Friday, 30 November 2018

ಸರ್ಕಾರೀ ಸವಲತ್ತುಗಳಿಲ್ಲದೇ 'ಗಾಂಧಿ' ಪರಿವಾರ ಇರಬಲ್ಲದೇ?

'ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿ’ ಎಂದು ಚುನಾವಣೆ ಸಂದರ್ಭದಲ್ಲಿ ಮತದಾರನಿಗೆ ಕೈಮುಗಿದು ಅಂಗಲಾಚಿ ಬೇಡಿಕೊಳ್ಳುವ ಅದೆಷ್ಟು ಜನಪ್ರತಿನಿಧಿಗಳು ನುಡಿದಂತೆ ನಡೆದುಕೊಂಡಿದ್ದಾರೆ? ತಮ್ಮ ಪ್ರಣಾಳಿಕೆಯ ೩೦% ಭಾಗ ಪೂರ್ಣಗೊಳಿಸಿದ್ದರೂ ಇಂದಿನ ಭಾರತದ ಚಿತ್ರಣವೇ ಬದಲಾಗಿರುತ್ತಿತ್ತು! ಅದಾಗಲೇ ಇಲ್ಲ; ಆದರೆ ಈ ಜನಪ್ರತಿನಿಧಿಗಳ ಜೀವನಮಟ್ಟ ಆಸ್ತಿಪಾಸ್ತಿ ವರ್ಷದಿಂದ ವರ್ಷಕ್ಕೆ ವೃದ್ದಿಸಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಮನವಿದಾರರು, ಪರಾಮರ್ಶಕರು ಹಾಗೂ ನಿರ್ಣಯಕರ್ತರು - ಈ ಮೂರೂ ಅಧಿಕಾರ ಇವರಲ್ಲಿಯೇ ಇರುವುದರಿಂದ ತಮ ಸಂಬಳಸಾರಿಗೆ ಮುಂತಾದ ಸೌಲಭ್ಯಗಳನ್ನು ತಮಗೆ ಬೇಕಾದಂತೆ ಹೆಚ್ಚಿಸಿಕೊಳ್ಳಲಾಗುತ್ತಿದೆ. ಈ ಸಂಬಳಸಾರಿಗೆ ಹೆಸರಿನಲ್ಲಿ ಸರ್ಕಾರಿ ಬೊಕ್ಕಸಕ್ಕೆ ಸುಳ್ಳುಲೆಕ್ಕ ನೀಡಿದ ಅದೆಷ್ಟು ಜನಪ್ರತಿನಿಧಿಗಳು ನಮ್ಮ ನಡುವೆ ಇಲ್ಲ! ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ನಿವಾಸ ತೋರಿಸಿ ಮತದಾನ ಮಾಡಿದ್ದ ಜನಪ್ರತಿನಿಧಿಗಳು ಸಂಬಳಸಾರಿಗೆಗಾಗಿ ಇನ್ನೊಂದು ಊರಿನ ಹೆಸರಿನಲ್ಲಿ ಹಣಪಡೆದು ಸಿಕ್ಕಿಹಾಕಿಕೊಂಡು ವಿಚಾರಣೆಗೊಳಪಡುತ್ತಿರುವುದು ಇದೆ. ಅವಧಿ ಮುಗಿದರೂ ಜನಪ್ರತಿನಿಧಿಗಳಿಗೆ ಸಿಗುವ ವಸತಿ, ಬಂಗಲೆಗಳನ್ನು ಬಿಟ್ಟುಕೊಡಲು ತಯಾರಿಲ್ಲದೇ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡ ಜನಪ್ರತಿನಿಧಿಗಳಿಗೂ ಬರವಿಲ್ಲ.
ದೇಶದ ಪ್ರಥಮ ಪ್ರಜೆ ಎಂಬ ಉನ್ನತ ಹುದ್ದೆಯನ್ನಲಂಕರಿಸದವರೂ ಇದಕ್ಕೆ ಹೊರತಾಗಿಲ್ಲ! ಎಂಬುದು ದುರ್ದೈವ. ರಾಷ್‌ಟರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರು ನಿವೃತ್ತರಾದಾಗ ತಮಗೆ ದೇಶವಿದೇಶದ ಗಣ್ಯರು ನೀಡಿದಿದ್ದ ೧೫೦ಕ್ಕೂ ಅಧಿಕ ಚಿತ್ತಾಕರ್ಷಕ ಬೆಲೆಬಾಳುವ ಉಡುಗೊರೆಗಳನ್ನು ಲಾರಿಗಳಲ್ಲಿ ತುಂಬಿಸಿಕೊಂಡು ಮನೆಗೆ ಕೊಂಡೊಯ್ದು ಸುದ್ದಿಯಾಗಿದ್ದರು! ಹೀಗೆ ರಾಷ್ಟ್ರಪತಿಗಳಿಂದ ಹಿಡಿದು ಗ್ರಾಮಪಂಚಾಯತ್ ಸದಸ್ಯರವರೆಗೆ ಸರ್ಕಾರೀ ಸವಲತ್ತುಗಳಿಗೆ ಅಂಟಿಕೊಂಡಿರುವುದನ್ನು ನಾವು ದಿನನಿತ್ಯ ಕಾಣುತ್ತಿರುತ್ತೇವೆ.
ಇವರೆಲ್ಲರ ನಡುವೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿಭಿನ್ನವಾಗಿ ಕಾಣುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಅಜಾತ ಶತ್ರು ಎಂಬಂತೆ ಬದುಕಿದರು. ಅವರೆಂದೂ ’ನಾನು ರೈತನ ಮಗ...’, ’ನಾನು ಈ ಜಾತಿಯವನು...’ ಎಂದು ಸೋಗು ಹಾಕಿದವರಲ್ಲ. ತಮ್ಮ ಕೆಲಸ, ಕಾರ್ಯದ ಮೂಲಕವೇ ಜನಮಾನಸದಲ್ಲಿ ಸ್ಥಾನ ಪಡೆದವರು. ಅವರು ಪ್ರಧಾನಿಯಾಗಿದ್ದಾಗ ತಮ್ಮ ಹೆಸರಿನ ಯಾವುದೇ ಸರ್ಕಾರಿ ಯೋಜನೆಗಳು, ಸಂಸ್ಥೆಗಳು ಇರಕೂಡದೆಂದು ಕಟ್ಟುನಿಟ್ಟಾದ ಸೂಚನೆ ನೀಡಿದ್ದರು. ಹಾಗಿದ್ದರೂ ಗ್ರಾಮೀಣ ರಸ್ತೆ ಯೋಜನೆಗೆ ’ಅಟಲ್ ಗ್ರಾಮ ಸಡಕ್ ಯೋಜನೆ’ ಎಂದು ಹೆಸರಿಟ್ಟಾಗ, ಇದನ್ನು ತೀವ್ರವಾಗಿ ವಿರೋಧಿಸಿದ ಅಟಲ್ ಜೀ ಅದನ್ನು ’ಪ್ರಧಾನಮಂತ್ರಿ ಗ್ರಾಮ ಸಡಕ್’ ಯೋಜನೆ ಎಂದು ಬದಲಾಯಿಸಿದರು.
ಸರ್ಕಾರೀ ಬಂಗಲೆ ಸವಲತ್ತುಗಳನ್ನು ಅವರೆಂದೂ ಬಯಸಲಿಲ್ಲ. ತಾವು ನಾಲ್ಕೈದು ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿದ್ದರೂ ತಮ್ಮ ಕುಟುಂಬವನ್ನು ರಾಜಕೀಯದಿಂದ ಮಾತ್ರವಲ್ಲ ಸಕಾರೀ ಬಂಗಲೆಗಳಿಂದ ದೂರವೇ ಇಟ್ಟಿದ್ದರು. ಇದೀಗ ಅವರ ಕುಟುಂಬವೂ ದೈವಾಧೀನರಾದ ಅಟಲ್‌ಜೀ ಅವರ ಧ್ಯೇಯವನ್ನು ಎತ್ತಿ ಹಿಡಿದಿದೆ.
ಮಾಜಿ ಪ್ರಧಾನಮಂತ್ರಿ ಕುಟುಂಬಗಳಿಗೆ ಭದ್ರತೆ, ವಸತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ. ಅದರಂತೆ ವಾಜಪೇಯಿ ದತ್ತು ಪುತ್ರಿ ನಮಿತಾ, ಅವರ ಪತಿ ಹಾಗೂ ಮೊಮ್ಮಗಳು ವಾಜಪೇಯಿ ಜೊತೆ ಕೃಷ್ಣ ಮೆನನ್ ಮಾರ್ಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು. ಇದೀಗ ವಾಜಪೇಯಿ ನಿಧನವಾಗಿದ್ದಾರೆ, ಹೀಗಾಗಿ ಸರ್ಕಾರಿ ಬಂಗಲೆಯನ್ನು ತೊರೆಯಲು ವಾಜಪೇಯಿ ಕುಟುಂಬ ನಿರ್ಧರಿಸಿದೆ. ಕುಟುಂಬದ ಖರ್ಚುವೆಚ್ಚಗಳನ್ನು ನಿಭಾಯಿಸುವ ಸಾಮರ್ಥ್ಯ ಮನಗಿದೆ. ಸರ್ಕಾರದ ಖಜನೆಗೆ ಹೊರೆಯಾಗುವುದು ನಮಗೆ ಇಷ್ಟವಿಲ್ಲ. ನಾವು ಸ್ವತಂತ್ರ್ಯ ಜೀವನ ನಡೆಸಲು ನಿರ್ಧರಿಸಿದ್ದೇವೆ. ನಮಗೆ ಅನುಮತಿ ನೀಡಿ’ ಎಂದು ವಾಜಪೇಯಿ ಪುತ್ರಿ ನಮಿತಾ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.
ಇದೇ ರೀತಿ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಹೆಚ್.ಡಿ. ದೇವೇಗೌಡ ಕುಟುಂಬವೂ ದೆಹಲಿಯಲ್ಲಿ ಸರ್ಕಾರಿ ಬಂಗಲೆ, ಭದ್ರತೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯುತ್ತಿದೆ. ಬಹಳ ಆಸಕ್ತಿಕರ ಸಂಗತಿಯೆಂದರೆ ಸ್ವಾತಂತ್ರ್ಯಾನಂತರ ಸಂಪೂರ್ಣ ನೆಹರು-ಗಾಂಧಿ ಪರಿವಾರ ಬೆಳೆದಿದ್ದೂ ಈ ಸರ್ಕಾರೀ ಸೌಲಭ್ಯಗಳಲ್ಲಿ.
ನೆಹರು(ಗಾಂಧಿ) ಪರಿವಾರ ಸ್ವತಂತ್ರ ಭಾರತದಲ್ಲಿ ಅನಭಿಷಕ್ತ ರಾಜಕುಟುಂಬ. ಈ ಇಡೀ ವಂಶದ ಬದುಕಿದ್ದು ಮತ್ತು ಬದುಕುತ್ತಿರುವುದು ಸರ್ಕಾರೀ ಸೌಲಭ್ಯಗಳಲ್ಲಿ. ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ (ಈ ಕುಟುಂಬದ ಅಳಿಯನಾಗಿರುವುದರಿಂದ ರಾಬರ್ಟ್ ವಾರ್ಧಾ ಕೂಡಾ) ಇದೇ ಯೋಜನೆಯಡಿ ಭದ್ರತೆ ಸೇರಿದಂತೆ ಎಲ್ಲ ಸರ್ಕಾರೀ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಈ ಕುಟುಂಬ ಎಂದಾದರೂ ಈ ಸೌಲಭ್ಯಗಳು ನಮಗೆ ಬೇಡ; ನಾವು ಸ್ವತಂತ್ರವಾಗಿ ಬದುಕುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡುವುದನ್ನು ಊಹಿಸಲು ಸಾಧ್ಯವೇ? ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನೇ ಬೇರಾರಿಗೂ ಬಿಟ್ಟುಕೊಡಲು ಸಿದ್ಧವಿಲ್ಲದ ಈ ಕುಟುಂಬ ಸರ್ಕಾರೀ ಸವಲತ್ತು ಬಿಟ್ಟು ಬದುಕುತ್ತದೆಯೇ?
ಸರ್ಕಾರೀ ಸವಲತ್ತುಗಳನ್ನು ಬೇಡ ಎನ್ನುವುದು ಆಮೇಲಿನ ಮಾತು, ನೆಹರು-ಗಾಂಧಿ ಕುಟುಂಬಕ್ಕೆ ಹೊರತಾದ ಮಹಾಪುರುಷರೇ ಭಾರತದಲ್ಲಿ ಇಲ್ಲ ಎಂಬಂತೆ ೭೦ ವರ್ಷಗಳ ಕಾಲ ದೇಶವನ್ನು ಆಳಿದೆ. ದೇಶದ ಎಲ್ಲ ಪ್ರತಿಷ್ಠಿತ ಸಂಸ್ಥೆ, ಯೋಜನೆಗಳಿಂದ ಹಿಡಿದು ರಸ್ತೆ-ಗಲ್ಲಿಗಳಿಗೆ ನೆಹರು, ಇಂದಿರಾ, ರಾಜೀವ್ ಗಾಂಧಿ ಅವರ ಹೆಸರುಗಳನ್ನಿಟ್ಟು ತಮ್ಮ ಕುಟುಂಬದ ಗುಣಗಾನ ಮಾಡಿಕೊಂಡಿದೆ. ಈಗಿರುವ ಹೆಸರುಗಳನ್ನು ಬದಲಾಯಿಸ ಹೊರಟರಂತೂ ಮುಗಿಯಿತು. ಪತ್ರಕರ್ತರಿಂದ ಹಿಡಿದು ದೇಶದ ಬೀದಿಬೀದಿಗಳ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯ ವಿರುದ್ಧ ವಾಚಾಮಗೋಚರ ಬೈಗುಳನ್ನುಗುಳುತ್ತಾರೆ. ದೇಶದಾದ್ಯಂತ ಪ್ರತಿಭಟನೆಗಳಾಗುತ್ತವೆ! ಹೊಸ ಯೋಜನೆಗಳಿಗೂ ಇತರರ ಹೆಸರಿಡಹೊರಟಾಗಲೆಲ್ಲ ಈ ಕುಟುಂಬದ ಚಡಪಡಿಕೆ ಎಂತದ್ದು ಎನ್ನುವುದು ಪಟೇಲರ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್ ಪ್ರತಿಕ್ರಿಯೆಯೇ ದೃಷ್ಟಾಂತ.
ನೆಹರುವನ್ನು ಧೀಮಂತವಾಗಿಸುವುದಕ್ಕಾಗಿಯೇ ಸಾವರ್ಕರ್‌ಗೆ ’ಕೋಮುವಾದಿ’, ಮುಸ್ಲಿಮ್ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿದ್ದು, ಸುಭಾಷ್‌ಚಂದ್ರ, ಭಗತ್ ಸಿಂಗ್ ಮೊದಲಾದವರು ದಾರಿತಪ್ಪಿದ ದೇಶಭಕ್ತರಾಗಿದ್ದು, ಪಟೇಲ್, ಶಾಸ್ತ್ರೀ ಜನ್ಮದಿನದಂದೂ ಸ್ಮರಣೆಗೆ ಯೋಗ್ಯರಲ್ಲದಿರುವುದು ಇಂತಹ ಸಾವಿರಾರು ಉದಾಹರಣೆಗಳು ’ನೆಹರು ಕಂಡ ಭಾರತ’ದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ.
ದಿಲ್ಲಿಯಲ್ಲಿರುವ ಸರ್ಕಾರೀ ಆಸ್ತಿಗಳೆಲ್ಲವೂ ತಮ್ಮ ಪರಿವಾರದ ಆಸ್ತಿ ಎಂದು ಕಾಂಗ್ರೆಸ್ ಅಂದರೆ ಈ ಕುಟುಂಬ ಭಾವಿಸಿದೆ. ಇತ್ತೀಚೆಗೆ ಅಟಲ್‌ಜೀ ನಿಧನದ ನಂತರ ದೆಹಲಿಯಲ್ಲಿ ೨೫ ಎಕರೆ ವ್ಯಾಪ್ತಿಯ ತೀನ್ ಮೂರ್ತಿ ಭವನದ ವಿಶಾಲ ಆವರಣದಲ್ಲಿ ‘ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ’ವನ್ನು ನಿರ್ಮಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತು. ಸಂಪೂರ್ಣ ಕಾಂಗ್ರೆಸ್ಸಿಗರು ಪ್ರಧಾನಮಂತ್ರಿಗಳ ವಿರುದ್ಧ ತಿರುಗಿಬಿದ್ದರು. ದೇಶದ ಖಜಾನೆ ಲೂಟಿ ಹೊಡೆಯುವಾಗಲೆಲ್ಲ ಮೌನ ಸಮ್ಮತಿ ಸೂಚಿಸುತ್ತಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರೇ ಮುಂದೆ ನಿಂತು ಮೌನಮುರಿದು, ವಿರೋಧಿಸಿದರು, ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ನೆಹರು-ಗಾಂಧಿ ಪರಿವಾರಕ್ಕೆ ಹೊರತಾದ ಯಾವುದೇ ವ್ಯಕ್ತಿಗಳಿಗೆ ಜಾಗವಿಲ್ಲ ಎಂಬ ಕಾಂಗ್ರೆಸ್ ನಡವಳಿಕೆಯ ಹಿಂದೆ ನೆಹರು ಕಟ್ಟಿದ ಭ್ರಮಾಸೌಧ ಛಿದ್ರವಾಗುವ ಭಯ ಕಾಡುತ್ತಿದೆಯೇ?
ಗುಜರಾತಿನಲ್ಲಿ ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನು ಮೋದಿ ಲೋಕಾರ್ಪಣೆಗೊಳಿಸಿದ ಎರಡು ಮೂರು ದಿನಗಳಲ್ಲಿ ಪಟೇಲ್ ಕುಟುಂಬ ಆ ಪ್ರತಿಮೆಯ ಮುಂಭಾಗದಲ್ಲಿ ನಿಂತು ತೆಗೆಸಿಕೊಂಡ ಫೋಟೋವೊಂದು ವೈರಲ್ ಆಯಿತು. ಆ ಫೋಟೋದಲ್ಲಿರುವ ಸುಮಾರು ಅರವತ್ತೆಪತ್ತು ಜನರಲ್ಲಿ ಪಟೇಲರ ಹೆಸರಿನಲ್ಲಿ ಸರ್ಕಾರೀ ಸವಲತ್ತುಗಳನ್ನು ಪಡೆದ ಒಬ್ಬರು ಕೂಡಾ ಇಲ್ಲ!
ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ತದನಂತರದ ಭಾರತದ ನಿರ್ಮಾಣದಲ್ಲಿ ’ಕರ್ಮಣ್ಯೇ ವಾದಿಕಾರಾಸ್ತೇ, ಮಾ ಪಲೇಷು ಕ ದಾಚನ’ ಎಂಬಂತೆ ಬದುಕಿದ ಸಾವಿರಾರು ಉದಾಹರಣೆಗಳು ಭಾರತದ ಇತಿಹಾಸದಲ್ಲಡಗಿದೆ. ಸಂತಸದ ಸಂಗತಿಯೆಂದರೆ ಇದೀಗ ಇಂತಹ ಮಹಾಪುರುಷರ ಸ್ಮರಣೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭಗೊಂಡಿದೆ.
ಒಂದೆಡೆ ಅಧಿಕಾರಕ್ಕಾಗಿಯೇ ವಿಭಜಿತ ಭಾರತಕ್ಕೆ ಒಪ್ಪಿಗೆ ನೀಡಿ ೭೦ ವರ್ಷಗಳಿಂದ ಸರ್ಕಾರೀ ಸವಲತ್ತುಗಳ ಮೇಲೆಯೇ ಇಡೀ ವಂಶ ಜೀವನ ನಡೆಸುತ್ತಿದೆ. ಇನ್ನೊಂದೆಡೆ ಶ್ರೀಮಂತಿಕೆಯಿಲ್ಲದಿದ್ದರೂ ಸರ್ಕಾರೀ ಬೊಕ್ಕಸಕ್ಕೆ ಹೊರೆಯಾಗಲಾರೆವು, ಸ್ವಸಾಮರ್ಥ್ಯದ ಮೇಲೆ ಸ್ವಂತ ಜೀವನ ನಡೆಸುತ್ತೇವೆ ಎಂಬ ಸ್ವಾಭಿಮಾನಿ ದೇಶಭಕ್ತರು.
ಅಧಿಕಾರಕ್ಕಾಗಿ ಕುಟುಂಬದ ವೈಭವೀಕರಿಸುತ್ತಾ ಕೊನೆಗೆ ಕುಟುಂಬಕ್ಕಾಗಿ ದೇಶದ ಅಂತಸ್ಸತ್ವವನ್ನೇ, ದೇಶವನ್ನೇ ಅವಮಾನಿಸುವ ಈ ಕುಟುಂಬ ಅಟಲ್‌ಜೀಯಂತಹವರ ಆದರ್ಶ ಪಾಲಿಸಬಲ್ಲರು ಎಂದು ಊಹಿಸಲೂ ಸಾಧ್ಯವೇ?

Thursday, 11 October 2018

ಸಮಾಜವನ್ನು ಎಚ್ಚರಗೊಳಿಸಿದ ಮಾರ್ಗದರ್ಶಕ ಗಾಂಧಿಜೀ : ಡಾ|| ಜಯಪ್ರಕಾಶ್

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಪ್ರಯುಕ್ತ ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್ (ಫಸ್ಟ್) ವತಿಯಿಂದ ಅಕ್ಟೋಬರ್ 2ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಸಮಯಾತೀತ ಮಹಾತ್ಮ ಗಾಂಧಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹರಾದ ಡಾ|| ಜಯಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ನೀಡಿದರು. ಅದರ ಪೂರ್ಣಪಾಠ ಇಲ್ಲಿ ನೀಡಲಾಗಿದೆ.

ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್ (ಫಸ್ಟ್) ವತಿಯಿಂದ ಮಹಾತ್ಮಾ ಗಾಂಧಿ ಅವರ ೧೫೦ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಇದರೊಂದಿಗೆ ಇಡೀ ವರ್ಷ ಗಾಂಧೀಯವರ ವಿಚಾರಗಳನ್ನು ಸ್ಮರಣೆಗೆ ಪ್ರಾರಂಭ ನೀಡುತ್ತಿದ್ದೇವೆ. ಆರಂಭದಲ್ಲಿ ಹಾಡಿದ ’ವೈಷ್ಣವ ಜನತೋ...’ ಗಾಂಧೀಜಿಯವರಿಗೆ ಅತ್ಯಂತ ಪ್ರೀಯವಾದ ಹಾಡು. ಅದು ಬೇರೊಬ್ಬರ ಕಷ್ಟದಲ್ಲಿ ನಾನು ಭಾಗಿಯಾಗುತ್ತೇನೆ ಎನ್ನುವ ಆಶಯವನ್ನು ಪ್ರಕಟಿಸುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ 70 ವರ್ಷಗಳಿಂದ ತನ್ನ ಪ್ರಾತಃಸ್ಮರಣೆಯಲ್ಲಿ ಗಾಂಧಿಯವರನ್ನು ಸ್ಮರಿಸುತ್ತ ಬಂದಿದೆ. ಸಮಾಜದ ದೋಷ ನಿವಾರಣೆಗೆ ಗಾಂಧೀಜಿ ಪ್ರಯತ್ನಿಸಿದರು. 1934ರಲ್ಲಿ ವಾರ್ಧಾ ಸಮೀಪದಲ್ಲಿ ನಡೆಯುತ್ತಿದ್ದ ಸಂಘದ ಶಿಬಿರಕ್ಕೆ ಗಾಂಧಿ ಬೇಟಿ ನೀಡಿದ್ದರು. ಸಂಘ ತಂದ ಪರಿವರ್ತನೆ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. "ಸಾಮರಸ್ಯಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿ ಸಂಘ ಇದೆ. ಯಾವುದೇ ಸ್ಪೃಶ್ಯ-ಅಸ್ಪೃಶ್ಯ ಭಾವನೆ ಇಲ್ಲದೆ ಅಲ್ಲಿ ಆಗುತ್ತಿರುವ ಪರಿವರ್ತನೆಯನ್ನು ಕಂಡು ನನಗೆ ಆಶ್ಚರ್ಯವಾಯಿತು" ಎಂದು ಗಾಂಧೀಜಿ ಹೇಳಿದರು. ಅಂತಹ ಪರಿವರ್ತನೆಯನ್ನು ತರುವಲ್ಲಿ ಸಂಘ ಆರಂಭದಿಂದಲೇ ಯಶಸ್ವಿಯಾಗಿದೆ. ಆಟಗಳ ಸಂದರ್ಭದಲ್ಲಿಯೂ ಕೂಡ ತಂಡಗಳನ್ನು ಬೇರೆಬೇರೆ ಹೆಸರುಗಳಿಂದ ಕರೆಯುವ ಮೂಲಕ ಮಹಾಪುರುಷರ ಸ್ಮರಣೆ ಮಾಡುತ್ತಾ ಬಂದಿದೆ. ಗಾಂಧಿ ಜಯಂತಿಯ ೧೫೦ನೇ ವರ್ಷವಾದ ಈ ವರ್ಷದಲ್ಲಿ ಇಡೀ ಸಮಾಜವನ್ನು ದೇಶ ಹಿತದ ಚಿಂತನೆಯ ಕಡೆಗೆ ತಿರುಗಿಸುವ ಪ್ರಯತ್ನ ಆಗಬೇಕಾಗಿದೆ.

ಗಾಂಧಿಜೀ ಅನೇಕ ಮುಖಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಮುಖ್ಯವಾದ ಎರಡು ದಿಕ್ಕುಗಳನ್ನು ತೆಗೆದುಕೊಳ್ಳುವುದಾದರೆ, ಒಂದು ಸತ್ಯಾಗ್ರಹಗಳು. ಸ್ವಚ್ಛ ರಾಜಕೀಯ, ಅಹಿಂಸೆ- ಇವುಗಳ ಮೂಲಕ ಜನರನ್ನು ಪ್ರೇರೇಪಿಸಿದ್ದು; ಸ್ವತಃ ಮುಂಚೂಣಿಯಲ್ಲಿ ನಿಂತು ಅದನ್ನು ಯಶಸ್ವಿಗೊಳಿಸಿದ್ದು. ಎರಡನೆಯದ್ದು ಸಾಮಾನ್ಯ ಜನರ ಮಧ್ಯೆ ದೇಶಪ್ರೇಮದ ಭಾವನೆಯನ್ನು ಬಿತ್ತರಿಸಿದ್ದು ಮತ್ತು ಪ್ರಮುಖ ವ್ಯಕ್ತಿಗಳಿಗೆ ಕೂಡ ಸಮಾಜಕ್ಕಾಗಿ ಬದುಕುವ ರೀತಿಯನ್ನು ಕಲಿಸಿಕೊಟ್ಟಿದ್ದು. ಸತ್ಯಾಗ್ರಹ ಮಾಡಬೇಕಾದ ಸಂದರ್ಭಗಳಲ್ಲಿ, ಮುಖ್ಯವಾಗಿ ತುರ್ತುಪರಿಸ್ಥಿತಿಯಂತಹ ಸನ್ನಿವೇಶಗಳಲ್ಲಿ ಸತ್ಯಾಗ್ರಹಕ್ಕೆ ಯಶಸ್ಸು ತಂದುಕೊಟ್ಟದ್ದು ಸಂಘ. ಯಾರ ಬಗೆಗೂ ವಿರೋಧ ಇಲ್ಲದೆ ಯಾವುದೇ ಹೋರಾಟದಲ್ಲಿ ಸತ್ಯ ಮತ್ತು ಸತ್ತ್ವ - ಇವೆರಡಕ್ಕೆ ಪ್ರಾಮುಖ್ಯತೆ ಕೊಟ್ಟು, ಸರ್ವತ್ಯಾಗಕ್ಕೂ ಸಿದ್ಧರಾಗಿರುವಂತಹ ಗುಣಗಳನ್ನು ರೂಪಿಸಿದ್ದು ಸತ್ಯಾಗ್ರಹ. ಒಂದು ಜನಸಮೂಹಕ್ಕೆ ಹೋರಾಟ ಅಥವಾ ಸತ್ಯಾಗ್ರಹದ ಬಗ್ಗೆ ಸೂಚನೆ ಕೊಟ್ಟರೆ ಅದು ಮೂರು ಬಿಂದುಗಳಲ್ಲಿ ನಡೆಯಬೇಕಾಗುತ್ತದೆ. ಸತ್ಯಕ್ಕೂ ಸತ್ತ್ವಕ್ಕೂ ಯಶಸ್ಸಾಗಬೇಕು; ಮತ್ತು ಅದರಲ್ಲಿ ತೊಡಗಿದವರು ಸರ್ವತ್ಯಾಗಕ್ಕೂ ಸಿದ್ಧರಾಗಬೇಕು. ಇದನ್ನು ಸಾಮಾನ್ಯ ಜನರಲ್ಲೂ ಉಂಟುಮಾಡುವಲ್ಲಿ ಗಾಂಧೀಜಿ ಯಶಸ್ವಿಯಾದರು.

ಒಮ್ಮೆ ಒಬ್ಬ ಸಾಮಾನ್ಯ ವ್ಯಕ್ತಿ, ಕೇವಲ ಲಂಗೋಟಿ ಧರಿಸಿದ ಭಿಕ್ಷುಕ ಗಾಂಧಿಯವರು ಇರುವಲ್ಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ, ಅವರ ಕಾಲ ಬಳಿ ಒಂದು ಐದೋ ಹತ್ತೋ ಕೆಲವೇ ಪೈಸೆಗಳನ್ನು ಇಟ್ಟು ಹೋಗುತ್ತಾನೆ. ಅಲ್ಲಿದ್ದವರಿಗೂ ಆಶ್ಚರ್ಯ. ಅದನ್ನು ಸ್ವೀಕರಿಸಿದ ಗಾಂಧಿ ಸ್ನೇಹಿತರಿಗೆ ಸಹಪಾಠಿಗಳಿಗೆ ಹೇಳುತ್ತಾರೆ: 'ಈ ದೇಶದ ಚಿಂತನೆಯೇ ಹೀಗೆ. ಅವನು ಸಾಮಾನ್ಯರಲ್ಲಿ ಸಾಮಾನ್ಯ. ಆದರೆ ಅವನಿಗೂ ದೇಶಕ್ಕಾಗಿ ಏನಾದರೂ ಕೊಡಬೇಕು ಎನ್ನುವ ಭಾವನೆ ಇದೆ. ಗಾಂಧೀಜಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅವನಿಗೆ ಗೊತ್ತಿದೆ. ಅದಕ್ಕಾಗಿ ತನ್ನ ಪಾಲಿನ ಸಣ್ಣ ಕಾಣಿಕೆಯನ್ನು ನನಗೆ ಒಪ್ಪಿಸಿದ್ದಾನೆ. ಕಾಣಿಕೆ ಎಷ್ಟೆಂಬುದು ಮುಖ್ಯವಲ್ಲ; ಅವನ ಭಾವನೆಗಳೇ ಮುಖ್ಯ’ ಎಂದರು.

ಗಾಂಧಿಯವರಿಂದ ಪ್ರೇರಿತರಾದ ವಿನೋಬಾ ಭಾವೆ ಅವರು ಭೂದಾನ ಚಳವಳಿಯನ್ನು ನಡೆಸಿದರು; ಉಳ್ಳವರು ಜಮೀನಿನ ದಾನ ಮಾಡುವ ಬಗ್ಗೆ ಪ್ರೇರಣೆ ನೀಡಿದರು. ಆ ಚಳವಳಿಯಲ್ಲಿ ೬ ಲಕ್ಷ ಎಕರೆಗೂ ಅಧಿಕ ಭೂಮಿಯನ್ನು ದಾನವಾಗಿ ಸಂಗ್ರಹಿಸಿ ಅಗತ್ಯವಿದ್ದವರಿಗೆ ಸೇರಿಸಿದರು. ಬೆಂಗಳೂರಿನ ಡಾ|| ಎಚ್. ನರಸಿಂಹಯ್ಯನವರು ತಮ್ಮ ಇಡೀ ಜೀವನವನ್ನು ಗಾಂಧಿ ತತ್ತ್ವಕ್ಕಾಗಿ ಮುಡಿಪಾಗಿಟ್ಟಿದ್ದರು.

ಗಾಂಧಿ ಜೀವನವನ್ನು ವಿವರಿಸುತ್ತಾ ಸರ್ದಾರ್ ಪಟೇಲರು "ಭಾರತ ವೈವಿಧ್ಯವಾಗಿರುವ ದೇಶ. ಇಲ್ಲಿ ಒಬ್ಬ ವ್ಯಕ್ತಿ ಒಂದೊಂದು ರೀತಿಯಲ್ಲಿದ್ದಾರೆ. ಇಂತಹ ದೇಶದಲ್ಲಿ ಅವರು ಸಾಮಾನ್ಯ ಜನರೂ ಕೂಡಾ ಒಂದು ಉದ್ದೇಶಕ್ಕೆ ಪ್ರೇರಣೆ ಪಡೆಯುವಂತೆ ಮಾಡಿದ್ದು ಹೇಗೆ? ವಿಶ್ವಮಟ್ಟದಲ್ಲಿ ಭಾರತಕ್ಕೊಂದು ಘನತೆಯನ್ನು ತಂದುಕೊಟ್ಟಿದ್ದು ಹೇಗೆ? ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ್ದು ನೋಡುವಾಗ ಬಹಳ ಯಶಸ್ವಿ ಸಂಘಟಕರ ರೀತಿಯಲ್ಲಿ ಜನರಿಗೆ ಪ್ರೇರಣೆ ನೀಡಿದ್ದು ಕಾಣಿಸುತ್ತದೆ" ಎಂದಿದ್ದರು.

ವಿಜ್ಞಾನಿ ಐನ್‌ಸ್ಟೀನ್, "ಸಾಮಾನ್ಯ ಮೂಳೆ, ರಕ್ತ-ಮಾಂಸಗಳಿದ್ದ ಒಬ್ಬ ವ್ಯಕ್ತಿ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವೆ? ಎಂದು ಮುಂದಿನ ದಿನಗಳಲ್ಲಿ ಊಹಿಸಲು ಕೂಡ ಸಾಧ್ಯವಾಗಲಾರದು" ಎಂದು ಗಾಂಧಿಯವರ ಗುಣಗಾನ ಮಾಡಿದ್ದಾರೆ.
ಗಾಂಧಿ ಒಂದು ಆಯಾಮದಲ್ಲಿ ಹೋರಾಟಕ್ಕೆ ಅನುವು ಮಾಡಿಕೊಟ್ಟರೆ, ಇನ್ನೊಂದು ಆಯಾಮದಲ್ಲಿ ಗ್ರಾಮಸ್ವರಾಜ್ಯದ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಅಭಿವೃದ್ದಿಪಡಿಸುವುದು ಹೇಗೆಂದು ಕಲಿಸಿಕೊಟ್ಟಿದ್ದಾರೆ. ಗ್ರಾಮದಲ್ಲಿರುವ ಸಂಪನ್ಮೂಲಗಳನ್ನು ಗ್ರಾಮದ ಒಳಗೇ ಇರಿಸಿಕೊಂಡು ಅಲ್ಲಿನ ಆರ್ಥಿಕತೆಯನ್ನು ಉತ್ತಮಪಡಿಸಬೇಕು. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಿ ಸುರಕ್ಷಿತ ಸುಭದ್ರ ಸ್ವಾವಲಂಬಿ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆಯೆ? ಗೋಹತ್ಯೆಯನ್ನು ನಿಷೇಧಿಸಿ ಗೋವುಗಳ ಮೂಲಕ ಸಂಸ್ಕೃತಿ, ಪರಂಪರೆ - ಇವುಗಳನ್ನು ಉಳಿಸುವ ದೃಷ್ಟಿಯಿಂದ ಪ್ರಯತ್ನಗಳನ್ನು ಮಾಡಬಹುದೆ? ಸ್ವರಾಜ್ಯ ಅಂದರೆ ನಮ್ಮ ದೇಶದ ಉತ್ಪನ್ನಗಳನ್ನು ನಾವು ಬಳಕೆ ಮಾಡುವ ದೃಷ್ಟಿಯಿಂದ, ಸ್ವದೇಶಿ ಚಿಂತನೆಗಳನ್ನು ಜಾರಿಗೆ ತರಬಹುದೆ? ನೀರು ಸಣ್ಣ ಪ್ರಮಾಣದ್ದೇ ಇರಬಹುದು; ಅದನ್ನು ಉಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ನಾವು ನಮ್ಮ ಕೊಡುಗೆ ನೀಡಬಹುದೆ? - ಹೀಗೆ ಅವರ ಅನೇಕ ವಾದಗಳನ್ನು ನಾವು ಕೇಳುತ್ತೇವೆ. ’ಪ್ರಕೃತಿಯು ಮನು?ನ ಅಗತ್ಯಗಳನ್ನು ಪೂರೈಸಬಹುದು; ಆದರೆ ದುರಾಸೆಗಳನ್ನಲ್ಲ’ ಎಂದು ಗಾಂಧಿ 1909ರಲ್ಲೇ ಹೇಳಿದ್ದರು. ದುರಾಸೆಯಲ್ಲದ ಮುನು?ನ ಅಗತ್ಯ ಏನಿದೆ ಅದನ್ನು ಪ್ರಕೃತಿ ಪೂರೈಸುತ್ತದೆ. ದುರಾಸೆಗಳನ್ನು ಕಡಮೆ ಮಾಡಿ ಪ್ರಕೃತಿಯ ಸಂಪನ್ಮೂಲಗಳನ್ನು ಅಗತ್ಯಕ್ಕೆ ಮಾತ್ರ ಬಳಸಿಕೊಳ್ಳಲು ಸಾಧ್ಯವೇ? - ಎಂದು ಗಾಂಧಿ ಪ್ರಶ್ನಿಸಿದರು.

ಒಮ್ಮೆ ಅಲಹಾಬಾದಿನಲ್ಲಿ ನೀರು ಹಾಕುತ್ತಿದ್ದ ನೆಹರು, ನೀರನ್ನು ಚೆಲ್ಲಿದರು. ಅದನ್ನು ಗಮನಿಸಿದ ಗಾಂಧಿ `ನೀರನ್ನು ಚೆಲ್ಲಬೇಡಿ’ ಎಂದರು. ಆಗ ನೆಹರು ’ಗಂಗಾನದಿಯಲ್ಲಿ ಬೇಕಾದಷ್ಟು ನೀರು ಹರಿಯುತ್ತಿದೆ; ನಾನದನ್ನು ಉಪಯೋಗಿಸುತ್ತೇನೆ’ ಎಂದು ಉತ್ತರಿಸಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಾಂಧಿ ’ಪರಿಸರದಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳು ಎಲ್ಲರಿಗೂ ಸೇರಿದ್ದು. ನಾವೇ ಅದರ ವಾರಸುದಾರರೆಂದು ಬಳಸುತ್ತಾ ಹೋಗುವುದು ಸರಿಯಲ್ಲ. ನಾವದನ್ನು ಉಳಿಸಬೇಕು" ಎಂದು ಸಲಹೆ ನೀಡಿದರು.

ಹೀಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಿಸರ ಕಾಳಜಿ, ಸಾಮಾಜಿಕ ಕಾಳಜಿ, ಹೋರಾಟದ ರೂಪುರೇಷೆಗಳು - ಇದರ ಮೂಲಕ ಸಮಾಜಕ್ಕೆ ಶಕ್ತಿ ಕೊಡುವ ಅನೇಕ ಮುಖಗಳಲ್ಲಿ ಸಮಾಜವನ್ನು ಎಚ್ಚರಗೊಳಿಸಿದ ಒಬ್ಬ ಹಿರಿಯ, ಪ್ರಮುಖ ಮಾರ್ಗದರ್ಶಕರೆಂದರೆ ಗಾಂಧೀಜಿ. ಅವರ ಜೀವನದ ಮೂಲಕವೇ ನಾನಾಜಿ ದೇಶಮುಖ್, ದೀನದಯಾಳ್ ಉಪಾಧ್ಯಾಯ ಮೊದಲಾದವರು ಪ್ರೇರಣೆ ಪಡೆದರು. ಅಂತ್ಯೋದಯ ಕಾರ್ಯಕ್ರಮಗಳ ಮೂಲಕ ಸಾಮಾನ್ಯರನ್ನು ಮುಟ್ಟುವ ರೀತಿಯಲ್ಲಿ ನಮ್ಮ ಪ್ರಯತ್ನಗಳೇನಿವೆ? ಅದರಲ್ಲಿ ಎಷ್ಟು ಯಶಸ್ಸು ಸಿಕ್ಕಿದೆ? ಈ ಭಾವನೆ ಸಮಾಜದ ಎಲ್ಲರಲ್ಲಿ ಉಂಟಾಗಬೇಕು. ಸಮಾಜದ ಬಗ್ಗೆ ನನಗೊಂದು ಪಾಲುಗಾರಿಕೆ ಇದೆ; ಹೊಣೆಗಾರಿಕೆ ಇದೆ. ಸಮಾಜದ ಕಾರ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಮಾಜವನ್ನು ಉತ್ತಮವಾಗಿ ಮಾಡುವ ಹೊಣೆ ನಮ್ಮೆಲ್ಲರ ಮೇಲೂ ಇದೆ. ಆ ಕರ್ತವ್ಯಭಾವವನ್ನು ಹೆಚ್ಚು ಹೆಚ್ಚು ಜಾಗೃತಗೊಳಿಸಿದಾಗ ಯಶಸ್ಸು ಆಗಿಯೇ ಆಗುತ್ತದೆ ಎಂದು ಗಾಂಧೀಜಿ ಹೇಳಿದರು. ಇದಕ್ಕೊಂದು ಸಣ್ಣ ಉದಾಹರಣೆ ಸ್ವಚ್ಛ ಭಾರತ ಪರಿಕಲ್ಪನೆಯಿಂದಾಗಿ ಶೌಚಾಲಯ ಹೊಂದಿರುವ ಮನೆಗಳ ಪ್ರಮಾಣ ಶೇ. 30 ರಿಂದ ಈಗ ಶೇ. 95ಕ್ಕೆ ಏರಿರುವುದು. ಚಿಕ್ಕ ಮಕ್ಕಳು ಕೂಡ ಚಾಕಲೇಟ್ ತಿಂದ ಕವರನ್ನು ಎಲ್ಲೆಂದರಲ್ಲಿ ಎಸೆಯದೇ ಬ್ಯಾಗಿನಲ್ಲೋ ಜೇಬಿನಲ್ಲೋ ಇಟ್ಟುಕೊಂಡು ಹೋಗುವುದನ್ನು ಕಾಣುತ್ತೇವೆ. ಹೊರಗೆ ಬಹಿರ್ದೆಸೆಗೆ (ಬಯಲು ಶೌಚಾಲಯ) ಹೋಗದಿರುವ ಸ್ಥಿತಿ ಬಹಳ ದೊಡ್ಡ ಪ್ರಮಾಣದಲ್ಲಿ - ನಾಲ್ಕೂವರೆ ಐದು ಲಕ್ಷ ಗ್ರಾಮಗಳಲ್ಲಿ - ಜಾರಿಯಾಗಿದೆ, ಕಾರ್ಯಗತವಾಗಿದೆ. ಗಾಂಧೀಜಿ ಅವರ ಪ್ರೇರಣೆ ಚಿಂತನೆಗೆ ಪೂರಕವಾಗಿ ಸಂಘದ ಕಾರ್ಯ ನಡೆಯುತ್ತಿದೆ.

ಈ ಕಾರ್ಯವನ್ನು ಜನಸಮುದಾಯದ ಮೂಲಕ ಇನ್ನಷ್ಟು ಹೆಚ್ಚು ಮಾಡಲು ಅವರ ಮಾರ್ಗದರ್ಶನ, ಪ್ರೇರಣೆ ನಮಗೆ ದೊರೆಯಲಿ. ನಾವೆಲ್ಲ ಈ ಕಾರ್ಯದಲ್ಲಿ ಕೈಜೋಡಿಸುವಂತಾಗಲಿ.

Tuesday, 25 September 2018

ಆದರ್ಶ ರಾಜಕೀಯ ಮುತ್ಸದ್ದಿ - ಅಟಲ್ ಬಿಹಾರಿ ವಾಜಪೇಯಿ

ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಅಟಲ್ಜೀ, ಆಗಷ್ಟೇ ಲೋಕಸಭೆಯ ಮೆಟ್ಟಿಲು ಹತ್ತಿದ್ದ ೩೨ರ ತರುಣ. ಇದಕ್ಕೂ ಹೆಚ್ಚಾಗಿ ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಗ ಪ್ರತಿಪಕ್ಷಗಳ ಸಾಲಿನಲ್ಲಿ ಆಚಾರ್ಯ ಜೆ.ಬಿ. ಕೃಪಲಾನಿ, ಪ್ರೊ|| ಹೀರೇನ್ ಮುಖರ್ಜಿ, ಮಿನೂ ಮಸಾನಿಯಂತಹ ಘಟಾನುಘಟಿ ನಾಯಕರಿದ್ದರು ಎನ್ನುವುದನ್ನೂ ಮರೆಯುವಂತಿಲ್ಲ. ಹೀಗೆ ಅಟಲ್ಜೀ ಮೊದಲ ಬಾರಿಗೇ ಭಾರತದ ರಾಜಕೀಯದಲ್ಲಿ ಅಚಲವಾದ ಮೈಲುಗಲ್ಲನ್ನು ಸ್ಥಾಪಿಸಿಬಿಟ್ಟಿದ್ದರು.

ದಿಗ್ಗಜರ ಪ್ರಶಂಸೆ
ಭಾರತೀಯ ರಾಜಕಾರಣದ ಅಪರೂಪದ ವ್ಯಕ್ತಿತ್ವ ಅಟಲ್ ಬಿಹಾರಿ ವಾಜಪೇಯಿ ಅವರದು. ಅರವತ್ತರ ದಶಕದಲ್ಲಿ ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಗಿದ್ದ ಡಾಗ್ ಹಾಮರ್ ಷೋಲ್ಡ್ರಿಗೆ ವಾಷಿಂಗ್ಟನ್ ಭಾರತೀಯ ದೂತಾವಾಸ ಕಚೇರಿಯಲ್ಲಿ ವಾಜಪೇಯಿಯವರನ್ನು ಪ್ರಧಾನಿ ನೆಹರು ಮುಂದೆ ಭಾರತದ ಪ್ರಧಾನಿಯಾಗಬಲ್ಲ ಯುವಪ್ರತಿಭೆ ಎಂದು ಪರಿಚಯಿಸಿದ್ದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ವಾಜಪೇಯಿಯವರನ್ನು ಗುರೂಜಿ ಎಂದೇ ಸಂಬೋಧಿಸುತ್ತಿದ್ದರು. ಪಿ.ವಿ. ನರಸಿಂಹರಾಯರು ೧೯೯೪ರಲ್ಲಿ ಅವರನ್ನು ಉತ್ತಮ ಸಂಸದೀಯ ಪಟು ಎಂದು ಪುರಸ್ಕರಿಸುತ್ತ , ಭಾರತೀಯ ಸಂಸದೀಯ ಚರಿತ್ರೆಗೆ ವಿಶೇಷ  ಮೆರುಗು ನೀಡಿದ ನಾಯಕ ವಾಜಪೇಯಿ. ನನ್ನ ರಾಜಕೀಯ ಗುರು ಎಂದಿದ್ದರು. ಮನಮೋಹನ್ಸಿಂಗ್ ಅವರು ವಾಜಪೇಯಿ, ಭಾರತದ ಸಮಕಾಲೀನ ರಾಜಕಾರಣದ ಭೀಷ್ಮ ಪಿತಾಮಹ ಎಂದು ವರ್ಣಿಸಿದ್ದರು. ಹೀಗೆ ಪ್ರತಿಪಕ್ಷದವರೂ ಸೇರಿದಂತೆ ಎಲ್ಲರ ಗೌರವ, ಮೆಚ್ಚುಗೆಗೆ ಪಾತ್ರರಾದ ಅಪರೂಪದ ದುರ್ಲಭ ರಾಜಕಾರಣಿ ಅಟಲ್ಜೀ. ನೆಹರು ನಂತರ ಭಾರತದ ರಾಜಕಾರಣದಲ್ಲಿ ಬಹುಮುಖ ಪ್ರತಿಭೆಯ ಮೇಧಾವಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು.
ಅಟಲ್ಜೀಯವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಓರ್ವ ಶಾಲಾ ಉಪಾಧ್ಯಾಯನ ಮಗನಾಗಿ ತನ್ನ ಪ್ರತಿಭೆ, ಪರಿಶ್ರಮ ಮತ್ತು ಕೌಶಲದಿಂದಲೇ ರಾಷ್ಟ್ರರಾಜಕಾರಣದಲ್ಲಿ ಬೆಳೆದ ಪರಿ ಒಂದು ಅಚ್ಚರಿಯೇ ಸರಿ.

ಬೆಳೆಯ ಸಿರಿ ಮೊಳಕೆಯಲ್ಲಿ
ಅಟಲ್ಜೀ ಹುಟ್ಟಿದ್ದು ೧೯೨೪ ಡಿಸೆಂಬರ್ ೨೫ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಹಾಗೂ ತಾಯಿ ಸುಮಾದೇವಿ.
ನುಡಿದರೆ ಮತ್ತಿನ ಹಾರದಂತಿರಬೇಕು, ಲಿಂಗ ಮೆಚ್ಚಿ  ಅಹುದಹುದೆನಬೇಕು ಎಂಬ ವಚನದಂತೆ ಅಟಲ್ಜೀ ಅವರ ಮಾತುಗಳಿರುತ್ತಿದ್ದವು. ತಮ್ಮ ಭಾಷಣದ ಗತ್ತು, ಗೈರತ್ತು, ಕಲೆಗಾರಿಕೆ, ಮಾತಿನ ಓಘಕ್ಕೆ ಹುಯ್ದಾಡುವ ಶರೀರ, ಕುಣಿಯುವ ಕೈ, ಚಿಟಿಕೆ ಹಾಕುವ ಬೆರಳುಗಳು ಮತ್ತು ಮುತ್ತು ಉದುರಿದಂತಿರುವ ಮಾತುಗಳಿಂದ ಕಾಲೇಜುದಿನಗಳಲ್ಲಿಯೇ ಪ್ರಾಧ್ಯಾಪಕರಿಗೂ, ಇತರ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನವರಾಗಿದ್ದರು.
ಒಮ್ಮೆ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯಸ್ತರದ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಲು ಹೊರಟಾಗ, ರೈಲು ತಡವಾಗಿದ್ದರಿಂದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಾನವನ್ನು ತಲಪುವ ವೇಳೆಗೆ ಚರ್ಚಾಸ್ಪರ್ಧೆ ಮುಗಿದೇ ಹೋಗಿತ್ತು; ವಿಜೇತರನ್ನು ಘೋಷಿಸುವುದಷ್ಟೇ ಬಾಕಿ. ಕೊಳೆಬಟ್ಟೆಗಳಲ್ಲಿಯೇ ಏದುಸಿರುಬಿಡುತ್ತಾ ಅಲ್ಲಿಗೆ ಬಂದ ತರುಣ ಅಟಲ್ಜೀ ನೇರವಾಗಿ ವೇದಿಕೆಯನ್ನೇರಿ ತಡವಾಗಿ ಬಂದ ಪರಿಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿದರು. ಅವರ ಸೌಜನ್ಯ, ವಿನಯವಂತಿಕೆ ಮತ್ತು ವಿಷಯವನ್ನು ಎಲ್ಲರಿಗೂ ಮುಟ್ಟಿಸಬೇಕೆಂಬ ಕಳಕಳಿ ಗುರುತಿಸಿ, ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಅಂತಹ ಪರಿಸ್ಥಿತಿಯಲ್ಲಿಯೂ ಅವರು ಸಂಯಮದಿಂದ ವಿಷಯಮಂಡನೆ ಮಾಡಿದರು. ಅವರ ಮಾತಿನಲ್ಲಿದ್ದ ಬಿರುಸು, ಸತ್ತ್ವ, ಮೋಹಕತೆ ಮತ್ತು ಸತ್ಯದ ಪ್ರತಿಪಾದನೆಯಿಂದ ಸಭಿಕರು ಮಂತ್ರಮುಗ್ಧರಾದರು. ತೀರ್ಪುಗಾರರೂ ಆಶ್ಚರ್ಯಚಕಿತರಾದರು. ಪ್ರಥಮ ಬಹುಮಾನ ಅವರಿಗೇ ಲಭಿಸಿತು. ತೀರ್ಪುಗಾರರ ಮಂಡಲಿಯ ಸದಸ್ಯರಲ್ಲಿ ಹಿಂದಿ ಸಾಹಿತ್ಯದ ಪ್ರಸಿದ್ಧ ಕವಿ ಡಾ. ಹರಿವಂಶರಾಯ್ ಬಚ್ಚನ್ (ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ತಂದೆ) ಒಬ್ಬರಾಗಿದ್ದರು.
ತಾರುಣ್ಯದಲ್ಲಿಯೇ ಮಾತಿನ ಕಲೆಯನ್ನು ಬೆಳೆಸಿಕೊಂಡು ನಿರಂತರವಾಗಿ ಪೋಷಿಸಿ ಸಮಾಜೋಪಯೋಗಿಯನ್ನಾಗಿಸಿಕೊಂಡವರು ಅಟಲ್ಜೀ. ಮುಂದೆಯೂ ಅವರ ಮಾತುಗಳನ್ನು ಕೇಳಲು ಜನ ಹಾತೊರೆಯುತ್ತಿದ್ದರು (ವಿದೇಶಗಳಲ್ಲಿಯೂ). ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಮೊನಚಾದ ನುಡಿ ಅವರ ಮಾತುಗಾರಿಕೆಯ ಜೀವಾಳವಾಗಿತ್ತು. ಅಂತರಾಳದಿಂದ ಹೊರಹೊಮ್ಮುವ ಅವರ ಪ್ರಾಮಾಣಿಕ ನುಡಿಮುತ್ತುಗಳಿಗೆ ಜನರು ಅದ್ಭುತ ಸಂಗೀತಗಾರನೊಬ್ಬನ ಅಪೂರ್ವ ರಾಗಕ್ಕೆ ತಲೆದೂಗುವಂತೆ, ಯಕ್ಷಿಣಿಗಾರನ ಮೋಡಿಗೆ ಒಳಗಾದ ಮಕ್ಕಳಂತೆ ನಿಶ್ಚಲರಾಗಿ ಮೈಮರೆಯುತ್ತಿದ್ದರು.
ಶಾಸ್ತ್ರೀಯ, ಜನಪದೀಯ ಹಿಂದೀಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಎದುರಿಗೆ ಎಂತಹ ವಿರೋಧಿಗಳಿದ್ದರೂ ನಿಶ್ಶಸ್ತ್ರಗೊಳಿಸಿಬಿಡುತ್ತಿದ್ದರು. ಎಂತಹ ಪರಿಸ್ಥಿತಿಯಲ್ಲಿಯೂ ಹಾಸ್ಯಪ್ರಜ್ಞೆಯಿಂದ ಅವರು ದೂರವಾಗುತ್ತಿರಲಿಲ್ಲ.  ಬಾಬರಿ ಕಟ್ಟಡ ಕೆಡವಿದ ಸಂದರ್ಭದಲ್ಲಿ ರಾಮವಿಲಾಸ ಪಾಸ್ವಾನ್ ಬಿಜೆಪಿ ಜೈ ಶ್ರೀರಾಮ್ ಎನ್ನುತ್ತಿದೆ. ಆದರೆ ಅವರಲ್ಲಿ ಯಾರೂ ರಾಮ ಇಲ್ಲ. ನನ್ನ ಹೆಸರಿನಲ್ಲೇ ರಾಮ್ ಇದೆ ಎಂದರು. ಅದಕ್ಕೆ ಉತ್ತರಿಸಿದ ಅಟಲ್ಜೀ ಅದು ನಿಜ.  ಆದರೆ ಹರಾಮ್ನಲ್ಲಿಯೂ ರಾಮ್ ಇದೆಯಲ್ಲವೇ? ಎಂದರು. ಅವರೊಡನೆ ಇಡೀ ಸಂಸತ್ತು ನಕ್ಕಿತು.
ಪತ್ರಕರ್ತರಾಗಿ
ಧರ್ಮದ ಆಧಾರದಲ್ಲಿ ದೇಶವಿಭಜನೆ, ತದನಂತರವೂ ಬದಲಾಗದ ರಾಷ್ಟ್ರನಾಯಕರ ಮನಃಸ್ಥಿತಿಯನ್ನು ಮೂಕಪ್ರೇಕ್ಷಕರಂತೆ ಸಹಿಸಿಕೊಳ್ಳಲಾಗದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪತ್ರಿಕೆಯೊಂದನ್ನು ಪ್ರಾರಂಭಿಸಲು ನಿರ್ಧರಿಸಿತು. ಸಂಘದ ಪ್ರಚಾರಕರಾಗಿದ್ದ ದೀನದಯಾಳ್ ಉಪಾಧ್ಯಾಯರ ನೇತೃತ್ವದಲ್ಲಿ ೧೯೪೬ರ ಪ್ರಾರಂಭದಲ್ಲಿ ರಾಷ್ಟ್ರಧರ್ಮ ಮಾಸಿಕ ಪ್ರಾರಂಭಿಸಲಾಯಿತು. ಇದರ  ಸಂಪಾದಕತ್ವದ ಹೊಣೆ ಅಟಲ್ ಬಿಹಾರಿ ವಾಜಪೇಯಿ (ಮತ್ತು ರಾಜೀವಲೋಚನ ಅಗ್ನಿಹೋತ್ರಿ) ಅವರ ಹೆಗಲಿಗೇರಿತು. ಶಾಲಾದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಅಟಲ್ಜೀ ಅದಾಗಲೇ ತಮ್ಮ ಕವಿತೆಗಳ ಮೂಲಕ ಸಮಾಜದಲ್ಲಿ ಗಣ್ಯತೆ ಗಳಿಸಿದ್ದರು. ರಾಷ್ಟ್ರಧರ್ಮದ ಸಂಪಾದಕತ್ವದ ಹೊಣೆಹೊತ್ತ ಅಟಲ್ಜೀ ಸ್ವತಃ ಲೇಖನ, ಕವನಗಳನ್ನು ಬರೆಯುವುದು, ಬರೆಸುವುದರ ಜೊತೆಗೆ ಅಚ್ಚುಮೊಳೆ ಜೋಡಿಸುವುದರಿಂದ ಭಾಂಗಿ ಹೊರೆಹೊರುವ ಕೆಲಸಗಳಲ್ಲೂ ಕೈಜೋಡಿಸಿ ಪತ್ರಿಕೆಗೆ ಜನಮನ್ನಣೆ ಗಳಿಸಿಕೊಟ್ಟಿದ್ದರು.
ಸಂಘದ ಅಂಗಳದಲ್ಲಿ ಬೆಳೆದು, ದೀನದಯಾಳ್ ಉಪಾಧ್ಯಾಯರ ಗರಡಿಯಲ್ಲಿ ವ್ಯಕ್ತಿತ್ವ ವಿಸ್ತರಿಸಿಕೊಂಡ ಅಟಲ್ಜೀ ರಾಷ್ಟ್ರಧರ್ಮದ ಯಶಸ್ಸಿನಿಂದ ಪ್ರೇರಣೆಗೊಂಡು ಪಾಂಚಜನ್ಯ ವಾರಪತ್ರಿಕೆ (೧೯೪೬ ಏಪ್ರಿಲ್ ) ಹಾಗೂ ಸ್ವದೇಶ್ ದಿನಪತ್ರಿಕೆ  (೧೯೫೦) ಪ್ರಾರಂಭಿಸಿದಾಗಲೂ ದೀನದಯಾಳರ ಅಪೇಕ್ಷೆಯಂತೆ ಸಮರ್ಥವಾಗಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅಲಹಾಬಾದ್ನಿಂದ ಪ್ರಕಟವಾಗುತ್ತಿದ್ದ ಕರ್ಮಯೋಗಿ, ಕಾಶಿಯಿಂದ ಪ್ರಕಟವಾಗುತ್ತಿದ್ದ ಚೇತನಾ, ದೆಹಲಿಯಿಂದ ಪ್ರಕಟವಾಗುತ್ತಿದ್ದ ವೀರ್ ಅರ್ಜುನ್ ದೈನಿಕಗಳ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
Guru ji Golwalkar, Pt. Deen Dayal Upadhyay and Bharat Ratna Atal.

ಆಪ್ತಸಹಾಯಕನಿಂದ ಪ್ರಧಾನಿವರೆಗೆ
ಜನಸಂಘದ ಪ್ರಾರಂಭದ ದಿನಗಳಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತಸಹಾಯಕನಾಗಿ ದೇಶಾದ್ಯಂತ ಪ್ರವಾಸ ನಡೆಸಿದರು. ಮುಖರ್ಜಿ ಅವರಿಗೆ ಭಾಷಣ ಸಿದ್ಧಪಡಿಸಿಕೊಡುವುದು ಮಾತ್ರವಲ್ಲದೆ ಅವರ ಅಪೇಕ್ಷೆಯಂತೆ ಕೆಲವೆಡೆಗಳಲ್ಲಿ ಅವರ ಸಮ್ಮುಖದಲ್ಲಿ ಸ್ವತಃ ಭಾಷಣಗಳನ್ನೂ ಮಾಡುತ್ತಿದ್ದರು. ಶ್ಯಾಮಪ್ರಸಾದ್ ಮುಖರ್ಜಿಯವರ ಅನುಮಾನಾಸ್ಪದ ಸಾವು, ತದನಂತರ ದೀನದಯಾಳ್ ಉಪಾಧ್ಯಾಯರ ಅನುಮಾನಾಸ್ಪದ ಕೊಲೆಗಳ ನಂತರ ಜನಸಂಘದ ನೇತೃತ್ವ ವಹಿಸಿ (೧೯೬೮) ರಾಜಕೀಯವಾಗಿ ಜನಸಂಘವನ್ನು ದೇಶದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದವರು ಅಟಲ್ಜೀ.
೧೯೫೭ರಿಂದ ೨೦೦೯ರ ತನಕ ನಿರಂತರವಾಗಿ (೧೯೮೪ ಹೊರತುಪಡಿಸಿ) ಸಂಸತ್ ಪ್ರವೇಶಿಸಿದ ಅಟಲ್ಜೀ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದ ಸಂಖ್ಯೆಗನುಗುಣವಾಗಿ ಮಾತನಾಡುವ ಅವಕಾಶ ಲಭಿಸುತ್ತಿದ್ದರೂ ಸಿಕ್ಕಸಮಯವನ್ನು ಅವರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ವಾಜಪೇಯಿ ಅವರ ಭಾಷಣ ಕೇಳಲು ನೆಹರು ಆದಿಯಾಗಿ ಎಲ್ಲ ಸದಸ್ಯರೂ ಉಪಸ್ಥಿತರಿರುತ್ತಿದ್ದರು; ಗ್ಯಾಲರಿಗಳೂ ಬಿರುತ್ತಿದ್ದವು! ವಾಜಪೇಯಿಯವರ ವಾಕ್ಚಾತುರ್ಯಕ್ಕೂ ವಿ?ಯತಜ್ಞತೆಗೂ ಮರುಳಾಗಿದ್ದ ಡಾ. ಎಸ್. ರಾಧಾಕೃ?ನ್ ಅವರು ರಾಜ್ಯಸಭೆಯಲ್ಲಿ ಮೊದಲ ಸಾಲಿನಲ್ಲಿ ವಾಜಪೇಯಿಯವರಿಗೆ (೧೯೬೨ರಲ್ಲಿ ಜನಸಂಘ ರಾಜ್ಯಸಭೆಯಲ್ಲಿ ಕೇವಲ ೨ ಸದಸ್ಯರನ್ನು ಹೊಂದಿತ್ತು) ಸ್ಥಾನ ಮೀಸಲಿರಿಸಿದ್ದರು. ಮಾತ್ರವಲ್ಲದೆ ಪ್ರತಿ ವಿಷಯದಲ್ಲಿಯೂ ಅಟಲ್ಜೀಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡುತ್ತಿದ್ದರು. ವಿರೋಧಪಕ್ಷದಲ್ಲಿದ್ದರೂ ಅವರೆಂದೂ ಸರ್ಕಾರದ ನಡೆಯನ್ನು ವಿರೋಧಿಸುವುದಕ್ಕೆಂದೇ ವಿರೋಧಿಸದೆ ತುಲನಾತ್ಮಕವಾಗಿ ಚಿಂತಿಸಿ ವಾದ ಮಂಡಿಸುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ.
ಅಟಲ್ಜೀ ಸದಾ ಪಕ್ಷಾತೀತವಾಗಿ ಜನರ ಧ್ವನಿಯಾಗಿ ರಾಷ್ಟ್ರದ ಒಳಿತಿನ ವಿಚಾರವನ್ನು ಮಂಡಿಸುತ್ತಿದ್ದರು. ಅವರ ಇಡೀ ರಾಜಕೀಯ ಜೀವನದಲ್ಲಿ ದೇಶ ಮೊದಲು, ನಂತರ ಪಕ್ಷ, ವ್ಯಕ್ತಿ ಎಂಬ ಸಿದ್ದಾಂತವೇ ಕಾಣಸಿಗುತ್ತದೆ. ರಾಷ್ಟ್ರಕ್ಕೆ ಹೊರಗಿನಿಂದ ಸವಾಲು ಎದುರಾದಾಗ ಪಕ್ಷಭೇದ ಮರೆತು ಸರ್ಕಾರದೊಂದಿಗೆ ಹೆಜ್ಜೆಹಾಕಬೇಕು ಎಂಬುದು ವಾಜಪೇಯಿ ಅವರ ನಿಲುವಾಗಿತ್ತು. ಚೀಣಾ ಆಕ್ರಮಣದ ಸಂದರ್ಭದಲ್ಲಿ, ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧಪಕ್ಷದ ನಾಯಕನಾಗಿ ಬೆಂಬಲವಾಗಿ ನಿಂತರು. ವಾಜಪೇಯಿ ಅವರ ಗುಣವನ್ನು ಮೆಚ್ಚಿಕೊಂಡಿದ್ದ ಲಾಲ್ಬಹಾದುರ್ ಶಾಸ್ತ್ರೀ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ವಿವರಿಸಲು ಕಳುಹಿಸಿದ ಭಾರತೀಯ ನಿಯೋಗದ ನೇತೃತ್ವವನ್ನು ವಾಜಪೇಯಿಯವರಿಗೆ ನೀಡಿದ್ದರು.
Atal Bihari Vajpayee With L. K. Advani and Bhairon Singh Shekhawat During Jan Sangh Days.

Jannayak with Loknayak.. Atal Bihari Vajpayee and Jai Prakash Narayan.

ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ವಿವೇಕಾನಂದರ ವಾಣಿಗೆ ಅಟಲ್ಜೀ ಪ್ರತಿರೂಪದಂತಿದ್ದರು. ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ರಂತಹ ನಾಯಕರನ್ನು ಕಳೆದುಕೊಂಡಾಗಲೂ ಎದೆಗುಂದದೆ ಪಕ್ಷವನ್ನು ಸಂಘಟಿಸಿ ಕಾಂಗ್ರೆಸ್ಗೆ ಪರ್ಯಾಯವಾಗಿ ಜನಸಂಘವನ್ನು ಕಟ್ಟಿ ಬೆಳೆಸಿದ್ದರು. ಮಾತ್ರವಲ್ಲ ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್ಸೇತರ ಸರ್ಕಾರ ರೂಪುಗೊಳ್ಳುವುದರಲ್ಲಿಯೂ ವಿದೇಶಾಂಗ ಸಚಿವರಾಗಿಯೂ ಪ್ರಮುಖ ಪಾತ್ರ ನಿರ್ವಹಿಸಿದರು.
೧೯೮೪ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಎರಡೇ ಸ್ಥಾನ ಗಳಿಸಿದಾಗ ಉತ್ಸಾಹ ಕಳೆದುಕೊಂಡಿದ್ದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದವರು ಅಟಲ್ಜೀ.  ಕತ್ತಲೆ ಕಳೆಯುತ್ತದೆ, ಬೆಳಕು ಬರಲೇ ಬೇಕು. ನಿರುತ್ಸಾಹದಿಂದ ಸುಮ್ಮನೆ ಕೂಡುವ ಸಮಯವಿದಲ್ಲ. ಪುನಶ್ಚ ಹರಿಃ ಓಂ. ಎಲ್ಲವನ್ನೂ ಮತ್ತೆ ಪ್ರಾರಂಭಿಸೋಣ ಎಂದು ಹೇಳಿ ಉತ್ಸಾಹ ಮೂಡಿಸಿದರು. ಅನಂತರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ೮೯ ಸ್ಥಾನ ಪಡೆದು ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣೆಯಿಂದ ಚುನಾವಣೆಗೆ ವೃದ್ಧಿಸುತ್ತಾ ಪಕ್ಷ ವೇಗವಾಗಿ ಬೆಳೆಯಿತಾದರೂ ಅಧಿಕಾರ ಹಿಡಿಯುವ? ಸಂಖ್ಯಾಬಲ ಪ್ರಾಪ್ತವಾಗಲಿಲ್ಲ.
ಬಾಬ್ರಿ ಕಟ್ಟಡ ಧ್ವಂಸದ ನಂತರದಲ್ಲಿ ಇತರ ಪಕ್ಷಗಳು ಬಿಜೆಪಿಗೆ ಅಂಟಿಸಿದ್ದ ಅಸ್ಪೃಶ್ಯ ಹಣೆಪಟ್ಟಿಯನ್ನು ಕಳಚಿದ ಕೀರ್ತಿ ಅಟಲ್ಜೀಗೆ ಸಲ್ಲುತ್ತದೆ. ಅಧಿಕಾರ ಅಷ್ಟು  ಸುಲಭವಲ್ಲ ಎಂಬ ಅರಿವಿದ್ದರೂ ೧೯೯೬ರಲ್ಲಿ ಪ್ರಧಾನಿಯಾಗಿ ಕೇವಲ ೧೩ ದಿನಗಳಲ್ಲೇ ರಾಜೀನಾಮೆ ನೀಡಬೇಕಾಗಿ ಬಂದು ಸಂಸತ್ತಿನಲ್ಲಿ ಭಾಷಣ ಮಾಡಿದ್ದು, ೧೯೯೮ರ ಚುನಾವಣೆಯಲ್ಲಿ ಬಿಜೆಪಿಗೆ ಅತಿಹೆಚ್ಚು ಸೀಟು ಬಂದರೂ ಬಹುಮತವಿಲ್ಲದಿದ್ದಾಗ ಎನ್ಡಿಎ ಎಂಬ ಮೈತ್ರಿಕೂಟ ರಚಿಸಿ ಹೊಸ ರಾಜಕೀಯ ಅಧ್ಯಾಯ ಪ್ರಾರಂಭಿಸಿದ್ದು, ಜಾತ್ಯತೀತರೆಂದು ಬಿಂಬಿಸಿಕೊಂಡ ಚಂದ್ರಬಾಬು ನಾಯ್ಡು, ದಲಿತ ನಾಯಕಿ ಮಾಯಾವತಿ, ದ್ರಾವಿಡ ಚಳವಳಿಯಿಂದ ಬಂದ ಕರುಣಾನಿಧಿ, ಸಮಾಜವಾದಿ ಜಾರ್ಜ್ ಫರ್ನಾಂಡೆಸ್ಹೀಗೆ ಎಲ್ಲರನ್ನೂ ಒಂದು ಸರ್ಕಾರದ ಭಾಗವಾಗಿ ಬೆಸೆಯುವ ಮೂಲಕ ವಾಜಪೇಯಿ ವ್ಯವಸ್ಥಿತವಾಗಿ ಇದನ್ನು ಸಾಧಿಸಿದ್ದರು.
೧೯೯೯ರಲ್ಲಿ ಪುನಃ ಅಧಿಕಾರಕ್ಕೆ ಬರುವ ಮೂಲಕ ಪೂರ್ಣಾವಧಿ ಸರ್ಕಾರ ನಡೆಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆ ಅಟಲ್ಜೀ ಅವರದು. ಆರ್ಥಿಕ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಿದ ಅವರು, ದೂರಸಂಪರ್ಕ, ನಾಗರಿಕ ವಿಮಾನಯಾನ, ಬ್ಯಾಂಕಿಂಗ್, ಇನ್ಶೂರೆನ್ಸ್, ಸಾರ್ವಜನಿಕ ಉದ್ದಿಮೆಗಳು, ವಿದೇಶೀ ವ್ಯಾಪಾರ ಮತ್ತು ಬಂಡವಾಳ, ಸಣ್ಣಕೈಗಾರಿಕೆ, ಹೆದ್ದಾರಿ, ಗ್ರಾಮೀಣ ರಸ್ತೆಗಳು, ಮೂಲಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಎದ್ದುಕಾಣುವ ಬದಲಾವಣೆ ತಂದರು. ಅವರು ಅಧಿಕಾರದಿಂದ ಕೆಳಗಿಳಿಯುವಾಗ ಭಾರತ ಎಲ್ಲ ರಂಗಗಳಲ್ಲೂ ಮುನ್ನೆಲೆಗೆ ಬರಲಾರಂಭಿಸಿತ್ತು.
ರಸ್ತೆಗಳಿಂದ ಹಿಡಿದು ದೊಡ್ಡದೊಡ್ಡ ವಿಶ್ವವಿದ್ಯಾಲಯಗಳು ಸಂಘಸಂಸ್ಥೆಗಳವರೆಗೆ ನೂರಾರು ಯೋಜನೆಗಳಿಗೆ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನಿಟ್ಟಿರುವುದನ್ನು ನಾವು ಕಾಣುತ್ತೇವೆ.  ಆದರೆ ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ವಾಜಪೇಯಿ ಸ್ಪಷ್ಟ ಸೂಚನೆ ನೀಡಿದ್ದರು. ಹಾಗಿದ್ದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ಅಟಲ್ ಗ್ರಾಮ ಸಡಕ್ ಯೋಜನೆ ಎಂದು ಹೆಸರಿಸಲಾಗಿತ್ತು. ಆದರೆ ವಾಜಪೇಯಿ ಅದನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಎಂದು ಬದಲಾಯಿಸಿದರು. ಇಂತಹ ಹಲವು ನಡೆಗಳಿಂದ ವಾಜಪೇಯಿ ಜನರ ಮನಸ್ಸನ್ನು ಗೆದ್ದರು.
ನಿಷ್ಕಲ್ಮಶ ಹೃದಯಿ
ತಮ್ಮ ಇಡೀ ರಾಜಕೀಯ ಜೀವನದಲ್ಲಿ ಅವರೆಂದೂ ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸಿದವರಲ್ಲ. ದೇಶಹಿತದ ಪ್ರಶ್ನೆ ಬಂದಾಗ ಯಾರನ್ನು ಟೀಕಿಸಲೂ ಅವರು ಹಿಂದೆಮುಂದೆ ನೋಡುತ್ತಿರಲಿಲ್ಲ. ನೆಹರು ಅವರ ಪಂಚಶೀಲ ತತ್ತ್ವಗಳನ್ನು ವಾಜಪೇಯಿ ಬಲವಾಗಿ ಟೀಕಿಸಿದ್ದರು. ೧೯೬೪ರಲ್ಲಿ ನೆಹರು ತೀರಿಕೊಳ್ಳುವ ಸ್ವಲ್ಪ ಮೊದಲು ಶೇಕ್ ಅಬ್ದುಲ್ಲಾರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಪಾಕ್ ಅಧ್ಯಕ್ಷ ಆಯೂಬ್ ಖಾನ್ರೊಂದಿಗೆ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಕಳುಹಿಸುವ ತೀರ್ಮಾನವನ್ನು ನೆಹರು ತೆಗೆದುಕೊಂಡಾಗ ವಾಜಪೇಯಿ ನೆಹರುರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ನೆಹರು ನಿಧನರಾದಾಗ ಅವರು ಇಂದು ತಾಯಿ ಭಾರತಿ ಶೋಕತಪ್ತೆ, ತನ್ನ ಮುದ್ದು ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ. ಮನುಷ್ಯತ್ವ ಮರುಗಿದೆ, ಆರಾಧಕ ಇಲ್ಲವಾಗಿದ್ದಾನೆ. ಶಾಂತಿ ತಳಮಳಿಸಿದೆ, ರಕ್ಷಕ ಗತಿಸಿದ್ದಾನೆ. ಕೊನೆಗೂ ತೆರೆಬಿದ್ದಿದೆ. ವಿಶ್ವವೇದಿಕೆಯ ಪ್ರಧಾನ ಪಾತ್ರಧಾರಿ ತನ್ನ ಪಾತ್ರ ಮುಗಿಸಿದ್ದಾನೆ ಎಂದು ಆರ್ದ್ರವಾಗಿ ಬಣ್ಣಿಸಿದ್ದರು.
ಗುಣಕ್ಕೆ ಮತ್ಸರ ತೋರದ ವಾಜಪೇಯಿ, ಬಂಗ್ಲಾ ಯುದ್ಧದಲ್ಲಿ ಇಂದಿರಾಗಾಂಧಿ ತೋರಿದ ಕುಶಲಮತಿ, ದಿಟ್ಟತನವನ್ನು ಮೆಚ್ಚಿ ಇಂದಿರಾರನ್ನು  ಹೊಗಳಿದ್ದರು. (ದುರ್ಗಾ ಎಂದು ತಾನು ಹೇಳಿಲ್ಲ ಎಂಬುದನ್ನು ಅಟಲ್ಜೀ ಅವರು, ಡಾ. ಎನ್.ಎಂ. ಘಟಾಟೆ ಅವರು ಬರೆದ, ವಾಜಪೇಯಿ ಪಾರ್ಲಿಮೆಂಟ್ ನಡಾವಳಿಗಳ ಬಗೆಗಿನ ಪುಸ್ತಕದಲ್ಲಿ ರಿಕಲೆಕ್ಟ್ ಎಂಬ ಅಧ್ಯಾಯದಲ್ಲಿ ಸ್ಪಷ್ಟಪಡಿಸಿದ್ದಾರೆ.) ಗುಜರಾತಿನ ಚುನಾವಣಾ ಸಭೆಯೊಂದರಲ್ಲಿ ಇಂದಿರಾಗಾಂಧಿ ನಾನು ಉತ್ತರಪ್ರದೇಶದ ಮಗಳು ಮತ್ತು ಗುಜರಾತಿನ ಸೊಸೆ. ಕಾರಣಕ್ಕಾಗಿ ನೀವು ಮತ ನೀಡಬೇಕು ಎಂದಿದ್ದರು. ಇದನ್ನು ಉಲ್ಲೇಖಿಸಿದ ಅಟಲ್ಜೀ ಇಂದಿರಾ ಗಾಂಧಿಯವರು ಮತ್ತೊಂದನ್ನು ನಿಮ್ಮ ಮುಂದೆ ಹೇಳಿಲ್ಲ. ಅವರು ಇಟಲಿಯ ಅತ್ತೆ ಕೂಡ ಎಂದು ತಿರುಗೇಟು ನೀಡಿದ್ದೂ ಇದೆ.
ವಿದೇಶಾಂಗನೀತಿಗೆ ಸಮರ್ಥ ಅಡಿಗಲ್ಲು
ತಮ್ಮ ರಾಜಕೀಯದ ಪ್ರಾರಂಭದ ದಿನಗಳಿಂದಲೂ ಅಟಲ್ಜೀ ಅವರಿಗೆ ವಿದೇಶನೀತಿಯ ಕುರಿತು ವಿಶೇಷ ಆಸಕ್ತಿ. ಪ್ರಧಾನಿ ನೆಹರುಗೆ ಆಪ್ತರಾದುದು ಮತ್ತು ಅಟಲ್ಜೀಗೆ ಜನಮನ್ನಣೆ ಲಭಿಸತೊಡಗಿದ್ದರಲ್ಲಿ ಇದೂ ಒಂದು ಪ್ರಮುಖ ಕಾರಣ. ನೆಹರು ಅನುಸರಿಸಿದ ದ್ವಂದ್ವಯುಕ್ತ ವಿದೇಶನೀತಿಗಳು - ಆಲಿಪ್ತ ನೀತಿ ಎಂದು ಹೇಳಿಕೊಳ್ಳುತ್ತ ರಷ್ಯಾದ ಕಡೆಗೆ ಅತಿಯಾಗಿ ವಾಲುತ್ತಿರುವುದನ್ನು, ಅರಬ್ ರಾಷ್ಟ್ರಗಳಿಗೆ ಅನಗತ್ಯ ಪ್ರಾಶಸ್ತ  ನೀಡಿ ಇಸ್ರೇಲನ್ನು ದೂರವಿರಿಸಿರುವುದುಭಾರತಕ್ಕೆ ಮಾರಕ ಎಂಬುದನ್ನು ಗುರುತಿಸಿ, ಅನೇಕ ಬಾರಿ ಅವರು ದನಿ ಎತ್ತಿದ್ದರು. ೧೯೭೭ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದರೆ ಅಮೆರಿಕದ ಜೊತೆ
ಸಂಬಂಧ ಘನಿಷ್ಠಗೊಳಿಸುವುದಾಗಿಯೂ, ಇಸ್ರೇಲ್ ಜೊತೆಗೆ ರಾಜಕೀಯ ಸಂಬಂಧ ಸ್ಥಾಪಿಸುವುದಾಗಿಯೂ ಅವರು ಬಹಿರಂಗವಾಗಿ ಘೋಷಿಸಿದ್ದರು.  ಆದರೆ ತುರ್ತುಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾದರೂ ನೆಹರು ಹಾಗೂ ಇಂದಿರಾಗಾಂಧಿ ಕಾಲದ ಆಡಳಿತದ ನೀತಿಗಳಿಂದ ಹೊರಬರುವುದು ಅ? ಸುಲಭವಾಗಿರಲಿಲ್ಲ. ಹೀಗಾಗಿ ಭಾರತದ ವಿದೇಶ ಮಂತ್ರಿಯಾಗಿ ೧೯೭೭ರಲ್ಲಿ ಅವರು ನೆಹರು ಬೆಳೆಸಿದ ವಿದೇಶಾಂಗ ನೀತಿಯನ್ನು ಮುಂದುವರಿಸಿ ಅತ್ಯಂತ ಯಶಸ್ವಿಯಾದರು.
ಅಟಲ್ಜೀ ಅವರ ವಿದೇಶಾಂಗ ನೀತಿಯ ದಿಗ್ದರ್ಶನವಾದುದು ೧೯೯೮ರಲ್ಲಿ ಪ್ರಧಾನಿಯಾದ ನಂತರ. ಅವರು ಕೈಗೊಂಡ ಕ್ರಮಗಳು ಅವರ ರಾಷ್ಟ್ರನಿಷ್ಠೆ,  ವಿವೇಕ, ದೂರದರ್ಶಿತ್ವ ಹಾಗೂ ಕರ್ತೃತ್ವಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ವಿಶ್ವದಲ್ಲಿ ಶಕ್ತಿಯಿಂದಲೇ ಸತ್ತ್ವದ ಪ್ರಕಟೀಕರಣ ಸಾಧ್ಯ ಎಂಬುದನ್ನು ಅವರು ಕೃತಿರೂಪದಲ್ಲಿ ತೋರಿದರು. ಪ್ರಮುಖವಾದುದು ಪೋಖರನ್ ಅಣ್ವಸ್ತ್ರ ಪರೀಕ್ಷೆ. ಅಮೆರಿಕ ಸೇರಿದಂತೆ ಜಗತ್ತಿನ ಬೃಹತ್ ರಾಷ್ಟ್ರಗಳು ಇದನ್ನು ವಿರೋಧಿಸುತ್ತವೆ ಎಂಬ ವಾಸ್ತವದ ಅರಿವಿದ್ದೂ ಅವರು ಸಾಹಸಕ್ಕೆ ಕೈಹಾಕಿದ್ದರು. ಇದೇ ಕಾರಣದಿಂದ ಇಂದಿರಾಗಾಂಧಿ ೧೯೭೪ರಲ್ಲಿ ಸಣ್ಣ ಪ್ರಮಾಣದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರೂ ಭಾರತ ಒಂದು ಅಣ್ವಸ್ತ್ರ ರಾ?ವೆಂದು ಘೋಷಿಸಲು ಹಿಂಜರಿದಿದ್ದರು. ನಮ್ಮದೊಂದು ಶಾಂತಿಯುತ ಅಣ್ವಸ್ತ್ರ ಪರೀಕ್ಷೆ ಎಂಬ ನೀತಿ ಪ್ರತಿಪಾದಿಸಿದರು. ಆದರೆ ಅಟಲ್ಜೀ ಎದೆಗುಂದದೆ, ಹಿರಿಯಣ್ಣನ ಬೆದರಿಕೆಗೆ ಬಗ್ಗದೆ ಅಣ್ವಸ್ತ್ರ ಪರೀಕ್ಷೆಗೆ ಮುಂದಾದರು. ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದಾಗ ಆರ್ಥಿಕ ಪ್ರತಿಬಂಧಕ್ಕೆ ಹೆದರಿ ನಾವು ನಿಂತಲ್ಲೇ ನಿಲ್ಲಲು ಸಾಧ್ಯವಿಲ್ಲ. ಮುಂದೆ ಹೆಜ್ಜೆ ಇರಿಸಲೇಬೇಕು ಎಂದು ಉತ್ತರಿಸಿದರು.
ಭಾರತ ಅಣ್ವಸ್ತ್ರರಾಷ್ಟ್ರವಾಗುವುದರ ಅನಿವಾರ್ಯತೆಯನ್ನು ಅಮೆರಿಕ ಮುಂತಾದ ಬೃಹದ್ ರಾಷ್ಟ್ರಗಳು ಒಪ್ಪಿಕೊಳ್ಳಲು ಹೆಚ್ಚುಕಾಲ ಹಿಡಿಯಲಿಲ್ಲ. ಒಂದೇ ವರ್ಷದಲ್ಲಿ ಕಾರ್ಗಿಲ್ ಕದನ ಆರಂಭವಾದಾಗ ಅಮೆರಿಕ, ?, ಚೀನಾ, ಬ್ರಿಟನ್ ಮುಂತಾದ ದೇಶಗಳು ಭಾರತದ ನಿಲವನ್ನು ಸಮರ್ಥಿಸಿ ಪಾಕಿಸ್ತಾನಕ್ಕೆ ಛೀಮಾರಿಹಾಕಿದವು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಜನವರಿ ೨೦೦೧ರಲ್ಲಿ ಭಾರತಕ್ಕೆ  ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಹಲವು ಮಹತ್ತ್ವದ ನಿರ್ಣಯಗಳನ್ನು ಕೈಗೊಂಡರು. ೨೨ ವರ್ಷಗಳ ನಂತರ ಅಮೆರಿಕದ ಅಧ್ಯಕ್ಷರೊಬ್ಬರ ಮೊದಲ ಭೇಟಿ ಅದು. ಇದು ನಡೆದದ್ದು ಪೋಖರನ್ ಅಣ್ವಸ್ತ್ರ ಪರೀಕ್ಷೆ ನಡೆಸಿದ ಕೇವಲ ೨೦ ತಿಂಗಳಲ್ಲಿ ಎಂಬುದು ಮಹತ್ತ್ವದ್ದು. ಇಷ್ಟೇ ಅಲ್ಲ. ೧೯೮೭ರಲ್ಲಿಯೇ ರಹಸ್ಯವಾಗಿ ಅಣ್ವಸ್ತ್ರ ಗಳಿಸಿ, ಬಗ್ಗೆ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಪಾಕಿಸ್ತಾನ ಕೂಡಾ ತನ್ನಲ್ಲಿ ಅಣ್ವಸ್ತ್ರಗಳಿವೆ ಎಂಬುದನ್ನು ಜಗತ್ತಿಗೆ ಬಹಿರಂಗಗೊಳಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಅಟಲ್ಜೀ ಅವರ ಚಾಣಾಕ್ಷ ವಿದೇಶನೀತಿ ಎನ್ನುತ್ತಾರೆ ಅಂಕಣಕಾರ ಪ್ರೇಮಶೇಖರ್.
ಲಾಹೋರ್ ಭೇಟಿ (೧೯೯೯, ಫೆಬ್ರುವರಿ ೨೦) ಲಾಹೋರ್ಗೆ ಬಸ್ ಸಂಚಾರ ಆರಂಭಿಸುವ ಮೂಲಕ ಪಾಕಿಸ್ತಾನದೊಂದಿಗೆ ಶಾಂತಿ ಪುನಃಸ್ಥಾಪನೆಗೆ ಭಾರತ ಸಿದ್ಧ ಎಂದೂ ಅವರು ಸಾರಿದರು. ಇದಕ್ಕೆ ವಿರೋಧ ವ್ಯಕ್ತವಾದಾಗ ನಾವು ಸ್ನೇಹಿತರನ್ನು ಬದಲಿಸಬಹುದು, ನೆರೆಹೊರೆಯವರನ್ನಲ್ಲ ಎಂದರು.  ಆದರೆ ಪಾಕಿಸ್ತಾನ ಕಾರ್ಗಿಲ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಹುನ್ನಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ಪಾಕಿಸ್ತಾನದ ನೈಜ ಮುಖವನ್ನು ಜಗತ್ತಿನೆದುರು ಅನಾವರಣಗೊಳಿಸಿದರು. ಇಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಪಾಕ್ ವಿರುದ್ಧ ಕಠಿಣ ನಿಲವು ತಳೆಯುತ್ತಿರುವುದರಲ್ಲಿ ಹಿಂದಿನ ಘಟನೆಗಳ ಪಾತ್ರವೂ ಮಹತ್ತ್ವದ್ದು.
ಭಾರತದ ಸುತ್ತಮುತ್ತಲಿನ ದೇಶಗಳೊಂದಿಗೆ ಘನಿಷ್ಠ ಸಂಬಂಧಗಳನ್ನು ಹೊಂದುವ ಅಗತ್ಯವನ್ನು ಗುರುತಿಸಿ ಕಾರ್ಯಪ್ರವೃತ್ತರಾದರು ಅಟಲ್ಜೀ.  ಆಫಘನಿಸ್ತಾನ, ಇರಾನ್ ಮತ್ತು ಮಧ್ಯಏಶಿಯಾದ ಮುಸ್ಲಿಂ ಗಣರಾಜ್ಯಗಳನ್ನು ಭಾರತಕ್ಕೆ ಹತ್ತಿರವಾಗಿಸಿದರು. ಇರಾನ್ ಚಬಹಾರ್ ಬಂದರಿನ ಮೂಲಕ ಆಫಘನಿಸ್ತಾನ ಮತ್ತು ಮಧ್ಯಏಶಿಯಾದೊಂದಿಗೆ ಸಂಬಂಧ ಏರ್ಪಡಿಸುವ ಪ್ರಯತ್ನವನ್ನೂ ಆರಂಭಿಸಿದರು.  ಭಾರತದ ಸುತ್ತಲೂ ವೃದ್ಧಿಸುತ್ತಿರುವ ಚೀನಾ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ತಜಕಿಸ್ತಾನ, ಮಾರಿಷಸ್, ಇಂಡೋನೇಶಿಯಾದಲ್ಲಿ ಭಾರತಕ್ಕೆ ಸೇನಾ ಸವಲತ್ತುಗಳನ್ನು ಗಳಿಸಿಕೊಡಲು ಮುಂದಾದರು. ಇವುಗಳ ಮಹತ್ತ್ವ ಇಂದು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದನ್ನೂ ನಾವು ಕಾಣಬಹುದು. ಬಗೆಯ ದೂರದರ್ಶಿತ್ವದ ವಿದೇಶಾಂಗನೀತಿಯನ್ನು ಪ್ರದರ್ಶಿಸಿದವರಲ್ಲಿ ಅವರೇ ಮೊದಲಿಗರು.

ಕವಿಹೃದಯ
ಅಟಲ್ಜೀ ಎಂದರೆ ಸರಸ್ವತಿಯ ವರಪುತ್ರರೇ ಸರಿ. ಒಂದು ವೇಳೆ ಅವರು ರಾಜಕಾರಣಿಯಾಗಿ ರೂಪುಗೊಳ್ಳದಿದ್ದರೆ ಶ್ರೇಷ್ಠ ಕವಿಯಾಗಿ ಹೊರಹೊಮ್ಮುತ್ತಿದ್ದರು. ಸರಸ್ವತೀ ಕೀ ದೇಖ್ ಸಾಧನಾ, ಲಕ್ಷ್ಮೀನೇ ಸಂಬಂಧ್ ಜೋಡಾ (ಸರಸ್ವತಿಯ ಸಾಧನೆಯನ್ನು ನೋಡಿ ಲಕ್ಷ್ಮಿ ಸಂಬಂಧ ಬೆಳೆಸಲಿಲ್ಲ) ಎಂದು ಅವರು ತಮ್ಮ ಸಾಹಿತ್ಯಾಸಕ್ತಿಯ ಕುರಿತು ಆವೋ ಮನ್ ಕೀ ಗಾಂಟೆ ಖೋಲೇ ಎಂಬ ಕವನದಲ್ಲಿ (೧೯೯೪ರ ಡಿಸೆಂಬರ್ ೨೫ ತಮ್ಮ ಜನ್ಮದಿನದಂದು ಬರೆದದ್ದು) ಬಿಡಿಸಿಟ್ಟಿದ್ದಾರೆ.
ಅಟಲ್ಜೀಗೆ ಕವನ ರಚಿಸುವುದು ಜನ್ಮಜಾತವಾಗಿಯೇ ಬಂದಿತ್ತು. ಅವರೇ ಹೇಳುವಂತೆ ಇದು ಅವರ ತಾತ ಕಾಶೀಪ್ರಸಾದರ (ತಂದೆಯ ತಂದೆ) ಪ್ರಭಾವವಂತೆ. ಕಾಶೀಪ್ರಸಾದರು ಬಟೇಶ್ವರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರಸ್ವತೀ ವರಪುತ್ರ ಎಂದೇ ಜನಜನಿತರಾಗಿದ್ದರು.
ನಿರಂತರವಾಗಿ ರಾ.ಸ್ವ. ಸಂಘದ ಸಂಪರ್ಕದಲ್ಲಿದ್ದ ಅಟಲ್ಜೀ ೧೦ನೇ ತರಗತಿಯಲ್ಲಿದ್ದಾಗಲೇ ಬರೆದ ಹಿಂದೂ ತನುಮನ್, ಹಿಂದೂ ಜೀವನ್ ಎಂಬ ಕವನ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿತ್ತು.
ಹಿಂದೀ ಸಾಹಿತ್ಯಲೋಕದಲ್ಲಿ ಅಟಲ್ಜೀಯವರಿಗೆ ವಿಶಿಷ್ಟ ಸ್ಥಾನವಿದೆ, ಅದರಲ್ಲಿಯೂ ಮುಖ್ಯವಾಗಿ ಕುಂಡಲಿಸಾಹಿತ್ಯದಲ್ಲಿ. ಇಂಥ ಸಾಹಿತ್ಯಪ್ರಕಾರದಲ್ಲಿ ಬರೆದವರು ಬಹಳ ಕಡಮೆ. ಕುಂಡಲಿಸಾಹಿತ್ಯ ರಚನೆ ಶಿಸ್ತುಬದ್ಧವಾದುದು. ಇದಕ್ಕೆ ಛಂದಸ್ಸಿನ ಜ್ಞಾನ ಅಗತ್ಯ. ಅಟಲ್ಜೀ ಪ್ರಾರಂಭದಿಂದಲೂ ಕುಂಡಲಿಸಾಹಿತ್ಯದಲ್ಲಿ ವಿಶೇಷ ಆಸಕ್ತಿತಳೆದಿದ್ದರು. ೧೯೭೫ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರು ಜೈಲಿನಲ್ಲಿದ್ದಾಗಲೂ ಅವರು ಕವನಗಳನ್ನು ಬರೆಯುತ್ತಿದ್ದರು. ಅವಧಿಯಲ್ಲಿಯೆ ಅವರು ೭೦ಕ್ಕೂ ಅಧಿಕ ಕುಂಡಲಿಗಳನ್ನು ಬರೆದಿದ್ದರು.  ವಿಶೇಷವೆಂದರೆ ಅಟಲ್ಜೀ ತಮ್ಮ ೫೦ನೇ ವರ್ಷದ ಸಂಭ್ರಮದ ದಿನಗಳನ್ನು ಕಳೆದದ್ದೂ ಜೈಲುಕಂಬಿಗಳ ಮಧ್ಯೆ! ಆಗ ಅವರು ಬರೆದ ಕವನ 'ಜೀವನ್ ಕೀ ಟಲನೇ ಲಗೀ ಸಾಂಜ್'

ಬರುತ್ತಿದೆ ಬಾಳಸಂಜೆ
ಇಳಿಯುತ್ತಿದೆ ವಯಸ್ಸು
ಸವೆದಿದೆ ದಾರಿ
ಬರುತ್ತಿದೆ ಬಾಳಸಂಜೆ
ಬದಲಾಗಿವೆ ಅರ್ಥಗಳು
ವ್ಯರ್ಥವಾಗಿವೆ ಶಬ್ದಗಳು
ನಿಸ್ಸತ್ತ್ವವಾಗಿವೆ ಶಾಂತಿಯಿಲ್ಲದ ಸಂತಸ
ಬರುತ್ತಿದೆ ಬಾಳಸಂಜೆ
* * *

ತುರ್ತುಪರಿಸ್ಥಿತಿಯನ್ನು ಕುರಿತು ಅವರು ಬರೆದ ಕವನ:
ಹತ್ತು ಮಾಳಿಗೆಯೇರಿ ನೋಡಿದೆ ರಾವಣ ಉರಿಯುತ್ತಿದ್ದ
ಶತಮಾನಗಳ ಅಗ್ನಿಗೆ ಸ್ವಾಹಾ
ಆದರೂ ನಿರಂತರ ಏರುತ್ತಿದೆ ಪಾಪ
ರಾಮವಿಜಯದ ಕತೆಯೇನೋ ಹಳೆಯದು
ಯುದ್ಧವಂತೂ ಮುಂದುವರಿದಿದೆ
ರಾಜ್ಯವಾಳಲು ಅಯೋಧ್ಯೆ ಸಿದ್ಧಗೊಳ್ಳುವ ಸರದಿ
ತಾಯಿಮಮತೆ ದೂಡಿತು ಮತ್ತೆ ಸಮಾಜವ ಸಂಕಷ್ಟಕೆ
ನ್ಯಾಯದ ನಿಲುಗಡೆ, ಧರ್ಮದ ಗಡೀಪಾರು
ಕೋಟಿ ಕೋಟಿ ಭಾರತವಾಸಿಗಳು ಮೂಕದರ್ಶಕರೇ?
ಅಧಿಕಾರಬಲದಿಂದ ಹಿಡಿಯಷ್ಟು ಜನ ಇರಬಲ್ಲರೆಷ್ಟು ದಿನ?

೧೯೯೨ರ ಜನವರಿ ೨೫ರಂದು ಅಟಲ್ಜೀಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ನಿಮಿತ್ತ ಅವರನ್ನು ಅಭಿನಂದಿಸಲು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ಜೀ ಸ್ವರಚಿತ ಕವನವೊಂದನ್ನು ಓದಿದರು. ಕವನ ಊಂಚಾಯಿ ಅಟಲ್ಜೀ ಬಾಳಪುಟಗಳಿಗೆ ಬರೆದ ಭಾಷ್ಯವೇ ಸರಿ. ಕವನದ ಆರಂಭ ಹೀಗಿದೆ:
ಊಂಚೇ ಪಹಾಡ್ ಪರ್
ಪೇಡ್ ನಹೀ ಲಗತೇ
ಪೌಧೇ ನಹೀ ಲಗತೇ
ಘಾಸ್ ಭೀ ಜಮತೀ ಹೈ
“ಅತ್ಯಂತ ಎತ್ತರದ ಪರ್ವತದ ಮೇಲೆ ಮರ ಬೆಳೆಯದು, ಗಿಡ ಬೆಳೆಯದು, ಹುಲ್ಲೂ ಬೆಳೆಯದು.”
ಇದೇ ಕವನದ ಸಮಾಪ್ತಿಯಲ್ಲಿ ಅವರು ಹೇಳುವುದು:
ನನ್ನ ಪ್ರಭುವೇ!
ಪರರನ್ನು ಆಲಿಂಗಿಸಲಾರದಂಥ
ಎತ್ತರಕ್ಕೆ ನನ್ನನ್ನು ಏರಿಸಬೇಡ
- ಎಂದು.
ತೀವ್ರ ಅನಾರೋಗ್ಯದಿಂದ ನ್ಯೂಯಾರ್ಕಿನ ಆಸ್ಪತ್ರೆಗೆ ೧೯೯೮ರಲ್ಲಿ ದಾಖಲಾಗಿದ್ದಾಗ ಸಾವನ್ನು ಕುರಿತು ಅವರು ಬರೆದ ಕವನ:
ನೀನು ಮೆಲ್ಲಮೆಲ್ಲನೆ ಕದ್ದುಮುಚ್ಚಿ ಬರಬೇಡ
ಮುಂದೆ ಬಾ, ಹೊಡೆ. ನಾನಾರೆಂದು ತೋರಿಸುವೆ.
ಈಗ ಇನ್ನೊಮ್ಮೆ ಬಿರುಗಾಳಿ ಎದ್ದಿದೆ
ದೋಣಿಯು ಸುಳಿಗಾಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ
ದಾಟುವೆನೆಂಬ ಧೈರ್ಯ ನನಗಿದೆ
(ಉತ್ಥಾನ ಮಾಸಪತ್ರಿಕೆಯ ಸೆಪ್ಟೆಂಬರ್  2018ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
https://issuu.com/utthanamagazine/docs/atalji_utthana_september_2018