ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಪ್ರಯುಕ್ತ ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್ (ಫಸ್ಟ್) ವತಿಯಿಂದ ಅಕ್ಟೋಬರ್ 2ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಸಮಯಾತೀತ ಮಹಾತ್ಮ ಗಾಂಧಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹರಾದ ಡಾ|| ಜಯಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ನೀಡಿದರು. ಅದರ ಪೂರ್ಣಪಾಠ ಇಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ 70 ವರ್ಷಗಳಿಂದ ತನ್ನ ಪ್ರಾತಃಸ್ಮರಣೆಯಲ್ಲಿ ಗಾಂಧಿಯವರನ್ನು ಸ್ಮರಿಸುತ್ತ ಬಂದಿದೆ. ಸಮಾಜದ ದೋಷ ನಿವಾರಣೆಗೆ ಗಾಂಧೀಜಿ ಪ್ರಯತ್ನಿಸಿದರು. 1934ರಲ್ಲಿ ವಾರ್ಧಾ ಸಮೀಪದಲ್ಲಿ ನಡೆಯುತ್ತಿದ್ದ ಸಂಘದ ಶಿಬಿರಕ್ಕೆ ಗಾಂಧಿ ಬೇಟಿ ನೀಡಿದ್ದರು. ಸಂಘ ತಂದ ಪರಿವರ್ತನೆ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. "ಸಾಮರಸ್ಯಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿ ಸಂಘ ಇದೆ. ಯಾವುದೇ ಸ್ಪೃಶ್ಯ-ಅಸ್ಪೃಶ್ಯ ಭಾವನೆ ಇಲ್ಲದೆ ಅಲ್ಲಿ ಆಗುತ್ತಿರುವ ಪರಿವರ್ತನೆಯನ್ನು ಕಂಡು ನನಗೆ ಆಶ್ಚರ್ಯವಾಯಿತು" ಎಂದು ಗಾಂಧೀಜಿ ಹೇಳಿದರು. ಅಂತಹ ಪರಿವರ್ತನೆಯನ್ನು ತರುವಲ್ಲಿ ಸಂಘ ಆರಂಭದಿಂದಲೇ ಯಶಸ್ವಿಯಾಗಿದೆ. ಆಟಗಳ ಸಂದರ್ಭದಲ್ಲಿಯೂ ಕೂಡ ತಂಡಗಳನ್ನು ಬೇರೆಬೇರೆ ಹೆಸರುಗಳಿಂದ ಕರೆಯುವ ಮೂಲಕ ಮಹಾಪುರುಷರ ಸ್ಮರಣೆ ಮಾಡುತ್ತಾ ಬಂದಿದೆ. ಗಾಂಧಿ ಜಯಂತಿಯ ೧೫೦ನೇ ವರ್ಷವಾದ ಈ ವರ್ಷದಲ್ಲಿ ಇಡೀ ಸಮಾಜವನ್ನು ದೇಶ ಹಿತದ ಚಿಂತನೆಯ ಕಡೆಗೆ ತಿರುಗಿಸುವ ಪ್ರಯತ್ನ ಆಗಬೇಕಾಗಿದೆ.
ಗಾಂಧಿಜೀ ಅನೇಕ ಮುಖಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಮುಖ್ಯವಾದ ಎರಡು ದಿಕ್ಕುಗಳನ್ನು ತೆಗೆದುಕೊಳ್ಳುವುದಾದರೆ, ಒಂದು ಸತ್ಯಾಗ್ರಹಗಳು. ಸ್ವಚ್ಛ ರಾಜಕೀಯ, ಅಹಿಂಸೆ- ಇವುಗಳ ಮೂಲಕ ಜನರನ್ನು ಪ್ರೇರೇಪಿಸಿದ್ದು; ಸ್ವತಃ ಮುಂಚೂಣಿಯಲ್ಲಿ ನಿಂತು ಅದನ್ನು ಯಶಸ್ವಿಗೊಳಿಸಿದ್ದು. ಎರಡನೆಯದ್ದು ಸಾಮಾನ್ಯ ಜನರ ಮಧ್ಯೆ ದೇಶಪ್ರೇಮದ ಭಾವನೆಯನ್ನು ಬಿತ್ತರಿಸಿದ್ದು ಮತ್ತು ಪ್ರಮುಖ ವ್ಯಕ್ತಿಗಳಿಗೆ ಕೂಡ ಸಮಾಜಕ್ಕಾಗಿ ಬದುಕುವ ರೀತಿಯನ್ನು ಕಲಿಸಿಕೊಟ್ಟಿದ್ದು. ಸತ್ಯಾಗ್ರಹ ಮಾಡಬೇಕಾದ ಸಂದರ್ಭಗಳಲ್ಲಿ, ಮುಖ್ಯವಾಗಿ ತುರ್ತುಪರಿಸ್ಥಿತಿಯಂತಹ ಸನ್ನಿವೇಶಗಳಲ್ಲಿ ಸತ್ಯಾಗ್ರಹಕ್ಕೆ ಯಶಸ್ಸು ತಂದುಕೊಟ್ಟದ್ದು ಸಂಘ. ಯಾರ ಬಗೆಗೂ ವಿರೋಧ ಇಲ್ಲದೆ ಯಾವುದೇ ಹೋರಾಟದಲ್ಲಿ ಸತ್ಯ ಮತ್ತು ಸತ್ತ್ವ - ಇವೆರಡಕ್ಕೆ ಪ್ರಾಮುಖ್ಯತೆ ಕೊಟ್ಟು, ಸರ್ವತ್ಯಾಗಕ್ಕೂ ಸಿದ್ಧರಾಗಿರುವಂತಹ ಗುಣಗಳನ್ನು ರೂಪಿಸಿದ್ದು ಸತ್ಯಾಗ್ರಹ. ಒಂದು ಜನಸಮೂಹಕ್ಕೆ ಹೋರಾಟ ಅಥವಾ ಸತ್ಯಾಗ್ರಹದ ಬಗ್ಗೆ ಸೂಚನೆ ಕೊಟ್ಟರೆ ಅದು ಮೂರು ಬಿಂದುಗಳಲ್ಲಿ ನಡೆಯಬೇಕಾಗುತ್ತದೆ. ಸತ್ಯಕ್ಕೂ ಸತ್ತ್ವಕ್ಕೂ ಯಶಸ್ಸಾಗಬೇಕು; ಮತ್ತು ಅದರಲ್ಲಿ ತೊಡಗಿದವರು ಸರ್ವತ್ಯಾಗಕ್ಕೂ ಸಿದ್ಧರಾಗಬೇಕು. ಇದನ್ನು ಸಾಮಾನ್ಯ ಜನರಲ್ಲೂ ಉಂಟುಮಾಡುವಲ್ಲಿ ಗಾಂಧೀಜಿ ಯಶಸ್ವಿಯಾದರು.
ಒಮ್ಮೆ ಒಬ್ಬ ಸಾಮಾನ್ಯ ವ್ಯಕ್ತಿ, ಕೇವಲ ಲಂಗೋಟಿ ಧರಿಸಿದ ಭಿಕ್ಷುಕ ಗಾಂಧಿಯವರು ಇರುವಲ್ಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ, ಅವರ ಕಾಲ ಬಳಿ ಒಂದು ಐದೋ ಹತ್ತೋ ಕೆಲವೇ ಪೈಸೆಗಳನ್ನು ಇಟ್ಟು ಹೋಗುತ್ತಾನೆ. ಅಲ್ಲಿದ್ದವರಿಗೂ ಆಶ್ಚರ್ಯ. ಅದನ್ನು ಸ್ವೀಕರಿಸಿದ ಗಾಂಧಿ ಸ್ನೇಹಿತರಿಗೆ ಸಹಪಾಠಿಗಳಿಗೆ ಹೇಳುತ್ತಾರೆ: 'ಈ ದೇಶದ ಚಿಂತನೆಯೇ ಹೀಗೆ. ಅವನು ಸಾಮಾನ್ಯರಲ್ಲಿ ಸಾಮಾನ್ಯ. ಆದರೆ ಅವನಿಗೂ ದೇಶಕ್ಕಾಗಿ ಏನಾದರೂ ಕೊಡಬೇಕು ಎನ್ನುವ ಭಾವನೆ ಇದೆ. ಗಾಂಧೀಜಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅವನಿಗೆ ಗೊತ್ತಿದೆ. ಅದಕ್ಕಾಗಿ ತನ್ನ ಪಾಲಿನ ಸಣ್ಣ ಕಾಣಿಕೆಯನ್ನು ನನಗೆ ಒಪ್ಪಿಸಿದ್ದಾನೆ. ಕಾಣಿಕೆ ಎಷ್ಟೆಂಬುದು ಮುಖ್ಯವಲ್ಲ; ಅವನ ಭಾವನೆಗಳೇ ಮುಖ್ಯ’ ಎಂದರು.
ಗಾಂಧಿಯವರಿಂದ ಪ್ರೇರಿತರಾದ ವಿನೋಬಾ ಭಾವೆ ಅವರು ಭೂದಾನ ಚಳವಳಿಯನ್ನು ನಡೆಸಿದರು; ಉಳ್ಳವರು ಜಮೀನಿನ ದಾನ ಮಾಡುವ ಬಗ್ಗೆ ಪ್ರೇರಣೆ ನೀಡಿದರು. ಆ ಚಳವಳಿಯಲ್ಲಿ ೬ ಲಕ್ಷ ಎಕರೆಗೂ ಅಧಿಕ ಭೂಮಿಯನ್ನು ದಾನವಾಗಿ ಸಂಗ್ರಹಿಸಿ ಅಗತ್ಯವಿದ್ದವರಿಗೆ ಸೇರಿಸಿದರು. ಬೆಂಗಳೂರಿನ ಡಾ|| ಎಚ್. ನರಸಿಂಹಯ್ಯನವರು ತಮ್ಮ ಇಡೀ ಜೀವನವನ್ನು ಗಾಂಧಿ ತತ್ತ್ವಕ್ಕಾಗಿ ಮುಡಿಪಾಗಿಟ್ಟಿದ್ದರು.
ಗಾಂಧಿ ಜೀವನವನ್ನು ವಿವರಿಸುತ್ತಾ ಸರ್ದಾರ್ ಪಟೇಲರು "ಭಾರತ ವೈವಿಧ್ಯವಾಗಿರುವ ದೇಶ. ಇಲ್ಲಿ ಒಬ್ಬ ವ್ಯಕ್ತಿ ಒಂದೊಂದು ರೀತಿಯಲ್ಲಿದ್ದಾರೆ. ಇಂತಹ ದೇಶದಲ್ಲಿ ಅವರು ಸಾಮಾನ್ಯ ಜನರೂ ಕೂಡಾ ಒಂದು ಉದ್ದೇಶಕ್ಕೆ ಪ್ರೇರಣೆ ಪಡೆಯುವಂತೆ ಮಾಡಿದ್ದು ಹೇಗೆ? ವಿಶ್ವಮಟ್ಟದಲ್ಲಿ ಭಾರತಕ್ಕೊಂದು ಘನತೆಯನ್ನು ತಂದುಕೊಟ್ಟಿದ್ದು ಹೇಗೆ? ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ್ದು ನೋಡುವಾಗ ಬಹಳ ಯಶಸ್ವಿ ಸಂಘಟಕರ ರೀತಿಯಲ್ಲಿ ಜನರಿಗೆ ಪ್ರೇರಣೆ ನೀಡಿದ್ದು ಕಾಣಿಸುತ್ತದೆ" ಎಂದಿದ್ದರು.
ವಿಜ್ಞಾನಿ ಐನ್‌ಸ್ಟೀನ್, "ಸಾಮಾನ್ಯ ಮೂಳೆ, ರಕ್ತ-ಮಾಂಸಗಳಿದ್ದ ಒಬ್ಬ ವ್ಯಕ್ತಿ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವೆ? ಎಂದು ಮುಂದಿನ ದಿನಗಳಲ್ಲಿ ಊಹಿಸಲು ಕೂಡ ಸಾಧ್ಯವಾಗಲಾರದು" ಎಂದು ಗಾಂಧಿಯವರ ಗುಣಗಾನ ಮಾಡಿದ್ದಾರೆ.
ಗಾಂಧಿ ಒಂದು ಆಯಾಮದಲ್ಲಿ ಹೋರಾಟಕ್ಕೆ ಅನುವು ಮಾಡಿಕೊಟ್ಟರೆ, ಇನ್ನೊಂದು ಆಯಾಮದಲ್ಲಿ ಗ್ರಾಮಸ್ವರಾಜ್ಯದ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಅಭಿವೃದ್ದಿಪಡಿಸುವುದು ಹೇಗೆಂದು ಕಲಿಸಿಕೊಟ್ಟಿದ್ದಾರೆ. ಗ್ರಾಮದಲ್ಲಿರುವ ಸಂಪನ್ಮೂಲಗಳನ್ನು ಗ್ರಾಮದ ಒಳಗೇ ಇರಿಸಿಕೊಂಡು ಅಲ್ಲಿನ ಆರ್ಥಿಕತೆಯನ್ನು ಉತ್ತಮಪಡಿಸಬೇಕು. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಿ ಸುರಕ್ಷಿತ ಸುಭದ್ರ ಸ್ವಾವಲಂಬಿ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆಯೆ? ಗೋಹತ್ಯೆಯನ್ನು ನಿಷೇಧಿಸಿ ಗೋವುಗಳ ಮೂಲಕ ಸಂಸ್ಕೃತಿ, ಪರಂಪರೆ - ಇವುಗಳನ್ನು ಉಳಿಸುವ ದೃಷ್ಟಿಯಿಂದ ಪ್ರಯತ್ನಗಳನ್ನು ಮಾಡಬಹುದೆ? ಸ್ವರಾಜ್ಯ ಅಂದರೆ ನಮ್ಮ ದೇಶದ ಉತ್ಪನ್ನಗಳನ್ನು ನಾವು ಬಳಕೆ ಮಾಡುವ ದೃಷ್ಟಿಯಿಂದ, ಸ್ವದೇಶಿ ಚಿಂತನೆಗಳನ್ನು ಜಾರಿಗೆ ತರಬಹುದೆ? ನೀರು ಸಣ್ಣ ಪ್ರಮಾಣದ್ದೇ ಇರಬಹುದು; ಅದನ್ನು ಉಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ನಾವು ನಮ್ಮ ಕೊಡುಗೆ ನೀಡಬಹುದೆ? - ಹೀಗೆ ಅವರ ಅನೇಕ ವಾದಗಳನ್ನು ನಾವು ಕೇಳುತ್ತೇವೆ. ’ಪ್ರಕೃತಿಯು ಮನು?ನ ಅಗತ್ಯಗಳನ್ನು ಪೂರೈಸಬಹುದು; ಆದರೆ ದುರಾಸೆಗಳನ್ನಲ್ಲ’ ಎಂದು ಗಾಂಧಿ 1909ರಲ್ಲೇ ಹೇಳಿದ್ದರು. ದುರಾಸೆಯಲ್ಲದ ಮುನು?ನ ಅಗತ್ಯ ಏನಿದೆ ಅದನ್ನು ಪ್ರಕೃತಿ ಪೂರೈಸುತ್ತದೆ. ದುರಾಸೆಗಳನ್ನು ಕಡಮೆ ಮಾಡಿ ಪ್ರಕೃತಿಯ ಸಂಪನ್ಮೂಲಗಳನ್ನು ಅಗತ್ಯಕ್ಕೆ ಮಾತ್ರ ಬಳಸಿಕೊಳ್ಳಲು ಸಾಧ್ಯವೇ? - ಎಂದು ಗಾಂಧಿ ಪ್ರಶ್ನಿಸಿದರು.
ಒಮ್ಮೆ ಅಲಹಾಬಾದಿನಲ್ಲಿ ನೀರು ಹಾಕುತ್ತಿದ್ದ ನೆಹರು, ನೀರನ್ನು ಚೆಲ್ಲಿದರು. ಅದನ್ನು ಗಮನಿಸಿದ ಗಾಂಧಿ `ನೀರನ್ನು ಚೆಲ್ಲಬೇಡಿ’ ಎಂದರು. ಆಗ ನೆಹರು ’ಗಂಗಾನದಿಯಲ್ಲಿ ಬೇಕಾದಷ್ಟು ನೀರು ಹರಿಯುತ್ತಿದೆ; ನಾನದನ್ನು ಉಪಯೋಗಿಸುತ್ತೇನೆ’ ಎಂದು ಉತ್ತರಿಸಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಾಂಧಿ ’ಪರಿಸರದಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳು ಎಲ್ಲರಿಗೂ ಸೇರಿದ್ದು. ನಾವೇ ಅದರ ವಾರಸುದಾರರೆಂದು ಬಳಸುತ್ತಾ ಹೋಗುವುದು ಸರಿಯಲ್ಲ. ನಾವದನ್ನು ಉಳಿಸಬೇಕು" ಎಂದು ಸಲಹೆ ನೀಡಿದರು.
ಹೀಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಿಸರ ಕಾಳಜಿ, ಸಾಮಾಜಿಕ ಕಾಳಜಿ, ಹೋರಾಟದ ರೂಪುರೇಷೆಗಳು - ಇದರ ಮೂಲಕ ಸಮಾಜಕ್ಕೆ ಶಕ್ತಿ ಕೊಡುವ ಅನೇಕ ಮುಖಗಳಲ್ಲಿ ಸಮಾಜವನ್ನು ಎಚ್ಚರಗೊಳಿಸಿದ ಒಬ್ಬ ಹಿರಿಯ, ಪ್ರಮುಖ ಮಾರ್ಗದರ್ಶಕರೆಂದರೆ ಗಾಂಧೀಜಿ. ಅವರ ಜೀವನದ ಮೂಲಕವೇ ನಾನಾಜಿ ದೇಶಮುಖ್, ದೀನದಯಾಳ್ ಉಪಾಧ್ಯಾಯ ಮೊದಲಾದವರು ಪ್ರೇರಣೆ ಪಡೆದರು. ಅಂತ್ಯೋದಯ ಕಾರ್ಯಕ್ರಮಗಳ ಮೂಲಕ ಸಾಮಾನ್ಯರನ್ನು ಮುಟ್ಟುವ ರೀತಿಯಲ್ಲಿ ನಮ್ಮ ಪ್ರಯತ್ನಗಳೇನಿವೆ? ಅದರಲ್ಲಿ ಎಷ್ಟು ಯಶಸ್ಸು ಸಿಕ್ಕಿದೆ? ಈ ಭಾವನೆ ಸಮಾಜದ ಎಲ್ಲರಲ್ಲಿ ಉಂಟಾಗಬೇಕು. ಸಮಾಜದ ಬಗ್ಗೆ ನನಗೊಂದು ಪಾಲುಗಾರಿಕೆ ಇದೆ; ಹೊಣೆಗಾರಿಕೆ ಇದೆ. ಸಮಾಜದ ಕಾರ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಮಾಜವನ್ನು ಉತ್ತಮವಾಗಿ ಮಾಡುವ ಹೊಣೆ ನಮ್ಮೆಲ್ಲರ ಮೇಲೂ ಇದೆ. ಆ ಕರ್ತವ್ಯಭಾವವನ್ನು ಹೆಚ್ಚು ಹೆಚ್ಚು ಜಾಗೃತಗೊಳಿಸಿದಾಗ ಯಶಸ್ಸು ಆಗಿಯೇ ಆಗುತ್ತದೆ ಎಂದು ಗಾಂಧೀಜಿ ಹೇಳಿದರು. ಇದಕ್ಕೊಂದು ಸಣ್ಣ ಉದಾಹರಣೆ ಸ್ವಚ್ಛ ಭಾರತ ಪರಿಕಲ್ಪನೆಯಿಂದಾಗಿ ಶೌಚಾಲಯ ಹೊಂದಿರುವ ಮನೆಗಳ ಪ್ರಮಾಣ ಶೇ. 30 ರಿಂದ ಈಗ ಶೇ. 95ಕ್ಕೆ ಏರಿರುವುದು. ಚಿಕ್ಕ ಮಕ್ಕಳು ಕೂಡ ಚಾಕಲೇಟ್ ತಿಂದ ಕವರನ್ನು ಎಲ್ಲೆಂದರಲ್ಲಿ ಎಸೆಯದೇ ಬ್ಯಾಗಿನಲ್ಲೋ ಜೇಬಿನಲ್ಲೋ ಇಟ್ಟುಕೊಂಡು ಹೋಗುವುದನ್ನು ಕಾಣುತ್ತೇವೆ. ಹೊರಗೆ ಬಹಿರ್ದೆಸೆಗೆ (ಬಯಲು ಶೌಚಾಲಯ) ಹೋಗದಿರುವ ಸ್ಥಿತಿ ಬಹಳ ದೊಡ್ಡ ಪ್ರಮಾಣದಲ್ಲಿ - ನಾಲ್ಕೂವರೆ ಐದು ಲಕ್ಷ ಗ್ರಾಮಗಳಲ್ಲಿ - ಜಾರಿಯಾಗಿದೆ, ಕಾರ್ಯಗತವಾಗಿದೆ. ಗಾಂಧೀಜಿ ಅವರ ಪ್ರೇರಣೆ ಚಿಂತನೆಗೆ ಪೂರಕವಾಗಿ ಸಂಘದ ಕಾರ್ಯ ನಡೆಯುತ್ತಿದೆ.
ಈ ಕಾರ್ಯವನ್ನು ಜನಸಮುದಾಯದ ಮೂಲಕ ಇನ್ನಷ್ಟು ಹೆಚ್ಚು ಮಾಡಲು ಅವರ ಮಾರ್ಗದರ್ಶನ, ಪ್ರೇರಣೆ ನಮಗೆ ದೊರೆಯಲಿ. ನಾವೆಲ್ಲ ಈ ಕಾರ್ಯದಲ್ಲಿ ಕೈಜೋಡಿಸುವಂತಾಗಲಿ.
No comments:
Post a Comment