟಿದ್ದರು.
ಸಂಘದ ಅಂಗಳದಲ್ಲಿ ಬೆಳೆದು, ದೀನದಯಾಳ್ ಉಪಾಧ್ಯಾಯರ ಗರಡಿಯಲ್ಲಿ ವ್ಯಕ್ತಿತ್ವ ವಿಸ್ತರಿಸಿಕೊಂಡ ಅಟಲ್ಜೀ ರಾಷ್ಟ್ರಧರ್ಮದ ಯಶಸ್ಸಿನಿಂದ ಪ್ರೇರಣೆಗೊಂಡು ಪಾಂಚಜನ್ಯ ವಾರಪತ್ರಿಕೆ (೧೯೪೬ ಏಪ್ರಿಲ್ ) ಹಾಗೂ ಸ್ವದೇಶ್ ದಿನಪತ್ರಿಕೆ  (೧೯೫೦) ಪ್ರಾರಂಭಿಸಿದಾಗಲೂ ದೀನದಯಾಳರ ಅಪೇಕ್ಷೆಯಂತೆ ಸಮರ್ಥವಾಗಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅಲಹಾಬಾದ್ನಿಂದ ಪ್ರಕಟವಾಗುತ್ತಿದ್ದ ಕರ್ಮಯೋಗಿ, ಕಾಶಿಯಿಂದ ಪ್ರಕಟವಾಗುತ್ತಿದ್ದ ಚೇತನಾ, ದೆಹಲಿಯಿಂದ ಪ್ರಕಟವಾಗುತ್ತಿದ್ದ ವೀರ್ ಅರ್ಜುನ್ ದೈನಿಕಗಳ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
Guru ji Golwalkar, Pt. Deen Dayal Upadhyay and Bharat Ratna Atal.

ಆಪ್ತಸಹಾಯಕನಿಂದ ಪ್ರಧಾನಿವರೆಗೆ
ಜನಸಂಘದ ಪ್ರಾರಂಭದ ದಿನಗಳಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತಸಹಾಯಕನಾಗಿ ದೇಶಾದ್ಯಂತ ಪ್ರವಾಸ ನಡೆಸಿದರು. ಮುಖರ್ಜಿ ಅವರಿಗೆ ಭಾಷಣ ಸಿದ್ಧಪಡಿಸಿಕೊಡುವುದು ಮಾತ್ರವಲ್ಲದೆ ಅವರ ಅಪೇಕ್ಷೆಯಂತೆ ಕೆಲವೆಡೆಗಳಲ್ಲಿ ಅವರ ಸಮ್ಮುಖದಲ್ಲಿ ಸ್ವತಃ ಭಾಷಣಗಳನ್ನೂ ಮಾಡುತ್ತಿದ್ದರು. ಶ್ಯಾಮಪ್ರಸಾದ್ ಮುಖರ್ಜಿಯವರ ಅನುಮಾನಾಸ್ಪದ ಸಾವು, ತದನಂತರ ದೀನದಯಾಳ್ ಉಪಾಧ್ಯಾಯರ ಅನುಮಾನಾಸ್ಪದ ಕೊಲೆಗಳ ನಂತರ ಜನಸಂಘದ ನೇತೃತ್ವ ವಹಿಸಿ (೧೯೬೮) ರಾಜಕೀಯವಾಗಿ ಜನಸಂಘವನ್ನು ದೇಶದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದವರು ಅಟಲ್ಜೀ.
೧೯೫೭ರಿಂದ ೨೦೦೯ರ ತನಕ ನಿರಂತರವಾಗಿ (೧೯೮೪ ಹೊರತುಪಡಿಸಿ) ಸಂಸತ್ ಪ್ರವೇಶಿಸಿದ ಅಟಲ್ಜೀ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದ ಸಂಖ್ಯೆಗನುಗುಣವಾಗಿ ಮಾತನಾಡುವ ಅವಕಾಶ ಲಭಿಸುತ್ತಿದ್ದರೂ ಸಿಕ್ಕಸಮಯವನ್ನು ಅವರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ವಾಜಪೇಯಿ ಅವರ ಭಾಷಣ ಕೇಳಲು ನೆಹರು ಆದಿಯಾಗಿ ಎಲ್ಲ ಸದಸ್ಯರೂ ಉಪಸ್ಥಿತರಿರುತ್ತಿದ್ದರು; ಗ್ಯಾಲರಿಗಳೂ ಬಿರುತ್ತಿದ್ದವು! ವಾಜಪೇಯಿಯವರ ವಾಕ್ಚಾತುರ್ಯಕ್ಕೂ ವಿ?ಯತಜ್ಞತೆಗೂ ಮರುಳಾಗಿದ್ದ ಡಾ. ಎಸ್. ರಾಧಾಕೃ?ನ್ ಅವರು ರಾಜ್ಯಸಭೆಯಲ್ಲಿ ಮೊದಲ ಸಾಲಿನಲ್ಲಿ ವಾಜಪೇಯಿಯವರಿಗೆ (೧೯೬೨ರಲ್ಲಿ ಜನಸಂಘ ರಾಜ್ಯಸಭೆಯಲ್ಲಿ ಕೇವಲ ೨ ಸದಸ್ಯರನ್ನು ಹೊಂದಿತ್ತು) ಸ್ಥಾನ ಮೀಸಲಿರಿಸಿದ್ದರು. ಮಾತ್ರವಲ್ಲದೆ ಪ್ರತಿ ವಿಷಯದಲ್ಲಿಯೂ ಅಟಲ್ಜೀಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡುತ್ತಿದ್ದರು. ವಿರೋಧಪಕ್ಷದಲ್ಲಿದ್ದರೂ ಅವರೆಂದೂ ಸರ್ಕಾರದ ನಡೆಯನ್ನು ವಿರೋಧಿಸುವುದಕ್ಕೆಂದೇ ವಿರೋಧಿಸದೆ ತುಲನಾತ್ಮಕವಾಗಿ ಚಿಂತಿಸಿ ವಾದ ಮಂಡಿಸುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ.
ಅಟಲ್ಜೀ ಸದಾ ಪಕ್ಷಾತೀತವಾಗಿ ಜನರ ಧ್ವನಿಯಾಗಿ ರಾಷ್ಟ್ರದ ಒಳಿತಿನ ವಿಚಾರವನ್ನು ಮಂಡಿಸುತ್ತಿದ್ದರು. ಅವರ ಇಡೀ ರಾಜಕೀಯ ಜೀವನದಲ್ಲಿ ದೇಶ ಮೊದಲು, ನಂತರ ಪಕ್ಷ, ವ್ಯಕ್ತಿ ಎಂಬ ಸಿದ್ದಾಂತವೇ ಕಾಣಸಿಗುತ್ತದೆ. ರಾಷ್ಟ್ರಕ್ಕೆ ಹೊರಗಿನಿಂದ ಸವಾಲು ಎದುರಾದಾಗ ಪಕ್ಷಭೇದ ಮರೆತು ಸರ್ಕಾರದೊಂದಿಗೆ ಹೆಜ್ಜೆಹಾಕಬೇಕು ಎಂಬುದು ವಾಜಪೇಯಿ ಅವರ ನಿಲುವಾಗಿತ್ತು. ಚೀಣಾ ಆಕ್ರಮಣದ ಸಂದರ್ಭದಲ್ಲಿ, ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧಪಕ್ಷದ ನಾಯಕನಾಗಿ ಬೆಂಬಲವಾಗಿ ನಿಂತರು. ವಾಜಪೇಯಿ ಅವರ ಗುಣವನ್ನು ಮೆಚ್ಚಿಕೊಂಡಿದ್ದ ಲಾಲ್ಬಹಾದುರ್ ಶಾಸ್ತ್ರೀ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ವಿವರಿಸಲು ಕಳುಹಿಸಿದ ಭಾರತೀಯ ನಿಯೋಗದ ನೇತೃತ್ವವನ್ನು ವಾಜಪೇಯಿಯವರಿಗೆ ನೀಡಿದ್ದರು.
Atal Bihari Vajpayee With L. K. Advani and Bhairon Singh Shekhawat During Jan Sangh Days.

Jannayak with Loknayak.. Atal Bihari Vajpayee and Jai Prakash Narayan.

ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ವಿವೇಕಾನಂದರ ವಾಣಿಗೆ ಅಟಲ್ಜೀ ಪ್ರತಿರೂಪದಂತಿದ್ದರು. ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ರಂತಹ ನಾಯಕರನ್ನು ಕಳೆದುಕೊಂಡಾಗಲೂ ಎದೆಗುಂದದೆ ಪಕ್ಷವನ್ನು ಸಂಘಟಿಸಿ ಕಾಂಗ್ರೆಸ್ಗೆ ಪರ್ಯಾಯವಾಗಿ ಜನಸಂಘವನ್ನು ಕಟ್ಟಿ ಬೆಳೆಸಿದ್ದರು. ಮಾತ್ರವಲ್ಲ ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್ಸೇತರ ಸರ್ಕಾರ ರೂಪುಗೊಳ್ಳುವುದರಲ್ಲಿಯೂ ವಿದೇಶಾಂಗ ಸಚಿವರಾಗಿಯೂ ಪ್ರಮುಖ ಪಾತ್ರ ನಿರ್ವಹಿಸಿದರು.
೧೯೮೪ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಎರಡೇ ಸ್ಥಾನ ಗಳಿಸಿದಾಗ ಉತ್ಸಾಹ ಕಳೆದುಕೊಂಡಿದ್ದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದವರು ಅಟಲ್ಜೀ.  ಕತ್ತಲೆ ಕಳೆಯುತ್ತದೆ, ಬೆಳಕು ಬರಲೇ ಬೇಕು. ನಿರುತ್ಸಾಹದಿಂದ ಸುಮ್ಮನೆ ಕೂಡುವ ಸಮಯವಿದಲ್ಲ. ಪುನಶ್ಚ ಹರಿಃ ಓಂ. ಎಲ್ಲವನ್ನೂ ಮತ್ತೆ ಪ್ರಾರಂಭಿಸೋಣ ಎಂದು ಹೇಳಿ ಉತ್ಸಾಹ ಮೂಡಿಸಿದರು. ಅನಂತರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ೮೯ ಸ್ಥಾನ ಪಡೆದು ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣೆಯಿಂದ ಚುನಾವಣೆಗೆ ವೃದ್ಧಿಸುತ್ತಾ ಪಕ್ಷ ವೇಗವಾಗಿ ಬೆಳೆಯಿತಾದರೂ ಅಧಿಕಾರ ಹಿಡಿಯುವ? ಸಂಖ್ಯಾಬಲ ಪ್ರಾಪ್ತವಾಗಲಿಲ್ಲ.
ಬಾಬ್ರಿ ಕಟ್ಟಡ ಧ್ವಂಸದ ನಂತರದಲ್ಲಿ ಇತರ ಪಕ್ಷಗಳು ಬಿಜೆಪಿಗೆ ಅಂಟಿಸಿದ್ದ ಅಸ್ಪೃಶ್ಯ ಹಣೆಪಟ್ಟಿಯನ್ನು ಕಳಚಿದ ಕೀರ್ತಿ ಅಟಲ್ಜೀಗೆ ಸಲ್ಲುತ್ತದೆ. ಅಧಿಕಾರ ಅಷ್ಟು  ಸುಲಭವಲ್ಲ ಎಂಬ ಅರಿವಿದ್ದರೂ ೧೯೯೬ರಲ್ಲಿ ಪ್ರಧಾನಿಯಾಗಿ ಕೇವಲ ೧೩ ದಿನಗಳಲ್ಲೇ ರಾಜೀನಾಮೆ ನೀಡಬೇಕಾಗಿ ಬಂದು ಸಂಸತ್ತಿನಲ್ಲಿ ಭಾಷಣ ಮಾಡಿದ್ದು, ೧೯೯೮ರ ಚುನಾವಣೆಯಲ್ಲಿ ಬಿಜೆಪಿಗೆ ಅತಿಹೆಚ್ಚು ಸೀಟು ಬಂದರೂ ಬಹುಮತವಿಲ್ಲದಿದ್ದಾಗ ಎನ್ಡಿಎ ಎಂಬ ಮೈತ್ರಿಕೂಟ ರಚಿಸಿ ಹೊಸ ರಾಜಕೀಯ ಅಧ್ಯಾಯ ಪ್ರಾರಂಭಿಸಿದ್ದು, ಜಾತ್ಯತೀತರೆಂದು ಬಿಂಬಿಸಿಕೊಂಡ ಚಂದ್ರಬಾಬು ನಾಯ್ಡು, ದಲಿತ ನಾಯಕಿ ಮಾಯಾವತಿ, ದ್ರಾವಿಡ ಚಳವಳಿಯಿಂದ ಬಂದ ಕರುಣಾನಿಧಿ, ಸಮಾಜವಾದಿ ಜಾರ್ಜ್ ಫರ್ನಾಂಡೆಸ್ಹೀಗೆ ಎಲ್ಲರನ್ನೂ ಒಂದು ಸರ್ಕಾರದ ಭಾಗವಾಗಿ ಬೆಸೆಯುವ ಮೂಲಕ ವಾಜಪೇಯಿ ವ್ಯವಸ್ಥಿತವಾಗಿ ಇದನ್ನು ಸಾಧಿಸಿದ್ದರು.
೧೯೯೯ರಲ್ಲಿ ಪುನಃ ಅಧಿಕಾರಕ್ಕೆ ಬರುವ ಮೂಲಕ ಪೂರ್ಣಾವಧಿ ಸರ್ಕಾರ ನಡೆಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆ ಅಟಲ್ಜೀ ಅವರದು. ಆರ್ಥಿಕ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಿದ ಅವರು, ದೂರಸಂಪರ್ಕ, ನಾಗರಿಕ ವಿಮಾನಯಾನ, ಬ್ಯಾಂಕಿಂಗ್, ಇನ್ಶೂರೆನ್ಸ್, ಸಾರ್ವಜನಿಕ ಉದ್ದಿಮೆಗಳು, ವಿದೇಶೀ ವ್ಯಾಪಾರ ಮತ್ತು ಬಂಡವಾಳ, ಸಣ್ಣಕೈಗಾರಿಕೆ, ಹೆದ್ದಾರಿ, ಗ್ರಾಮೀಣ ರಸ್ತೆಗಳು, ಮೂಲಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಎದ್ದುಕಾಣುವ ಬದಲಾವಣೆ ತಂದರು. ಅವರು ಅಧಿಕಾರದಿಂದ ಕೆಳಗಿಳಿಯುವಾಗ ಭಾರತ ಎಲ್ಲ ರಂಗಗಳಲ್ಲೂ ಮುನ್ನೆಲೆಗೆ ಬರಲಾರಂಭಿಸಿತ್ತು.
ರಸ್ತೆಗಳಿಂದ ಹಿಡಿದು ದೊಡ್ಡದೊಡ್ಡ ವಿಶ್ವವಿದ್ಯಾಲಯಗಳು ಸಂಘಸಂಸ್ಥೆಗಳವರೆಗೆ ನೂರಾರು ಯೋಜನೆಗಳಿಗೆ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನಿಟ್ಟಿರುವುದನ್ನು ನಾವು ಕಾಣುತ್ತೇವೆ.  ಆದರೆ ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ವಾಜಪೇಯಿ ಸ್ಪಷ್ಟ ಸೂಚನೆ ನೀಡಿದ್ದರು. ಹಾಗಿದ್ದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ಅಟಲ್ ಗ್ರಾಮ ಸಡಕ್ ಯೋಜನೆ ಎಂದು ಹೆಸರಿಸಲಾಗಿತ್ತು. ಆದರೆ ವಾಜಪೇಯಿ ಅದನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಎಂದು ಬದಲಾಯಿಸಿದರು. ಇಂತಹ ಹಲವು ನಡೆಗಳಿಂದ ವಾಜಪೇಯಿ ಜನರ ಮನಸ್ಸನ್ನು ಗೆದ್ದರು.
ನಿಷ್ಕಲ್ಮಶ ಹೃದಯಿ
ತಮ್ಮ ಇಡೀ ರಾಜಕೀಯ ಜೀವನದಲ್ಲಿ ಅವರೆಂದೂ ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸಿದವರಲ್ಲ. ದೇಶಹಿತದ ಪ್ರಶ್ನೆ ಬಂದಾಗ ಯಾರನ್ನು ಟೀಕಿಸಲೂ ಅವರು ಹಿಂದೆಮುಂದೆ ನೋಡುತ್ತಿರಲಿಲ್ಲ. ನೆಹರು ಅವರ ಪಂಚಶೀಲ ತತ್ತ್ವಗಳನ್ನು ವಾಜಪೇಯಿ ಬಲವಾಗಿ ಟೀಕಿಸಿದ್ದರು. ೧೯೬೪ರಲ್ಲಿ ನೆಹರು ತೀರಿಕೊಳ್ಳುವ ಸ್ವಲ್ಪ ಮೊದಲು ಶೇಕ್ ಅಬ್ದುಲ್ಲಾರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಪಾಕ್ ಅಧ್ಯಕ್ಷ ಆಯೂಬ್ ಖಾನ್ರೊಂದಿಗೆ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಕಳುಹಿಸುವ ತೀರ್ಮಾನವನ್ನು ನೆಹರು ತೆಗೆದುಕೊಂಡಾಗ ವಾಜಪೇಯಿ ನೆಹರುರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ನೆಹರು ನಿಧನರಾದಾಗ ಅವರು ಇಂದು ತಾಯಿ ಭಾರತಿ ಶೋಕತಪ್ತೆ, ತನ್ನ ಮುದ್ದು ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ. ಮನುಷ್ಯತ್ವ ಮರುಗಿದೆ, ಆರಾಧಕ ಇಲ್ಲವಾಗಿದ್ದಾನೆ. ಶಾಂತಿ ತಳಮಳಿಸಿದೆ, ರಕ್ಷಕ ಗತಿಸಿದ್ದಾನೆ. ಕೊನೆಗೂ ತೆರೆಬಿದ್ದಿದೆ. ವಿಶ್ವವೇದಿಕೆಯ ಪ್ರಧಾನ ಪಾತ್ರಧಾರಿ ತನ್ನ ಪಾತ್ರ ಮುಗಿಸಿದ್ದಾನೆ ಎಂದು ಆರ್ದ್ರವಾಗಿ ಬಣ್ಣಿಸಿದ್ದರು.
ಗುಣಕ್ಕೆ ಮತ್ಸರ ತೋರದ ವಾಜಪೇಯಿ, ಬಂಗ್ಲಾ ಯುದ್ಧದಲ್ಲಿ ಇಂದಿರಾಗಾಂಧಿ ತೋರಿದ ಕುಶಲಮತಿ, ದಿಟ್ಟತನವನ್ನು ಮೆಚ್ಚಿ ಇಂದಿರಾರನ್ನು  ಹೊಗಳಿದ್ದರು. (ದುರ್ಗಾ ಎಂದು ತಾನು ಹೇಳಿಲ್ಲ ಎಂಬುದನ್ನು ಅಟಲ್ಜೀ ಅವರು, ಡಾ. ಎನ್.ಎಂ. ಘಟಾಟೆ ಅವರು ಬರೆದ, ವಾಜಪೇಯಿ ಪಾರ್ಲಿಮೆಂಟ್ ನಡಾವಳಿಗಳ ಬಗೆಗಿನ ಪುಸ್ತಕದಲ್ಲಿ ರಿಕಲೆಕ್ಟ್ ಎಂಬ ಅಧ್ಯಾಯದಲ್ಲಿ ಸ್ಪಷ್ಟಪಡಿಸಿದ್ದಾರೆ.) ಗುಜರಾತಿನ ಚುನಾವಣಾ ಸಭೆಯೊಂದರಲ್ಲಿ ಇಂದಿರಾಗಾಂಧಿ ನಾನು ಉತ್ತರಪ್ರದೇಶದ ಮಗಳು ಮತ್ತು ಗುಜರಾತಿನ ಸೊಸೆ. ಕಾರಣಕ್ಕಾಗಿ ನೀವು ಮತ ನೀಡಬೇಕು ಎಂದಿದ್ದರು. ಇದನ್ನು ಉಲ್ಲೇಖಿಸಿದ ಅಟಲ್ಜೀ ಇಂದಿರಾ ಗಾಂಧಿಯವರು ಮತ್ತೊಂದನ್ನು ನಿಮ್ಮ ಮುಂದೆ ಹೇಳಿಲ್ಲ. ಅವರು ಇಟಲಿಯ ಅತ್ತೆ ಕೂಡ ಎಂದು ತಿರುಗೇಟು ನೀಡಿದ್ದೂ ಇದೆ.
ವಿದೇಶಾಂಗನೀತಿಗೆ ಸಮರ್ಥ ಅಡಿಗಲ್ಲು
ತಮ್ಮ ರಾಜಕೀಯದ ಪ್ರಾರಂಭದ ದಿನಗಳಿಂದಲೂ ಅಟಲ್ಜೀ ಅವರಿಗೆ ವಿದೇಶನೀತಿಯ ಕುರಿತು ವಿಶೇಷ ಆಸಕ್ತಿ. ಪ್ರಧಾನಿ ನೆಹರುಗೆ ಆಪ್ತರಾದುದು ಮತ್ತು ಅಟಲ್ಜೀಗೆ ಜನಮನ್ನಣೆ ಲಭಿಸತೊಡಗಿದ್ದರಲ್ಲಿ ಇದೂ ಒಂದು ಪ್ರಮುಖ ಕಾರಣ. ನೆಹರು ಅನುಸರಿಸಿದ ದ್ವಂದ್ವಯುಕ್ತ ವಿದೇಶನೀತಿಗಳು - ಆಲಿಪ್ತ ನೀತಿ ಎಂದು ಹೇಳಿಕೊಳ್ಳುತ್ತ ರಷ್ಯಾದ ಕಡೆಗೆ ಅತಿಯಾಗಿ ವಾಲುತ್ತಿರುವುದನ್ನು, ಅರಬ್ ರಾಷ್ಟ್ರಗಳಿಗೆ ಅನಗತ್ಯ ಪ್ರಾಶಸ್ತ  ನೀಡಿ ಇಸ್ರೇಲನ್ನು ದೂರವಿರಿಸಿರುವುದುಭಾರತಕ್ಕೆ ಮಾರಕ ಎಂಬುದನ್ನು ಗುರುತಿಸಿ, ಅನೇಕ ಬಾರಿ ಅವರು ದನಿ ಎತ್ತಿದ್ದರು. ೧೯೭೭ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದರೆ ಅಮೆರಿಕದ ಜೊತೆ
ಸಂಬಂಧ ಘನಿಷ್ಠಗೊಳಿಸುವುದಾಗಿಯೂ, ಇಸ್ರೇಲ್ ಜೊತೆಗೆ ರಾಜಕೀಯ ಸಂಬಂಧ ಸ್ಥಾಪಿಸುವುದಾಗಿಯೂ ಅವರು ಬಹಿರಂಗವಾಗಿ ಘೋಷಿಸಿದ್ದರು.  ಆದರೆ ತುರ್ತುಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾದರೂ ನೆಹರು ಹಾಗೂ ಇಂದಿರಾಗಾಂಧಿ ಕಾಲದ ಆಡಳಿತದ ನೀತಿಗಳಿಂದ ಹೊರಬರುವುದು ಅ? ಸುಲಭವಾಗಿರಲಿಲ್ಲ. ಹೀಗಾಗಿ ಭಾರತದ ವಿದೇಶ ಮಂತ್ರಿಯಾಗಿ ೧೯೭೭ರಲ್ಲಿ ಅವರು ನೆಹರು ಬೆಳೆಸಿದ ವಿದೇಶಾಂಗ ನೀತಿಯನ್ನು ಮುಂದುವರಿಸಿ ಅತ್ಯಂತ ಯಶಸ್ವಿಯಾದರು.
ಅಟಲ್ಜೀ ಅವರ ವಿದೇಶಾಂಗ ನೀತಿಯ ದಿಗ್ದರ್ಶನವಾದುದು ೧೯೯೮ರಲ್ಲಿ ಪ್ರಧಾನಿಯಾದ ನಂತರ. ಅವರು ಕೈಗೊಂಡ ಕ್ರಮಗಳು ಅವರ ರಾಷ್ಟ್ರನಿಷ್ಠೆ,  ವಿವೇಕ, ದೂರದರ್ಶಿತ್ವ ಹಾಗೂ ಕರ್ತೃತ್ವಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ವಿಶ್ವದಲ್ಲಿ ಶಕ್ತಿಯಿಂದಲೇ ಸತ್ತ್ವದ ಪ್ರಕಟೀಕರಣ ಸಾಧ್ಯ ಎಂಬುದನ್ನು ಅವರು ಕೃತಿರೂಪದಲ್ಲಿ ತೋರಿದರು. ಪ್ರಮುಖವಾದುದು ಪೋಖರನ್ ಅಣ್ವಸ್ತ್ರ ಪರೀಕ್ಷೆ. ಅಮೆರಿಕ ಸೇರಿದಂತೆ ಜಗತ್ತಿನ ಬೃಹತ್ ರಾಷ್ಟ್ರಗಳು ಇದನ್ನು ವಿರೋಧಿಸುತ್ತವೆ ಎಂಬ ವಾಸ್ತವದ ಅರಿವಿದ್ದೂ ಅವರು ಸಾಹಸಕ್ಕೆ ಕೈಹಾಕಿದ್ದರು. ಇದೇ ಕಾರಣದಿಂದ ಇಂದಿರಾಗಾಂಧಿ ೧೯೭೪ರಲ್ಲಿ ಸಣ್ಣ ಪ್ರಮಾಣದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರೂ ಭಾರತ ಒಂದು ಅಣ್ವಸ್ತ್ರ ರಾ?ವೆಂದು ಘೋಷಿಸಲು ಹಿಂಜರಿದಿದ್ದರು. ನಮ್ಮದೊಂದು ಶಾಂತಿಯುತ ಅಣ್ವಸ್ತ್ರ ಪರೀಕ್ಷೆ ಎಂಬ ನೀತಿ ಪ್ರತಿಪಾದಿಸಿದರು. ಆದರೆ ಅಟಲ್ಜೀ ಎದೆಗುಂದದೆ, ಹಿರಿಯಣ್ಣನ ಬೆದರಿಕೆಗೆ ಬಗ್ಗದೆ ಅಣ್ವಸ್ತ್ರ ಪರೀಕ್ಷೆಗೆ ಮುಂದಾದರು. ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದಾಗ ಆರ್ಥಿಕ ಪ್ರತಿಬಂಧಕ್ಕೆ ಹೆದರಿ ನಾವು ನಿಂತಲ್ಲೇ ನಿಲ್ಲಲು ಸಾಧ್ಯವಿಲ್ಲ. ಮುಂದೆ ಹೆಜ್ಜೆ ಇರಿಸಲೇಬೇಕು ಎಂದು ಉತ್ತರಿಸಿದರು.
ಭಾರತ ಅಣ್ವಸ್ತ್ರರಾಷ್ಟ್ರವಾಗುವುದರ ಅನಿವಾರ್ಯತೆಯನ್ನು ಅಮೆರಿಕ ಮುಂತಾದ ಬೃಹದ್ ರಾಷ್ಟ್ರಗಳು ಒಪ್ಪಿಕೊಳ್ಳಲು ಹೆಚ್ಚುಕಾಲ ಹಿಡಿಯಲಿಲ್ಲ. ಒಂದೇ ವರ್ಷದಲ್ಲಿ ಕಾರ್ಗಿಲ್ ಕದನ ಆರಂಭವಾದಾಗ ಅಮೆರಿಕ, ?, ಚೀನಾ, ಬ್ರಿಟನ್ ಮುಂತಾದ ದೇಶಗಳು ಭಾರತದ ನಿಲವನ್ನು ಸಮರ್ಥಿಸಿ ಪಾಕಿಸ್ತಾನಕ್ಕೆ ಛೀಮಾರಿಹಾಕಿದವು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಜನವರಿ ೨೦೦೧ರಲ್ಲಿ ಭಾರತಕ್ಕೆ  ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಹಲವು ಮಹತ್ತ್ವದ ನಿರ್ಣಯಗಳನ್ನು ಕೈಗೊಂಡರು. ೨೨ ವರ್ಷಗಳ ನಂತರ ಅಮೆರಿಕದ ಅಧ್ಯಕ್ಷರೊಬ್ಬರ ಮೊದಲ ಭೇಟಿ ಅದು. ಇದು ನಡೆದದ್ದು ಪೋಖರನ್ ಅಣ್ವಸ್ತ್ರ ಪರೀಕ್ಷೆ ನಡೆಸಿದ ಕೇವಲ ೨೦ ತಿಂಗಳಲ್ಲಿ ಎಂಬುದು ಮಹತ್ತ್ವದ್ದು. ಇಷ್ಟೇ ಅಲ್ಲ. ೧೯೮೭ರಲ್ಲಿಯೇ ರಹಸ್ಯವಾಗಿ ಅಣ್ವಸ್ತ್ರ ಗಳಿಸಿ, ಬಗ್ಗೆ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಪಾಕಿಸ್ತಾನ ಕೂಡಾ ತನ್ನಲ್ಲಿ ಅಣ್ವಸ್ತ್ರಗಳಿವೆ ಎಂಬುದನ್ನು ಜಗತ್ತಿಗೆ ಬಹಿರಂಗಗೊಳಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಅಟಲ್ಜೀ ಅವರ ಚಾಣಾಕ್ಷ ವಿದೇಶನೀತಿ ಎನ್ನುತ್ತಾರೆ ಅಂಕಣಕಾರ ಪ್ರೇಮಶೇಖರ್.
ಲಾಹೋರ್ ಭೇಟಿ (೧೯೯೯, ಫೆಬ್ರುವರಿ ೨೦) ಲಾಹೋರ್ಗೆ ಬಸ್ ಸಂಚಾರ ಆರಂಭಿಸುವ ಮೂಲಕ ಪಾಕಿಸ್ತಾನದೊಂದಿಗೆ ಶಾಂತಿ ಪುನಃಸ್ಥಾಪನೆಗೆ ಭಾರತ ಸಿದ್ಧ ಎಂದೂ ಅವರು ಸಾರಿದರು. ಇದಕ್ಕೆ ವಿರೋಧ ವ್ಯಕ್ತವಾದಾಗ ನಾವು ಸ್ನೇಹಿತರನ್ನು ಬದಲಿಸಬಹುದು, ನೆರೆಹೊರೆಯವರನ್ನಲ್ಲ ಎಂದರು.  ಆದರೆ ಪಾಕಿಸ್ತಾನ ಕಾರ್ಗಿಲ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಹುನ್ನಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ಪಾಕಿಸ್ತಾನದ ನೈಜ ಮುಖವನ್ನು ಜಗತ್ತಿನೆದುರು ಅನಾವರಣಗೊಳಿಸಿದರು. ಇಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಪಾಕ್ ವಿರುದ್ಧ ಕಠಿಣ ನಿಲವು ತಳೆಯುತ್ತಿರುವುದರಲ್ಲಿ ಹಿಂದಿನ ಘಟನೆಗಳ ಪಾತ್ರವೂ ಮಹತ್ತ್ವದ್ದು.
ಭಾರತದ ಸುತ್ತಮುತ್ತಲಿನ ದೇಶಗಳೊಂದಿಗೆ ಘನಿಷ್ಠ ಸಂಬಂಧಗಳನ್ನು ಹೊಂದುವ ಅಗತ್ಯವನ್ನು ಗುರುತಿಸಿ ಕಾರ್ಯಪ್ರವೃತ್ತರಾದರು ಅಟಲ್ಜೀ.  ಆಫಘನಿಸ್ತಾನ, ಇರಾನ್ ಮತ್ತು ಮಧ್ಯಏಶಿಯಾದ ಮುಸ್ಲಿಂ ಗಣರಾಜ್ಯಗಳನ್ನು ಭಾರತಕ್ಕೆ ಹತ್ತಿರವಾಗಿಸಿದರು. ಇರಾನ್ ಚಬಹಾರ್ ಬಂದರಿನ ಮೂಲಕ ಆಫಘನಿಸ್ತಾನ ಮತ್ತು ಮಧ್ಯಏಶಿಯಾದೊಂದಿಗೆ ಸಂಬಂಧ ಏರ್ಪಡಿಸುವ ಪ್ರಯತ್ನವನ್ನೂ ಆರಂಭಿಸಿದರು.  ಭಾರತದ ಸುತ್ತಲೂ ವೃದ್ಧಿಸುತ್ತಿರುವ ಚೀನಾ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ತಜಕಿಸ್ತಾನ, ಮಾರಿಷಸ್, ಇಂಡೋನೇಶಿಯಾದಲ್ಲಿ ಭಾರತಕ್ಕೆ ಸೇನಾ ಸವಲತ್ತುಗಳನ್ನು ಗಳಿಸಿಕೊಡಲು ಮುಂದಾದರು. ಇವುಗಳ ಮಹತ್ತ್ವ ಇಂದು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದನ್ನೂ ನಾವು ಕಾಣಬಹುದು. ಬಗೆಯ ದೂರದರ್ಶಿತ್ವದ ವಿದೇಶಾಂಗನೀತಿಯನ್ನು ಪ್ರದರ್ಶಿಸಿದವರಲ್ಲಿ ಅವರೇ ಮೊದಲಿಗರು.

ಕವಿಹೃದಯ
ಅಟಲ್ಜೀ ಎಂದರೆ ಸರಸ್ವತಿಯ ವರಪುತ್ರರೇ ಸರಿ. ಒಂದು ವೇಳೆ ಅವರು ರಾಜಕಾರಣಿಯಾಗಿ ರೂಪುಗೊಳ್ಳದಿದ್ದರೆ ಶ್ರೇಷ್ಠ ಕವಿಯಾಗಿ ಹೊರಹೊಮ್ಮುತ್ತಿದ್ದರು. ಸರಸ್ವತೀ ಕೀ ದೇಖ್ ಸಾಧನಾ, ಲಕ್ಷ್ಮೀನೇ ಸಂಬಂಧ್ ಜೋಡಾ (ಸರಸ್ವತಿಯ ಸಾಧನೆಯನ್ನು ನೋಡಿ ಲಕ್ಷ್ಮಿ ಸಂಬಂಧ ಬೆಳೆಸಲಿಲ್ಲ) ಎಂದು ಅವರು ತಮ್ಮ ಸಾಹಿತ್ಯಾಸಕ್ತಿಯ ಕುರಿತು ಆವೋ ಮನ್ ಕೀ ಗಾಂಟೆ ಖೋಲೇ ಎಂಬ ಕವನದಲ್ಲಿ (೧೯೯೪ರ ಡಿಸೆಂಬರ್ ೨೫ ತಮ್ಮ ಜನ್ಮದಿನದಂದು ಬರೆದದ್ದು) ಬಿಡಿಸಿಟ್ಟಿದ್ದಾರೆ.
ಅಟಲ್ಜೀಗೆ ಕವನ ರಚಿಸುವುದು ಜನ್ಮಜಾತವಾಗಿಯೇ ಬಂದಿತ್ತು. ಅವರೇ ಹೇಳುವಂತೆ ಇದು ಅವರ ತಾತ ಕಾಶೀಪ್ರಸಾದರ (ತಂದೆಯ ತಂದೆ) ಪ್ರಭಾವವಂತೆ. ಕಾಶೀಪ್ರಸಾದರು ಬಟೇಶ್ವರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರಸ್ವತೀ ವರಪುತ್ರ ಎಂದೇ ಜನಜನಿತರಾಗಿದ್ದರು.
ನಿರಂತರವಾಗಿ ರಾ.ಸ್ವ. ಸಂಘದ ಸಂಪರ್ಕದಲ್ಲಿದ್ದ ಅಟಲ್ಜೀ ೧೦ನೇ ತರಗತಿಯಲ್ಲಿದ್ದಾಗಲೇ ಬರೆದ ಹಿಂದೂ ತನುಮನ್, ಹಿಂದೂ ಜೀವನ್ ಎಂಬ ಕವನ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿತ್ತು.
ಹಿಂದೀ ಸಾಹಿತ್ಯಲೋಕದಲ್ಲಿ ಅಟಲ್ಜೀಯವರಿಗೆ ವಿಶಿಷ್ಟ ಸ್ಥಾನವಿದೆ, ಅದರಲ್ಲಿಯೂ ಮುಖ್ಯವಾಗಿ ಕುಂಡಲಿಸಾಹಿತ್ಯದಲ್ಲಿ. ಇಂಥ ಸಾಹಿತ್ಯಪ್ರಕಾರದಲ್ಲಿ ಬರೆದವರು ಬಹಳ ಕಡಮೆ. ಕುಂಡಲಿಸಾಹಿತ್ಯ ರಚನೆ ಶಿಸ್ತುಬದ್ಧವಾದುದು. ಇದಕ್ಕೆ ಛಂದಸ್ಸಿನ ಜ್ಞಾನ ಅಗತ್ಯ. ಅಟಲ್ಜೀ ಪ್ರಾರಂಭದಿಂದಲೂ ಕುಂಡಲಿಸಾಹಿತ್ಯದಲ್ಲಿ ವಿಶೇಷ ಆಸಕ್ತಿತಳೆದಿದ್ದರು. ೧೯೭೫ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರು ಜೈಲಿನಲ್ಲಿದ್ದಾಗಲೂ ಅವರು ಕವನಗಳನ್ನು ಬರೆಯುತ್ತಿದ್ದರು. ಅವಧಿಯಲ್ಲಿಯೆ ಅವರು ೭೦ಕ್ಕೂ ಅಧಿಕ ಕುಂಡಲಿಗಳನ್ನು ಬರೆದಿದ್ದರು.  ವಿಶೇಷವೆಂದರೆ ಅಟಲ್ಜೀ ತಮ್ಮ ೫೦ನೇ ವರ್ಷದ ಸಂಭ್ರಮದ ದಿನಗಳನ್ನು ಕಳೆದದ್ದೂ ಜೈಲುಕಂಬಿಗಳ ಮಧ್ಯೆ! ಆಗ ಅವರು ಬರೆದ ಕವನ 'ಜೀವನ್ ಕೀ ಟಲನೇ ಲಗೀ ಸಾಂಜ್'

ಬರುತ್ತಿದೆ ಬಾಳಸಂಜೆ
ಇಳಿಯುತ್ತಿದೆ ವಯಸ್ಸು
ಸವೆದಿದೆ ದಾರಿ
ಬರುತ್ತಿದೆ ಬಾಳಸಂಜೆ
ಬದಲಾಗಿವೆ ಅರ್ಥಗಳು
ವ್ಯರ್ಥವಾಗಿವೆ ಶಬ್ದಗಳು
ನಿಸ್ಸತ್ತ್ವವಾಗಿವೆ ಶಾಂತಿಯಿಲ್ಲದ ಸಂತಸ
ಬರುತ್ತಿದೆ ಬಾಳಸಂಜೆ
* * *

ತುರ್ತುಪರಿಸ್ಥಿತಿಯನ್ನು ಕುರಿತು ಅವರು ಬರೆದ ಕವನ:
ಹತ್ತು ಮಾಳಿಗೆಯೇರಿ ನೋಡಿದೆ ರಾವಣ ಉರಿಯುತ್ತಿದ್ದ
ಶತಮಾನಗಳ ಅಗ್ನಿಗೆ ಸ್ವಾಹಾ
ಆದರೂ ನಿರಂತರ ಏರುತ್ತಿದೆ ಪಾಪ
ರಾಮವಿಜಯದ ಕತೆಯೇನೋ ಹಳೆಯದು
ಯುದ್ಧವಂತೂ ಮುಂದುವರಿದಿದೆ
ರಾಜ್ಯವಾಳಲು ಅಯೋಧ್ಯೆ ಸಿದ್ಧಗೊಳ್ಳುವ ಸರದಿ
ತಾಯಿಮಮತೆ ದೂಡಿತು ಮತ್ತೆ ಸಮಾಜವ ಸಂಕಷ್ಟಕೆ
ನ್ಯಾಯದ ನಿಲುಗಡೆ, ಧರ್ಮದ ಗಡೀಪಾರು
ಕೋಟಿ ಕೋಟಿ ಭಾರತವಾಸಿಗಳು ಮೂಕದರ್ಶಕರೇ?
ಅಧಿಕಾರಬಲದಿಂದ ಹಿಡಿಯಷ್ಟು ಜನ ಇರಬಲ್ಲರೆಷ್ಟು ದಿನ?

೧೯೯೨ರ ಜನವರಿ ೨೫ರಂದು ಅಟಲ್ಜೀಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ನಿಮಿತ್ತ ಅವರನ್ನು ಅಭಿನಂದಿಸಲು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ಜೀ ಸ್ವರಚಿತ ಕವನವೊಂದನ್ನು ಓದಿದರು. ಕವನ ಊಂಚಾಯಿ ಅಟಲ್ಜೀ ಬಾಳಪುಟಗಳಿಗೆ ಬರೆದ ಭಾಷ್ಯವೇ ಸರಿ. ಕವನದ ಆರಂಭ ಹೀಗಿದೆ:
ಊಂಚೇ ಪಹಾಡ್ ಪರ್
ಪೇಡ್ ನಹೀ ಲಗತೇ
ಪೌಧೇ ನಹೀ ಲಗತೇ
ಘಾಸ್ ಭೀ ಜಮತೀ ಹೈ
“ಅತ್ಯಂತ ಎತ್ತರದ ಪರ್ವತದ ಮೇಲೆ ಮರ ಬೆಳೆಯದು, ಗಿಡ ಬೆಳೆಯದು, ಹುಲ್ಲೂ ಬೆಳೆಯದು.”
ಇದೇ ಕವನದ ಸಮಾಪ್ತಿಯಲ್ಲಿ ಅವರು ಹೇಳುವುದು:
ನನ್ನ ಪ್ರಭುವೇ!
ಪರರನ್ನು ಆಲಿಂಗಿಸಲಾರದಂಥ
ಎತ್ತರಕ್ಕೆ ನನ್ನನ್ನು ಏರಿಸಬೇಡ
- ಎಂದು.
ತೀವ್ರ ಅನಾರೋಗ್ಯದಿಂದ ನ್ಯೂಯಾರ್ಕಿನ ಆಸ್ಪತ್ರೆಗೆ ೧೯೯೮ರಲ್ಲಿ ದಾಖಲಾಗಿದ್ದಾಗ ಸಾವನ್ನು ಕುರಿತು ಅವರು ಬರೆದ ಕವನ:
ನೀನು ಮೆಲ್ಲಮೆಲ್ಲನೆ ಕದ್ದುಮುಚ್ಚಿ ಬರಬೇಡ
ಮುಂದೆ ಬಾ, ಹೊಡೆ. ನಾನಾರೆಂದು ತೋರಿಸುವೆ.
ಈಗ ಇನ್ನೊಮ್ಮೆ ಬಿರುಗಾಳಿ ಎದ್ದಿದೆ
ದೋಣಿಯು ಸುಳಿಗಾಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ
ದಾಟುವೆನೆಂಬ ಧೈರ್ಯ ನನಗಿದೆ
(ಉತ್ಥಾನ ಮಾಸಪತ್ರಿಕೆಯ ಸೆಪ್ಟೆಂಬರ್  2018ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
https://issuu.com/utthanamagazine/docs/atalji_utthana_september_2018


No comments:

Post a Comment